ಮದಲೂರು ಕೆರೆಗೆ ಅಪ್ಪ ಅಮ್ಮ ನಾನೇ: ಟಿ.ಬಿ.ಜೆ

ತುಮಕೂರು- ಜಿಲ್ಲಾ ಉಸ್ತುವಾರಿ ಸಚಿವರಿಗೆ ತಾಕತ್ತಿದ್ದರೆ ಜಿಲ್ಲೆಗೆ ಹಂಚಿಕೆಯಾಗಿರುವ 26-27 ಟಿ.ಎಂ.ಸಿ. ಹೇಮಾವತಿ ನೀರನ್ನು ಸಂಪೂರ್ಣವಾಗಿ ಹರಿಸಲಿ ಎಂದು ಮಾಜಿ ಸಚಿವ ಟಿ.ಬಿ. ಜಯಚಂದ್ರ ಸವಾಲು ಹಾಕಿದರು.

 

ಜಿಲ್ಲಾ ಉಸ್ತುವಾರಿ ಸಚಿವರಿಗೆ ಗಂಡಸುತನ ಇದೆ ಎಂದುಕೊಂಡಿದ್ದೇನೆ. ಜಿಲ್ಲೆಗೆ ನಿಗದಿಯಾಗಿರುವ 27 ಟಿ.ಎಂ.ಸಿ ನೀರನ್ನು ಸಂಪೂರ್ಣವಾಗಿ ಹರಿಸಿದಾಗ ಮಾತ್ರ ಅದು ಸಾಬೀತಾಗುತ್ತದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

 

ಮದಲೂರು ಕೆರೆಗೆ 0.4 ಟಿ.ಎಂ.ಸಿ. ನೀರು ಅಲೋಕೇಷನ್ ಆಗಿದ್ದರೂ ಸಹ ಕಾನೂನಿನಲ್ಲಿ ಈ ಕೆರೆಗೆ ನೀರು ಹರಿಸಲು ಅವಕಾಶ ಇಲ್ಲ. ಒಂದು ವೇಳೆ ನೀರು ಹರಿಸಿದರೆ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಬೆದರಿಕೆಯೊಡ್ಡುವ ಕೆಲಸವನ್ನು ಸಚಿವರು ಮೊದಲು ನಿಲ್ಲಿಸಲಿ ಎಂದರು.

ಕಳೆದ 2-3 ವರ್ಷಗಳಿಂದ ಮದಲೂರು ಕೆರೆ ವಿಚಾರ ಸದ್ದು ಮಾಡುತ್ತಲೇ ಇದೆ. ಇದನ್ನು ಬಂಡವಾಳವಾಗಿಸಿಕೊಂಡಿರುವ ಪ್ರಸ್ತುತ ಜಿಲ್ಲಾ ಉಸ್ತುವಾರಿ ಮಂತ್ರಿ, ಸಿರಾ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿರಾವನ್ನು ಬಿಜೆಪಿ ಶಕ್ತಿ ಕೇಂದ್ರವನ್ನಾಗಿ ಮಾಡುವ ಸಲುವಾಗಿ ಆಗಾಗ್ಗೆ ಮದಲೂರು ಕೆರೆ ಸಂಬಂಧ ಹೇಳಿಕೆ ನೀಡುತ್ತಲೇ ಇದ್ದಾರೆ ಎಂದರು.

ತುಮಕೂರು ಜಿಲ್ಲೆಗೆ ನಿಗದಿಯಾಗಿರುವ 26-27 ಟಿ.ಎಂ.ಸಿ ಹೇಮಾವತಿ ನೀರನ್ನು ಸಂಪೂರ್ಣವಾಗಿ ಹರಿಸಿಕೊಳ್ಳುಲು ಹೋರಾಟ ಮಾಡಿದರೆ ವಿರೋಧ ಪಕ್ಷದಲ್ಲಿರುವ ನಾವು ಸಹ ಆಡಳಿತ ಪಕ್ಷದೊಂದಿಗೆ ಕೈ ಜೋಡಿಸುತ್ತೇವೆ ಎಂದರು.

ಮದಲೂರು ಕೆರೆಗೆ 0.4 ಟಿಎಂಸಿ ನೀರು ಹಂಚಿಕೆಯಾಗಿದೆ. ಈಗಾಗಲೇ 2 ಬಾರಿ ಕೆರೆಗೆ ನೀರು ಹರಿಸಲಾಗಿದೆ. ಹೀಗಿದ್ದರೂ ಕಾನೂನು ಸಚಿವ ಪದೇ ಪದೇ ಮದಲೂರು ಕೆರೆಗೆ ನೀರು ಹರಿಸುವುದು ಕಾನೂನು ಬಾಹಿರ ಎಂದು ಕ್ಯಾತೆ, ತಗಾದೆ ತೆಗೆಯುತ್ತಲೇ ಇದ್ದಾರೆ. ನಾನು ಸಹ ಕಾನೂನು, ಜಿಲ್ಲಾ ಉಸ್ತುವಾರಿ ಸಚಿವನಾಗಿ 5 ವರ್ಷ ಕೆಲಸ ಮಾಡಿದ್ದೆ. ನಾನೆಂದು ನೀರಿನ ವಿಚಾರದಲ್ಲಿ ತಗಾದೆ ತೆಗೆದಿರಲಿಲ್ಲ ಎಂದರು.

 

ನಾನು ಇವರಿಗಿಂತ ಮೊದಲೇ ವಕೀಲನಾಗಿ, ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಒಂದು ಯೋಜನೆ ಬಗ್ಗೆ ಸರ್ಕಾರಿ ಆದೇಶವಾಗಬೇಕಾದರೆ ಹಲವು ಕಾನೂನಾತ್ಮಕ ಕ್ರಮಗಳನ್ನು ಅನುಸರಿಸಲಾಗಿರುತ್ತದೆ. ಈ ಬಗ್ಗೆ ಮೇಧಾವಿಗಳಿಗೆ ಅರಿವಿರಬೇಕು ಎಂದರು.


ಈಗಿನ ಸಚಿವರು ಸಿರಾಕ್ಕೆ ನೀರು ಹರಿಸಲು ಇಂಟರ್ ಬೇಸ್ಡ್ ಟ್ರಾನ್ಸ್‌ಫರ್ ಅಂತ ಹೇಳ್ತಾರಲ್ಲ, ಇದು ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಅನ್ವಯಿಸುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.

ನೀರಾವರಿ ಯೋಜನೆ ಬಗ್ಗೆ ಇಂದು ಮಾತನಾಡುವ ಸಚಿವ ಮಾಧುಸ್ವಾಮಿ ಎಂದೂ ನೀರಾವರಿ ಯೋಜನೆಗಾಗಿ ಹೋರಾಟ ಮಾಡಿಲ್ಲ. ಅಂದು ಹೋರಾಟ ಮಾಡಿದವರು ನಾನು ಮತ್ತು ಅಂದು ಕಾಂಗ್ರೆಸ್‌‌ನಲ್ಲಿದ್ದ ಜಿ.ಎಸ್. ಬಸವರಾಜು ಅವರು ಎಂದರು.

 

ಸಿರಾ ತಾಲ್ಲೂಕಿಗೆ ಹಂಚಿಕೆಯಾಗಿರುವ 0.9 ಟಿಎಂಸಿ ನೀರಿಗೆ ಮದಲೂರು ಕೆರೆಯೂ ಒಳಪಡಲಿದೆ. ಇದಕ್ಕೆ ಯಾರ ಭಿಕ್ಷೆಯೂ ಬೇಕಾಗಿಲ್ಲ ಎಂದ ಅವರು, ನೈಸರ್ಗಿಕವಾಗಿ ಹರಿಯುವ 0.9 ಟಿ.ಎಂ.ಸಿ ನೀರಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ ಎಂದು ಗುಡುಗಿದರು.

 

ಜಿಲ್ಲೆಯ 125 ಕೆರೆಗಳಿಗೆ ಅಧಿಕೃತವಾಗಿ ಹೇಮಾವತಿ ನೀರು ಹರಿಸಲು ಸರ್ಕಾರಿ ಆದೇಶವಾಗಿದೆ. ಇದರಲ್ಲಿ ಮದಲೂರು ಕೆರೆಯೂ ಸೇರಿದೆ. ಹಾಗಂತ ಉಳಿದ ಕೆರೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಹರಿಸಲು ನಮ್ಮ ಅಭ್ಯಂತರವೇನೂ ಇಲ್ಲ. ಇದನ್ನು ಅರ್ಥೈಸಿಕೊಂಡು ಸಚಿವರು ನಡೆದುಕೊಳ್ಳಬೇಕು ಎಂದರು.

ಜನಪ್ರತಿನಿಧಿಗಳಿರುವುದು ಜನರ ಸೇವೆ ಮಾಡಲು, ಜನರಿಗೆ ಸಿಗಬೇಕಾದ ಸವಲತ್ತಿಗಳಿಗೆ ತಕರಾರು, ತೊಂದರೆ ಮಾಡಲು ಅಲ್ಲ ಎಂದು ಅವರು ಹೇಳಿದರು.

 

ಕುಡಿಯುವ ನೀರಿಗಾಗಿ ಎರಡು ನೀರಾವರಿ ಯೋಜನೆಯಿಂದ ನೀರು ಹರಿಸಲು ತಕರಾರೇನು ಇಲ್ಲ. ವಿನಾ ಕಾರಣ ಇದನ್ನೇ ಮುಂದಿಟ್ಟುಕೊಂಡು ಮದಲೂರು ಕೆರೆಗೆ ನೀರು ಹರಿಸದೆ ಅಡ್ಡಿಯುಂಟು ಮಾಡಬಾರದು ಎಂದರು.

 

ಇನ್ನು ಜಿಲ್ಲೆಯಲ್ಲಿನ ಮದಲೂರು ಕೆರೆ ವಿಚಾರವಾಗಿ ಬನಾದಿ ಹಾಕಿದ್ದು ನಾನೇ ಆದ್ದರಿಂದ ಅದಕ್ಕೆ ಅಪ್ಪ ಅಮ್ಮ ನಾನೇ ಎಂದು ಸವಾಲು ಹಾಕಿದರು

Leave a Reply

Your email address will not be published. Required fields are marked *

error: Content is protected !!