ಶ್ರೀಕೃಷ್ಣ ಜನ್ಮ ದಿನೋತ್ಸವ

ಭಗವಾನ್ ಶ್ರೀಕೃಷ್ಣನು ಮಾಡಿದ ಗೀತೋಪದೇಶ ಸಮಾಜದ ಎಲ್ಲ ವರ್ಗಗಳಿಗೂ ಅನುಕರಣೀಯ. ಗೀತೆಯ ಕುರಿತು ಎಲ್ಲರಿಗೂ ಆದರವಿದೆ; ಭಕ್ತಿ ಇದೆ. ಆದರೆ ಪಾರಾಯಣಕ್ಕಾಗಿ ಉಳಿದಂತಿದೆ. ಭಗವದ್ಗೀತೆಯ ಪುಸ್ತಕವನ್ನು ದೇವರ ಪೀಠದಲ್ಲಿಟ್ಟು ಅರಿಶಿನ ಕುಂಕುಮ ಹಚ್ಚಿ ಪೂಜಿಸುವುದಷ್ಟೇ ಆಗಿದೆ. ಆದರೆ ಗೀತೆಯ ನಿಜವಾದ ಉದ್ದೇಶ, ಗಂಧಾದಿಗಳನ್ನು ಹಚ್ಚಿ ಪೂಜಿಸುವುದಷ್ಟೇ ಅಲ್ಲ, ಅದನ್ನು ಓದಿ ಮನನ ಮಾಡಿ, ಜೀವನದಲ್ಲಿ ಅಳವಡಿಸಿಕೊಂಡಾಗ ಗೀತೆಯ ನಿಜವಾದ ಸಾರ್ಥಕತೆ. ಗೀತೆಯಲ್ಲಿ ಹೇಳಿದ ನಿಷ್ಕಾಮ ಕರ್ಮಯೋಗ ವಿಶಿಷ್ಟವಾದುದು. ನಮ್ಮ ಜೀವನದಲ್ಲಿ ಅನುಷ್ಠಾನದಲ್ಲಿ ತಂದರೆ ಗೀತೋಪದೇಶವು ಸಾರ್ಥಕವಾಗುತ್ತದೆ.

ಪರಬ್ರಹ್ಮ ಪರಮಾತ್ಮನು ಪೂರ್ಣಾವತಾರಿಯಾಗಿ ಲೀಲಾ ಮಾನುಷ ವಿಗ್ರಹರೂಪದಿಂದ ಶ್ರೀಕೃಷ್ಣನೆಂಬ ನಾಮದಿಂದ ಅವತರಿಸಿರುವನು. ಶ್ರೀರಾಮನು ಮರ್ಯಾದಾ ಪುರುಷೋತ್ತಮನಾದರೆ ಶ್ರೀಕೃಷ್ಣನು ಲೀಲಾ ಪುರುಷೋತ್ತಮನು. ಲೀಲೆ ಅಂದರೆ ಆಟ ಎಂದರ್ಥ. ಆಟ ಇರುವುದು ಆನಂದ ಪಡೆಯಲು. ಎಲ್ಲ ಲೀಲೆಯಲ್ಲಿ ಕಾರ್ಯಕಾರಣ ಇರುವುದಿಲ್ಲ. ಶ್ರೀಕೃಷ್ಣನು ಲೀಲೆಯನ್ನು ಏಕೆ ಮಾಡಿದ? ಅವನು ಆನಂದ ಸ್ವರೂಪವಲ್ಲವೇ? ಅವನಿಗೇನು ಆನಂದ ಪಡೆಯಬೇಕಾಗುವುದಿಲ್ಲ. ಆನಂದವೇ ಪರಬ್ರಹ್ಮ ಸ್ವರೂಪನು. ಅವನು ’ಆನಂದೋ ಬ್ರಹ್ಮೇತಿ ವ್ಯಚಾನಾತ್ | ಆನಂದಾದ್ವೇವ ಖಲ್ವಿಮಾನಿ ಭೂತಾಣಿಜಾಯತೇ | ಆನಂದೇನ ಜಾರಾನಿ ಜೀವಂತಿ ||’ (ತೈತ್ತರೀಯೋಪನಿಷತ್ 3-6-1) ಎಂದು ಉಪನಿಷತ್ತು ಹೇಳುತ್ತದೆ. ಭಗವಂತನು ಆತ್ಯಂತಿಕ ಭಕ್ತರಿಗಾಗಿ, ಸಾಧಕರಿಗಾಗಿ ಮತ್ತು ಸಮಾಜಕ್ಕಾಗಿ ಈ ಜಗಲೀಲೆ ಗೈಯ್ದುದು. ತನ್ನವರಿಗೆ ಆನಂದವನ್ನು ಉಣಿಸಲು ಭಗವಂತನ ಲೀಲೆ. ವಿಜಯದಾಸರು ಹಾಡುತ್ತಾರೆ ’ಭಕುತರಿಗಾಗಿ ಜಗವ ಪುಟ್ಟಿಸಿದೆ | ಭಕುತರಿಗಾಗಿ ಜಗವ ಪಾಲಿಸಿದೆ’. ಲೀಲಾ ಪುರುಷೋತ್ತಮ ಶ್ರೀಕೃಷ್ಣನ ಲೀಲೆಗಳು ಅನಂತ ಮತ್ತು ಅಸಂಖ್ಯ. ಅದನ್ನು ಪರಿಪೂರ್ಣವಾಗಿ ಯಾರೂ ವರ್ಣಿಸಲಾರರು.
ಭಗವಂತನ ಲೀಲೆಯಲ್ಲಿ ಆದರ್ಶ ಲೀಲೆ ಮತ್ತು ಮಹಾತ್ಮ ಲೀಲೆ ಎಂಬುದಾಗಿ ಎರಡು ವಿಧ. ಇವುಗಳಲ್ಲಿ ಮಹಾತ್ಮ ಲೀಲೆ ಕೇವಲ ಶ್ರವಣಾನಂದಕ್ಕಾಗಿಯೇ ಇರುವುದು. ಆದರ್ಶ ಲೀಲೆ ನಮ್ಮಂಥವರಿಗೆ ಅನುಕರಣೀಯವಾದುದು. ಭಗವಂತ ವಿಷಪಾನ ಮಾಡಿದ, ಗೋವರ್ಧನ ಎತ್ತಿದ, ಅಗ್ನಿಪಾನ ಮಾಡಿದ, ರಾಸಲೀಲೆ ಆಡಿದ ಮುಂತಾದವು ಮಹಾತ್ಮ ಲೀಲೆಗಳು. ಇವು ಅನುಕರಣೀಯವಲ್ಲ. ಮಹಾತ್ಮ ಲೀಲೆಗಳು ಕೇಳಲು ಬಹಳ ಸುಂದರ. ಅವನ್ನು ಅನುಕರಿಸಬಾರದು. ಒಂದೊಮ್ಮೆ ಅವುಗಳನ್ನು ಮಾಡಲು ಹೋದರೆ, ಶ್ರೀಕೃಷ್ಣ ಮೊಟ್ಟಮೊದಲಿಗೆ ಪೂತನಿಯ ವಿಷಪಾನ ಮಾಡಿದ. ಹಾಗೆಯೇ ನಾವು ವಿಷಪಾನದಿಂದ ಪ್ರಾರಂಭಿಸಬೇಕಾಗುತ್ತದೆ. ಅದು ಸಾಧ್ಯವಿಲ್ಲದ ಮಾತು.
ಶ್ರೀಕೃಷ್ಣನು ತಂದೆ-ತಾಯಿಯರ ಸೇವೆ ಮಾಡಿದ, ಗೋವುಗಳನ್ನು ಮೇಯಿಸಿದ, ಗೀತೋಪದೇಶ ಮಾಡಿದ, ಕುದುರೆಗಳನ್ನು ತೊಳೆದು ಸಾರಥ್ಯವನ್ನು ಮಾಡಿದ. ಹದಿನಾರು ಸಾವಿರ ಗೋಪಿಕೆಯರನ್ನು ನರಕಾಸುರನಿಂದ ರಕ್ಷಿಸಿ ಅವರಿಗೆ ಹೈನುಗಾರಿಕೆಯನ್ನು ಬೋಧಿಸಿ ಆಶ್ರಯ ನೀಡಿ ಕರ್ಮಯೋಗದಲ್ಲಿ ತೊಡಗಿಸಿದ. ಇವೆಲ್ಲ ಆದರ್ಶ ಲೀಲೆಗಳು. ಆದರ್ಶ ಲೀಲೆಗಳು ಪ್ರಸ್ತುತ ಸಮಾಜಕ್ಕೂ ಅನ್ವಯಿಸುತ್ತವೆ. ಶ್ರೀಕೃಷ್ಣನು ತಂದೆ-ತಾಯಿ-ಹಿರಿಯರ ಸೇವೆ ಮಾಡಿದ. ಋಷಿಮುನಿಗಳನ್ನು ಗೌರವಿಸಿದ. ಗೃಹಸ್ಥ್ಯ ಧರ್ಮವನ್ನು ಚಾಚೂ ತಪ್ಪದಂತೆ ನಡೆಸಿದ. ಭಾಗವತದಲ್ಲಿ ಶ್ರೀಕೃಷ್ಣ ದಿನಚರಿಯನ್ನು ವ್ಯಾಸಮುನಿಗಳು ಒಂದು ಅಧ್ಯಾಯದಷ್ಟು ನಮಗೆ ಬೋಧಿಸಿದ್ದಾರೆ.
ಒಮ್ಮೆ ನಾರದರು ಭಗವಂತನ ಲೀಲೆಗಳನ್ನು ನೋಡಲಿಕ್ಕಾಗಿ ದ್ವಾರಕೆಗೆ ಬಂದರು. ದ್ವಾರಕೆಯ ಮಧ್ಯಭಾಗದಲ್ಲಿ ವಿಶ್ವಕರ್ಮ ರಚಿತವಾದ ಲೋಕಪಾಲರಿಂದ ಪೂಜಿಸಲ್ಪಡುತ್ತಿದ್ದ ಭಗವಾನ್ ಶ್ರೀಕೃಷ್ಣನ ವಿಶಾಲವಾದ ಅಂತಃಪುರವಿತ್ತು. ಅಂತಹ ದಿವ್ಯವಾದ ಅಂತಃಪುರದಲ್ಲಿ ರುಕ್ಮಿಣಿ ದೇವಿ ಬೀಸಣಿಗೆಯಿಂದ ಶ್ರೀಕೃಷ್ಣನಿಗೆ ಗಾಳಿ ಬೀಸುತ್ತಿರುವುದನ್ನು ನಾರದರು ನೋಡಿದರು. ನಾರದರನ್ನು ಕಾಣುತ್ತಲೇ ಭಗವಂತನು ರುಕ್ಮಿಣಿಯ ಸಮೇತನಾಗಿ ಬಂದು ದೇವಋಷಿಯ ಚರಣಗಳಿಗೆ ವಂದಿಸಿದ. ಬಳಿಕ ಆಸನದಲ್ಲಿ ಕುಳ್ಳಿರಿಸಿ ಕೇಳಿದ – ’ಸ್ವಾಮೀ ಷಡ್ಗುಣೈಶ್ವರ್ಯ ಸಂಪನ್ನರಾದ ನಿಮಗೆ ನಾನು ಯಾವ ಸೇವೆ ಮಾಡಲಿ?’ ಎಂದಾಗ ದೇವರ್ಷಿ ನಾರದರು ಹೇಳಿದರು, ’ನೈವಾದ್ಭುತಂ ತ್ವಯ ವಿಭೋಳಿಲ ಲೋಕನಾಥೇ ಮೈತ್ರಿ ಜನೇಷು ಸಕಲೇಷು ದಮಃ ಖಲಾನಾಮ್ | ನಿಃಶ್ವೇಯಿಸಾಯಿ ಹಿ ಜಗತ್ ಸ್ಥಿತಿ ರಕ್ಷಣಾ ಭ್ಯಾಂ ಸ್ವೈರವರಾರ ಉರುಗಾಯಿ ವಿದಾಮ ಶುಷ್ಟು ||’ (ಭಾಗವತ 10-09-17)

‘ಭಗವಂತಾ, ನೀನು ಸಮಸ್ತ ಲೋಕಗಳಿಗೂ ಏಕಮಾತ್ರ ಸ್ವಾಮಿಯಾಗಿರುವೆ. ಭಕ್ತರಲ್ಲಿ ಪ್ರೇಮ, ದುಷ್ಟರಲ್ಲಿ ದಂಡವೆಂಬುದು ನಿನ್ನಲ್ಲಿ ಹೊಸದೇನಲ್ಲ. ನೀನು ಜಗತ್ತಿನ ಸ್ಥಿತಿ ಮತ್ತು ರಕ್ಷಣೆಯ ಮೂಲಕ ಸಮಸ್ತ ಪ್ರಾಣಿಗಳಿಗೂ ಕಲ್ಯಾಣವನ್ನುಂಟು ಮಾಡುವ ಸಲುವಾಗಿಯೇ ಸ್ವೇಚ್ಛೆಯಿಂದ ಅವತಾರವೆತ್ತುವೆ’ ಎಂದು ಹೇಳಿ ಯೋಗೇಶ್ವರರಿಗೂ ಒಡೆಯನಾದ ಭಗವಾನ್ ಕೃಷ್ಣನ ದಿನಚರಿಯನ್ನು ತಿಳಿಯಲು ದ್ವಾರಕೆಯಲ್ಲಿ ಸಂಚರಿಸಿದರು. ಶ್ರೀಕೃಷ್ಣನ ಅನೇಕ ರೂಪಗಳನ್ನು ನಾರದರು ನೋಡಿದರು. ಒಂದೆಡೆ ಶ್ರೀಕೃಷ್ಣ ಎಳೆಯ ಮಕ್ಕಳನ್ನು ಆಡಿಸುತ್ತ ಕುಳಿತಿದ್ದ. ಇನ್ನೊಂದೆಡೆ ಯಜ್ಞಕುಂಡದಲ್ಲಿ ಹೋಮ ಮಾಡುತ್ತಿದ್ದ. ಮಗದೊಂದೆಡೆ ಶಾಸ್ತ್ರಾಭ್ಯಾಸ ಮಾಡುತ್ತಿದ್ದ. ಮತ್ತೊಂದೆಡೆ ಶಾಸ್ತ್ರಗಳನ್ನು ಅವಲೋಕನ ಮಾಡುತ್ತಿದ್ದ. ಕೆಲವೆಡೆ ವಂದಿ ಮಾಗಧರು ಉದ್ಧವಾದಿ ಮಂತ್ರಿಗಳೊಂದಿಗೆ ಗಂಭೀರ ಸಮಾಲೋಚನೆಯಲ್ಲಿ ನಿರತನಾಗಿದ್ದ. ಒಂದೆಡೆ ಬಡಬಗ್ಗರಿಗೆ ಗೋವುಗಳನ್ನು ದಾನ ಮಾಡುತ್ತಿದ್ದ. ಕೆಲವೆಡೆ ಮಂಗಳಮಯ ಇತಿಹಾಸವನ್ನು ಶ್ರವಣಿಸುತ್ತಿದ್ದ, ಮತ್ತೊಂದೆಡೆ ಧರ್ಮಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ನಿರತನಾಗಿದ್ದರೆ ಕೆಲವೆಡೆ ಧರ್ಮಾನುಕೂಲ ಗೃಹಸ್ಥೋಚಿತ ವಿಷಯಭೋಗಗಳನ್ನು ಸೇವಿಸುತ್ತಿದ್ದ. ಇನ್ನೊಂದೆಡೆ ಏಕಾಂತದಲ್ಲಿ ಕುಳಿತು ಧ್ಯಾನಮಗ್ನರಾಗಿದ್ದರೇ ಮತ್ತೊಂದೆಡೆ ಗುರುಹಿರಿಯರ ಶುಶ್ರೂಷೆ ಮಾಡುತ್ತಿದ್ದ.
ಕೃಷ್ಣನ ಆದರ್ಶ ಲೀಲೆಗಳೆಲ್ಲ ಅನುಕರಣೀಯ ಮತ್ತು ಇಂದಿನ ಸಮಾಜಕ್ಕೂ ಪ್ರಸ್ತುತ. ಸ್ವತಃ ಗೋವುಗಳನ್ನು ಮೇಯಿಸಿ ಕರ್ಮಯೋಗದ ಮಹತ್ವವನ್ನು ಸಾರಿದರೆ, ತಂದೆ-ತಾಯಿ, ಗುರು, ಹಿರಿಯರನ್ನು ಗೌರವಿಸಿ ನಮಗೆ ಭಕ್ತಿಯೋಗದ ಪರಿಚಯ ಮಾಡಿಸಿದ್ದಾನೆ ಕೃಷ್ಣ. ಈ ಎಲ್ಲ ಲೀಲೆಗಳ ಹಿಂದಿನ ಏಕೈಕ ಉದ್ದೇಶವೆಂದರೆ ಲೋಕ ಶಿಕ್ಷಣ ಮತ್ತು ಲೋಕದ ಆದರ್ಶಕ್ಕಾಗಿ.
ಭಗವಾನ್ ಶ್ರೀಕೃಷ್ಣನು ಮಾಡಿದ ಗೀತೋಪದೇಶ ಸಮಾಜದ ಎಲ್ಲ ವರ್ಗಗಳಿಗೂ ಅನುಕರಣೀಯ. ಗೀತೆಯ ಕುರಿತು ಎಲ್ಲರಿಗೂ ಆದರವಿದೆ, ಭಕ್ತಿ ಇದೆ. ಆದರೆ ಕೇವಲ ಪಾರಾಯಣಕ್ಕಾಗಿ ಉಳಿದಂತಿದೆ. ಭಗವದ್ಗೀತೆಯ ಪುಸ್ತಕವನ್ನು ದೇವರ ಪೀಠದಲ್ಲಿಟ್ಟು ಅರಿಶಿನ ಕುಂಕುಮ ಹಚ್ಚಿ ಪೂಜಿಸುವುದಷ್ಟೇ ಆಗಿದೆ. ಆದರೆ ಗೀತೆಯ ನಿಜವಾದ ಉದ್ದೇಶ, ಗಂಧಾದಿಗಳನ್ನು ಹಚ್ಚಿ ಪೂಜಿಸುವುದಷ್ಟೇ ಅಲ್ಲ. ಅದನ್ನು ಓದಿ ಮನನ ಮಾಡಿ, ಜೀವನದಲ್ಲಿ ಅಳವಡಿಸಿಕೊಂಡಾಗ ಗೀತೆಯ ನಿಜವಾದ ಸಾರ್ಥಕತೆ. ಗೀತೆಯಲ್ಲಿ ಹೇಳಿದ ನಿಷ್ಕಾಮ ಕರ್ಮಯೋಗ ವಿಶಿಷ್ಟವಾದುದು. ನಮ್ಮ ಜೀವನದಲ್ಲಿ ಅನುಷ್ಠಾನದಲ್ಲಿ ತಂದರೆ ಗೀತೋಪದೇಶವು ಸಾರ್ಥಕವಾಗುತ್ತದೆ.
ಗೀತೆಯ ಎರಡನೆಯ ಅಧ್ಯಾಯದ ಅರವತ್ತೊಂದನೆಯ ಶ್ಲೋಕದಲ್ಲಿ ’ತಾನಿ ಸರ್ವಾಣಿ ಸಂಯಮ್ಯ ಯುಕ್ತ ಅಸೀತ ಮತ್ಪರಃ | ವಹೇ ಯಸ್ಯೇದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಟಿತಾ ||’ – ಹೀಗೆ ಇಂದ್ರಿಯ ಸಂಯಮದ ಬಗ್ಗೆ ಗೀತೆಯಲ್ಲಿ ಅನೇಕ ಕಡೆ ಶ್ರೀಕೃಷ್ಣ ಉಪದೇಶಿಸಿರುವನು. ಇಂದಿನ ಈ ಕೊರೋನಾ ಮಹಾಮಾರಿಯ ಬಗ್ಗೆ ಇಂದ್ರಿಯ ಸಂಯಮದ ಅತ್ಯಗತ್ಯತೆಯನ್ನು ನಾವು ಕಾಣಬಹುದು. ಸ್ವೇಚ್ಛೆಯಾಗಿ ಶಾಸ್ತ್ರ ಮರ್ಯಾದೆ (ಸೀಮೆ) ಯನ್ನು ಬಿಟ್ಟು ಬಾಳಿದರೆ ಅದು ಅಧಃಪತನಕ್ಕೆ ಕಾರಣವಾಗುತ್ತದೆ. ಕೊರೊನಾ ನಿಯಂತ್ರಣದಲ್ಲಿ ಸಂಯಮವೇ ಪ್ರಧಾನ. ನಮ್ಮ ಆಹಾರ ವಿಹಾರ, ಆಚಾರ ವಿಚಾರಗಳಲ್ಲಿ ಬಹಳ ಎಚ್ಚರಿಕೆಯಿಂದ ಇದ್ದು ಇಂದ್ರಿಯ ನಿಗ್ರಹಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಇದು ನಮ್ಮ ನಿಮ್ಮೆಲ್ಲರಿಗೂ ಅನ್ವಯವಾಗುವ ತ್ರಿಕಾಲ ಸತ್ಯವಾಗಿದ್ದು ಇದನ್ನು ಗೀತೆಯಲ್ಲಿ ಹಲವಾರು ಕಡೆಗಳಲ್ಲಿ ಶ್ರೀಕೃಷ್ಣನು ಎಚ್ಚರಿಸಿದ್ದಾನೆ. ಧ್ಯಾನ ಮತ್ತು ಆತ್ಮ ಸಂಯಮ ಇದು ನಮ್ಮ ಜೀವನ ಉನ್ನತಿಯ ಅಡಿಪಾಯ. ಭಗವದ್ಗೀತೆಯ ಅಧ್ಯಯನ, ಆಚರಣೆ ಮತ್ತು ಶ್ರೀಕೃಷ್ಣನ ಆದರ್ಶಗಳಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಇದು ಹಿಂದಿನ ಯುಗಕ್ಕೆ ಹೇಳಿದ ಸಂದೇಶ ಮಾತ್ರವಲ್ಲ ಇಂದಿನ ಜೀವನದ ಉನ್ನತಿಗೂ ಪ್ರಶಸ್ತವಾಗಿದ್ದು ಅನುಕರಣೀಯವಾಗಿದೆ. ಶ್ರೀಕೃಷ್ಣನ ಲೀಲೆಗಳನ್ನು ಕೇವಲ ಕೇಳಿದರೆ ಸಾಲದು ಅವನ ಆದರ್ಶ ಲೀಲೆಗಳನ್ನು ಜೀವನದಲ್ಲಿ ಅಳವಡಿಸೋಣ. ಇದೇ ಕೃಷ್ಣಾಷ್ಟಮಿಯ ಸಂದೇಶ. ಎಲ್ಲರಿಗೂ ಕೃಷ್ಣ ಜನ್ಮೋತ್ಸವದ ಶುಭಾಶಯಗಳು.

Leave a Reply

Your email address will not be published. Required fields are marked *

error: Content is protected !!