ತುಮಕೂರು: ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಿ.ಇ. ಪದವಿ ವ್ಯಾಸಂಗವನ್ನು ಸೇರಬಯಸುವ ವಿದ್ಯಾರ್ಥಿಗಳಿಗೆ ಸೆಫ್ಟೆಂಬರ್ 5 ರಂದು ಪ್ರವೇಶಾತಿ ಮತ್ತು ವಿದ್ಯಾರ್ಥಿವೇತನ ಪರೀಕ್ಷೆ ನಡೆಸಲಾಗಿದ್ದು, ರಾಜ್ಯದ ವಿವಿಧೆಡೆಗಳಿಂದ ಇಂಜೀನಿಯರಿಂಗ್ ಪದವಿ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆದು ತಮ್ಮ ಇಚ್ಚಿತ ಇಂಜಿನಿಯರಿಂಗ್ ವಿಭಾಗಗಳಲ್ಲಿ ಪ್ರವೇಶಕ್ಕೆ ಪ್ರಯತ್ನಿಸಿದರು. ಸುಮಾರು 430 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತುಮಕೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಚಿಕ್ಕಮಗಳೂರು, ಕೊಪ್ಪಳ, ರಾಯಚೂರು, ಹಾವೇರಿ, ಬಾಗಲಕೋಟೆ, ಹಾಗೂ ರಾಜ್ಯದ ಇತರೆಡೆಗಳಿಂದ ಆಗಮಿಸಿದ್ದರು. ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಅಂದೇ ಮುಗಿಸಿ ನಂತರ ವಿದ್ಯಾರ್ಥಿಗಳ ರ್ಯಾಂಕಿಂಗ್ ಪ್ರಕಟಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ತಲಾ 2,50,000 ರೂಗಳ ವಿದ್ಯಾರ್ಥಿ ವೇತನವನ್ನು 1 ರಿಂದ 10 ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೂ, ತಲಾ 1,20,000 ರೂಗಳ ವಿದ್ಯಾರ್ಥಿ ವೇತನವನ್ನು 11 ರಿಂದ 25 ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೂ ನೀಡಿ ಇಂಜಿನಿಯರಿಂಗ್ ಪದವಿ ವ್ಯಾಸಂಗಕ್ಕೆ ಸೇರಲು ಅವಕಾಶ ಮಾಡಿ ಕೊಡಲಾಯಿತು. ಇತರೆ ರ್ಯಾಂಕ್ ಪಡೆದ ಪರೀಕ್ಷಾರ್ಥಿಗಳಿಗೂ ವಿದ್ಯಾರ್ಥಿ ವೇತನವನ್ನು ಒದಗಿಸಿ ತಮ್ಮ ಇಚ್ಚೆಯ ಇಂಜಿನಿಯರಿಂಗ್ ವಿಭಾಗಗಳನ್ನು ಸೇರಲು ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಲಾಯಿತು. ವಿದ್ಯಾರ್ಥಿವೇತನವನ್ನು ಪಡೆದುಕೊಂಡ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಶ್ರೀ.ಎಂ.ಎಸ್.ಪಾಟೀಲ್ರವರು ಕಾಲೇಜಿನಲ್ಲಿ ಸುಮಾರು ವರ್ಷಗಳಿಂದಲೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕಾಗಿ ವಿದ್ಯಾರ್ಥಿವೇತನ ವ್ಯವಸ್ಥೆ ಮಾಡಿದ್ದು, ಅದರಂತೆ ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವಕಾಶದ ಸದುಪಯೋಗ ಪಡೆದುಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿ ಕಾಲೇಜಿನಲ್ಲಿ ಎಲ್ಲಾ ತರಹದ ಶೈಕ್ಷಣಿಕ, ವೃತ್ತಿಪರ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹವಿದ್ದು, ಪದವಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೆ ನಮ್ಮ ಗುರಿಯೆಂದು ನುಡಿದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹೊರದೇಶಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ಅನುವಾಗುವಂತೆ ಜರ್ಮನ್ ಮತ್ತು ಜಪಾನೀಸ್ ಭಾಷೆಯ ಕಲಿಕೆ ಪ್ರಾರಂಭಿಸಲಾಗುತ್ತದೆಯೆಂದರು.
ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್ರವರು ಮಾತನಾಡುತ್ತಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಮತ್ತು ನಂತರದ ಉದ್ಯೋಗ ತರಬೇತಿ ಮತ್ತು ನೇಮಕಾತಿ ಪ್ರಕ್ರಿಯೆಗೆ ವಿಶೇಷ ಒತ್ತು ನೀಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆಂದು ತಿಳಿಸಿ ಮುಂದೆಯೂ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ಅಪಾರ ಸಾಧ್ಯತೆಗಳನ್ನು ವಿವರಿಸಿದರು.
ಪದವಿ ಸೀಟುಗಳ ಅವಕಾಶ ಮತ್ತು ವಿದ್ಯಾರ್ಥಿ ವೇತನಪಡೆದ ವಿದ್ಯಾರ್ಥಿಗಳು ಹಾಗೂ ಪೋಷಕರು ತುಂಬು ಕೃತಜ್ಞತೆಯಿಂದ ಸ್ವೀಕರಿಸಿ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟ ಶ್ರೀದೇವಿ ಛಾರಿಟಬಲ್ ಸಂಸ್ಥೆಯ ಮುಖ್ಯಸ್ಥರಾದ ಡಾ.ಎಂ.ಆರ್.ಹುಲಿನಾಯ್ಕರ್ರವರಿಗೆ ವಂದನೆಗಳನ್ನು ಸಲ್ಲಿಸಿದರು. ಸಮಾರಂಭದಲ್ಲಿ ಕು.ಭಾವನಾ ಪ್ರಾರ್ಥಿಸಿ, ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್ ಸ್ವಾಗತಿಸಿ, ಶ್ರೀದೇವಿ ಎಂ.ಬಿ.ಎ.ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎಸ್.ರಾಮಕೃಷ್ಣರವರು ವಂದಿಸಿದರು, ಹಾಗೂ ಡಾ.ಸಿ.ನಾಗರಾಜ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಮಾರಂಭದಲ್ಲಿ ಕೋವಿಡ್ ನಿಯಮಾವಳಿಗಳನ್ನು ಎಲ್ಲಿಯೂ ಮೀರದಂತೆ ಪಾಲಿಸಿ ಪರೀಕ್ಷೆ ಮತ್ತು ಸಮಾರಂಭವನ್ನು ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಆಯೋಜಿಸಿದ್ದನ್ನು ಪೋಷಕರು ಶ್ಲಾಘಿಸಿದರು.