ಸಾರ್ವಜನಿಕ ಗಣೇಶೋತ್ಸದ ಪರಿಕಲ್ಪನೆಯ ಜನಕ ಬಾಲಗಂಗಾಧರ ತಿಲಕ್

ಶ್ರಾವಣ ಮಾಸದ ಬಳಿಕ ಬರುವ ಭಾದ್ರಪದ ಮಾಸದ ಚತುರ್ಥಿಯಂದು ಗಣೇಶನ ಹಬ್ಬ ಬರುತ್ತದೆ. ಈ ಹಬ್ಬದ ಆಚರಣೆ ತುಂಬಾನೇ ಹಳೆಯದ್ದು. ಕೆಲವರ ಮನೆಯಲ್ಲಿ ಒಂದು ದಿನ, ಐದು ದಿನ, ಹನ್ನೊಂದು ದಿನಗಳ ಕಾಲ ಗಣೇಶನನ್ನು ಇಡಲಾಗುತ್ತದೆ. ಬಳಿಕ ನೀರಿನಲ್ಲಿ ಗಣೇಶನ ಮಣ್ಣಿನ ವಿಗ್ರಹವನ್ನು ಲೀನಗೊಳಿಸಲಾಗುತ್ತದೆ. ಬಾಲಗಂಗಾಧರ ತಿಲಕ್ ಅವರಿಗೆ ಈ ಗಣೇಶನ ಹಬ್ಬವನ್ನೇ ಸ್ವಾತಂತ್ರ ಸಂಗ್ರಾಮದ ಹೋರಾಟಕ್ಕೆ ಬಳಸಿಕೊಳ್ಳುವ ಪರಿಕಲ್ಪನೆ ಬಂತು.

ಸಾಮಾನ್ಯ ಜನರಿಗೆ ದೇವರ ಮೇಲೆ ಭಕ್ತಿ ಹೆಚ್ಚು. ಅದನ್ನೇ ಸ್ವಾತಂತ್ರ ಸಂಗ್ರಾಮದ ಗುರಾಣಿಯನ್ನಾಗಿ ಬಳಸಿಕೊಳ್ಳಲು ಬಾಲಗಂಗಾಧರ ತಿಲಕ್ ಯೋಚಿಸಿದರು. ಮೊದಲನೇ ಸ್ವಾತಂತ್ರ ಸಂಗ್ರಾಮ ವಿಫಲವಾದ ಬಳಿಕ ಹಲವಾರು ವರ್ಷಗಳು ಉರುಳಿದರೂ ಮತ್ತೊಂದು ಸಂಗ್ರಾಮ ನಡೆಯಲೇ ಇಲ್ಲ. ಜನರಲ್ಲಿ ಒಗ್ಗಟ್ಟು ಬರುವತನಕ ಸ್ವಾತಂತ್ರ ಹೋರಾಟ ಸಫಲವಾಗುವುದಿಲ್ಲ ಎನ್ನುವುದನ್ನು ಹೋರಾಟದ ಮುಂಚೂಣಿಯಲ್ಲಿದ್ದ ಬಾಲಗಂಗಾಧರ ತಿಲಕ್ ಅರಿತುಕೊಂಡಿದ್ದರು. ಹೀಗಾಗಿ ಎಲ್ಲಾ ಸಮಾಜದ ಜನರನ್ನು ಒಂದೇ ವೇದಿಕೆಯಡಿ ತರಲು ಗಣೇಶನ ಹಬ್ಬ ಸೂಕ್ತ ಎನ್ನುವುದನ್ನು ಅವರು ಮನಗಂಡರು. ಅದುವರೆಗೂ ಮನೆಯಲ್ಲಿಯೇ ಉಳಿದಿದ್ದ ಗಣೇಶನನ್ನು ಸಾರ್ವಜನಿಕವಾಗಿ ಹೊರಗೆ ತಂದು ಪ್ರತಿಷ್ಟಾಪಿಸುವ ಹೊಸ ಪರಂಪರೆಯನ್ನು ಆರಂಭಿಸಿದರು.

ಸ್ವಾತಂತ್ರ ಸಂಗ್ರಾಮಕ್ಕೆ ಗಣೇಶನ ಹಬ್ಬ ಬಳಸಿಕೊಂಡ ತಿಲಕ್
ಅದುವರೆಗೂ ಸ್ವಾತಂತ್ರ ಚಳುವಳಿ ಎನ್ನುವುದು ಕೆಲವೇ ವರ್ಗದವರಿಗೆ ಮಾತ್ರ ಸೀಮಿತವಾಗಿತ್ತು. ವಿದ್ಯಾರ್ಥಿಗಳು, ವಕೀಲರು ಈ ಚಳುವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಸಾಮಾನ್ಯ ಜನರು, ಅನಕ್ಷರಸ್ಥರಿಗೆ ಈ ಚಳುವಳಿ ಬಗ್ಗೆ ಹೆಚ್ಚಿನ ಮಾಹಿತಿಯಾಗಲಿ, ಒಲವಾಗಲಿ ಇರಲೇ ಇಲ್ಲ. ಇದು ಸ್ವಾತಂತ್ರ ಸಂಗ್ರಾಮದ ಹೋರಾಟಕ್ಕೆ ಭಾರೀ ಹಿನ್ನೆಡೆಯುಂಟು ಮಾಡುತ್ತಿತ್ತು. ಇದೇ ಕಾರಣಕ್ಕೆ ಸಮಾಜದ ಎಲ್ಲ ಜನರು ಈ ಹೋರಾಟದಲ್ಲಿ ಪಾಲ್ಗೊಂಡಾಗ ಮಾತ್ರವೇ ಉದ್ದೇಶ ಈಡೇರುತ್ತದೆ ಎನ್ನುವುದನ್ನು ಅರಿತುಕೊಂಡ ತಿಲಕ್, ಗಣೇಶ ಹಬ್ಬವನ್ನು ಎಲ್ಲರನ್ನು ಒಗ್ಗೂಡಿಸುವ ವೇದಿಕೆಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದರು.

ಮಹಾರಾಷ್ಟ್ರದ ಬಾವ್ ಸಾಹೇಬ್ ಲಕ್ಷ್ಮಣ್ ಜವೇಲ್ ಎನ್ನುವವರು 1892 ರಲ್ಲಿ ಮೊದಲಿಗೆ ಸಾರ್ವಜನಿಕ ಗಣೇಶೋತ್ಸವನ್ನು ಆಚರಣೆ ಮಾಡಿದರು. ಆದರೆ ತಿಲಕರು ಅದಕ್ಕೆ ಸಂಪೂರ್ಣ ಸಾರ್ವಜನಿಕ ಸ್ವರೂಪ ನೀಡಿದ್ದು, ಅದರ ಮುಂದಿನ ವರ್ಷ, ಅಂದರೆ 1893 ರಲ್ಲಿ. ಅಷ್ಟೊತ್ತಿಗಾಗಲೇ ಅವರು ಕೇಸರಿ ಪತ್ರಿಕೆಯನ್ನು ತಂದಿದ್ದರು. ಕೇಸರಿ ಪತ್ರಿಕೆ ಮೂಲಕ ತಿಲಕರು ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ ಕುರಿತು ಅನೇಕ ಲೇಖನಗಳನ್ನು ಬರೆದರು. 1894ರಲ್ಲಿ ಪುಣೆಯ ಕೇಸರಿ ವಾಡದಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು. ಬಾಲಗಂಗಾಧರ ತಿಲಕರ ಈ ಪರಿಕಲ್ಪನೆ ಜನರನ್ನು ಸೆಳೆಯಿತು. ಜನರು ಜಾತಿ-ಮತ ಬೇಧವೆನ್ನದೇ ಈ ಗಣೇಶೋತ್ಸವಕ್ಕೆ ಸ್ಪಂದಿಸಿದರು. ಅವತ್ತು ತಿಲಕರ ಮುಂದಾಳತ್ವದಲ್ಲಿ ಮಹಾರಾಷ್ಟ್ರದಲ್ಲಿ ಆರಂಭವಾದ ಗಣೇಶೋತ್ಸವ ಇವತ್ತು ಅನೇಕ ರಾಜ್ಯಗಳಲ್ಲಿ ಹರಡಿಕೊಂಡಿದೆ. ಭಕ್ತಿ ಹಾಗೂ ಭಾವೈಕ್ಯತೆಯ ಪರಿಕಲ್ಪನೆಯಲ್ಲಿ ಹುಟ್ಟಿದ ಗಣೇಶ ಹಬ್ಬವು ಇಂದು ಎಲ್ಲರ ಅಚ್ಚುಮೆಚ್ಚಿನ ಹಬ್ಬವಾಗಿದೆ. ಈ ಹಬ್ಬ ಮುಂದಿನ ದಿನಗಳಲ್ಲಿ ದೇಶಾದ್ಯಂತ ಏಕತೆಯ ಮಂತ್ರವಾಗಿ, ಬ್ರಿಟಿಷರಿಗೆ ಬಿಸಿಯನ್ನು ಮುಟ್ಟಿಸಿದ್ದು ಇತಿಹಾಸ.

ಎಲ್ಲ ವರ್ಗದ ಜನರ ನಡುವೆ ಐಕ್ಯತೆ ಮೂಡಿಸುವ ಉದ್ದೇಶ
ಆರಂಭದಲ್ಲಿ ಈ ಹಬ್ಬ ಮೇಲ್ವರ್ಗ ಹಾಗೂ ಕೆಳವರ್ಗದವರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಆರಂಭಿಸಿದ ಹಬ್ಬ ಎಂದುಕೊಳ್ಳಲಾಗಿತ್ತು. ಆದರೆ ಲೋಕಮಾನ್ಯ ತಿಲಕರು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆಯೇ ಯೋಚಿಸಿದ್ದರು. ಮೇಲ್ವರ್ಗ ಹಾಗೂ ಕೆಳ ವರ್ಗದ ಜನರ ನಡುವೆ ಐಕ್ಯತೆ ಮೂಡಿಸುವ ಉದ್ದೇಶ ಮೇಲ್ನೋಟದಲ್ಲಿ ಸ್ಪಷ್ಟವಾಗಿ ಕಂಡು ಬಂದರೂ, ಈ ಹಬ್ಬದ ಹಿಂದಿನ ಯೋಚನೆಯೇ ಬೇರೆಯಾಗಿತ್ತು. ಎಲ್ಲರನ್ನೂ ಒಂದು ಆಚರಣೆಯಲ್ಲಿ ಸೆರೆ ಹಿಡಿದು, ಅದನ್ನು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳುವುದು ತಿಲಕರ ಉದ್ದೇಶವಾಗಿತ್ತು.

ಬ್ರಿಟಿಷರ ವಿರುದ್ಧ ಹೋರಾಡಲು ಎಲ್ಲರನ್ನು ಒಗ್ಗೂಡಿಸಲು ಈ ಹಬ್ಬವನ್ನು ಅವರು ಕೇಂದ್ರವಾಗಿರಿಸಿಕೊಂಡಿದ್ದು ಅವರ ದೂರಾಲೋಚನೆಯ ಶಕ್ತಿ. ಏಕೆಂದರೆ ಗಣೇಶ ಎಲ್ಲ ಜಾತಿಗಳಿಗೂ ಅಚ್ಚುಮೆಚ್ಚಿನ ದೇವರಾಗಿದ್ದ. ಹೀಗಾಗಿ ಇದನ್ನೇ ಬಳಸಿಕೊಂಡ ತಿಲಕರು, ಹಬ್ಬದ ಮೂಲಕ ನಿಧಾನವಾಗಿ ಹೋರಾಟದ ಸ್ವರೂಪವನ್ನು ತೀವ್ರಗೊಳಿಸಿದ್ದರು. ಮಹಾರಾಷ್ಟ್ರದಲ್ಲಿ ಪೇಶ್ವೆ ಆಡಳಿತದಲ್ಲಿ ಇದು ಬಹು ಮುಖ್ಯ ಹಬ್ಬವಾಗಿತ್ತು. ಈ ಹಬ್ಬಕ್ಕೆ ಸಾರ್ವಜನಿಕ ಸ್ವರೂಪ ನೀಡಿದರ ಪರಿಣಾಮ ಸ್ವಾತಂತ್ರ ಸಂಗ್ರಾಮ ಸಂಘಟಿತ ರೂಪ ಪಡೆಯಿತು. ಆರಂಭದಲ್ಲಿಯೇ ತಿಲಕರು ಗಣೇಶನ ಬೃಹತ್ ವಿಗ್ರಹಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ ಎಲ್ಲ ವಿಗ್ರಹಗಳನ್ನು ಹತ್ತನೇ ದಿನಕ್ಕೆ ಸಾರ್ವಜನಿಕವಾಗಿ ವಿಸರ್ಜನೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದರು. ಈ ಹತ್ತು ದಿನಗಳ ಅವಧಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲ ಬಗೆಯ ಜನರನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶ ಸಾರ್ಥಕವಾಯಿತು.

ಮಹಾರಾಷ್ಟ್ರದ ಹಬ್ಬ ಉತ್ತರ ಕರ್ನಾಟಕಕ್ಕೆ ನಡೆದು ಬಂದ ಕಥೆ
ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಕರ್ನಾಟಕಕ್ಕೆ ಸಹಜವಾಗಿ ಈ ಹಬ್ಬ ನಡೆದುಕೊಂಡು ಬಂದು ಬಿಟ್ಟಿತು. ಅದರಲ್ಲೂ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಕುಂದಾ ನಗರಿ ಬೆಳಗಾವಿಯಲ್ಲಂತೂ ಈಗಲೂ ಮಹಾರಾಷ್ಟ್ರದಷ್ಟೇ ಅದ್ಧೂರಿಯಾಗಿ ಗಣೇಶೋತ್ಸವವನ್ನು ಆಚರಿಸುತ್ತಾರೆ. ಅಂದು ಮಹಾರಾಷ್ಟ್ರದಲ್ಲಿ ಆರಂಭವಾದ ಹಬ್ಬವು ಬೆಳಗಾವಿ ಮೂಲಕ ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಪ್ರವೇಶ ಮಾಡಿತು. ಮುಂಬೈ ಕರ್ನಾಟಕ ಪ್ರಾಂತ್ಯದ ಎಲ್ಲ ಜಿಲ್ಲೆಗಳಿಗೂ ವ್ಯಾಪಿಸಿತು. ಮಹಾರಾಷ್ಟ್ರ ಪ್ರಭಾವಿತ ಮುಂಬೈ ಕರ್ನಾಟಕದಲ್ಲಿ ಮಹಾರಾಷ್ಟ್ರದಂತೆಯೇ ಅದ್ಧೂರಿಯಾಗಿ ಗಣೇಶೋತ್ಸವ ಶುರುವಾಯಿತು. ಅದರ ಪ್ರಭಾವ ಇಂದಿಗೂ ಇದೆ. ಅಷ್ಟೇ ಅಲ್ಲದೇ ವರ್ಷದಿಂದ ವರ್ಷಕ್ಕೆ ಗಣೇಶೋತ್ಸವದ ಉತ್ಸಾಹ ಹೆಚ್ಚುತ್ತಲೇ ಹೋಗುತ್ತಿದೆ. ಅಷ್ಟಕ್ಕೂ ಮಹಾರಾಷ್ಟ್ರದಲ್ಲಿ ತಿಲಕರು ಆರಂಭಿಸಿದ ಈ ಹಬ್ಬ ಉತ್ತರ ಕರ್ನಾಟಕಕ್ಕೆ ಹರಿದು ಬಂದಿದ್ದು ಕೂಡ ತುಂಬಾನೇ ವಿಶೇಷ. ಇದಕ್ಕೆ ಕಾರಣ ಮತ್ತದೇ ಲೋಕಮಾನ್ಯ ಬಾಲಗಂಗಾಧರ ತಿಲಕ್.

Leave a Reply

Your email address will not be published. Required fields are marked *

error: Content is protected !!