ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಮತ್ತು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಯೋಜನೆಗಳು ಅದರಲ್ಲಿಯೂ ಮುಖ್ಯವಾಗಿ ಕುಷ್ಠರೋಗ ನಿರ್ಮೂಲನೆ, ಕ್ಷಯರೋಗ ನಿಯಂತ್ರಣ, ಹೆಚ್.ಐ.ವಿ./ಏಡ್ಸ್ ನಿಯಂತ್ರಣ, ಅಂಧತ್ವ ನಿಯಂತ್ರಣ ಯೋಜನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುಮೋದಿಸಲ್ಪಟ್ಟಿದ್ದು ಕಳೆದ 30 ವರ್ಷಗಳಿಂದ ನಿರಂತರವಾಗಿ ಅತ್ಯಂತ ಹಿಂದುಳಿದ, ಬರಪೀಡಿತ ಹಾಗೂ ಉತ್ತಮ ಆರೋಗ್ಯ ಸೌಲಭ್ಯಗಳಿಂದ ವಂಚಿತವಾಗಿರುವ ಪಾವಗಡದಲ್ಲಿ ಸುವರ್ಣಾಕ್ಷರದಿಂದ ಬರೆದಿಡುವಂತಹ ಒಂದು ಅದ್ಭುತ ಕಾರ್ಯಕ್ರಮ ಇದೇ ಸೆಪ್ಟೆಂಬರ್ 4, ಶನಿವಾರದಂದು ನೆರವೇರಲಿದೆ. ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಇನ್ಫೋಸಿಸ್ ಫೌಂಡೇಷನ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿರುವ ನೂತನ ಕಣ್ಣಿನ ಆಸ್ಪತ್ರೆಯ ಸಂಕೀರ್ಣದ ಉದ್ಘಾಟನೆ ವರ್ಚುವಲ್ ಮೂಲಕ ನೆರವೇರಲಿದೆ. ಘನತೆವೆತ್ತ ಉಪರಾಷ್ಟ್ರಪತಿಗಳಾದ ಶ್ರೀ ಎಂ.ವೆಂಕಯ್ಯನಾಯ್ಡು ರವರು ಈ ಕಾರ್ಯಕ್ರಮವನ್ನು ವೆಬಿನಾರ್ ಮೂಲಕ ನೆರವೇರಿಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ದಿವ್ಯಸಾನ್ನಿಧ್ಯವನ್ನು ಶ್ರೀ ಶ್ರೀ ನಿರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಅಧ್ಯಕ್ಷರು, ಶ್ರೀ ಸಿದ್ದಗಂಗ ಸಂಸ್ಥಾನ, ತುಮಕೂರು ರವರು ವಹಿಸಿಕೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಮಾನ್ಯ ಕೇಂದ್ರ ಸರ್ಕಾರದ ರಾಜ್ಯ ಸಚಿವರಾದ ಶ್ರೀ ಎ.ನಾರಾಯಣ ಸ್ವಾಮಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರವರು ಹಾಗೂ ಕರ್ನಾಟಕ ರಾಜ್ಯ ಸಚಿವರುಗಳಾದ ಶ್ರೀ ಜೆ.ಸಿ.ಮಾಧುಸ್ವಾಮಿ, ಸಣ್ಣ ನೀರಾವರಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ, ಶ್ರೀ ಕೆ.ಸುಧಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ, ಶ್ರೀ ಬಿ.ಸಿ.ನಾಗೇಶ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಸಕಾಲ ಇಲಾಖೆ, ಶ್ರೀ ಎಸ್.ಸುರೇಶ್ ಕುಮಾರ್, ಮಾಜಿ ಸಚಿವರು ಹಾಗೂ ಹಾಲಿ ಶಾಸಕರು, ರಾಜಾಜಿನಗರ, ಬೆಂಗಳೂರು ಮತ್ತು ಶ್ರೀ ವೆಂಕಟರಮಣಪ್ಪ, ಮಾಜಿ ಸಚಿವರು ಹಾಗೂ ಹಾಲಿ ಶಾಸಕರು, ಪಾವಗಡ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನೆರವೇರಲಿದೆ.
ಗ್ರಾಮಾಂತರ ಪ್ರದೇಶದಲ್ಲಿ ಬಹುಶಃ ದಕ್ಷಿಣ ಭಾರತದಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹಾಗೂ ಉಪಕರಣಗಳುಳ್ಳ ಕಣ್ಣಿನ ಆಸ್ಪತ್ರೆ ಎಂದಲ್ಲಿ ತಪ್ಪಾಗಲಾರದು. ಈಗಾಗಲೇ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಗಡಿ ಭಾಗವಾದ ಪಾವಗಡದಲ್ಲಿ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಸೇವೆಯನ್ನು ನಡೆಸಿಕೊಂಡು ಬರುತ್ತಿರುವ ಈ ಸಂಸ್ಥೆಗೆ ಶ್ರೀಮತಿ ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಫೌಂಡೇಷನ್ ರವರು ಅಪಾರವಾದ ಸಹಕಾರ ನೀಡುತ್ತಾ ಈ ಗ್ರಾಮಾಂತರ ಭಾಗದ ಜನರಿಗೆ ಅತ್ಯಂತ ಉತ್ಕೃಷ್ಟ ಮಟ್ಟದ ಸೇವೆಯನ್ನು ಸಲ್ಲಿಸುವಂತೆ ಮಾಡಲು ಈ ನೂತನ ಸಂಕೀರ್ಣ ಇನ್ಫೋಸಿಸ್ ಪ್ರಾಯೋಜಕತ್ವದಲ್ಲಿ ತಲೆ ಎತ್ತಿ ನಿಂತಿದೆ. ಈ ಮಹತ್ಕಾರ್ಯಕ್ಕೆ ಅನೇಕ ಸಂಸ್ಥೆಗಳಾದ ಬಗಾರಿಯಾ ದತ್ತಿ ಸಂಸ್ಥೆ, ಬ್ಲೈಂಡ್ ಫೌಂಡೇಷನ್ ಫಾರ್ ಇಂಡಿಯಾ, ಸರ್ ದೊರಾಬ್ಜಿ ಟಾಟಾ ಟ್ರಸ್ಟ್, ಕನ್ನಡ ಬಳಗ, ಯು.ಕೆ., ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋಆಪರೇಟಿವ್ ಲಿಮಿಟೆಡ್, ತುಮಕೂರು ಮುಂತಾದ ಸಂಘ ಸಂಸ್ಥೆಗಳು ಸಹಾಯ ಹಸ್ತವನ್ನು ನೀಡಿವೆ. ಒಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಧ್ಯೇಯ ವಾಕ್ಯವಾದ ಜೀವನಲ್ಲಿ ಶಿವನನ್ನು ಕಂಡು ಸೇವೆ ಸಲ್ಲಿಸುವ ಅನುಷ್ಠಾನ ರೂಪವೇ ಈ ಸಂಸ್ಥೆಯಾಗಿದೆ ಎಂದಲ್ಲಿ ತಪ್ಪಾಗಲಾರದು. ಈ ಸಂಸ್ಥೆಗೆ ದಿವಂಗತ ಶ್ರೀ ಅನಂತಕುಮಾರ್ (ಕೇಂದ್ರ ಸಚಿವರು) ಅತ್ಯಂತ ರೀತಿಯಲ್ಲಿ ಸಹಕಾರ ನೀಡುತ್ತಿದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇದೇ ರೀತಿ ಈ ಸಂಸ್ಥೆಗೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ರವರು, ಅಧ್ಯಕ್ಷರು, ರಜತ ಮಹೋತ್ಸವದ ಸ್ವಾಗತ ಸಮಿತಿ ರವರು ಸರ್ವ ರೀತಿಯಲ್ಲಿ ಪ್ರೋತ್ಸಾಹ ಹಾಗೂ ಸಹಾಯ ಹಸ್ತವನ್ನು ನೀಡುತ್ತಿದ್ದಾರೆ.
ಸಂಸ್ಥೆಯು ಹಿರಿಯರಾದ ಮಹಾ ಪೋಷಕರುಗಳಾದ ನ್ಯಾಯಮೂರ್ತಿ ಶ್ರೀ ಎಂ.ಎನ್.ವೆಂಕಟಾಚಲಯ್ಯ, ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಸರ್ವೋಚ್ಛ ನ್ಯಾಯಾಲಯ, ಭಾರತ ಸರ್ಕಾರ ಮತ್ತು ಶ್ರೀ ಶ್ರೀ ಧರ್ಮಾಧಿಕಾರಿಗಳು, ಶ್ರೀ ವೀರೇಂದ್ರ ಹೆಗ್ಗಡೆ, ಶ್ರೀ ಕ್ಷೇತ್ರ, ಧರ್ಮಸ್ಥಳ, ನ್ಯಾಯಮೂರ್ತಿ ಶ್ರೀ ಎನ್.ಸಂತೋಷ್ ಹೆಗ್ಡೆ, ಮಾಜಿ ಲೋಕಾಯುಕ್ತರು, ಕರ್ನಾಟಕ ಸರ್ಕಾರ, ಶ್ರೀ ವಿ.ವಿ.ಭಾಸ್ಕರ್, ನಿವೃತ್ತ ಡಿಜಿ-ಐಜಿಪಿ, ಕರ್ನಾಟಕ ಸರ್ಕಾರ ಮತ್ತು ಶ್ರೀ ವಿವೇಕ ರೆಡ್ಡಿ, ಪ್ರಸಿದ್ಧ ವಕೀಲರು, ಡಾ.ಕೆ.ಭುಜಂಗ ಶೆಟ್ಟಿ, ಅಧ್ಯಕ್ಷರು, ನಾರಾಯಣ ನೇತ್ರಾಲಯ, ಡಾ.ದೇವಿ ಪ್ರಸಾದ ಶೆಟ್ಟಿ, ಅಧ್ಯಕ್ಷರು, ನಾರಾಯಣ ಹೃದಯಾಲಯ, ಡಾ.ಮಹಾಬಲೇಶ್ವರ ಮಯ್ಯ, ಪ್ರಸಿದ್ಧ ತಜ್ಞರು, ಇವರುಗಳ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಸೇವಾ ಯೋಜನೆಗಳನ್ನು ನಡೆಸುತ್ತಾ ಬರುತ್ತಿರುವ ಸಂಸ್ಥೆ ಇದಾಗಿದೆ.
ನೂತನ ಸಂಕೀರ್ಣದ ವಿವರ :-
’ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ವು 16-06-2002 ರಂದು ಮಹಾಮಾತೆ ಶ್ರೀ ಶಾರದಾದೇವಿಯವರ 150ನೇ ಜನ್ಮದಿನೋತ್ಸವದ ಶುಭಸಂದರ್ಭದಲ್ಲಿ, ಶ್ರೀರಾಮಕೃಷ್ಣ ಮಠ ಮತ್ತು ಮಿಷನ್ನಿನ ಉಪಾಧ್ಯಕ್ಷರಾದ ಶ್ರೀಮತ್ ಸ್ವಾಮಿ ಗೌತಮಾನಂದಜೀ ಮಹಾರಾಜ್‌ರವರ ಅಮೃತಹಸ್ತದಿಂದ ಆರಂಭವಾಯಿತು. ಅಂದಿನಿಂದ ನಿರಂತರವಾಗಿ ಅಂಧತ್ವ ನಿವಾರಣಾ ಯೋಜನೆಯಡಿಯಲ್ಲಿ ಈವರೆಗೆ ಸುಮಾರು 32000ಕ್ಕೂ ಮಿಗಿಲಾದ ನೇತ್ರ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗಿದೆ. ಇದೇ ಸಂದರ್ಭದಲ್ಲಿ ಪ್ರಖ್ಯಾತ ನಾರಾಯಣ ನೇತ್ರಾಲಯದ ಸಹಕಾರದಿಂದ ಮಕ್ಕಳ ನೇತ್ರ ಶಸ್ತ್ರಚಿಕಿತ್ಸೆಯನ್ನೂ ಆರಂಭಿಸಲಾಯಿತು. ಅನಂತರ, ತಜ್ಞರ ಸಹಕಾರದೊಂದಿಗೆ ಆರು ತಿಂಗಳ ಮಗುವಿನಿಂದ ಹಿಡಿದು ಹದಿನೈದು ವರ್ಷದ ಮಕ್ಕಳವರೆಗೆ ಅತ್ಯಂತ ಸೂಕ್ಷ್ಮವಾದ ಸುಮಾರು 146 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಇದೇ ಸಂದರ್ಭದಲ್ಲಿ, ನಮ್ಮ ಸಂಸ್ಥೆಯ ಆಶ್ರಯದಲ್ಲಿ, ಅನೇಕಾನೇಕ ವೈಜ್ಞಾನಿಕ ಸಂಶೋಧನಾ ಅಧ್ಯಯನಗಳನ್ನು ನಡೆಸಲಾಗಿದೆ. ಪ್ರಖ್ಯಾತ ನೇತ್ರತಜ್ಞರಾದ ಡಾ. ಭುಜಂಗ ಶೆಟ್ಟಿ, ಡಾ. ವಸುಧಾ, ಡಾ. ನರೇಶ್, ಡಾ. ನರೇಂದ್ರ, ಡಾ. ಕೌಶಿಕ್ ಹೆಗಡೆ, ಡಾ. ಸುಭಾಶ್ ಚಂದ್ರ, ಡಾ. ಅಶ್ವಿನ್ ಮುಂತಾದವರ ಸಹಕಾರದಿಂದ ಅಂತರರಾಷ್ಟ್ರೀಯ ಮಟ್ಟದ ನೇತ್ರಕ್ಕೆ ಸಂಬಂಧಪಟ್ಟ ಸಂಶೋಧನಾ ಅಧ್ಯಯನಗಳನ್ನು ನಡೆಸಿರುವ ಕೀರ್ತಿ ಈ ಸಂಸ್ಥೆಗೆ ಸೇರಿದೆ. ಇದೇ ಸಂದರ್ಭದಲ್ಲಿ, ಟಾಟಾ ಟ್ರಸ್ಟ್ ಮತ್ತು ಇನ್ಫೋಸಿಸ್ ಫೌಂಡೇಷನ್ ರವರ ಅಮೂಲ್ಯ ಸಹಕಾರದಿಂದ, 32148 ಮಕ್ಕಳನ್ನು ಒಳಗೊಂಡಂತೆ (ಎರಡು ಹಂತಗಳಲ್ಲಿ) ಅಂತರರಾಷ್ಟ್ರೀಯ ಮಟ್ಟದ ಅಧ್ಯಯನ ಒಂದನ್ನು ಕೈಗೆತ್ತಿಕೊಂಡು 2008ರಿಂದ 2016ವರೆಗೆ ನಿರಂತರವಾಗಿ ನಡೆಸಲಾಯಿತು. ಅಂತರರಾಷ್ಟ್ರೀಯ ಖ್ಯಾತಿಯ ಡಾ. ದೇವಿಪ್ರಸಾದ ಶೆಟ್ಟಿರವರ ಸಹಕಾರದಿಂದ ಜೆನೆಟಿಕ್, ಮೆಟಾಬಾಲಿಕ್ ಮತ್ತು ಅತಿ ಸೂಕ್ಷ್ಮ ಪರೀಕ್ಷೆಗಳನ್ನು ಮತ್ತು ಪ್ರಯೋಗಗಳನ್ನು ನಾರಾಯಣ ಹೃದಯಾಲಯದ ಪ್ರಯೋಗಾಲಯದಲ್ಲಿ ನಡೆಸಲಾಯಿತು. ರಾಷ್ಟ್ರೀಯ ಅಂಕಿಅಂಶಗಳ ಸಂಶೋಧನಾ ಕೇಂದ್ರ, ನಾಗರಭಾವಿ, ಬೆಂಗಳೂರು ಇವರ ಅಮೂಲ್ಯ ಮಾರ್ಗದರ್ಶನದಲ್ಲಿ ಈ ಪ್ರತಿಷ್ಠಿತ ಅಧ್ಯಯನ ನಡೆದು, ಜಾಗತಿಕ ನೇತ್ರ ಸಂಶೋಧನಾ ನಿಯತಕಾಲಿಕದಲ್ಲಿ ಇದರ ಸಂಶೋಧನಾ ವರದಿ ಪ್ರಕಟಗೊಂಡಿತು. ಹೀಗೆ, ನಮ್ಮ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.
’ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ ಮತ್ತು ’ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ’ದ ರಜತ ಮಹೋತ್ಸವದ ಸವಿನೆನಪಿಗಾಗಿ ಇನ್ಫೋಸಿಸ್ ಫೌಂಡೇಷನ್‌ನ ನೆರವಿನಿಂದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒಳಗೊಂಡ ಒಂದು ಸುಸಜ್ಜಿತ ಆಸ್ಪತ್ರೆಯ ಸಂಕೀರ್ಣವನ್ನು ಇದೀಗ ಉದ್ಘಾಟನೆಗೆ ಅಣಿಪಡಿಸಲಾಗಿದೆ. ಇಡೀ ದಕ್ಷಿಣ ಭಾರತದಲ್ಲಿಯೇ ಬಹುಶಃ ಇದು ಅತ್ಯಂತ ಸುಸಜ್ಜಿತವಾದ ಹಾಗೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಏಕೈಕ ಗ್ರಾಮಾಂತರ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ. ಇದಕ್ಕೆ ಪೂರಕವಾಗುವಂತೆ ಭಾರತದಲ್ಲಿಯೇ ವಿಖ್ಯಾತವಾದ ಮಿಂಟೋ ಕಣ್ಣಾಸ್ಪತ್ರೆ ಹಾಗೂ ಪ್ರಾದೇಶಿಕ ನೇತ್ರ ಚಿಕಿತ್ಸಾ ಸಂಸ್ಥೆ ತನ್ನ 125ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಈ ಕೇಂದ್ರವನ್ನು ತನ್ನ ಗ್ರಾಮೀಣ ನೇತ್ರ ಚಿಕಿತ್ಸಾ ಯೋಜನೆಯಡಿಯಲ್ಲಿ ಒಡಂಬಡಿಕೆ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರವೇ ಸರಿ. ಆ ಪ್ರಕಾರ ನೇತ್ರತಜ್ಞರು ಹಾಗೂ ದೃಷ್ಟಿಮಾಪಕರು ಈ ಸಂಸ್ಥೆಗೆ ನಿಯೋಜಿಸಲ್ಪಟ್ಟಿರುತ್ತಾರೆ. ಹಾಗಾಗಿ ಇನ್ನೂ ಶ್ರೇಷ್ಠ ಮಟ್ಟದ ಸೇವೆಯನ್ನು ಸಲ್ಲಿಸುವ ವ್ಯವಸ್ಥೆ ಈ ಸಂಸ್ಥೆಗೆ ಒದಗಿ ಬಂದಿದೆ. ನೂತನ ಆಸ್ಪತ್ರೆ ಸಂಕೀರ್ಣ ಮತ್ತು ಹೊರ ರೋಗಿ ಕೇಂದ್ರದಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನಾನಾ ರೀತಿಯ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆಯ ವತಿಯಿಂದ ರೋಗಿಗಳಿಗೂ ಅವರ ಸಹಾಯಕರಿಗೂ ಉಚಿತವಾಗಿ ಊಟೋಪಚಾರ, ಔಷಧಿ, ಶಸ್ತ್ರಚಿಕಿತ್ಸೆ ಹಾಗೂ ಸಾರಿಗೆ ಸೌಲಭ್ಯಗಳನ್ನು ಒದಗಿಸುತ್ತಿರುವುದೂ ಹೆಮ್ಮೆಯ ಸಂಗತಿಯಾಗಿದೆ.
ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಈ ಕೆಳಕಂಡ ಶಸ್ತ್ರಚಿಕಿತ್ಸೆಗಳನ್ನು ಉತ್ಕೃಷ್ಟ ಮಟ್ಟದಲ್ಲಿ ತಜ್ಞರುಗಳಿಂದ ನೆರವೇರಿಸಲಾಗುತ್ತದೆ. ಮಹಾನಗರಗಳಲ್ಲಿ ಮಾತ್ರ ದೊರೆಯುವ ಸೌಲಭ್ಯ ಇದೀಗ ಗ್ರಾಮಾಂತರ ಭಾಗವಾದ ಪಾವಗಡದಲ್ಲಿ ಲಭ್ಯ. ಉತ್ಕೃಷ್ಟವಾದ ಮತ್ತು ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ಶಸ್ತ್ರ ಚಿಕಿತ್ಸೆಗಳನ್ನು ರಿಯಾಯಿತಿ ದರದಲ್ಲಿ ನೆರವೇರಿಸಲಾಗುತ್ತದೆ.
- ಫೇಕೋ ಎಮಲ್ಸಿಫಿಕೇಶನ್ ಸರ್ಜರಿ (Phacoemulsification Surgery [Laser No-Stitch Cataract Surgery] with foldable IOL)
- ಸಣ್ಣ ಸೀಳುವಿಕೆಯ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ (Manual Small Incision cataract surgery)
- ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್
- ಕಂಪ್ಯೂಟರೀಕೃತ ನೇತ್ರ ಪರೀಕ್ಷೆ
- ಕಾರ್ನಿಯಲ್ ಸರ್ಜರಿ (ಕೆರಾಟೋಪ್ಲಾಸ್ಟಿ)
- ಗ್ಲ್ಲೊಕೋಮಾ ಕ್ಲಿನಿಕ್: (Zeiss HFA3 Visual field analyzer) ಪೆರಿಮೆಟ್ರಿ ಯಾಗ್ ಲೇಸರ್
- ಎ-ಬಿ ಸ್ಕ್ಯಾನ್ ಯು.ಎಸ್.ಜಿ. (A-B-Scan USG)
- ಡಯೋಡ್ ಗ್ರೀನ್ ಲೇಸರ್ (For Diabetic Retinopathy treatment)
- ಮಕ್ಕಳ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ (Paediatric Ophthalmology Clinic)
- ದೂರಸಂಪರ್ಕ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಸೌಲಭ್ಯ (Tele Ophthalmology)
- ಗ್ಲೊಕೋಮಾ ತಪಾಸಣೆ with NCT, GAT, Gonioscopy, HFA
- OCT for Retina & Glaucoma Evaluation
- ಲೆನ್ಸೋಮೀಟರಿನಿಂದ ದೃಷ್ಟಿದೋಷಗಳ ತಪಾಸಣೆ ಮತ್ತು ನಿಖರವಾದ ಕನ್ನಡಕಗಳ ನೀಡುವಿಕೆ (Lensometer to Calculate Spectacle power)
- ಕಣ್ಣಿನ ಬಳಿ ಬರುವ ದುರ್ಮಾಂಸದ ಶಸ್ತ್ರ ಚಿಕಿತ್ಸೆ (Pterygium Surgery)
- ಕುಣಿಕೆ ಚೀಲದ ಶಸ್ತ್ರಚಿಕಿತ್ಸೆ – DCR & DCT Surgery
- To start Cornea Clinic with availability of Pentacam and Specular Microscope for C3R and Keratoplasty.
ಈ ಎಲ್ಲಾ ಸೇವೆಗಳನ್ನು ಅತ್ಯುತ್ತಮ ರೀತಿಯಲ್ಲಿ ರಿಯಾಯಿತಿ ದರದಲ್ಲಿ ಮಾಡಲಾಗುತ್ತದೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ (ಕ್ಯಾಟರ‍್ಯಾಕ್ಟ್) ಸಂಪೂರ್ಣ ಉಚಿತವಾಗಿದ್ದು ಇದರ ಜೊತೆಯಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಭೋಜನ ಹಾಗೂ ಒಳರೋಗಿ ಸೇವೆಗಳು ಹಾಗೂ ಔಷಧಿ ಮತ್ತು ಕಪ್ಪು ಕನ್ನಡಕಗಳು ಸಂಪೂರ್ಣ ಉಚಿತವಾಗಿ ದೊರೆಯುತ್ತದೆ. ಉತ್ಕೃಷ್ಟ ಮಟ್ಟದ ಲೆನ್ಸ್ ಬೇಕಿದ್ದಲ್ಲಿ ಆಸ್ಪತ್ರೆಯ ಕಛೇರಿಯಲ್ಲಿ ರಿಯಾಯಿತಿ ದರದಲ್ಲಿ ನೀಡಲು ಏರ್ಪಾಡು ಮಾಡಲಾಗುತ್ತದೆ. ಒಟ್ಟಿನಲ್ಲಿ ಅತ್ಯದ್ಭುತವಾದ ಹಾಗೂ ಸೂಕ್ಷ್ಮಾತಿಸೂಕ್ಷ್ಮವಾದ ಶಸ್ತ್ರಚಿಕಿತ್ಸೆಗಳನ್ನು ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾಡುವಂತಹ ಉತ್ಕೃಷ್ಟ ಮಟ್ಟದ ಸೇವೆಯನ್ನು ಅತ್ಯಂತ ಮೇಧಾವಿ, ಅನುಭವಿ ಹಾಗೂ ಸ್ವರ್ಣಪದಕ ಪುರಸ್ಕೃತರಾದ ಮತ್ತು ಉನ್ನತ ಶ್ರೇಣಿಯಲ್ಲಿ ವ್ಯಾಸಂಗ ಮಾಡಿದ ವೈದ್ಯರುಗಳ ತಂಡವೇ ಸೇವೆ ಸಲ್ಲಿಸುತ್ತಿದ್ದಾರೆ. ಬಹುಶಃ ತುಮಕೂರು ಜಿಲ್ಲೆಯಲ್ಲಿಯೇ ದೊರೆಯದಂತಹ ಉತ್ಕೃಷ್ಟ ಮಟ್ಟದ ಉಪಕರಣಗಳು, ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತೆಲ್ಲದಕ್ಕಿಂತ ಮಿಗಿಲಾಗಿ ಉತ್ತಮ ರೀತಿಯ ದಾಖಲೆಪತ್ರಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ’ಆಯುಷ್ಮಾನ್ ಭಾರತ’ ’ಆರೋಗ್ಯ ಕರ್ನಾಟಕ’ ಸೌಲಭ್ಯವನ್ನು ಹೊಂದಿರುವವರು ಈ ಸೇವೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.