ಮಥುರಾ : ಮುಸ್ಲಿಂ ಕುಟುಂಬವೊಂದು ತಮ್ಮ ಅಂಗಡಿಗೆ ಹಿಂದೂ ದೇವರ ಹೆಸರನ್ನು ಇರಿಸಿದೆ ಎಂದು ಆಕ್ಷೇಪಿಸಿ ಗುಂಪೊಂದು ದೋಸಾ ಮಾರಾಟಗಾರನಿಗೆ ಹಲ್ಲೆ ನಡೆಸಿದ ಹಾಗೂ ಆತನ ಅಂಗಡಿಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಚೌಕ ಬಝಾರ್ ಪ್ರದೇಶದ ನಿವಾಸಿ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಕೊಟ್ವಾಲಿ ಇನ್ಸ್ಪೆಕ್ಟರ್ ಸೂರ್ಯ ಪ್ರಕಾಶ್ ಶರ್ಮಾ ಹೇಳಿದ್ದಾರೆ.
ಖಚಿತ ಮಾಹಿತಿಯ ಆಧಾರದಲ್ಲಿ ಶ್ರೀಕಾಂತ್ನನ್ನು ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತ ತನ್ನ ಸಹವರ್ತಿಗಳ ಹೆಸರನ್ನು ಬಹಿರಂಗಪಡಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಆರೋಪಿಗಳಲ್ಲಿ ಯಾರೊಬ್ಬರೂ ರಾಜಕೀಯ ಪಕ್ಷಗಳಿಗೆ ಸೇರಿದವರಲ್ಲ. ಶ್ರೀಕಾಂತ್ನ ಸಹವರ್ತಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ‘ಶ್ರೀನಾಥ್ ದೋಸಾ ಕಾರ್ನರ್’ ಎಂಬ ಹರಿದ ಬೋರ್ಡ್ ನ ಎದುರು ಕುಳಿದು ವ್ಯಕ್ತಿಯೋರ್ವ ದುಃಖಿಸುತ್ತಿರುವ ವೀಡಿಯೊ ತುಣುಕು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಬಳಿಕ ಪೊಲೀಸರು ರವಿವಾರ ಎಫ್ಐಆರ್ ದಾಖಲಿಸಿದ್ದರು.