ತುಮಕೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಸೇರಿದಂತೆ ಅಡುಗೆ ಎಣ್ಣೆ, ಬೇಳೆ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ಡಾ.ರಫೀಕ್ ಅಹ್ಮದ್ ಖಂಡಿಸಿದ್ದಾರೆ. ಕೊರೊನಾ ಜೊತೆಗೆ ಬೆಲೆ ಏರಿಕೆಯ ಭೀಕರತೆ ದೇಶದ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯವರು ಹೇಳಿದಂತೆ, ಬಿಜೆಪಿ ನಾಯಕರು ಜಿ.ಡಿ.ಪಿ ಏರಿಕೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದರು, ಆದರೆ ಬಿ.ಜೆ.ಪಿ ಯವರ ಪ್ರಕಾರ ಜಿ.ಡಿ.ಪಿ ಎಂದರೆ ಗ್ಯಾಸ್, ಡೀಸೆಲ್, ಪೆಟ್ರೋಲ್ ಆಗಿರುವುದು ಅವರ ಅಪ್ರಬುದ್ದತೆಯಾಗಿದೆ ಎಂದು ಹೇಳಿರುವುದು ಪ್ರಸ್ತುತ ಸನ್ನಿವೇಶಕ್ಕೆ ಸರಿಯಾಗಿದೆ. ಬಡಜನರ ಪರವಾಗಿರಬೇಕಾದ ಸರ್ಕಾರ ಉಳ್ಳವರ ಪರವಾಗಿ ಅಧಿಕಾರ ನಡೆಸುತ್ತಿರುವುದು ಹೇಯಕರವಾಗಿದೆ. ಬಿಜೆಪಿ ಸರ್ಕಾರಕ್ಕೆ ನೈತಿಕತೆ ಇದ್ದರೆ ಕೂಡಲೇ ಬೆಲೆ ಏರಿಕೆ ನಿಯಂತ್ರಿಸಿ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿ, ಮತ್ತು ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿ ಹಣವನ್ನು ನೀಡಬೇಕೆಂದು ಎಂದು ಡಾ.ರಫೀಕ್ ಅಹ್ಮದ್ ರವರು ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರವರನ್ನು ಮಾಧ್ಯಮದವರು ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದಾಗ ನೀವೇನು ಅರ್ಥಶಾಸ್ತ್ರಜ್ಞರೋ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿರುವುದು ಖಂಡನೀಯ. ಅರುಣ್ ಸಿಂಗ್ ರವರೇ ನಿಮ್ಮ ಸರ್ಕಾರದಲ್ಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅರ್ಥಶಾಸ್ತ್ರಜ್ಞರೋ …? ಎಂದು ಡಾ.ರಫೀಕ್ ಅಹ್ಮದ್ ರವರು ಮರು ಪ್ರಶ್ನಿಸಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆಯಲ್ಲಿಯೇ ಕಾಲ ಕಳೆಯುವ ಬಿಜೆಪಿ ನಾಯಕರು ಈ ದೇಶಕ್ಕಾಗಿ ನೀಡಿರುವ ಕೊಡುಗೆ ಶೂನ್ಯವಾಗಿದೆ. ಇವರ ನಿರ್ಲಕ್ಷ್ಯತೆಯಿಂದ ಸಾಮಾನ್ಯ ಜನತೆ ಬೀದಿಗೆ ಬಂದಂತಾಗದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಬಿಜೆಪಿ ನಾಯಕರೂ ಕೂಡ ಇದರ ಬಗ್ಗೆ ಪ್ರಶ್ನೆ ಮಾಡಲಾರದಂತಹ ಹೀನಾಯ ಸ್ಥಿತಿಗೆ ತಲುಪಿದ್ದಾರೆ. ಕರ್ನಾಟಕ ರಾಜ್ಯದ ತೆರಿಗೆ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ನೀಡುವುದಷ್ಟೇ ಇವರ ಕೆಸವಾಗಿದೆ. ರಾಜ್ಯಕ್ಕೆ ಬರುವ ಅನುದಾನ, ಮತ್ತು ತೆರಿಗೆಯಲ್ಲಿನ ಪಾಲು ಕೇಳಿ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದ ಪಾಲಿಗೆ ಬಿಜೆಪಿ ಸರ್ಕಾರವು ಶಾಪವಾಗಿ ಪರಿಣಮಿಸಿದೆ ಎಂದು ಡಾ.ರಫೀಕ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.