ನೀರಿಂಗಿಸುವ ಸಾಂಪ್ರದಾಯಿಕ ಕ್ರಮ ಪರಿಣಾಮಕಾರಿ

ತುಮಕೂರು: ನೀರಿಂಗಿಸುವ ಸಾಂಪ್ರದಾಯಿಕ ಕ್ರಮಗಳು ಪರಿಣಾಮಕಾರಿಯಾಗಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಳೆ ನೀರನ್ನು ನೆಲದಲ್ಲಿ ಇಂಗುವಂತೆ ಮಾಡದೆ ಅಂತರ್ಜಲ ವೃದ್ಧಿಯಾಗದು ಎಂದು ಜಲ ಚಿಂತಕ ವಿ. ರಾಮಪ್ರಸಾದ್ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಜಿ.ಎಸ್. ಪರಮಶಿವಯ್ಯ ಅಧ್ಯಯನ ಪೀಠ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ’ಜಲ ಸುಸ್ಥಿರತೆ ಮತ್ತು ಭದ್ರತೆ: ಶ್ರೇಷ್ಠ ಮಾದರಿಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ನಮ್ಮಲ್ಲಿರುವ ನೀರನ್ನು ಸದುಪಯೋಗಪಡಿಸಿಕೊಳ್ಳದೆ ಬೇರೆಯವರ ಬಳಿ ನೀರು ಕೇಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.


ಇಸ್ರೇಲ್, ರಾಜಸ್ತಾನಗಳಲ್ಲಿ ಕೇವಲ ೩೦೦-೪೦೦ ಮಿ.ಮೀ. ಮಳೆಯಾಗುತ್ತದೆ. ಅವರು ನೀರನ್ನು ಯೋಗ್ಯವಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ. ನಮ್ಮಲ್ಲಿ ಸರಾಸರಿ 800-900 ಮಿ.ಮೀ. ಮಳೆಯಾದರೂ ಕಡಿಮೆ ಮಳೆ ಬೀಳುತ್ತಿದೆ ಎಂದು ನೆಪ ಹೇಳುತ್ತೇವೆಯೇ ಹೊರತು ಸುರಿದ ಮಳೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದರು. ಅಂತರ್ಜಲ ಹೆಚ್ಚಾಗಲು ನಾವು ತೋಡುತ್ತಿರುವ ಇಂಗು ಗುಂಡಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸಂಶೋಧನೆ ತಿಳಿಸಿದೆ. ಇಂಗುಬಾವಿಗಳನ್ನು ನಿರ್ಮಿಸುವುದು ಇದಕ್ಕೆ ಸೂಕ್ತ ಪರಿಹಾರ. ಈ ಪ್ರದೇಶದ ಬೋವಿ ಜನಾಂಗದವರಿಗೆ ನೀರಿನ ಇಂಗಿಸುವಿಕೆ ಕುರಿತು ಅಮೂಲ್ಯ ಜ್ಞಾನವಿದೆ. ಅವರ ಸಾಂಪ್ರದಾಯಿಕ ಕ್ರಮಗಳನ್ನು ಅರ್ಥ ಮಾಡಿಕೊಂಡು ಬಳಕೆಗೆ ತರಬೇಕು ಎಂದರು.

ಯಾವುದೇ ಯೋಜನೆ ಅನುಷ್ಠಾನಗೊಳ್ಳಲು ಜನರ ಸಹಭಾಗಿತ್ವ ಅಗತ್ಯ. ಎಲ್ಲರನ್ನೂ ಒಂದುಗೂಡಿಸುವ ಕೆಲಸವನ್ನು ವಿಶ್ವವಿದ್ಯಾನಿಲಯಗಳು ಮಾಡಬಹುದು. ವಿಶ್ವವಿದ್ಯಾನಿಲಯಗಳಲ್ಲಿ ಸಮಾಜಕ್ಕೆ ಅನುಕೂಲವಾಗುವ ಸಂಶೋಧನೆಗಳು ನಡೆಯಬೇಕು. ವಿದ್ಯಾರ್ಥಿಗಳು ತಮ್ಮ ಪದವಿಯ ಸಂಶೋಧನ ಯೋಜನೆಗಳಿಗೆ ಜಲಸಂರಕ್ಷಣೆಗೆ ಪೂರಕವಾದ ವಿಷಯಗಳನ್ನು ಆರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತುಮಕೂರು ವಿವಿ ಕುಲಪತಿ ಕರ್ನಲ್ (ಪ್ರೊ.) ವೈ.ಎಸ್.ಸಿದ್ದೇಗೌಡ, ಉನ್ನತ ಶಿಕ್ಷಣ ಸಂಸ್ಥೆಗಳು ಸಮಾಜದೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು. ಶೈಕ್ಷಣಿಕ ಚಟುವಟಿಕೆಗಳಲ್ಲಿ ಜನಸಾಮಾನ್ಯರನ್ನು ಸೇರಿಸಿಕೊಳ್ಳಬೇಕು ಎಂದರು. ಹೊಸದಾಗಿ ಜಾರಿಯಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಪರಿಕಲ್ಪನೆಯನ್ನು ಕಡ್ಡಾಯ ಮಾಡಿದೆ. ಇದರಿಂದ ವಿದ್ಯಾರ್ಥಿಜೀವನದಲ್ಲೇ ಪ್ರಾಯೋಗಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅವಕಾಶ ದೊರೆತಂತಾಗಿದೆ. ಸಮಾಜದ ಒಳಿತಿಗೆ ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು. ವಿವಿಯ ಸಿಂಡಿಕೇಟ್ ಸದಸ್ಯ ಟಿ.ಎಸ್. ಸುನೀಲ್ ಪ್ರಸಾದ್ ಮಾತನಾಡಿ, ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಉತ್ತಮ ಪ್ರಾಜೆಕ್ಟ್ ಕೈಗೊಳ್ಳುವುದಕ್ಕೆ ಪರಮಶಿವಯ್ಯ ಅಧ್ಯಯನ ಪೀಠದ ಮೂಲಕ ಆರ್ಥಿಕ ಸಹಕಾರ ನೀಡುವ ಉದ್ದೇಶವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ ಕೆ. ಭಾರತದಲ್ಲಿ ನೀರು ಒಂದು ರಾಜಕೀಯ ವಿಷಯ ಆಗಿದೆ. ಇದನ್ನು ಸಾಮಾಜಿಕ ದೃಷ್ಟಿಕೋನದಿಂದ ಕಂಡು ಪ್ರಾದೇಶಿಕ ಹಂತದಲ್ಲಿ ಪರಿಹಾರಗಳನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ ಎಂದರು.
ಜಿ. ಎಸ್. ಪರಮಶಿವಯ್ಯ ಅಧ್ಯಯನ ಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಬಿ.ರವೀಂದ್ರ ಕುಮಾರ್ ಸ್ವಾಗತಿಸಿದರು. ಅರ್ಥಶಾಸ್ತ್ರ ಡಾ. ಎಂ. ಮುನಿರಾಜು ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ ಕೆ.ವಿ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!