ತುಮಕೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಶ್ವ ವಿಖ್ಯಾತ ಜೋಗ ಜಲಪಾತದ ವೀಕ್ಷಣೆಗೆ ವಿಶೇಷ ಪ್ಯಾಕೇಜ್ ಕಾರ್ಯಕ್ರಮದಡಿ ರಾಜಹಂಸ ಹಾಗೂ ವೇಗದೂತ ಸಾರಿಗೆ ಕಾರ್ಯಾಚರಣೆಯನ್ನು ಜುಲೈ 31ರಿಂದ ಪ್ರಾರಂಭಿಸಲಾಗಿದೆ ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಈ ವಿಶೇಷ ಪ್ಯಾಕೇಜ್‌ನಡಿ ಆಗಸ್ಟ್ ೭ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಜಲಪಾತದ ವೀಕ್ಷಣೆಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಆಸಕ್ತರು ಕ.ರಾ.ರ.ಸಾ.ನಿಗಮದ ಅವತಾರ್ (www.ksrtc.karnataka.gov.in) ತಂತ್ರಾಂಶದಲ್ಲಿ ಮುಂಗಡವಾಗಿ ಟಿಕೇಟ್ ಕಾಯ್ದಿರಿಸಿಕೊಂಡು ಪ್ರವಾಸ ಕೈಗೊಳ್ಳಬಹುದಾಗಿದೆ. ವೇಗದೂತ ಪ್ರಯಾಣ ದರವನ್ನು ವಯಸ್ಕರಿಗೆ 650 ರೂ. ಹಾಗೂ 6-12 ವರ್ಷದೊಳಗಿನ ಮಕ್ಕಳಿಗೆ 400 ರೂ., ರಾಜಹಂಸ ಪ್ರಯಾಣ ದರವನ್ನು ವಯಸ್ಕರಿಗೆ 850 ರೂ. ಹಾಗೂ 6-12 ವರ್ಷದೊಳಗಿನ ಮಕ್ಕಳಿಗೆ 600 ರೂ.ಗಳನ್ನು ನಿಗಧಿಪಡಿಸಲಾಗಿದೆ.
ವೇಗದೂತ ಸಾರಿಗೆಯು ತುಮಕೂರಿನಿಂದ ಬೆಳಿಗ್ಗೆ 6 ಗಂಟೆಗೆ ನಿರ್ಗಮಿಸಿ ಸಾಗರ, ವರದ ಮೂಲ, ಇಕ್ಕೇರಿ, ಜೋಗ ಜಲಪಾತಕ್ಕೆ ಮಧ್ಯಾಹ್ನ 2:45 ಗಂಟೆಗೆ ತಲುಪಿ ಸಂಜೆ 5:30 ಗಂಟೆಗೆ ಜೋಗ ಜಲಪಾತದಿಂದ ಹೊರಟು ಮಧ್ಯರಾತ್ರಿ 12:45 ಗಂಟೆಗೆ ತುಮಕೂರಿಗೆ ಮರಳಿ ಬರಲಿದೆ. ಇದೇ ಮಾರ್ಗದಲ್ಲಿ ರಾಜ ಹಂಸ ಸಾರಿಗೆಯು ತುಮಕೂರಿನಿಂದ ಬೆಳಿಗ್ಗೆ 6 ಗಂಟೆಗೆ ನಿರ್ಗಮಿಸಿ ಮಧ್ಯಾಹ್ನ 2:15 ಗಂಟೆಗೆ ಜೋಗ ತಲುಪಿ ಜೋಗದಿಂದ ಸಂಜೆ 5:30 ಗಂಟಗೆ ಜೋಗ ಜಲಪಾತದಿಂದ ಹೊರಟು ಮಧ್ಯರಾತ್ರಿ 12:15 ಗಂಟೆಗೆ ತುಮಕೂರಿಗೆ ಮರಳಿ ಬರಲಿದೆ.
ಈ ವಿಶೇಷ ಪ್ಯಾಕೇಜ್‌ನಡಿ ಪ್ರಯಾಣಿಸುವ ಪ್ರವಾಸಿಗರು ಮಾರ್ಗಮಧ್ಯೆ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳತಕ್ಕದ್ದು ಎಂದು ಅವರು ತಿಳಿಸಿದ್ದಾರೆ.