ಶೂನ್ಯದಿಂದ ಸಮಷ್ಟಿಯನ್ನು ಸೃಷ್ಠಿ ಮಾಡಿದ ಮಹಾನ್ ಚೇತನ್ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ

ಶೂನ್ಯದಿಂದ ಸಮಷ್ಟಿಯನ್ನು ಸೃಷ್ಠಿ ಮಾಡಿದ, ಜ್ಞಾನ ಮಾತ್ರವಲ್ಲದೆ ಶ್ರದ್ಧೆ, ಒಳ್ಳೆಯ ಮೌಲ್ಯಾಧಾರಿತ ವ್ಯಕ್ತಿತ್ವವನ್ನು ಹೊಂದಿದ್ದಂತಹ ಮಹಾನ್ ಚೇತನ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು. ಇಡೀ ರಾಜ್ಯದ ಮತ್ತು ರಾಷ್ಟ್ರದ ಆತ್ಮ ಗೌರವವನ್ನ ಹೆಚ್ಚಿಸಿದಂತಹ ವ್ಯಕ್ತಿಯ ಜನ್ಮದಿನವನ್ನ ನಾವು ಅಭಿಯಂತರರ ದಿನವನ್ನಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್ (ಪ್ರೊ) ವೈ.ಎಸ್ ಸಿದ್ದೇಗೌಡ ಅವರು ಅಭಿಪ್ರಾಯ ಪಟ್ಟರು. ನಗರದ ಅಕ್ಷಯ ತಾಂತ್ರಿಕ ಮಹಾವಿದ್ಯಾಲಯ ಮತ್ತು ತುಮಕೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಡೆದ ಅಭಿಯಂತರರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಈ ಆಚರಣೆ ಆಡಂಬರಕ್ಕಲ್ಲ, ಬದಲಾಗಿ ಇಂತಹ ಮಹಾನ್ ವ್ಯಕ್ತಿಗಳ ದೂರದೃಷ್ಟಿತ್ವ ಮತ್ತು ಅವರ ವ್ಯಕ್ತಿತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಿದೆ. ಸರ್. ಎಂ. ವಿಶ್ವೇಶ್ವರಯ್ಯನವರು ಓದಿದ್ದು ಬೀದಿದೀಪದ ಕೆಳಗೆ ಆದರೂ ಇಂದು ಕೋಟ್ಯಾಂತರ ಕುಟುಂಬಗಳಿಗೆ ಬೆಳಕಾಗಿದ್ದಾರೆ. ಸಮಾಜದಿಂದ ಎಲ್ಲಾ ಸವಲತ್ತುಗಳನ್ನು ಪಡೆದ ನಾವು ನಮ್ಮಿಂದಾದ ಕನಿಷ್ಟ ಸಹಾಯವನ್ನ ಸಮಾಜಕ್ಕೆ ಮಾಡುವ ಗುಣವನ್ನು ಬೆಳೆಸಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಶ್ರೀನಿವಾಸ ಬಳ್ಳಿಯವರು ಮಾತನಾಡಿ ಸರ್. ಎಂ. ವಿಶ್ವೇಶ್ವರಯ್ಯನವರು ಶಿಕ್ಷಣ ತಜ್ಞರಾಗಿ, ಕೈಗಾರಿಕಾ ಕ್ರಾಂತಿಯ ಹರಿಕಾರರಾಗಿ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿ ೧೦೨ ವರ್ಷಗಳ ಶಿಸ್ತು ಬದ್ದ ಬದುಕನ್ನ ನಡೆಸಿದ್ದಾರೆ. ತಾಂತ್ರಿಕ ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಜೊತೆಗೆ ಸರ್. ಎಂ. ವಿಶ್ವೇಶ್ವರಯ್ಯನವರ ಜೀವನ ಸಾಧನೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವ ಅಗತ್ಯವಿದೆ. ಅಷ್ಟೇ ಅಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಭಾರತೀಯರು ನೀಡಿದ ಕೊಡುಗೆಗಳ ಬಗ್ಗೆ ತಿಳಿಸುವಂತಹ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕು ಎಂದರು. ಭಾರತದ ಅನೇಕ ವಿಜ್ಞಾನಿಗಳು ಮಾಡಿದ ಸಾಧನೆಗಳನ್ನು ನಮ್ಮ ಪಠ್ಯದಲ್ಲಿ ಇಲ್ಲದೇ ಇರುವ ಕಾರಣದಿಂದ ಇಂದು ನಾವು ವರನ್ನ ಮರೆತಿದ್ದೇವೆ. ಭಾರತ ವಿಶ್ವಗುರು ಆಗಬೇಕಾದರೆ ನಮ್ಮ ಯುವ ಮನಸ್ಸುಗಳಲ್ಲಿ ಆತ್ಮ ವಿಶ್ವಾಸ ಮತ್ತು ದೇಶದ ಬಗ್ಗೆ ಅಭಿಮಾನ ಮೂಡುವಂತಹ ನೂತನ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ತಾಂತ್ರಿಕ ಮಹಾವಿದ್ಯಾಲದ ಪ್ರಾಂಶುಪಾಲರಾದ ಡಾ. ಕೆ.ವಿ. ಶ್ರೀನಿವಾಸ್ ರಾವ್ ಅವರು ಮಾತನಾಡಿ ನಮ್ಮ ವಿದ್ಯಾರ್ಥಿಗಳಿಗೆ ವಿಶ್ವೇಶ್ವರಯ್ಯನವರ ಜೀವನ ಮತ್ತು ಸಾಧನೆಯ ಬಗ್ಗೆ ಬೆಳಕು ಚಲ್ಲುವ ಪಠ್ಯವನ್ನು ಅಳವಡಿಸುವುದಲ್ಲದೆ ಪ್ರತಿ ವರ್ಷ ಸರ್. ಎಂ. ವಿಯವರ ಹುಟ್ಟೂರಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದರ ಜೊತೆಗೆ ಅವರ ಆದರ್ಶಗಳು, ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಟಿ.ಎಸ್. ಸುನೀಲ್ ಪ್ರಸಾದ್ ಅವರು ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ಅಧ್ಯಯನ ಪೀಠದ ವತಿಯಿಂದ ಜಿಲ್ಲೆಯ ನೀರಾವರಿಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸರ್. ಎಂ.ವಿಶ್ವೇಶ್ವರಯ್ಯನವರ ನೀರಾವರಿ ಯೋಜನೆಗಳು ಇಂದಿಗೂ ಕೋಟ್ಯಾಂತರ ಜನರಿಗೆ ಅನುಕೂಲ ಮಾಡಿವೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಇಂಜಿನಿಯರ್‌ಗಳಾದ ಜಿ. ಪುಟ್ಟರಾಮಯ್ಯ ಮತ್ತು ರಾಮ ಮೂರ್ತಿಯವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಕ್ಷಯ ತಾಂತ್ರಿಕ ಮಹಾವಿದ್ಯಾಲಯದ ಪ್ರೊ. ನಟರಾಜ್ ಆರಾಧ್ಯ, ರಾಕೇಶ್, ವರದರಾಜು, ಸಣ್ಣಮಾರೇಗೌಡ, ಚಂದ್ರಶೇಖರ್. ನಾಗನಗೌಡ ಉಪಸ್ಥಿತರಿದ್ದರು. ಶರತ್ ನಿರೂಪಿಸಿದರು ಭಾರತಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!