ತುಮಕೂರು:ಜನವರಿ 21ರಂದು ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿ ಲಿಂಗೈಕ್ಯ ಡಾ||ಶ್ರೀ ಶಿವಕುಮಾರಸ್ವಾಮೀಜಿಗಳ 7ನೇ ಪುಣ್ಯ ಸಂಸ್ಮರಣೋತ್ಸವ ನಡೆಯಲಿದ್ದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಭಾಗಿಯಾಗಲಿದ್ದಾರೆ,ಅಂದು ಬೆಳಿಗ್ಗೆ 10:40ಕ್ಕೆ ತುಮಕೂರಿನ ವಿಶ್ವವಿದ್ಯಾನಿಲಯದ ಹೆಲಿಪ್ಯಾಡ್ ಗೆ ಆಗಮಿಸಲಿದ್ದು ನೇರವಾಗಿ ಶ್ರೀ ಶಿವಕುಮಾರಸ್ವಾಮೀಜಿಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ,ನಂತರ 11ಕ್ಕೆ ಗೋಸಲ ಸಿದ್ದೇಶ್ವರ ವೇದಿಕೆಗೆ ಆಗಮಿಸಲಿದ್ದು 12ರವರೆಗೆ ವೇದಿಕೆ ಕಾರ್ಯಕ್ರಮ ನಡೆಯುತ್ತದೆ,ವೇದಿಕೆಯಲ್ಲಿ ಶ್ರೀ ಸಿದ್ದಲಿಂಗಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು,ಸದ್ಗುರು ಶ್ರೀ ಮಧುಸೂಧನಸಾಯಿ,ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರಸ್ವಾಮೀಜಿಗಳು ಸಹ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉಪರಾಷ್ಟ್ರಪತಿಗಳಾದ ಸಿ.ಪಿ.ರಾಧಾಕೃಷ್ಣನ್ ಉದ್ಘಾಟಿಸಲಿದ್ದು,ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರು ಅಧ್ಯಕ್ಷತೆ ವಹಿಸುವರು,ಮುಖ್ಯ ಅತಿಥಿಗಳಾಗಿ ಕೇಂದ್ರ ಜಲಶಕ್ತಿ ಮತ್ತು ರೈಲ್ವೇಖಾತೆ ರಾಜ್ಯ ಸಚಿವ ವಿ.ಸೋಮಣ್ಣ,ಗೃಹಸಚಿವ ಡಾ||ಜಿ.ಪರಮೇಶ್ವರ,ಮಾಜಿ ಉಪಮುಖ್ಯಮಂತ್ರಿ ಮತ್ತು ಲೋಕಸಭಾ ಸದಸ್ಯರಾದ ಗೋವಿಂದಕಾರಜೋಳ,ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ ಗೌಡ,ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ,ಲೋಕಸಭಾ ಸದಸ್ಯ ಡಾ||ಸಿ.ಎನ್.ಮಂಜುನಾಥ್ ಆಗಮಿಸುವರು,ಸುಮಾರು 7-8ಸಾವಿರ ಜನರಿಗೆ ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸಲು ಆಸನದ ವ್ಯವಸ್ಥೆ ಮಾಡಲಾಗಿದೆ,ವೇದಿಕೆಯ ಬಲಭಾಗ 200ಜನ ಮಠದ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಲಿದ್ದಾರೆ,ಸುಮಾರು ಕಾರ್ಯಕ್ರಮಕ್ಕೆ 30-40ಸಾವಿರ ಜನರು ಬರಲಿದ್ದಾರೆ ಎಂದು ಮಠದ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಜಯವಿಭವಸ್ವಾಮಿ ತಿಳಿಸಿದರು.
ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸಾರ್ವಜನಿಕರು ಬೆಳಿಗ್ಗೆ 10:15ರ ಒಳಗೆ ಮಠದ ಕಾರ್ಯಕ್ರಮದ ವೇದಿಕೆಯ ಬಳಿ ಬಂದು ಆಸೀನರಾಗಬೇಕು,ಯಾರೂ ಸಹ ನೀರಿನ ಬಾಟೆಲ್,ಬ್ಯಾಗ್,ಯಾವುದೇ ಶಸ್ತ್ರಾತ್ರಗಳು ಇತರೆ ಯಾವುದೇ ಆಯುಧಗಳನ್ನು ತರುವುದನ್ನು ನಿಷೇಧಿಸಲಾಗಿದೆ,ದ್ವಿಚಕ್ರ ಮತ್ತು 4ಚಕ್ರದ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಠದ ರಾಗಿ ಹೊಲದಲ್ಲಿ ಮಾಡಿದೆ ಅಲ್ಲಿ ತಮ್ಮ ವಾಹನವನ್ನು ಬಿಟ್ಟು ಪಾರ್ಕಿಂಗ್ ಸ್ಥಳದಿಂದ ವೇದಿಕೆಗೆ ಕರೆದುಕೊಂಡು ಬಂದು ಕರೆದುಕೊಂಡು ಹೋಗಲು 4 ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯನವರು ಮಾತನಾಡುತ್ತಾ ಪೂಜ್ಯರ ಪುಣ್ಯಸ್ಮರಣೆಗೆ ಬೆಳಿಗ್ಗೆ 7ರಿಂದ 11ರವರೆಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ,ಉಪಹಾರಕ್ಕೆ ಉಪ್ಪಿಟ್ಟು-ಕೇಸರೀಭಾತ್,ಕಾಫಿ-ಟೀ ಇರುತ್ತದೆ,ನಂತರ 11-30ರಿಂದ ರಾತ್ರಿ 11-30ರವರೆಗೆ ನಿರಂತರ ಅನ್ನ ದಾಸೋಹ ನಡೆಯುತ್ತದೆ ಅದರಲ್ಲಿ ಉಪ್ಪು,ಉಪ್ಪಿನಕಾಯಿ,ಕೋಸಂಬರಿ,ಪಲ್ಯ,ರೆವೆ ಪಾಯಸ, ತುಪ್ಪ,ಮಾಲ್ದಿಪುಡಿ,ಮೈಸೂರುಪಾಕ್,ಚಿತ್ರಾನ್ನ,ಅನ್ನ-ಸಾಂಬಾರ್,ಮಜ್ಜಿಗೆ ಇರುತ್ತದೆ ಯಾರೂ ಸಹ ನೂಕು ನುಗ್ಗಲು ಮಾಡದೆ ಪ್ರತಿಯೊಬ್ಬರೂ ಸಹ ಪ್ರಸಾದ ಸ್ವೀಕರಿಸಿ ಪೂಜ್ಯರ ಆಶೀರ್ವಾದಕ್ಕೆ ಒಳಗಾಗಬೇಕು ಎಂದು ಮನವಿ ಮಾಡುತ್ತಾ,6ಕಡೆ ಕೊಪ್ಪಲು ಹಾಕಲಾಗಿದೆ,ಹೊಸಪ್ರಸಾದ ನಿಲಯ,ಹಳೆಯ ಪ್ರಸಾದ ನಿಲಯ,ಸಾದರ ಕೊಪ್ಪಲು,ಹೀಗೆ ಎಲ್ಲ ಕಡೆ ಟೇಬಲ್ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ ಒಂದು ಸಲಕ್ಕೆ 8 ಸಾವಿರ ಜನರು ಒಟ್ಟಿಗೆ ಕುಳಿತು ಊಟ ಮಾಡಬಹುದು ಎಂದು ತಿಳಿಸುತ್ತಾ ಊಟಕ್ಕೆ ಸುಮಾರು 1ರಿಂದ 1ಲಕ್ಷದ 25ಸಾವಿರ ಜನ ಬರಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಜಂಟಿ ಕಾರ್ಯದರ್ಶಿ ಪ್ರೊ.ಶಿವಕುಮಾರಯ್ಯ ಮಾತನಾಡುತ್ತಾ ವೇದಿಕೆಯಲ್ಲಿ ಬೆಳಿಗ್ಗೆ 8ರಿಂದ 10:30ರವರೆಗೆ ಸುಗಮ ಸಂಗೀತ ನಡೆಯುತ್ತದೆ,ಸಂಜೆ 4ರಿಂದ ಮಠದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು,ಬೆಳಿಗ್ಗೆ 3ಗಂಟೆಗೆ ಪೂಜ್ಯರ ಗದ್ದುಗೆಗೆ ಮಹಾರುದ್ರಾಭಿಷೇಕ ನಡೆಯಲಿದ್ದು ನಂತರ ಪೂಜ್ಯರ ಪ್ರತಿಮೆಯ ಮೆರವಣಿಗೆ ಗದ್ದುಗೆಯಿಂದ ಕ್ಯಾತ್ಸಂದ್ರದವರೆಗೆ ನಡೆಯುತ್ತದೆ ಎಲ್ಲರೂ ಭಕ್ತಿ-ಗೌರವಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜ್ಯರ ಆಶೀರ್ವಾದಕ್ಕೆ ಒಳಗಾಗಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಠದ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ,ಎಎಸ್.ಪಿ.ಪುರುಷೋತ್ತಮ್ ಉಪಸ್ಥಿತರಿದ್ದರು.