ಪಿತೃ ಋಣವು ಮನುಷ್ಯ ತೀರಿಸಲೇಬೇಕಾದ ಬಹುಮುಖ್ಯ ಋಣಗಳಲ್ಲೊಂದು. ಏಕೆಂದರೆ, ನಮಗೆ ಈ ದೇಹ ದೊರೆತಿರುವುದೇ ಪಿತೃಗಳಿಂದ. ಅವರು ಸಂತೃಪ್ತರಾಗಿ ಆಶೀರ್ವಾದ ಮಾಡಿದರೆ ಅದಕ್ಕಿಂತ ಹೆಚ್ಚಿನ ಬಲ ಇನ್ನೊಂದಿಲ್ಲ. ಹೀಗಾಗಿ ಪಿತೃ ಕಾರ್ಯಕ್ಕೆ ಅರ್ಹರಾದವರು ಅದನ್ನು ಮಾಡಲೇಬೇಕು ಮತ್ತು ಕಿರಿಯರು ಇದರ ಪ್ರಸಾದ, ಮಂತ್ರಾಕ್ಷತೆ ಪಡೆಯಬೇಕು. ಭಾದ್ರಪದ ಮಾಸದ ಕೃಷ್ಣಪಕ್ಷಕ್ಕೆ ಪಿತೃಪಕ್ಷ ಎನ್ನುತ್ತಾರೆ. ಈ ಪಕ್ಷಕ್ಕೆ ಮಹಾಲಯ ಪಕ್ಷ, ಮಹಾಲಯ ಅಮವಾಸ್ಯೆ, ಅಪರ ಪಕ್ಷವೆಂದು ಕರೆಯುತ್ತಾರೆ. ಪಿತೃಪಕ್ಷವು ಹಿಂದೂ ಚಾಂದ್ರಮಾನ ತಿಂಗಳಾದ ಭಾದ್ರಪದ ಕೃಷ್ಣ ಪಕ್ಷದ ಪಾಡ್ಯದಿಂದ ಅಮಾವಾಸ್ಯೆವರೆಗೆ ಬರುತ್ತದೆ. ಒಬ್ಬರ ಮೂರು ತಲೆಮಾರುವರೆಗಿನ ಹಿರಿಯರು/ಪೂರ್ವಜರು/ಪಿತೃಗಳ ಆತ್ಮವು ಪಿತೃಲೋಕದಲ್ಲಿ ಅಂದರೆ ಭೂಮಿ ಮತ್ತು ಸ್ವರ್ಗದ ನಡುವಿನ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಭೂಮಿಯಲ್ಲಿ ಮರಣ ಹೊಂದಿರುವವರ ಆತ್ಮವನ್ನು ಯಮಲೋಕಕ್ಕೆ ರಮಾಡಿಕೊಳ್ಳುವಾಗ ಅಲ್ಲಿ ಈ ಆತ್ಮದ ಪೂರ್ವಜರ ಪೈಕಿ ಮೊದಲಿನವರ ಆತ್ಮವನ್ನು ಸ್ವರ್ಗಕ್ಕೆ ಕಳುಹಿಸುತ್ತಾನೆ ಎಂಬ ಪ್ರತೀತಿ ಇದೆ.
ಆದ್ದರಿಂದ ಈ ಪಿತೃಲೋಕದಲ್ಲಿ ಮೂರು ತಲೆಮಾರಿನ ಆತ್ಮಗಳು ಮಾತ್ರ ಇರುತ್ತವೆ. ಶ್ರಾದ್ಧ ಮಾಡುವಾಗ ಈ ಲೋಕದಲ್ಲಿರುವ ಮೂರು ತಲೆಮಾರಿನ ಪೂರ್ವಜರಿಗೆ ಮಾತ್ರ ಪಿಂಡ ಪ್ರದಾನ ಮತ್ತು ತರ್ಪಣ ಕೊಡುವ ಸಂಪ್ರದಾಯವಿದೆ. ಪಿತೃಪಕ್ಷದ ಪ್ರಾರಂಭದಲ್ಲಿ ಸೂರ್ಯನು ಕನ್ಯಾರಾಶಿ ಪ್ರವೇಶಿಸುವಲ್ಲಿಂದ ನಂತರದ ರಾಶಿಗೆ ಹೋಗುವವರೆಗಿನ ಸಮಯದಲ್ಲಿ ಪಿತೃಗಳ ಆತ್ಮವು ಭೂಮಿಯಲ್ಲಿರುವ ತಮ್ಮ ವಂಶಜರ ಮನೆಗಳಿಗೆ ಬಂದು ವಾಸಿಸುತ್ತವೆ ಎಂಬ ನಂಬಿಕೆ ಇದೆ. ಮಹಾಭಾರತದ ನಾಯಕರಲ್ಲಿ ಒಬ್ಬನಾದ ಕರ್ಣನನ್ನು ದೇವದೂತರು ಸ್ವರ್ಗಕ್ಕೆ ಕರೆದೊಯ್ಯುವಾಗ ಮಾರ್ಗಮಧ್ಯೆ ಅವರಿಗೆ ತಿನ್ನಲು ಏನೂ ಸಿಗುವುದಿಲ್ಲ. ಎಲ್ಲೆಲ್ಲಿ ನೋಡಿದರೂ ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯಗಳು ಮಾತ್ರ ಕಾಣಸಿಗುತ್ತವೆ. ಜೀವಿತಾವಯಲ್ಲಿ ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯ ದಾನ ಮಾಡಿದರೂ ಪೂರ್ವಜರಿಗೆ ಶ್ರಾದ್ಧ ಮಾಡಿ ಆಹಾರ ಕೊಡದ ಕಾರಣ ಈ ಅವಸ್ಥೆ ಎಂಬುದು ಅರಿವಾಯಿತು.
ಈ ಲೋಪ ಸರಿಪಡಿಸಲು ಅಂದರೆ ಪೂರ್ವಜರನ್ನು ಆರಾಸಿ ಅವರಿಗೆ ಶ್ರಾದ್ಧ, ಊಟ, ತಿಂಡಿ, ನೀರನ್ನು ಕೊಡುವುದು ವಾಡಿಕೆಯಾಗಿ ಬಂದಿದೆ. ಪಿತೃ ಋಣವನ್ನು ಮನುಷ್ಯ ಈ ರೂಪದಲ್ಲಿ ಈ ಪಕ್ಷದಲ್ಲಿ ತೀರಿಸುತ್ತ ಬರುತ್ತಿದ್ದಾನೆ.
ಪರಮ ದುರ್ಲಭವಾದ ಮನುಷ್ಯಜನ್ಮದ ಸಾಫಲ್ಯತೆಯು ಅದನ್ನು ಪಡೆದ ನಮ್ಮ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ಪರಮಾತ್ಮ ನಮಗೆ ಈ ಜನ್ಮವನ್ನು ಏತಕ್ಕಾಗಿ ನೀಡಿದ್ದಾನೆ ಎಂದರೆ ಹಿಂದಿನ ಜನ್ಮದ ಪಾಪ ಶೇಷಗಳನ್ನು ಅನುಭವಿಸಿ ಮುಗಿಸಿ ಮತ್ತೆ ಇನ್ನೂ ಹೆಚ್ಚಿನದಾದ ಪುಣ್ಯಸಂಪಾದನೆ ಮಾಡಿ ಮೋಕ್ಷವನ್ನು ಪಡೆಯಲಿ ಎಂದು. ಆಚಾರ್ಯ ಶಂಕರರು ನುಡಿದಂತೆ ಪುನರಪಿ ಜನನಂ ಪುನರಪಿ ಮರಣಂ. ಹೀಗೆ ಎಷ್ಟು ಜನ್ಮ ತಾಳಿದರೂ ಸಹ ಮುಗಿಸಲಾಗದಷ್ಟು ಪಾಪವನ್ನು ಒಂದೇ ಜನ್ಮದಲ್ಲಿ ಸಂಪಾದಿಸಿಬಿಡುತ್ತೇವೆ. ಈ ಕಠಿಣ ಸಮಸ್ಯೆಗೆ ನಮ್ಮ ಶಾಸ್ತ್ರಗಳು ಸುಲಭ ಪರಿಹಾರ ನೀಡುತ್ತವೆ. ಶಾಸ್ತ್ರಗಳ ಪ್ರಕಾರ ಮೃತರ ಆತ್ಮಗಳಿಗೆ ಶಾಶ್ವತ ಪಿತೃಲೋಕ ಪ್ರಾಪ್ತಿಯಾಗುವಂತೆ ಮಾಡುವುದು ಅವರ ಮಕ್ಕಳ ಕರ್ತವ್ಯ.
ಗರುಡಪುರಾಣದಲ್ಲಿ ಭಗವಂತನು ನುಡಿಯುತ್ತಾನೆ: ‘ಯಾವನು ಪುತ್ ಎಂಬ ನರಕದಿಂದ ಪಿತೃಗಳನ್ನು ಪಾರುಮಾಡುತ್ತಾನೋ ಅವನೇ ಪುತ್ರ’. ಆದುದರಿಂದ ಯಾವುದೇ ಜಾತಿಬೇಧವಿಲ್ಲದೆ ಕರ್ಮಾಕಾರ ಇದ್ದಲ್ಲಿ ಪಿತೃಗಳಿಗೆ ಶ್ರಾದ್ಧ, ತರ್ಪಣ ಹಾಗೂ ದಾನಗಳನ್ನು ಮಾಡಿ ತಮ್ಮ ಋಣ ತೀರಿಸಲೇಬೇಕು.
* ತರ್ಪಣಗಳನ್ನು ಕೊಡುವಾಗ ಯಾರ‍್ಯಾರಿಗೆ ಮತ್ತು ಯಾರಿಗೆ ಮೊದಲು ತರ್ಪಣ ಕೊಡಬೇಕು ಇತ್ಯಾದಿಗಳ ಬಗ್ಗೆ ಶಾಸಗಳಲ್ಲಿ ಹೀಗೆ ತಿಳಿಸಲಾಗಿದೆ.
ಆದೌ ಪಿತಾ ತತೋ ಮಾತಾ ಸಪತ್ನೀ ಜನನೀ ತಥಾ |
ಮಾತಾಮಹಾಃ ಸಪತ್ನೀಕಾಃ ಹ್ಯಾತ್ಮಪತ್ನೀ ತತಃ ಪರಂ ||
ಸುತಭ್ರಾತೃಪಿತೃವ್ಯಾಶ್ಚ ಮಾತುಲಾಶ್ಚ ಸಭಾರ್ಯಕಾಃ |
ದುಹಿತಾ ಭಗಿನೀ ಚೈವ ದೌಹಿತ್ರೋ ಭಾಗಿನೇಯಕಃ ||
ಶ್ಯಾಲಕೋ ಭಾವುಕಶ್ಬೈವ ಶ್ವಶುರೋ ಗುರುಋತ್ವಿಜಾ |
ಏತೇ ಸ್ಯುಃ ಪಿತರಸ್ತೀರ್ಥೆ ತರ್ಪಣೇಚ ಮಹಾಲಯೇ ||
ಕುಟುಂಬದಲ್ಲಿ ಮೃತಪಟ್ಟವರಲ್ಲಿ ಕ್ರಮವಾಗಿ ಮೊದಲು ತಂದೆ, ತಾಯಿ, ಹೆಂಡತಿ, ಅತ್ತೆ, ಮಾವ, ಮಗ, ಸಹೋದರರು, ದೊಡ್ಡಪ್ಪ, ಚಿಕ್ಕಪ್ಪ ಹಾಗೂ ಅವರ ಹೆಂಡತಿ, ತಾಯಿಯ ತಮ್ಮ ಅಥವಾ ಅಣ್ಣ, ಅವರ ಹೆಂಡತಿಯರು, ಮಗಳು, ಅಕ್ಕ, ತಂಗಿ ಹಾಗೂ ಅವರ ಮಕ್ಕಳಿಗೆ, ಭಾವ, ಮೈದುನ ಮುಂತಾದವರು ಹಾಗೂ ವಿಶೇಷವಾಗಿ ಗುರುಗಳು, ಕುಲಪುರೋಹಿತರು ಸೇರಿದಂತೆ ಯಾರು ನಮಗೆ ತಿಳಿದಂತೆ ಮೃತರಾಗಿದ್ದಾರೋ ಅವರಿಗೆ – ಹೀಗೆ ಸರ್ವರಿಗೂ ಕ್ರಮವಾಗಿ ತರ್ಪಣಗಳನ್ನು ಕೊಡಬೇಕು.
ಸಂಗ್ರಹಿತ