“ದೇಶ ಭಕ್ತಿ: ಒಂದು ದಿವ್ಯ ಅನುಭೂತಿ” ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡುತ್ತಾ ಶ್ರೀ ಮೋಹನ್ ಕುಮಾರ್ ವಿ ಅವರು ಇಂದು ಭಾರತ ದೇಶವು ವಿಜ್ಞಾನ, ತಂತ್ರಜ್ಞಾನ ಕ್ರೀಡೆ ಸೇರಿದಂತೆ ಹಲವು ರಂಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದೆ. ಇಂತಹಾ ಸಾಧನೆ ಸುಲಭವಾದದಲ್ಲ. ಇದೆಲ್ಲಾ ಸಾಧ್ಯವಾಗುವುದು ನಮ್ಮ ದೇಶ ಎಂಬ ಪ್ರೀತಿ ಹಾಗೂ ಅಭಿಮಾನ ಇದ್ದಾಗ ಮಾತ್ರ. ‘ದೇಶ ನನ್ನದು, ನಾಡು ನನ್ನದು ಎನ್ನದವನ ಎದೆ ಸುಡುಗಾಡು’ ಎಂಬ ಕವಿನುಡಿಯಂತೆ ನಮ್ಮ ದೇಶದ ಬಗ್ಗೆ ನಮಗೆ ಅತ್ಯಂತ ತೀವ್ರವಾದ ಅಭಿಮಾನ ಇರಬೇಕು. ಜನನಿ ಹಾಗೂ ಜನ್ಮಭೂಮಿ ಇವೆರಡು ಸ್ವರ್ಗಕ್ಕಿಂತಲೂ ಮಿಗಿಲಾದವು. ಈ ದೇಶ ನಮಗೆ ಅನ್ನ, ನೆಲೆ, ಪೌರತ್ವ ಎಲ್ಲವನ್ನೂ ನೀಡಿದೆ. ಪರಕೀಯರ ದಾಳಿಯಿಂದ ನಮ್ಮನ್ನು ಸದಾ ಕಾಲ ರಕ್ಷಿಸುತ್ತಿದೆ. ನಮ್ಮ ದೇಶದ ಬಗ್ಗೆ ನಮಗೆ ಪ್ರೀತಿ ಇರಬೇಕು. ಇಂತಹಾ ಪ್ರೀತಿ ಇಲ್ಲದರಿಂದಲೇ ನಾವು ೨೦೦-೩೦೦ ವರ್ಷಗಳ ಕಾಲ ಪರಕೀಯರ ದಾಸ್ಯದಲ್ಲಿ ಬದುಕಬೇಕಾಯಿತು. ನಮಗೆ ೧೮೫೭ ರ ಪ್ರಥಮ ಸ್ವಾತಂತ್ರ್ಯ ಹೊರಾಟದ ಕಾಲದಲ್ಲಿಯೇ ಸ್ವತಂತ್ರ್ಯ ಸಿಗಬೇಕಿತ್ತು. ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣ ನಾವು ೧೯೪೭ ರವರೆಗೆ ಕಾಯಬೇಕಾಯಿತು. ಹೀಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ, ಸೌಹಾರ್ದತೆಯಿಂದ ಬದುಕುವಂತಾಗಬೇಕೆಂದು ಅಭಿಪ್ರಾಯಪಟ್ಟರು.
ಮುಂದೆ ‘ದೇಶ ಭಕ್ತಿ ಒಂದು ದಿವ್ಯ ಅನುಭೂತಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಶ್ರೀ ಎಸ್ ಶ್ರೀಧರ ಮೂರ್ತಿ ರವರು ಒಂದು ಕತೆಯ ಮೂಲಕ ನನ್ನ ಉಪನ್ಯಾಸವನ್ನು ಮುಂದುವರೆಸುವೆ. ಒಮ್ಮೆ ಸುಭಾಷ್ ಚಂದ್ರ ಬೋಸರು ಜಪಾನ್ ದೇಶದ ಒಂದು ಶಾಲೆಗೆ ಬೇಟಿ ನೀಡಿದಾಗ ಅಲ್ಲಿದ್ದ ಒಬ್ಬ ಪುಟ್ಟ ಬಾಲಕನನ್ನು ಕೇಳಿದರಂತೆ ‘ನಿನಗೆ ಯಾವ ದೇಶ ಇಷ್ಟ ?’ ಎಂದು ಅದಕ್ಕೆ ಆ ಬಾಲಕ ‘ನನಗೆ ನನ್ನ ದೇಶ ‘ಜಪಾನ್’ ಇಷ್ಟ ಎಂದು ಹೇಳುತ್ತಾನೆ. ಅದಕ್ಕೆ ಮತ್ತೆ ಬೋಸರು ‘ನಿನಗೆ ಜಪಾನ್ ಬಿಟ್ಟರೆ ಮತ್ತೆ ಯಾವ ದೇಶ ಇಷ್ಟ’ ಎಂದು ಕೇಳುವರು. ಅದಕ್ಕೆ ಆ ಬಾಲಕ ‘ನನಗೆ ಜಪಾನ್ ಬಿಟ್ಟರೆ ಭಾರತ ದೇಶ ಇಷ್ಟ, ಏಕೆಂದರೆ ಅದು ನಮ್ಮ ಬೌದ್ಧ ಧರ್ಮದ ಸ್ಥಾಪಕನಾದ ಬುದ್ಧ ಹುಟ್ಟಿದ ಸ್ಥಳ’ ಎಂದು ಹೇಳುವನು. ಅದಕ್ಕೆ ಬೋಸರು ‘ಒಂದು ವೇಳೆ ಬುದ್ಧನು ನಿಮ್ಮ ದೇಶಕ್ಕೆ ಬಂದರೆ ನೀನು ಏನು ಮಾಡುವೆ?’ ಎಂದು ಕೇಳುವರು. ಅದಕ್ಕೆ ಆ ಬಾಲಕ ‘ಬುದ್ಧ ಇಲ್ಲಿಗೆ ಬರಲಾರ, ಒಂದು ವೇಳೆ ಬಂದರೆ ನಾನು ಅವನಿಗೆ ಅತ್ಯಂತ ವೈಭವದ ಸ್ವಾಗತ ನೀಡುವೆ’ ಎಂದು ಹೇಳಿದ. ಆಗ ಬೋಸರು ‘ಬುದ್ಧ ಇಲ್ಲಿಗೆ ಬರುವುದು ನಿಮ್ಮ ದೇಶದ ಬೇಟಿಗಾಗಿ ಅಲ್ಲ, ಬದಲಾಗಿ ನಿಮ್ಮ ದೇಶದ ಮೇಲೆ ಆಕ್ರಮಣ ಮಾಡಲು, ಆಗ ನೀನೇನು ಮಾಡುವೆ?’ ಎಂದು ಕೇಳುವರು.ಇದನ್ನು ಕೇಳಿದಾಕ್ಷಣ ಆ ಬಾಲಕನ ಮುಖದಲ್ಲಿ ಕೋಪ ಉಕ್ಕಿ ಬಂದು ‘ನಮ್ಮ ದೇಶದ ಮೇಲೆ ಯಾರೇ ಆಕ್ರಮಣ ಮಾಡಲು ಬಂದರೂ ಸಹಾ ನಾನು ಅವರ ವಿರುದ್ಧ ಹೊರಾಡುವೆ. ಅದು ಬುದ್ಧನಾದರೂ ಸರಿ, ನಮಗೆ ದೇವರಿಗಿಂತ ದೇಶ ಮುಖ್ಯ’ ಎಂದು ದಿಟ್ಟವಾಗಿ ಉತ್ತರಿಸುವನು. ಇದು ಈ ದೇಶದವರ ದೇಶಪ್ರೇಮ. ಆದರೆ ಇಂತಹಾ ದೇಶಪ್ರೇಮ ನಮ್ಮ ದೇಶದಲ್ಲಿ ಯಾಕಿಲ್ಲ ?
ದೇಶ ಭಕ್ತಿ ಎಂದರೇನು ? ನಾವು ಹುಟ್ಟಿ ಬೆಳೆದ ನಾಡಿನ ಬಗೆಗಿನ ಪ್ರೀತಿ. ನಮ್ಮ ನಾಡಿನ ಬಗ್ಗೆ ನಮಗೆ ಪ್ರೀತಿ ಹಾಗೂ ಅಭಿಮಾನ ಸದಾ ಕಾಲ ಇರಬೇಕಲ್ಲವೇ ? ಪ್ರಪಂಚದಾದ್ಯಂತ ಯೂರೋಪಿಯನ್ನರು ತಮ್ಮ ವಸಾಹತ್ತುಗಳನ್ನು ಸ್ಥಾಪಿಸಲು ಪೈಪೋಟಿ ಮಾಡುತ್ತಿದ್ದ ಕಾಲ ಅದು. ಸಾಂಬಾರು ಪದಾರ್ಥಗಳಿಗಾಗಿ ನಮ್ಮ ದೇಶಕ್ಕೆ ಬಂದವರು ಇಲ್ಲಿನ ರಾಜರ ಪರಿಸ್ಥತಿ, ಅವರ ಒಳಜಗಳಗಳನ್ನು ಕಂಡು ಒಡೆದು ಆಳುವ ನೀತಿಯನ್ನು ಅನುಸರಿಸಿ ನಮ್ಮನ್ನು ಸಂಪೂರ್ಣವಾಗಿ ದಾಸ್ಯಕ್ಕೆ ಒಳಪಡಿಸಿದರು. ನಮಗೆ ೧೮೫೭ ರಲ್ಲಿ ಅಲ್ಲ ಅದಕ್ಕೂ ಮುಂಚೆ ೧೮೨೭ ರಲ್ಲಿಯೇ ಸ್ವಾತಂತ್ರ್ಯ ಸಿಗಬೇಕಿತ್ತು. ರಾಣಿ ಚೆನ್ನಮ್ಮನ ಹೋರಾಟಕ್ಕೆ ಬೆಂಬಲ ಸಿಗದೇ, ಕುತಂತ್ರಕ್ಕೆ ಬಲಿಯಾಗಿ ಆಕೆ ಸೋಲುವಂತಾಯಿತು. ನಾವು ಸುದೀರ್ಘಕಾಲ ಪರಾತಂತ್ರವನ್ನು ಅನುಭವಿಸಲು ನಮ್ಮಲ್ಲಿದ ದೇಶಾಭಿಮಾನದ ಕೊರತೆಯೇ ಕಾರಣ. ೧೯೧೯ ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ೧೯೨೮ ರಲ್ಲಿ ಲಾಲ ಲಜಪತ್ ರಾಯರ ಮರಣ, ಮಂದಗಾಮಿಗಳ ಹೋರಾಟ, ತೀವ್ರಗಾಮಿಗಳ ಹೋರಾಟ ಕಡೆಗೆ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಸತ್ಯ ಹಾಗೂ ಅಹಿಂಸೆಗಳೆಂಬ ಅಸ್ತ್ರಗಳ ಮೂಲಕ ನಾವು ಸ್ವಾತಂತ್ರ್ಯವನ್ನು ಪಡೆದೆವು.
ನಮ್ಮಇಂದಿನ ಸಂತೃಪ್ತಯ, ಸಂತೋಷದ ಬದುಕಿಗೆ ಅಂದಿನವರ ಹೋರಾಟ, ಪ್ರಾಣತ್ಯಾಗ, ಬಲಿದಾನಗಳೇ ಕಾರಣ. ಒಂದು ದೇಶದ ಇಂದಿನ ಸ್ಥಿತಿ ಅ ದೇಶದ ಪೂರ್ವಿಕರ ಕೊಡುಗೆ. ನಮಗಾಗಿ ನಮ್ಮ ಹಿರಿಯರು ತಮ್ಮನ್ನು ಸಮರ್ಪಣೆ ಮಾಡಿಕೊಂಡಿರುವರು. ಒಂದು ದೇಶದ ಅವನತಿ, ಪ್ರಗತಿ, ಮುನ್ನಡೆ ಇವೆಲ್ಲಾ ಆ ದೇಶದ ದೇಶವಾಸಿಗಳನ್ನೇ ಅವಲಂಭಿಸಿರುತ್ತೆ.
ಎರಡನೇ ಮಹಾಯುದ್ಧದಲ್ಲಿ ಸೋತು ಸುಣ್ಣವಾಗಿದ್ದ ಜಪಾನ್ ಇಂದು ಅಮೆರಿಕೆಗೆ ಸವಾಲಾಗುವ ಹಂತಕ್ಕೆ ಅಭಿವೃದ್ಧಿ ಸಾಧಿಸಿದೆ ಎಂದರೆ ಅದಕ್ಕೆ ಕಾರಣ ಆ ದೇಶದ ದೇಶವಾಸಿಗಳ ದೇಶಭಕ್ತಿ. ಇದನ್ನು ನಾವು ನಮ್ಮಮಕ್ಕಳಿಗೆ ಕಲಿಸಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿ ಇದು.
ನಮ್ಮ ದೇಶ ಭಕ್ತಿಯ ಉದ್ದೇಶ ಸ್ವಾತಂತ್ರ್ಯ ಪಡೆಯುವವರೆಗೆ ಕೇವಲ ಸ್ವಾತಂತ್ರ್ಯ ಪಡೆಯುವುದೇ ಆಗಿತ್ತು. ಆದರೆ ಇಂದು ದೇಶಭಕ್ತಿ ಅಂದಿಗಿಂತಲೂ ಹೆಚ್ಚಾಗಿ ಅವಶ್ಯಕವಿದೆ. ಆದರೆ ನಮ್ಮ ಯುವ ಪೀಳಿಗೆಯಲ್ಲಿ ದೇಶ ಭಕ್ತಿ ಇಲ್ಲ. ಇಂದು ನಮ್ಮ ದೇಶದಲ್ಲಿರುವ ಹಲವಾರು ಸಮಸ್ಯೆಗಳ ವಿರುದ್ಧ ಹೋರಾಡಲು ನಮಗೆ ದೇಶಭಕ್ತಿ ಅವಶ್ಯವಾಗಿ ಬೇಕು. ಭಾವೈಕ್ಯತೆ ಬೇಕು. ಇದು ಕೇವಲ ಮಾತಿನಲ್ಲಿ ಅಲ್ಲ ಆಚರಣೆಯಲ್ಲಿ ಬರಬೇಕು.
‘ನೂರು ದೇವರನೆಲ್ಲಾ ನೂಕಾಚೆ ದೂರ, ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ’ ಎಂದು ಕುವೆಂಪು ಹೇಳಿರುವರು. ಇದರಂತೆ ಎಲ್ಲಾ ದೇವರಿಗಳಿಗಿಂತ ಭಾರತ ಮಾತೆಯೇ ನಮ್ಮಗೆ ಹೆಚ್ಚು ಎಂಬ ಭಾವ ನಮ್ಮಲ್ಲಿ ಬರಬೇಕು.
ನಿಜವಾದ ದೇಶಭಕ್ತಿ ಎಂದರೆ ನನ್ನ ದೇಶದ ಉಳಿವಿಗಾಗಿ ಮತ್ತೊಂದು ದೇಶದ ಮೇಲೆ ಹೋರಾಡುವುದು, ಅತಿ ಆಸೆ ಇಂದ ಮತ್ತೊಂದು ದೇಶದ ಮೇಲೆ ಆಕ್ರಮಣ ಮಾಡುವುದಲ್ಲ. ಮತ್ತೊಂದು ದೇಶದ ಸಾರ್ವಭೌಮತ್ವವನ್ನು ಗೌರವಿಸುವುದು ಸಹ ದೇಶಭಕ್ತಿಯೇ. ದೇಶಭಕ್ತಿ ಯೆಂದರೆ ಒಂದು ದಿನ ಸಂಭ್ರಮಾಚರಣೆ ಮಾಡುವುದಲ್ಲ. ಅದು ನಿಜವಾದ ದೇಶಭಕ್ತಿ ಅಲ್ಲ. ಅಬ್ರಹಂ ಲಿಂಕನ್ ಅವರು ಹೇಳುವಂತೆ ‘ ನಿನ್ನ ದೇಶ ನಿನಗೇನು ಮಾಡಿದೆ ? ಎಂದು ಕೇಳುವ ಮೊದಲು ನೀನು ನಿನ್ನ ದೇಶಕ್ಕೆ ಏನುಮಾಡಿರುವೆ ? ಎಂದು ಕೇಳಿಕೊಳ್ಳಬೇಕು. ನಿಜವಾದ ದೇಶಭಕ್ತಿ ಇದೇ ಆಗಿದೆ. ನಾವೆಲ್ಲ ಒಂದೇ ಎಂದು ಭಾವಿಸಿಕೊಂಡು ನಮ್ಮ ದೇಶದ ಅಭಿವೃದ್ಧಿ ಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸುವುದು ನಿಜವಾದ ದೇಶಭಕ್ತಿ. ಇದು ಕೇವಲ ನೆರೆಯ ರಾಷ್ಟ್ರ ನಮ್ಮ ಮೇಲೆ ಆಕ್ರಮಣ ಮಾಡಿದಾಗಲೋ ಅಥವಾ ಕ್ರೀಡೆಯಲ್ಲಿ ನಮ್ಮ ದೇಶ ಗೆದ್ದಾಗಲೋ ಪ್ರಕಟವಾಗುವುದಲ್ಲ, ದೇಶಭಕ್ತಿ ಸದಾ ಕಾಲ ನಮ್ಮಲ್ಲಿ ಜಾಗೃತವಾಗಿರಬೇಕು. ಸದಾಕಾಲ ಪರಸ್ಪರ ಪ್ರೀತಿಯಿಂದ, ಪರಸ್ಪರ ಗೌರವಿಸಿಕೊಂಡು ನಮ್ಮ ದೇಶ ಸರ್ವರಂಗಗಳಲ್ಲಿಯೂ ಪ್ರಗತಿ ಸಾಧಿಸುವ ಕಡೆಗೆ ಶ್ರಮಿಸಬೇಕು.
ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗೂ ನಮ್ಮವರು ನಮ್ಮ ದೇಶಕ್ಕಾಗಿ ಆತ್ಮಬಲಿದಾನ ನೀಡುತ್ತಲೇ ಇದ್ದಾರೆ. ಹೀಗೆ ನಮ್ಮ ಮುಂದಿನವರನ್ನು ಕಾಪಾಡುವ ಜವಾಬ್ದಾರಿ ನಮ್ಮದು. ಇಂದು ನಾವು ಪಡೆದುಕೊಂಡಿರುವ ಎಲ್ಲಾ ಸುಖಗಳನ್ನು, ದೇಶಾಭಿಮಾನದ ಕರ್ತವ್ಯ ಹಾಗೂ ದೇಶಭಕ್ತಿಯ ಪಾಠಗಳನ್ನು ನಮ್ಮ ಮುಂದಿನವರಿಗೆ ನಾವು ಕಲಿಸಬೇಕು, ತಲುಪಿಸಬೇಕು. ನಮ್ಮಲ್ಲಿರುವ ಕೊರತೆಗಳನ್ನು ನೀಗಿಕೊಳ್ಳುವುದೇ ನಿಜವಾದ ದೇಶ ಭಕ್ತಿ. ದೇಶಾಭಿಮಾನ ವೆಂದರೆ ದೇಶಾಭಿವೃದ್ಧಿಯ ಕನಸು, ಇದು ಕಲಾಂ ಅವರು ಹೇಳುವಂತೆ ನಿದ್ರೆಯಲ್ಲಿ ಕಾಣುವ ಕನಸಲ್ಲ, ಸದಾ ಕಾಲ ನಮ್ಮನ್ನು ಎಚ್ಚರವಾಗಿರುವಂತೆ ಕಾಡುವ ಕನಸಾಗಿರಬೇಕು. ಪ್ರತಿಕ್ಷಣ ನಮ್ಮದೇಶ ಎತ್ತ ಸಾಗುತ್ತಿದೆ, ಅದರಲ್ಲಿ ನಮ್ಮ ಪಾತ್ರ ಏನು ಎಂಬುದನ್ನುಬನಾವು ಸದಾ ಗಮನಿಸುತ್ತಿರಬೇಕು. ಹೀಗೆ ಬದುಕುವುದೇ ನಿಜವಾದ ದೇಶಭಕ್ತಿ. ದೇಶ ಪ್ರೇಮದ ಹಣತೆ ಪರಸ್ಪರರನ್ನು ಗೌರವಿಸುವ, ಪ್ರೀತಿಸುವ, ದೇಶಾಭಿವೃದ್ಧಿಯ ಕನಸು ಕಾಣುವ, ಅದನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ಸದಾ ಕಾಲ ಬೆಳಗುತ್ತಿರಲಿ. ಎಂದು ಹೇಳಿದರು.
ಮುಂದೆ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದ ಡಾ ಗಾಯಿತ್ರಿ ದೇವಿ ಅವರು ಮಾತನಾಡುತ್ತಾ ದೇಶಪ್ರೇಮ ಎಂದರೆ ಒಂದು ದಿನ ಒಂದು ವಾರ ಆಚರಣೆ ಮಾಡುವಂತದಲ್ಲ. ಇದು ಸದಾಕಾಲ ನಮ್ಮಲ್ಲಿ ಇರಬೇಕು. ಕರೋನಾ ಕಾರಣದಿಂದ ನಮ್ಮೆಲ್ಲರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಟ್ಟಿರುವ ಪರಿಸ್ಥಿತಿಯಲ್ಲಿ ಸರ್ಕಾರ ಫಿಟ್ ಇಂಡಿಯಾ (Fit India)ಕಾರ್ಯಕ್ರಮವನ್ನು ಜಾರಿ ಮಾಡಿದೆ, ಇದರಿಂದ ನಮ್ಮೆಲ್ಲರ ದೇಹ ಮತ್ತು ಮನಸ್ಸುಗಳು ಸದೃಡಗೊಂಡು ಆ ಮುಲಕ ನಮ್ಮ ದೇಶವು ಸದೃಡಗೊಳ್ಳುವುದು. ಆರೋಗ್ಯವಂತ ಭಾರತ ನಮ್ಮದಾಗುವುದು. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಒಂದಾಗಬೇಕು ಎಂದು ಹೇಳಿದರು. ಶ್ರೀ ದೇವರಾಜು ಬಸವನಹಳ್ಳಿ ರವರು ತಮ್ಮ ಸ್ವರಚಿತ ದೇಶಭಕ್ತಿ ಗೀತೆಯನ್ನು ಹಾಡಿದ್ದು ವಿಶೇಷವಾಗಿತ್ತು. ನಂತರ ಮಾತನಾಡಿದ ಮುಖ್ಯ ಅತಿಥಿಗಳಾದ ಶ್ರೀ ರಾಜು ಎಸ್ ಸೂಲೇನಹಳ್ಳಿ ರವರು ನಾವು ಸ್ವತಂತ್ರ್ಯ ಪಡೆದು ೭೫ ವರ್ಷಗಳಾದರೂ ಸಹಾ ಇನ್ನು ಹಲವಾರು ರಂಗಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗದೇ ಹಿಂದುಳಿದಿರುವುದು ದುಃಖದ ಸಂಗತಿ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅಭಿವೃದ್ಧಿ ಆಗಬೇಕು. ಸಾಕಷ್ಟು ಪ್ರಮಾಣದ ಅನಕ್ಷರತೆ ನಮ್ಮಲ್ಲಿದೆ. ಶಿಕ್ಷಣದ ಮೂಲಕ ಸಾಂಸ್ಕೃತಿಕ ವಾಗಿ, ಸಾಮಾಜಿಕ ವಾಗಿ ನಮ್ಮ ದೇಶದ ಅಭಿವೃದ್ಧಿಗೆ ಸಹಕರಿಸಬೇಕು. ಶಿಕ್ಷಣದ ಮೂಲಕ ನಾವು ನಮ್ಮ ಮಕ್ಕಳಲ್ಲಿ ದೇಶ ಭಕ್ತಿಯ ಪಾಠಗಳನ್ನು ಕಲಿಸಬೇಕು. ನಮ್ಮ ಹಿರಿಯರ ತ್ಯಾಗ ಮತ್ತು ಬಲಿದಾನಗಳು ಸಾರ್ಥಕವಾಗಬೇಕಾದರೆ ನಾವು ಪ್ರತಿದಿನ ನಮ್ಮ ಮಕ್ಕಳಿಗೆ ಮುಂದಿನ ತಲೆಮಾರುಗಳಿಗೆ ದೇಶಭಕ್ತಿಯ, ದೇಶಾಭಿಮಾನದ ಪಾಠ ಕಲಿಸಬೇಕು ಆ ಮೂಲಕ ದೇಶವು ಎಲ್ಲಾ ರಂಗಗಳಲ್ಲಿಯೂ ಪ್ರಗತಿ ಸಾಧಿಸಲು ಸಹಕರಿಸಬೇಕು. ನಮ್ಮ ದೈನಂದಿನ ಜೀವನದಲ್ಲಿ ನಾವು ದೇಶಭಕ್ತಿ ಯನ್ನು ಅಳವಡಿಸಿಕೊಳ್ಳಬೇಕು. ಕೇವಲ ಆಚರಣೆಗೆ ಇದು ಸೀಮಿತವಾಗಬಾರದು ಎಂದು ಹೇಳಿದರು.
ಮುಂದೆ ಕಾರ್ಯಕ್ರಮದ ಮತ್ತೊಬ್ಬ ಅತಿಥಿ ಗಳಾದ ಶ್ರೀ ಅಕ್ರಂಪಾಷ ಕೆ ಎನ್ ಅವರು ಮಾತನಾಡುತ್ತಾ ಈ ದಿನ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಸಾಮಾಜಿಕ ಜಾಲ ತಾಣದಲ್ಲಿ ಆಚರಿಸುತ್ತಿದ್ದೇವೆ. ಇದು ಕೇವಲ ಇಲ್ಲಿಗೆ ಸೀಮಿತವಾಗದೇ ಇರಲಿ. ದೇಶ ಭಕ್ತಿ ವರ್ಷದ ೩೬೫ ದಿನವೂ ನಮ್ಮಲ್ಲಿ ಇರಲಿ. ನಾವು ಅನೇಕ ಜನ ದೇಶಭಕ್ತರ ಹೋರಾಟದ ಫಲವಾಗಿ ಈದಿನ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಎಲ್ಲಾ ಧರ್ಮೀಯರ, ಎಲ್ಲಾ ಕನ್ನಡಿಗರ, ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಶ್ರಮ ಇದರಲ್ಲಿದೆ.
ಇಂದು ವೀರ ಕನ್ನಡಿಗನಾದ ಸಂಗೋಳ್ಳಿರಾಯಣ್ಣನ ಜನ್ಮದಿನವೂ ಸಹಾ ಇದೆ. ನಮ್ಮ ಇಂದಿನ ಸ್ವಾತಂತ್ರ್ಯ ದಲ್ಲಿ ಇವರ ಶ್ರಮವೂ ಅಧಿಕವಾದದ್ದು, ಇವರನ್ನು ಸಹಾ ನಾವು ಇಂದು ನೆನಪಿಸಿಕೊಂಡು ಗೌರವಿಸಬೇಕು.
ನಮ್ಮ ಭಾರತದಲ್ಲಿ ಹಲವು ದೇಶ ಭಾಷೆಗಳು ಇವೆ. ಭಾರತವೆಂಬ ತೋಟದಲ್ಲಿ ನಾವೆಲ್ಲ ಭಾವೈಕ್ಯತೆಯ ಹೂಗಳಾಗಿ ಇದ್ದೇವೆ. ನಮ್ಮ ಹಿಂದಿನವರ ದೇಶಭಕ್ತಿ, ತ್ಯಾಗ ಹಾಗೂ ಬಲಿದಾನಗಳಿಗೆ ಸಾರ್ಥಕತೆ ಸಿಗಬೇಕಾದರೆ ನಮ್ಮ ದೇಶವಾಸಿಗಳೆಲ್ಲ ಒಂದಾಗಿ ಅಣ್ಣತಮ್ಮಂದಿರಂತೆ ದೇಶದ ಬದುಕಿಗೆ , ಅಭಿವೃದ್ಧಿ ಗೆ ಶ್ರಮಿಸಬೇಕು. ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳದು ಇಲ್ಲಿನ ಅನ್ನ ತಿಂದು, ಇಲ್ಲಿಯೇ ಶಿಕ್ಷಣ ಪಡೆದ ನಮ್ಮ ಯುವ ಜನರು ವಿದೇಶಗಳಲ್ಲಿ ಹೋಗಿ ನೆಲೆಸುತ್ತಿದ್ದಾರೆ. ಇದು ಆಗಬಾರದು. ಶಿಕ್ಷಣದ ಮೂಲಕ ಇಂತಹಾ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕು. ಎಂದು ಹೇಳಿದರು.
ಕೊನೆಯದಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗುಡಿಬಂಡೆ ಫಯಾಜ್ ಅಹಮದ್ ಖಾನ್ ಅವರು ಮಾತನಾಡುತ್ತಾ ಸ್ವಾತಂತ್ರ್ಯ ಎಂಬ ಪದ ಅಥವಾ ಪರಿಕಲ್ಪನೆಯೇ ಒಂದು ಅನುಭೂತಿಯಾಗಿದೆ. ನಮ್ಮ ಚರಿತ್ರೆಯನ್ನು ಗಮನಿಸಿದರೆ ಅನಾದಿಯಿಂದ ನಡೆದ ಎಲ್ಲಾ ಘಟನೆಗಳು, ಘರ್ಷಣೆ, ಹೊರಾಟ, ಯುದ್ಧಗಳೆಲ್ಲವೂ ಸಹಾ ಎಲ್ಲೋ ಒಂದು ಕಡೆ ಸ್ವಾತಂತ್ರ್ಯದ ಕಾರಣದಿಂದಲೇ ನಡೆದಿರುವುದು ನಮಗೆ ತಿಳಿಯುತ್ತದೆ. ಎಲ್ಲಾ ದೇಶಗಳ, ಎಲ್ಲಾ ಹೋರಾಡ ಯುದ್ಧಗಳು ಸ್ವಾತಂತ್ರ್ಯಕ್ಕಾಗಿಯೇ ನಡೆದಿವೆ.
ನಮಗೆ ೧೯೪೭ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ಲಭಿಸಿದೆ. ಆದರೆ ನಮ್ಮನ್ನು ಆಳುವ ಪ್ರಭುಗಳು ನಮ್ಮ ಸ್ವಾತಂತ್ರ್ಯವನ್ನು ನಮಗೆ ಸಂಪೂರ್ಣ ದಕ್ಕದಂತೆ ಮಾಡಿವೆ. ಸಿದ್ಧಲಿಂಗಯ್ಯನವರ ಯಾರಿಗೆ ಬಂತು ಎಲ್ಲಿಗೆ ಬಂತು ೪೭ ರ ಸ್ವಾತಂತ್ರ್ಯ ಎಂಬು ಕವನವನ್ನು ನಾವು ನೆನಪಿಸಿಕೊಳ್ಳಬೇಕು. ಇಂದು ನಮ್ಮಲ್ಲಿ ಬಡತನ, ಕಳಪೆ ಜೀವನ ಮಟ್ಟ , ರೈತರ ಭವಣೆ, ಮಧ್ಯವ್ಯಸನ, ಕಾರ್ಮಿಕರ ಭವಣೆಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ದಾರ್ಮಿಕ, ಪತ್ರಿಕಾ, ಸಾಂಸ್ಕೃತಿಕ ಸ್ವಾತಂತ್ರ್ಯ ದ ಹರಣ ನಡೆಯುತ್ತಿದೆ. ಕೊಟ್ಯಾಂತರ ಜನರ ತನು ಮನ ಧನದ ತ್ಯಾಗದಿಂದ ಪ್ರಾಣ ತ್ಯಾಗದಿಂದ ಬಂದ ಸ್ವಾತಂತ್ರ್ಯ ಇದು ಮಣ್ಣಂಗಟ್ಟಿಯಲ್ಲ. ದೇಶ ಅಂದರೆ ಕೇವಲ ದೇಶವಲ್ಲ ದೇಶದ ಜನ, ಅಲ್ಲಿರುವ ಜೀವ ಸಮುದಾಯಗಳು, ದೇಶಭಕ್ತಿ ಅಥವಾ ದೇಶಾಭಿವೃದ್ಧಿ ಎಂದರೆ ಈ ಜೀವ ಸಮುದಾಯಗಳ ಅಭಿವೃದ್ಧಿ ಅವರ ಸ್ವಾತಂತ್ರ್ಯ, ಅವರ ಹಕ್ಕುಗಳ ರಕ್ಷಣೆ ಎಂಬುದನ್ನು ನಾವು ಈ ಸಂಧರ್ಭದಲ್ಲಿ ಮನಗಾಣಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಬಹಳಾ ಮೌಲಿಕವಾಗಿತ್ತು, ಹಾಗೂ ದೇಶಾಭಿಮಾನದ ಅನುಭೂತಿಯನ್ನು ನಮಗೆ ಉಣಬಡಿಸುವ ಕಾರ್ಯವನ್ನು ಈ ಉಪನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿದೆ ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರುನಾಡು ಸಾಹಿತ್ಯ ಪರಿಷತ್ತನ ಕೋಲಾರ ಜಿಲ್ಲಾ ಅಧ್ಯಕ್ಷರಾದ ಶ್ರೀ ವರುಣ್ ರಾಜ್ ಜೀ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಜ್ ಕುಮಾರ್ ವಿ, ಹಾಗೂ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ ಮಾಲ ಬಿ ಎಂ, ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ಮೋಹನ್ ಕುಮಾರ್ ವಿ, ವಿಚಾರ ಮಂಟಪ ಸಾಹಿತ್ಯ ಪರಿಷತ್ತಿನ ರಾಜ್ಯ ಅದ್ಯಕ್ಷರಾದ ಶ್ರೀ ಅಂಜನ್ ಕುಮಾರ್ ಪಿ ಆರ್. ಸಂಗೀತ ವಿದ್ವಾಂಸರಾದ ಶ್ರೀಮತಿ ಸುಮಾ ಬಸವರಾಜ ಹಡಪದ, ಕುಮಾರಿ ಅಕ್ಷತಾ, ಕುಮಾರಿ ಪ್ರೇಮ ಈ, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.