ಯುಗಾದಿ: ಚೈತ್ರ ಮಾಸದ ಹೊಸ ಹರುಷ ಹಾಗೂ ಸನಾತನ ಧರ್ಮದ ಹೊಸ ವರ್ಷಾರಂಭ

ಹಿಂದೂ ಪಂಚಾಂಗದ ಪ್ರಕಾರ 2026 ರ ಮಾರ್ಚ್ 19, ಗುರುವಾರದಂದು “ಚೈತ್ರ ಶುದ್ಧ ಪ್ರತಿಪದ” ತಿಥಿಯಿದೆ. ಈ ಪವಿತ್ರ ದಿನದಂದೇ ಕರ್ನಾಟಕ ಸೇರಿದಂತೆ ದೇಶಾದ್ಯಂತ ಅತ್ಯಂತ ಸಂಭ್ರಮದಿಂದ “ಯುಗಾದಿ” ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದೊಂದಿಗೆ ಹೊಸ ‘ವಿಶ್ವಾವಸು’ ನಾಮ ಸಂವತ್ಸರ ಮುಗಿದು ‘ಪರಾಭವ’ ನಾಮ ಸಂವತ್ಸರ ಆರಂಭವಾಗಲಿದೆ. ‘ಯುಗ’ ಮತ್ತು ‘ಆದಿ’ ಎಂಬ ಎರಡು ಪದಗಳ ಸಂಯೋಜನೆಯೇ ಯುಗಾದಿ, ಅಂದರೆ ಹೊಸ ಕಾಲದ ಆರಂಭ. ಈ ಮಹತ್ವದ ದಿನದ ಕುರಿತು ಪೌರಾಣಿಕ, ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಮಾಹಿತಿಯ ಸಂಕ್ಷಿಪ್ತ ಲೇಖನ ಇಲ್ಲಿದೆ.
ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ

 

 

 

 

ಧರ್ಮಗ್ರಂಥಗಳ ಪ್ರಕಾರ, ಬ್ರಹ್ಮದೇವನು ಈ ವಿಶ್ವವನ್ನು ನಿರ್ಮಿಸಿದ ದಿನವೇ ಚೈತ್ರ ಶುದ್ಧ ಪ್ರತಿಪದ. ಸತ್ಯಯುಗವು ಪ್ರಾರಂಭವಾದದ್ದೂ ಇದೇ ದಿನವೆಂದು ನಂಬಲಾಗಿದೆ. ಸೃಷ್ಟಿಯ ಆರಂಭದ ಸಮಯವಾದ್ದರಿಂದ ಈ ದಿನ ಪರಿಸರದಲ್ಲಿ ಅತಿ ಹೆಚ್ಚು ಸಾತ್ವಿಕ ಲಹರಿಗಳು ಜಾಗೃತವಾಗಿರುತ್ತವೆ. ಐತಿಹಾಸಿಕವಾಗಿ ನೋಡಿದರೆ, ಪ್ರಭು ಶ್ರೀರಾಮಚಂದ್ರನು ರಾವಣ ಸಂಹಾರದ ನಂತರ ವಿಜಯದೊಂದಿಗೆ ಅಯೋಧ್ಯೆಗೆ ಮರಳಿದ ಸಂಭ್ರಮದಲ್ಲಿ ಜನರು ವಿಜಯದ ಧ್ವಜಗಳನ್ನು ಹಾರಿಸಿ ಈ ಹಬ್ಬವನ್ನು ಆಚರಿಸಿದರು ಎಂಬ ಉಲ್ಲೇಖವಿದೆ. ಇದಲ್ಲದೆ, ಶಾಲಿವಾಹನ ಶಕೆಯ ಆರಂಭವೂ ಇದೇ ದಿನದಿಂದ ಆಗಿರುವುದು ವಿಶೇಷ.

 

ನೈಸರ್ಗಿಕ ವೈಶಿಷ್ಟ್ಯ

ವಸಂತ ಋತುವಿನ ಆಗಮನದೊಂದಿಗೆ ಯುಗಾದಿಯು ಪ್ರಕೃತಿಯಲ್ಲಿ ಹೊಸ ಕಳೆಯನ್ನು ತರುತ್ತದೆ. ಶಿಶಿರ ಋತುವಿನಲ್ಲಿ ಎಲೆಗಳನ್ನು ಉದುರಿಸಿದ್ದ ಮರಗಿಡಗಳು ಯುಗಾದಿಯ ವೇಳೆ ಹೊಸ ಚಿಗುರನ್ನು ತಳೆದು ಹಸಿರಾಗಿ ಶೋಭಿಸುತ್ತವೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು “ಋತುಗಳಲ್ಲಿ ನಾನು ಕುಸುಮಾಕರ ವಸಂತ ಋತು” ಎಂದು ಹೇಳಿರುವಂತೆ, ಈ ಕಾಲವು ಭಗವಂತನ ವಿಭೂತಿಯ ಸಂಕೇತವಾಗಿದೆ. ವಾತಾವರಣವು ಸಮಶೀತೋಷ್ಣವಾಗಿದ್ದು, ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ.

 

 

 

ಆಧ್ಯಾತ್ಮಿಕ ಆಚರಣೆ ಮತ್ತು ಮಹತ್ವ

ಯುಗಾದಿ ಹಬ್ಬದ ಆಚರಣೆಯು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಮನುಷ್ಯನ ಅಂತಃಕರಣದ ಶುದ್ಧೀಕರಣಕ್ಕೂ ದಾರಿಯಾಗಿದೆ.
ಅಭ್ಯಂಗ ಸ್ನಾನ: ಹಬ್ಬದ ದಿನ ಮುಂಜಾನೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದಕ್ಕೆ ಅಧ್ಯಾತ್ಮದಲ್ಲಿ ಬಹಳ ಮಹತ್ವವಿದೆ. ಇದು ದೇಹದ ಶುದ್ಧಿಯ ಜೊತೆಗೆ ಮನಸ್ಸಿನ ರಜ-ತಮ ಗುಣಗಳನ್ನು ಹೋಗಲಾಡಿಸಿ ಸಾತ್ವಿಕತೆಯನ್ನು ಹೆಚ್ಚಿಸುತ್ತದೆ.

ಬ್ರಹ್ಮಧ್ವಜ ಅಥವಾ ಗುಡಿ ಏರಿಸುವುದು: ಮನೆಯ ಮುಂಭಾಗದಲ್ಲಿ ಬ್ರಹ್ಮಧ್ವಜವನ್ನು ಪ್ರತಿಷ್ಠಾಪಿಸುವುದು ವಿಜಯದ ಸಂಕೇತ. ತಾಮ್ರದ ಕಲಶ, ಹೊಸ ವಸ್ತ್ರ, ಮಾವಿನ ಎಲೆ ಮತ್ತು ಬೇವಿನ ಎಲೆಗಳಿಂದ ಅಲಂಕರಿಸಲ್ಪಟ್ಟ ಈ ಧ್ವಜವು ಬ್ರಹ್ಮಾಂಡದ ಸಾತ್ವಿಕ ಲಹರಿಗಳನ್ನು ಗ್ರಹಿಸಿ ಮನೆಗೆ ಪ್ರಸಾರ ಮಾಡುತ್ತದೆ.

ಬೇವು-ಬೆಲ್ಲದ ಪ್ರಸಾದ: ಯುಗಾದಿಯ ಪ್ರಮುಖ ಆಂಶವೆಂದರೆ ಬೇವು-ಬೆಲ್ಲದ ಸೇವನೆ. ಬದುಕು ಕೇವಲ ಸುಖವಲ್ಲ; ಇದು ಸಿಹಿ-ಕಹಿಗಳ ಸಮ್ಮಿಶ್ರಣ. ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ಇದು ನೀಡುತ್ತದೆ. ಆಧ್ಯಾತ್ಮಿಕವಾಗಿ ಬೇವಿನ ಎಲೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ, ಬೆಲ್ಲವು ಜೀವನದ ಮಾಧುರ್ಯವನ್ನು ಪ್ರತಿನಿಧಿಸುತ್ತದೆ.

ಪಂಚಾಂಗ ಶ್ರವಣ: ಹೊಸ ವರ್ಷದಲ್ಲಿ ಗ್ರಹಗತಿಗಳು ಹೇಗಿವೆ, ಜೀವನದ ಮೇಲಾಗುವ ಪರಿಣಾಮಗಳೇನು ಎಂಬುದನ್ನು ಪಂಚಾಂಗ ಶ್ರವಣದ ಮೂಲಕ ತಿಳಿದುಕೊಳ್ಳಲಾಗುತ್ತದೆ. ಇದು ನಮ್ಮ ಜೀವನವನ್ನು ಯೋಜಿಸಲು ಮತ್ತು ದೈವ ಸಂಕಲ್ಪಕ್ಕೆ ಶರಣಾಗಲು ಸಹಕಾರಿಯಾಗಿದೆ.

 

 

ಆಚರಣೆಯ ವೇಳೆ ಗಮನಿಸಬೇಕಾದ ಅಂಶಗಳು

ಹಬ್ಬದ ದಿನ ಮುಂಜಾನೆ ಬೇಗ ಎದ್ದು ಅಭ್ಯಂಗ ಸ್ನಾನ ಮಾಡುವುದು ಮತ್ತು ಶುಭ್ರವಾದ ಅಥವಾ ಹೊಸ ಬಟ್ಟೆಗಳನ್ನು ಧರಿಸುವುದು ಉತ್ತಮ. ಮನೆ ಬಾಗಿಲಿಗೆ ಮಾವಿನ ಎಲೆಯ ತೋರಣಗಳನ್ನು ಕಟ್ಟುವುದು ಮಂಗಳಕರ ಮತ್ತು ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ದೇವಸ್ಥಾನಗಳಿಗೆ ಭೇಟಿ ನೀಡುವುದು ಮತ್ತು ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ಈ ದಿನದ ಪಾವಿತ್ರ್ಯತೆಯನ್ನು ಹೆಚ್ಚಿಸುತ್ತದೆ.

ಇನ್ನೊಂದೆಡೆ, ಹಬ್ಬದ ನೆಪದಲ್ಲಿ ಯಾವುದೇ ಅಶಾಸ್ರೀಯ ಅಥವಾ ಅಧಾರ್ಮಿಕ ಕಾರ್ಯಗಳಲ್ಲಿ ತೊಡಗಬಾರದು. ಕಹಿ ಮತ್ತು ಸಿಹಿಯ ಸಮತೋಲನದ ಈ ದಿನವನ್ನು ಕೇವಲ ಮೋಜು ಮಸ್ತಿಗಾಗಿ ಮೀಸಲಿಡದೆ ಸತ್ಸಂಗ ಮತ್ತು ಭಜನೆಗಳ ಮೂಲಕ ಕಳೆಯುವುದು ಹೆಚ್ಚು ಫಲದಾಯಕ. ಸಂಜೆ ಪಂಚಾಂಗ ಶ್ರವಣ ಮಾಡುವುದು ಪದ್ಧತಿ, ಇದನ್ನು ಅಲಕ್ಷಿಸಬಾರದು. ಹಿರಿಯರ ಆಶೀರ್ವಾದ ಪಡೆಯುವುದನ್ನು ಮರೆಯಬಾರದು.

ಯುಗಾದಿಯು ನಮಗೆ ಹಳೆಯ ಕಹಿ ನೆನಪುಗಳನ್ನು ಮರೆತು ಹೊಸ ಭರವಸೆಯೊಂದಿಗೆ ಮುನ್ನಡೆಯಲು ಪ್ರೇರಣೆ ನೀಡುತ್ತದೆ. ಇದು ನಮ್ಮ ಮನಸ್ಸಿನಲ್ಲಿರುವ ಕೆಟ್ಟ ವಿಚಾರಗಳನ್ನು ತ್ಯಜಿಸಿ ಸದ್ಗುಣಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಿದೆ. ಈ ಹೊಸ ವರ್ಷವು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ.

ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’

ಸಂಗ್ರಹ
ಶ್ರೀ. ವಿನೋದ ಕಾಮತ್,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ (ಸಂಪರ್ಕ : 934259929)

Leave a Reply

Your email address will not be published. Required fields are marked *

error: Content is protected !!