ಬುರ್ಖಾ ಧರಿಸುವುದು ನಿಷೇಧಿಸಿ ಎಂಬ ನಿಮ್ಮ ಹೇಳಿಕೆಯಿಂದ ಇಸ್ಲಾಂ ಧರ್ಮದ ಹೆಣ್ಣು ಮಕ್ಕಳ ಮನಸ್ಸಿಗೆ ನೋವಾಗಿದೆ. ಅವರ ಭಕ್ತಿ ಭಾವನೆಗೆ ಧಕ್ಕೆಯುಂಟು ಮಾಡಿರುವ ನೀವು ಮೊದಲು ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಡಾ.ರಫೀಕ್ ಅಹ್ಮದ್ ರವರು ಮಾಜಿ ಸಚಿವರಿಗೆ ಆಗ್ರಹಿಸಿದ್ದಾರೆ. ಎಲ್ಲಾ ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡಬೇಕೆಂಬ ಮಹದಾಸೆಯಿಂದ ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮೈಸೂರು ಸಂಸ್ಥಾನದ ಹಲವೆಡೆ ಹೆಣ್ಣು ಮಕ್ಕಳ ಶಾಲೆ ತೆರೆದರು. ಅದರಂತೆ ತುಮಕೂರಿನಲ್ಲಿಯೂ ಕೂಡ ಎಂಪ್ರೆಸ್ ಶಾಲೆ ಸ್ಥಾಪಿಸಿದ್ದರು. ಈ ಸಂದರ್ಭದಲ್ಲಿ ವಿಶೇಷವಾಗಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಮನೆಯಿಂದ ಶಾಲೆಗೆ ಬರಲು ಅನುಕೂಲವಾಗುವಂತೆ ಉಚಿತವಾಗಿ ಪರದೆಯುಳ್ಳ ಟಾಂಗಾ ಮಾಡಿಸಿದ್ದರು. ಇದಲ್ಲವೇ ಮಾನವೀಯ ಗುಣ ಎಂದು ಪ್ರಶ್ನಿಸಿದ್ದಾರೆ.
ಅಂತಹ ವೈಭವೋಪೇತ ಆಡಳಿತ ನೀಡಿದಂತಹ, ಪ್ರಜೆಗಳ ಬಗ್ಗೆ ಕಾಳಜಿಯುಳ್ಳ ದೈವೀಸ್ವರೂಪದವರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ವ್ಯಕ್ತಿತ್ವ ಮಾದರಿಯಾಗಲಿ. ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಆಲೋಚನೆಗಳಿಗಿಂತ ಸೊಗಡು ಶಿವಣ್ಣ ರವರ ಆಲೋಚನೆ ಒಳ್ಳೆಯದೇ ಎಂದು ಡಾ.ರಫೀಕ್ ಅಹ್ಮದ್ ರವರು ಸೊಗಡು ಶಿವಣ್ಣ ರವರಿಗೆ ಪ್ರಶ್ನಿಸಿದ್ದಾರೆ
ಮಾಜಿ ಸಚಿವರಾಗಿ ನೀವು ಆಡುವ ಮಾತು ನಿಮಗೆ ಸರಿ ಎನಿಸಿದೆಯೇ ಎಂದು ಪ್ರಶ್ನಿಸಿದ್ದಾರೆ. ಬುರ್ಖಾ ಧರಿಸುವುದು ಇಸ್ಲಾಂ ಧರ್ಮದ ಪದ್ದತಿಯಾಗಿದೆ. ಇಂದು ಕೊರೊನಾ ತಡೆಗಟ್ಟಲು ಹೇಗೆ ಪಿಪಿಇ ಕಿಟ್ ಧರಿಸುತ್ತಾರೋ ಅದೇ ರೀತಿ ಬುರ್ಖಾ ಕೆಟ್ಟದೃಷ್ಟಿಯಿಂದ ಹೆಣ್ಣು ಮಕ್ಕಳನ್ನು ರಕ್ಷಿಸುವ ಕವಚವಾಗಿದೆ. ಎಲ್ಲಾ ಧರ್ಮದಲ್ಲೂ ಅವರವರ ಸಾಂಸ್ಕೃತಿಕ ಉಡುಪು ತೊಡುವ ಪದ್ದತಿ ಇದೆ. ಅದನ್ನು ಗೌರವಿಸುವುದು ಮಾನವೀಯ ಗುಣ. ಅಂತಹ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತಹ ವಿಷಯಗಳನ್ನು ಪ್ರಸ್ತಾಪಿಸಿ ಅಮಾನುಷವಾಗಿ ಹೆಣ್ಣು ಮಕ್ಕಳ ಉಡುಪಿನ ಬಗ್ಗೆ ಪ್ರಶ್ನಿಸುವ ನೀವು ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯೇ ಎಂಬುದು ನಮ್ಮ ಪ್ರಶ್ನೆಯಾಗಿದೆ. ನಿಮ್ಮ ಈ ಹೇಳಿಕೆ ಖಂಡನೀಯ. ಕೂಡಲೇ ನಿಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದು ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ತಿಳಿಸಿದ್ದಾರೆ
ಅಂಬೇಡ್ಕರ್ ಹೇಳಿರುವಂತೆ ಸಮಾನ ನಾಗರೀಕ ಕಾನೂನು ತರಬೇಕು ಎನ್ನುವ ನೀವು ಮೊದಲು ಸಮಾನ ನಾಗರೀಕತೆ ಪದದ ಅರ್ಥ ತಿಳಿದುಕೊಳ್ಳಿ. ಅದೇ ಅಂಬೇಡ್ಕರ್ ರವರನ್ನು ಅಸ್ಪೃಶ್ಯತೆ ಹೆಸರಿನಲ್ಲಿ ಅಂದಿನ ಪಟ್ಟಭದ್ರ ಹಿತಾಸಕ್ತಿಯುಳ್ಳವರು ಹೇಗೆಲ್ಲಾ ನಡೆಸಿಕೊಂಡಿದ್ದಾರೆ ಎಂದು ಈ ದೇಶದ ಜನತೆಗೆ ಗೊತ್ತಿದೆ.
ಸಮಾನ ನಾಗರೀಕತೆ ಎಂದರೆ ಎಲ್ಲರೂ ಒಂದೇ. ಎಲ್ಲರನ್ನೂ ಸಮಾನ ಭಾವದಿಂದ ಕಾಣುವುದಾಗಿದೆ. ಆದರೆ ಈಗಲೂ ಸ್ಪೃಶ್ಯತೆ ಅಸ್ಪೃಶ್ಯತೆ ತಾಂಡವಾಡುತ್ತಿದೆ ಎಂದರೆ ಅದಕ್ಕೆ ನಿಮ್ಮಂತಹ ಪಟ್ಟಭದ್ರ ಹಿತಾಸಕ್ತಿಗಳೇ ಕಾರಣೀಭೂತರು.
ಇಂದಿಗೂ ಮೇಲ್ಜಾತಿ ಎನಿಸಿಕೊಂಡವರು ದೀನ ದಲಿತರನ್ನ ಹೇಗೆಲ್ಲಾ ನಡೆಸಿಕೊಳ್ಳುತ್ತಾರೆ ನಿಮಗೆ ತಿಳಿದಿದೆಯೇ. ಮನೆಯೊಳಗೆ, ದೇವಸ್ಥಾನಕ್ಕೆ ಪ್ರವೇಶವೇ ನೀಡದಂತಹ ಸ್ಥಿತಿ ಇದೆ. ಕುಡಿಯಲು ನೀರು ಸಹ ಕೊಡದ ಮನಸ್ಥಿತಿ ಅವರಲ್ಲಿದೆ, ಇದು ಸಮಾನತೆಯೇ..? ಮೊದಲು ಇದನ್ನ ರಾಷ್ಟೀಯ ಭದ್ರತಾ ಖಾಯ್ದೆಗೆ ಒಳಪಡಿಸುವಂತೆ ಒತ್ತಾಯ ಮಾಡಿ ಆಗ ನೀವು ಅಂಬೇಡ್ಕರ್ ರವರನ್ನು ಗೌರವಿಸಿದಂತೆ.
ಧರ್ಮ ಧರ್ಮಗಳ ನಡುವೆ ಕಿಚ್ಚು ಹಚ್ಚಿ ಪ್ರಚಾರತೆ ಗಿಟ್ಟಿಸುವ ಮಾತುಗಳನ್ನು ಮೊದಲು ಕಡಿಮೆ ಮಾಡಿ. ತುಮಕೂರು ನಗರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ ಸಮಾನ ನಾಗರೀಕತೆಗಾಗಿ ಏನು ಕೊಡುಗೆ ನೀಡಿದ್ದೀರಿ ಅದನ್ನು ಹೇಳಿ ಎಂದು ಡಾ.ರಫೀಕ್ ಅಹ್ಮದ್ ರವರು ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ತುಮಕೂರು ಗ್ರಾಮಾಂತರದಲ್ಲಿ ಓರ್ವ ಹೆಣ್ಣುಮಗಳ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತಂದು ಹೋರಾಟ ಮಾಡಿ ಹೆಣ್ಣು ಮಕ್ಕಳ ಮೇಲೆ ನಿಮಗಿರುವ ಗೌರವ ತೋರಿಸಿ. ಬೆಲೆ ಏರಿಕೆಯಿಂದ ಜನತೆ ತತ್ತರಿಸುತ್ತಿದ್ದಾರೆ ಆದರೂ ನೀವು ಇದರ ಬಗ್ಗೆ ಚಕಾರವೆತ್ತುತ್ತಿಲ್ಲ. ನಿಜವಾದ ದೇಶಪ್ರೇಮ ನಿಮಗಿದ್ದರೆ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿ ತೋರಿಸಬೇಕೇ ಹೊರತು. ಇಂತಹ ಕೀಳು ಮನಸ್ಥಿತಿಯ ಹೇಳಿಕೆಗಳಿಂದ ಸಮಾಜದ ಸೌಸ್ಥ್ಯ ಹಾಳು ಮಾಡುವ ಪ್ರಯತ್ನ ಮಾಡಬೇಡಿ ಎಂದು ಡಾ.ರಫೀಕ್ ಅಹ್ಮದ್ ಸಲಹೆ ನೀಡಿದ್ದಾರೆ.