ಜನಮಾನಸದಲ್ಲಿ ಅಚಲ-ವೆಂಕಟಾಚಲ ಅವಧೂತರು ಸಖರಾಯಪಟ್ಟಣದ ಮಹಾಚೇತನ.

ಕಡೂರು ತಾಲೂಕಿನ ಸಖರಾಯಪಟ್ಟಣ ಸಾಧು ಸತ್ಪುರುಷರ ತಾಣ. ಈ ನೆಲದಲ್ಲಿ ಬದುಕಿದ್ದ ಮೊದಲ ಅವಧೂತರು ಮುಕುಂದೂರು ಸ್ವಾಮಿಗಳು. ನಂತರದಲ್ಲಿ ಸಖರಾಯಪಟ್ಟಣ ವನ್ನು ವಿಶ್ವವ್ಯಾಪಿ ಯನ್ನಾಗಿ ಮಾಡಿದ ಮಹಾನ್ ಅವಧೂತರು ವೆಂಕಟಾಚಲ ಗುರುನಾಥರು. ಅವರ ಭೌತಿಕ ಕಾಯ ಮರೆಯಾಗಿದ್ದರೂ ಇಂದಿಗೂ ವೆಂಕಟಾಚಲ ಗುರುಗಳ ನೆನಪು ಭಕ್ತರ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.

ಸಖರಾಯಪಟ್ಟಣ ಎಂದರೆ ವೆಂಕಟಾಚಲ ಅವಧೂತರು ಎಂಬ ಮಾತು ಜನಜನಿತವಾಗಿತ್ತು. ವೆಂಕಟಾಚಲ ಗುರುಗಳು ಮರೆಯಾಗಿದ್ದದ
ಖರಾಯಪಟ್ಟಣ ದಲ್ಲಿರುವ ಅವರ ಬೃಂದಾವನಕ್ಕೆ ಪ್ರತಿನಿತ್ಯ ನೂರಾರು ಜನರು ಭೇಟಿ ನೀಡಿ ತಮಗೆ ಅಗತ್ಯವಾದ ಮನಶ್ಯಾಂತಿ ಪಡೆಯುತ್ತಿದ್ದಾರೆ. ವೆಂಕಟಾಚಲ ಗುರುಗಳು ಈಗಲೂ ತಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ ಎಂಬುದು ಅವರ ಭಕ್ತಗಣದ ನಂಬಿಕೆಯಾಗಿದೆ. ಅದು ವಾಸ್ತವವೂ ಹೌದು.

ವೆಂಕಟಾಚಲರ ಪೂರ್ವಿಕರು ತರೀಕೆರೆ ಬಳಿಯ ಕುಡ್ಲೂರಿನವರು. ಮೂರು ನಾಲ್ಕು ತಲೆಮಾರುಗಳ ಹಿಂದೆ ಬಹುಶಃ ಹೊಟ್ಟೆಪಾಡಿಗಾಗಿ ಕಡೂರು ಬೀರೂರು ಮುಂತಾದೆಡೆ ವಲಸೆ ಹೋಗಿ ಕಡೆಗೆ ಸಖರಾಯಪಟ್ಟಣದಲ್ಲಿ ನೆಲೆನಿಂತರು. ಹೀಗೆ ಬಂದ ಕುಟುಂಬದ ಶ್ರೀನಿವಾಸಯ್ಯ ಮತ್ತು ಶಾರದಮ್ಮ ದಂಪತಿಗಳ ಮಗನೇ ವೆಂಕಟಾಚಲ. ತಿರುಪತಿಯ ಶ್ರೀನಿವಾಸ ಮನೆ ದೇವರಾದ್ದರಿಂದ ಮಗುವಿಗೆ ವೆಂಕಟಾಚಲ ಎಂಬ ಹೆಸರನ್ನು ಇಡಲಾಯಿತು. 1940 ರಲ್ಲಿ ವೆಂಕಟಾಚಲ ಜನಿಸಿದರು.
ಬಾಲ್ಯ ಮತ್ತು ಪ್ರಾಥಮಿಕ ಶಿಕ್ಷಣ ನಡೆದಿದ್ದು ಸಖರಾಯಪಟ್ಟಣದಲ್ಲಿ. ನಂತರ ಸೇರಿದ್ದು ಬೆಂಗಳೂರಿನ ವಿಜಯ ಕಾಲೇಜಿನಲ್ಲಿ. ಅಲ್ಲಿ ಓದುತ್ತಿದ್ದಾಗ ತಂದೆ ಶ್ರೀನಿವಾಸಯ್ಯ ನವರಿಗೆ ದೇಹಾಲಸ್ಯ ವಾಗಿ ಕಾಲೇಜು ಬಿಟ್ಟು ಸಖರಾಯಪಟ್ಟಣ ಕ್ಕೆ ವಾಪಸ್ ಬಂದು ತಂದೆಯ ಕೃಷಿ ಕಾರ್ಯಗಳಿಗೆ ಹೆಗಲು ಕೊಡುತ್ತಾರೆ. ಜೊತೆಜೊತೆಗೆ ಆಧ್ಯಾತ್ಮಿಕ ಸಾಧನೆಯನ್ನು ಮುಂದುವರಿಸುತ್ತಾರೆ.ಶೃಂಗೇರಿಯ ಶಾರದಾ ಪೀಠದ 34ನೇ ಜಗದ್ಗುರುಗಳಾದ ಚಂದ್ರಶೇಖರ ಭಾರತಿ ಸ್ವಾಮಿಗಳಿಂದ ಪ್ರಭಾವಿತರಾಗಿದ್ದರು.ಶೃಂಗೇರಿ ಪೀಠದೊಡನೆ ನಿಕಟ ಸಂಪರ್ಕವಿಟ್ಟುಕೊಂಡಿದ್ದರು.

ವೆಂಕಟಾಚಲ ಹನ್ನೊಂದನೇ ವಯಸ್ಸಿನಲ್ಲಿದ್ದಾಗಲೇ ಕೊಮಾರನಹಳ್ಳಿ ಶಂಕರಲಿಂಗ ಭಗವಾನ್ ಅವಧೂತರ ದರ್ಶನವಾಗಿ ಪ್ರಭಾವಕ್ಕೊಳಗಾದರು. ಲೌಕಿಕದಲ್ಲಿದ್ದುಕೊಂಡೇ ಆಧ್ಯಾತ್ಮದ ಸಾಧನೆ ಮಾಡುವಲ್ಲಿ ನಿರತರಾದರು. ಬಾಣಾವರ ದ ಕೃಷ್ಣ ಯೋಗೇಂದ್ರ ಜಗದ್ಗುರುಗಳ ಸಜೀವ ಬೃಂದಾವನದ ಮುಂದೆ ವೆಂಕಟಾಚಲ ಗುರುಗಳು ಸಾಧನೆ ಮಾಡುತ್ತಿದ್ದರು. ಬಾಣವರ ದ ಕೃಷ್ಣ ಯೋಗೀಂದ್ರರ ಬೃಂದಾವನವನ್ನು ಬೆಳಕಿಗೆ ತಂದವರು ವೆಂಕಟಾಚಲರೆ.

ವೆಂಕಟಾಚಲ ಗುರುಗಳು ಸ್ವಯಂಘೋಷಿತ ಅವಧೂತ ರಲ್ಲ. ಅವರ ಸಾಧನೆಯನ್ನು, ಆಧ್ಯಾತ್ಮಿಕ ಔನ್ನತ್ಯವನ್ನು ಕಂಡವರು ಅವರ ಬಳಿ ಬರಲಾರಂಭಿಸಿದರು. ಪಾರಮಾರ್ಥಿಕ ಸತ್ಯವನ್ನು ದೃಷ್ಟಾಂತಗಳ ಮೂಲಕ ಬಂದವರಿಗೆ ತಿಳಿಸುತ್ತಿದ್ದರು ವೆಂಕಟಾಚಲ ಗುರುಗಳು. ಸಂಗ್ರಹಿಸು ಶೇಖರಿಸ ಬೇಡ. ಶೇಖರಿಸು ಸಂಗ್ರಹಿಸ ಬೇಡ ಎಂದು ಮಾರ್ಮಿಕವಾಗಿ ಭಕ್ತರಿಗೆ ತಿಳಿಸುತ್ತಿದ್ದ ವೆಂಕಟಾಚಲ ಗುರುಗಳು ಶೃಂಗೇರಿ ಪೀಠದ ಅನನ್ಯ ಭಕ್ತರಾಗಿದ್ದರು. ಪಾರಮಾರ್ಥಿಕ ಸತ್ಯವನ್ನು ಕಂಡುಕೊಂಡಿದ್ದ ವೆಂಕಟಾಚಲ ರನ್ನು ಭಕ್ತರು ಪ್ರೀತಿಯಿಂದ ಅವಧೂತ ಎಂದರು.ಗುರುನಾಥ ಎಂದರು. ಅವರವರ ಭಾವಕ್ಕೆ ಭಕ್ತಿಗೆ ತಕ್ಕಂತೆ. ವೆಂಕಟಾಚಲ ಗುರುಗಳನ್ನು ಕಂಡರು.

ಮನಸ್ಸು ಮಾಗಬೇಕು, ಬಾಳು ಹಣ್ಣಾಗಬೇಕು ಎನ್ನುತ್ತಿದ್ದ ವೆಂಕಟಾಚಲರು ಬ್ರಾಹ್ಮಣ ಎಂದಾಗುವುದು ಆಚರಣೆಯಿಂದ. ನಿರಂತರತೆ. ನಿರುಪಮಭಾವನೆ. ನಿರಾತಂಕತೆ ಇವುಗಳಿದ್ದವನು ಬ್ರಾಹ್ಮಣ ಎಂದು ಹೇಳುತ್ತಿದ್ದರು. ಮರಿ ಬೇಡ, ಮೆರಿ ಬೇಡ, ಮುರೀಬೇಡ ಎಂದು ತಮ್ಮ ಬಳಿ ಬಂದವರಿಗೆ ಬದುಕಿನ ಪಾಠವನ್ನು ತಿಳಿಸುತ್ತಿದ್ದರು.

ಪ್ರತಿನಿತ್ಯ ಇವರ ಮನೆಯಲ್ಲಿ ಸಾವಿರಾರು ಜನರು ಸದಾ ತುಂಬಿರುತ್ತಿದ್ದರು. ಪ್ರತಿಯೊಬ್ಬರನ್ನು ತಾಯಿ ಪ್ರೀತಿಯಿಂದ ಮಾತನಾಡಿಸಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದ ವೆಂಕಟಾಚಲ ಗುರುಗಳು ಯಾವುದೇ ಕಾರಣಕ್ಕೂ ಆಡಂಬರ ಮತ್ತು ತೋರಿಕೆ ಪ್ರೀತಿಯನ್ನು ಸಹಿಸುತ್ತಿರಲಿಲ್ಲ. ಪರಿಶುದ್ಧವಾದ ಭಕ್ತಿಯೊಂದೇ ದೇವರನ್ನು ಮುಟ್ಟುವ ದಾರಿ ಎಂದು ನಂಬಿದ್ದರು.

ವೆಂಕಟಾಚಲ ಅವಧೂತರು 2010ರಲ್ಲಿ ತಮ್ಮ ಭೌತಿಕ ದೇಹವನ್ನು ತ್ಯಜಿಸಿ ವಿಶ್ವವ್ಯಾಪಿಯಾದರು. ಗುರುಗಳ ಅಂತಿಮ ದರ್ಶನ ಪಡೆಯಲು ಸಾವಿರಾರು ಜನರು ಸೇರಿದ್ದು ಸಖರಾಯಪಟ್ಟಣದ ಮಟ್ಟಿಗೆ ಇತಿಹಾಸ.
ವೆಂಕಟಾಚಲ ಗುರುಗಳ ಬೃಂದಾವನ ವನ್ನು ಅಯ್ಯನಕೆರೆ ಗೆ ಹೋಗುವ ರಸ್ತೆಯಲ್ಲಿ ಇರುವ ಅವರ ತೋಟದಲ್ಲಿ ನಿರ್ಮಿಸಲಾಗಿದೆ. ಪ್ರತಿನಿತ್ಯ ನೂರಾರು ಭಕ್ತರು ಬೃಂದಾವನಕ್ಕೆ ಭೇಟಿ ನೀಡುತ್ತಾರೆ. ವೆಂಕಟಾಚಲ ರ ಭೌತಿಕಕಾಯ ಮಾಯವಾಗಿದ್ದದರೂ ಸೂಕ್ಷ್ಮ ರೂಪದಿಂದ ಬೃಂದಾವನದಲ್ಲಿ ಜಾಗೃತರಾಗಿದ್ದಾರೆ ಎಂಬುದು ಅವರ ಭಕ್ತರ ನಂಬಿಕೆಯಾಗಿದೆ.


—————————–

ಗುರುಗಳ ನೆನಪೇ ಬದುಕಿಗೆ ಚೇತನ

ವೆಂಕಟಾಚಲ ಗುರುಗಳನ್ನು ನಾನು ಹಲವಾರು ಬಾರಿ ದರ್ಶಿಸಿದ್ದೆ. ಒಮ್ಮೆ ಸಖರಾಯಪಟ್ಟಣದ ಗುರನಿವಾಸಕ್ಕೆ ಹೋದಾಗ ಗುರುಗಳ ಜೊತೆಯಿದ್ದ ಒಬ್ಬ ನನ್ನ ಮೇಲೆ ರೇಗಿದ. ನಾನೂ ಸಹ ಅವನ ಮೇಲೆ ರೇಗಿ ಗುರುಗಳನ್ನು ನೋಡೋಕೆ ಬಂದರೆ ನೀನೇ ಗುರು ಆಡ್ದಂಗೆ ಆಡ್ತೀಯಲ್ಲ ? ಅಂತ ರೇಗಿ ರಂಗನಾಥನ ದೇಗುಲಕ್ಕೆ ಹೋಗಿ‌ವಾಪಸ್ಸು ಬರುತ್ತಿದ್ದೆ.ಗುರುಗಳ ಮನೆಯ ಮುಂದೆ ಬಂದಾಗ
ಒಂದು ಸೀಟು ಇದೆ.ಕೂತ್ಕೋತೀಯೇನಯ್ಯಾ? ಎಂಬ ಧ್ವನಿ ! ನೋಡಿದರೆ ಸಾಕ್ಷಾತ್ ಗುರುಗಳು ! ಕೂಡಲೇ ಒಳ ನುಗ್ಗಿ ಅವರು ತೋರಿದ ಜಾಗದಲ್ಲಿ ಕುಳಿತೆ. ಗುರುಗಳ ತಾಯಿಯವರ ಕೆಲಸ ಅಂದು. ನಾನು ಕುಳಿತ ಕೂಡಲೇ ಎಲೆಗೆ ಬಡಿಸಲಾರಂಭಿಸಿದರು. ಪುಷ್ಕಳ ಭೋಜನ. ಗುರುಗಳು‌ ನೋಡುತ್ತಲೇ ಇದ್ದರು. ನನ್ನ ಬಳಿ ಬಂದು ನಿನ್ನ ಪಕ್ಕದಲ್ಲಿ ಏನಿದೆ ನೋಡು ಎಂದರು. ನಾನು ಪಕ್ಕಕ್ಕೆ ತಿರುಗಿದರೆ ಚಪ್ಪಲಿಗಳ ರಾಶಿ !
ನಿನ್ನ ಅಲ್ಲಿ ಕೂರಿಸಿದ್ದಕ್ಕೆ ಬೇಸರವಾಗಲಿಲ್ಲವೆ ಎಂದು ಗುರುಗಳು ಕೇಳಿದರು. ನಾನಂದೆ.ಗುರುಗಳೆ ನಿಮ್ಮನ್ನು ನೋಡಲು ಬಂದಾಗ ಅದ್ಯಾರೋ ಬಯ್ದರು ಅಂತ ಅವರ ಮೇಲೆ ರೇಗಿ ಹೋಗಿದ್ದೆ.ಬರುವಾಗ ನೀವೇ ಕರೆದದ್ದು ನೋಡಿ ಎಲ್ಲ ಮರೆತುಹೋಯ್ತು. ಎಲ್ಲಿ ಆದ್ರೇನು. ನೀವು ಹೇಳಿದ ಮೇಲೆ ಮುಗೀತು ಎಂದು ಸ್ಪಷ್ಟವಾಗಿ ಉತ್ತರಿಸಿದೆ.
ಕೂಡಲೇ ಗುರುಗಳು ಊಟ ಮುಗಿಸಿ ನನ್ನನ್ನು ಕಂಡು ಹೋಗು ಎಂದರು.
ಊಟ ಮುಗಿಸಿ ನಾನು ಹಿಂದೆ ಹೋದೆ.ಗುರುಗಳು ಮಲಗಿದ್ದವರು ಎದ್ದು ಒಬ್ಬನನ್ನು ಕರೆದು ಎಕೆಅಡಿಕೆ ತೆಂಗಿನಕಾಯಿ ಯಿಟ್ಟು ಹತ್ತು ರೂಪಾಯಿ ದಕ್ಷಿಣೆಯಿಟ್ಟು ನನಗೆ ಕೊಡಿಸಿದರು. ನೀನೆಲ್ಲಿದ್ದರೂ ಊಟಕ್ಕೆ ಮಾತ್ರ ತೊಂದರೆಯಾಗುವುದಿಲ್ಲ ಎಂದರು.! ಅದು ಇಂದಿಗೂ ನಡೆಯುತ್ತಲಿದೆ.
ಕರ್ನಾಟಕ ಸಂಗೀತ ವಿದುಷಿಯೊಬ್ಬರು ತಮ್ಮ ಧ್ವನಿಸುರುಳಿಯೊಂದನ್ನು ಗುರುಗಳ ಕೈಯಲ್ಲಿ ಬಿಡುಗಡೆ ಮಾಡಲು ಅಪೇಕ್ಷಿಸಿದರು. ಆ ಗಾಯಕಿಯೊಂದಿಗೆ ನಾನು ಹೋಗಿದ್ದೆ.ಒಳ ಹೋದ ಕೂಡಲೇ ಸಂಗೀತಸರಸ್ವತಿ ನಮ್ಮ ಮನೆಗೆ ಬಂದಿದ್ದಾಳೆ ಎಂದು ಉದ್ಗರಿಸಿ ಅವರನ್ನು ಒಳಗೆ ಕರೆದೊಯ್ದು ಪಾದಪೂಜೆ ಮಾಡಿದರು. ಎಂತಹ ಉದಾತ್ತ ಭಾವನೆ ಅವಧೂತರದು!


ಕುಂತೀಹೊಳೆಯ ರಾಮ ದೇಗುಲ ಪುನರುತ್ಥಾನದ ಸಮಯ. ನಾನು ಸಿಮೆಂಟ್ ಕಲೆಸುತ್ತ ಇದ್ದೆ. ತಲೆಯೆತ್ತಿ ನೋಡಿದರೆ ವೆಂಕಟಾಚಲ ಗುರುಗಳು ಕುಳಿತಿದ್ದಾರೆ! ಕೂಡಲೇ ಒಳಗೋಡಿ ಸೀನಣ್ಣನವರನ್ನು ಕರೆತಂದೆ. ಅವರು ಮತ್ತೆ ಗುರುಗಳು ದೇಗುಲದ ಮುಂದೆ ಕುಳಿತು ಬಹಳ ಹೊತ್ತು ಮಾತನಾಡುತ್ತಿದ್ದರು.ನಾನು ಸಹ ಅಲ್ಲೆ ಕುಳಿತೆ.ಮಾತಿನ ಮಧ್ಯೆ ಮಧ್ಯೆ ಗುರುಗಳು ಬಾದಾಮಿ,ಗೋಡಂಬಿ ತೆಗೆದು ನನಗೆ ತಿನ್ನಿಸುತ್ತಿದ್ದರು. ಎಂಥ ಭಾಗ್ಯ !
ಗುರುಗಳ ಭೌತಿಕ ಕಾಯ ಮರೆಯಾಗಿದೆ. ಆದರೂ ಜನಮಾನಸದಲ್ಲಿ ಅಚಲರಾಗಿದ್ದಾರೆ ವೆಂಕಟಾಚಲ ಅವಧೂತರು ! ಗುರುಗಳ ದಿವ್ಯ ಚೇತನಕ್ಕೆ ನೂರು ನಮನ.

Leave a Reply

Your email address will not be published. Required fields are marked *

error: Content is protected !!