ಮೋಹಿನ ಅವತರಾದ ಮಹಾವಿಷ್ಣುವಿನ ದೇವಾಲಯ

ಕರ್ನಾಟಕ ಇತಿಹಾಸ ಪರಂಪರೆಯಲ್ಲಿ ವಿಶೇಷ ದೇಗುಲಗಳು ಹಲವಾರು. ಒಂದೊಂದರಲ್ಲೂ ಒಂದೊಂದು ವಿಶೇಷವಿದೆ. ಅದರಲ್ಲೂ ಐತಿಹಾಸಿಕ ದೇಗುಲಗಳಲ್ಲಿ ಮಹಾವಿಷ್ಣುವಿಗೆ ವಿಶೇಷ ಸ್ಥಾನ. ಬಹಳಷ್ಟು ಗ್ರಾಮಗಳಲ್ಲಿ ಚೆನ್ನಕೇಶವನಿಗೆ ದೇಗುಲಗಳಿವೆ. ಅದನ್ನು ಬಿಟ್ಟರೆ ಅತೀ ಹೆಚ್ಚು ದೇಗುಲಗಳಿರುವುದು ರಂಗನಾಥನಿಗೆ. ಆದಿ ರಂಗ( ಶ್ರೀ ರಂಗಪಟ್ಟಣ) ಮಧ್ಯರಂಗ( ಶಿಂಷಾ) ಅಂತ್ಯರಂಗ( ಶ್ರೀರಂಗಂ),  ಹೀಗೆ ಅನೇಕಕಡೆಯಿರುವ ರಂಗನಾಥ ದೇಗುಲಗಳು ಬಹುತೇಕ ಸ್ವಾಮಿ ಶಯನ ಭಂಗಿಯಲ್ಲಿರುವ ದಿವ್ಯ ಮೂರ್ತಿಗಳು.

ಬಯಲು ಸೀಮೆಯ ಬಹಳಷ್ಟು ಕಡೆ ರಂಗನಾಥ ದೇಗುಲಗಳಿವೆ. ಅವೆಲ್ಲವೂ ನಿಂತಿರುವ ಭಂಗಿಯಲ್ಲಿವೆ.( ಬಿಳಿಗಿರಿ ರಂಗನಾಥಸ್ವಾಮಿ… ಮುಂತಾದವುಗಳು). ಮಾವಿನಕೆರೆಯಲ್ಲಿ ರಂಗನಾಥ ಗುಂಡುಕಲ್ಲಿನ ರೂಪದಲ್ಲಿದ್ದರೆ ಕೆಲವೆಡೆ ಕೂರ್ಮ ರೂಪ-( ಆಮೆ )ದಲ್ಲಿದ್ದಾನೆ.

ಇಗೋ ಇಲ್ಲಿದೆ ಒಂದು ದೇಗುಲ. ಕಡೂರು ತಾಲ್ಲೂಕಿನ ಹೊಗರೇಹಳ್ಳಿ ಒಂದು ಚಿಕ್ಕ ಗ್ರಾಮ. ಇಲ್ಲಿ ಅನಾದಿ ಕಾಲದಿಂದ ನೆಲೆಸಿದ್ದಾನೆ ರಂಗನಾಥ. ಬಹು ಮುದ್ದಾದ ರಂಗ ಇವನು.

ಅಲಂಕಾರಪ್ರಿಯ ವಿಷ್ಣು. ಈ ರಂಗ ನೂ ಅಲಂಕಾರಪ್ರಿಯ. ಈ ವಿಗ್ರಹ ಎರಡೂವರೆ ಅಡಿ ಎತ್ತರವಿದೆ.  ಮಹಾವಿಷ್ಣುವಿನ ಮೋಹಿನಿ ಅವತಾರದ ಪ್ರತೀಕ ಈ ವಿಗ್ರಹ. ವಿಗ್ರಹದಲ್ಲಿ ಜಡೆಯಿದೆ. ಮತ್ತೊಂದು ವಿಶೇಷವೆಂದರೆ ರಂಗನಾಥಸ್ವಾಮಿಯ ಬಲಗೆನ್ನೆಯ ಮೇಲೆ ಒಂದು ಮಚ್ಚೆಯಿದೆ.  ಕೃಷ್ಣಶಿಲೆಯ ವಿಗ್ರಹದ ಮೇಲೆ ಬಿಳಿ ಬಣ್ಧದ ಮಚ್ಚೆ ಸ್ಪಷ್ಟವಾಗಿ ಕಾಣುತ್ತದೆ. ಬಹು ಹಿರಿಯರು ಹೇಳುವ ಪ್ರಕಾರ ಸಣ್ಣ ಕಾಳಿನಷ್ಟಿದ್ದ ಈ ಮಚ್ಚೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆಯಂತೆ. ಆ ಮಚ್ಚೆ ಬೆಳೆಯುತ್ತಿದ್ದಂತೆ ಕ್ಷೇತ್ರದ ಮಹಿಮೆಯೂ ವಿಸ್ತಾರಗೊಂಡು ಅಭಿವೃದ್ಧಿಯಾಗುತ್ತಲಿದೆ ಎನ್ನುತ್ತಾರೆ. ರಂಗನಾಥನ ಜೊತೆ ಮತ್ತೊಂದು ಗರ್ಭಗೃಹದಲ್ಲಿ ಮಹಾಲಕ್ಷ್ಮಿಯಿದ್ದಾಳೆ. ಚೋಳ ಶೈಲಿಯಲ್ಲಿರುವ ದ್ವಿಕೂಟ ದೇಗುಲವಿದು.

ದೇಗುಲ ನಿರ್ಮಾಣದ ಬಗ್ಗೆ ಶಾಸನಾಧಾರವಿಲ್ಲವಾದರೂ ಪುರಾತತ್ವ ಇಲಾಖೆಯವರ ಸಮೀಕ್ಷೆಯ ಪ್ರಕಾರ ಈ ದೇಗುಲ ನಿರ್ಮಾಣಗೊಂಡು ಕನಿಷ್ಟ 900 ವರ್ಷಗಳಾಗಿವೆ. ಹಂತ ಹಂತವಾಗಿ ದೇಗುಲ ವಿಸ್ತಾರಗೊಂಡಿದೆ. ವಿಸ್ತಾರಗೊಂಡ ದೇಗುಲದಲ್ಲಿ ಸುಂದರ ಗೋಪುರ, ದೇಗುಲದ ಸುತ್ತ ಮೇಲೆ ದಶಾವತಾರಗಳ ವಿಗ್ರಹಗಳಿವೆ. ಬಹುಶಃ ಈ ವಿಗ್ರಹಗಳು ವಿಜಯನಗರ ಶೈಲಿಯನ್ನು ಹೋಲುತ್ತವೆ. ಗೋಪುರವೂ ಸಹ ಹೀಗೆಯೇ ಇದೆ.

ದೇಗುಲದಲ್ಲಿ‌ ನಿತ್ಯ ಎರಡು ಹೊತ್ತು‌ ಪಾಂಚಾರಾತ್ರಾಗಮ ಪದ್ದತಿಯಲ್ಲಿ ಪೂಜೆ ನಡೆಯುತ್ತದೆ. ಬಹಳಷ್ಟು ಗ್ರಾಮಗಳಲ್ಲಿ,ಹೊರಜಿಲ್ಲೆಗಳಲ್ಲೂ ಸ್ವಾಮಿಯ ಒಕ್ಕಲಿದ್ದಾರೆ.

ಒಟ್ಟಾರೆ ಹೊಗರೇ ಹಳ್ಳಿ ಸ್ವಾಮಿಯನ್ನು ನೋಡಲೇ ಚೆಂದ. ರಂಗ ಬಾರೋ ಪಾಂಡುರಂಗ ಬಾರೋ ಎಂಬ ದಾಸರ ರಚನೆಯ ನೆನಪಾಗುವುದು ಸುಳ್ಳಲ್ಲ ಈ ರಂಗನನು ಕಂಡಾಗ.

Leave a Reply

Your email address will not be published. Required fields are marked *

error: Content is protected !!