ತುಮಕೂರು ವಿವಿ ಕುಲಸಚಿವರಿಗೆ ಅರ್ಥಶಾಸ್ತ್ರ ಅಧ್ಯಾಪಕರ ಸಂಘದಿಂದ ಅಭಿನಂದನೆ

ತುಮಕೂರು: ತುಮಕೂರು ಜಿಲ್ಲೆಯ ಪಾವಗಡ ತಾಲ್ಲೋಕಿನ ಕೃಷ್ಣಗಿರಿ ಎಂಬ ಸಾಮಾನ್ಯ ಕುಟುಂಬದಿಂದ ಬಂದಂತಹ ಡಾ. ಕೆ. ಶಿವಚಿತ್ತಪ್ಪನವರು ಇಂದು ತಮ್ಮ ತವರು ಜಿಲ್ಲೆಯ ವಿಶ್ವವಿದ್ಯಾನಿಲಯಕ್ಕೆ ಕುಲಸಚಿವರಾಗಿರುವುದು ಸಂತೋಷ ತಂದಿದೆ ಎಂದು ಶ್ರೀ ಬಸವ ರಮಾನಂದ ಮಹಾ ಸ್ವಾಮಿಗಳು ಅಭಿಪ್ರಾಯ ಪಟ್ಟರು. ಶಿವಚಿತ್ತಪ್ಪನವರು ಬಡತನದಿಂದ ಬಂದವರು ಅವರಿಗೆ ಬಡವರ ಬಗ್ಗೆ ಕಾಳಜಿ ಇರುವುದನ್ನ ನಾವು ಪ್ರತ್ಯೇಕವಾಗಿ ನೋಡಬೇಕಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಶಿವಚಿತ್ತಪ್ಪನವರನ್ನು ಯೋಜನಾ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿದ್ದರು ಆ ಸಂದರ್ಭದಲ್ಲಿ ಇವರು ಇಂದಿರಾ ಕ್ಯಾಂಟಿನ್, ಶೂ ಭಾಗ್ಯ, ಕ್ಷೀರ ಭಾಗ್ಯಗಳಂತಹ ಜನಪರ ಯೋಜನೆಗಳು ಜಾರಿಗೆ ಬರುವುದಕ್ಕೆ ಎಲೆಮರೆ ಕಾಯಿಯಂತೆ ದುಡಿದಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಕುಲಪತಿಗಳಾಗಿ ಸೇವೆ ಸಲ್ಲಿಸುವ ಅವಕಾಶ ಸಿಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ.ಜಿ. ತಿಪ್ಪೇಸ್ವಾಮಿಯವರು ಶಿವಚಿತ್ತಪ್ಪನವರಿಗೆ ತುಮಕೂರು ಭಾಗದವರು ಎಂದರೆ ಎಲ್ಲಿಲ್ಲದ ಪ್ರೀತಿ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಯಾರೇ ಮೈಸೂರಿನಲ್ಲಿ ಸಿಕ್ಕರೂ ಪ್ರೀತಿಯಿಂದ ನಡೆಸಿಕೊಂಡಿದ್ದಾರೆ. ೪೯ ವರ್ಷದ ಶಿವಚಿತ್ತಪ್ಪನವರಿಗೆ ಕೆಲಸಕ್ಕೆ ಸೇರಿ ೧೦ ವರ್ಷಗಳಾದರೂ ಅಲ್ಲಿ ಪಿಎಚ್‌ಡಿ ಪಡೆಯಲು ಬಿಟ್ಟಿರಲಿಲ್ಲ. ನಂತರ ಅವರು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಿಎಷ್‌ಡಿ ಪಡೆದರು. ಅವರು ಈಗಾಗಲೇ ೨೫ ವಿದ್ಯಾರ್ಥಿಗಳಿಗೆ ಪಿಎಚ್‌ಡಿಯನ್ನು ನೀಡಿದ್ದು ೧೦ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಸರ್ವರನ್ನು ಸಮಾನವಾಗಿ ನೋಡುವ ವ್ಯಕ್ತಿತ್ವ ಇವರದ್ದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪ್ರೊ. ಟಿ. ಗಂಗಾಧರಯ್ಯನವರು ಗ್ರಾಮೀಣ ಭಾಗದಿಂದ ಬಂದಂತಹ ವ್ಯಕ್ತಿಗಳು ಬೆಳೆಯುವುದು ಸುಲಭದ ಕೆಲಸವಲ್ಲ. ಅವರಿಗೆ ಅನೇಕ ತೊಂದರೆಗಳು, ಅಡ್ಡಿ ಆತಂಕಗಳು ಎದುರಾಗುತ್ತವೆ. ಅಂತಹ ಅನೇಕ ತೊಂದರೆಗಳನ್ನು ಎದುರಿಸಿಕೊಂಡು ಬಂದು ಡಾ. ಕೆ. ಶಿವಚಿತ್ತಪ್ಪನವರು ಕರ್ನಾಟಕ ಸರ್ಕಾರದ ಯೋಜನಾ ಮಂಡಳಿಯ ಸದಸ್ಯರಾಗಿ ಪ್ರಸ್ತುತ ತುಮಕೂರು ವಿವಿಯ ಕುಲಸಚಿವರಾಗಿ ಕೆಲಸ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಚಿತ್ತಪ್ಪ ನಾವು ಮಾಡಿದ ಕೆಲಸ ಮಾತ್ರ ಇಲ್ಲಿ ಉಳಿಯುತ್ತದೆ, ಹಾಗಾಗಿ ನಮಗೆ ಕೇಡು ಬಯಸಿದವರಿಗೂ ನಾನು ಒಳಿತನ್ನ ಬಯಸುತ್ತೇನೆ. ಇಲ್ಲಿ ಯಾವುದೂ ಶಾಶ್ವತವಲ್ಲ, ನಾವು ಮಾಡಿದ ಕೆಲಸಗಳು ಮಾತ್ರ ಎಂದರು. ನಾನು ಪಿಎಚ್‌ಡಿ ಪಡೆಯುವುದಕ್ಕೆ ಪಟ್ಟ ಕಷ್ಟವನ್ನು ಬೇರೆಯವರು ಪಡುವುದು ಬೇಡ ಎಂದು ಯಾರೇ ನಮ್ಮ ಬಳಿಗೆ ಪಿಎಚ್‌ಡಿ ವಿಷಯವಾಗಿ ಬಂದರೆ ಅವರಿಗೆ ಸಹಾಯ ಮಾಡಿದ್ದೇನೆ. ಆ ಕಾರಣದಿಂದಾಗಿಯೇ ಇಂದು ದೇಶ ವಿದೇಶಗಳಲ್ಲಿ ನನಗೆ ಸ್ನೇಹಿತರಿದ್ದಾರೆ ಎಂದರು. ನನಗೆ ಕುಲಸಚಿವ ಸ್ಥಾನ ಸಿಕ್ಕ ಮೇಲೆ ಅನೇಕರು ಬಂದು ಅಭಿನಂದಿಸಿದ್ದೀರಿ ನಾನು ನಿಮ್ಮ ಪ್ರೀತಿಗೆ ಚಿರಋಣಿ ಎಂದರು. ಇದೇ ಸಂದರ್ಭದಲ್ಲಿ ಪರೀಕ್ಷಾಂಗ ಕುಲಸಚಿವರಾದ ಪ್ರೊ. ನಿರ್ಮಲ್ ರಾಜು ಸವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದ್ಯರಾದ ಶ್ರೀನಿವಾಸ್ ಆರ್.ಕೆ., ಟಿ.ಡಿ. ವಿನಯ್ ಕುಮಾರ್, ಘಟಕ ಕಾಲೇಜುಗಳ ಪ್ರಾಂಶುಪಾಲರು, ಕುಲಪತಿಗಳ ವಿಶೇಷಾಧಿಕಾರಿ ಜಾಯ್ ನೆರೆಲ್ಲಾ ವಿವಿಧ ಕಾಲೇಜಿನ ಪ್ರಾಧ್ಯಾಪಕರು ವಿಶ್ವವಿದ್ಯಾನಿಲಯದ ಭೋದಕ ಮತ್ತು ಭೋದಕೇತರ ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!