ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ಸುವರ್ಣ ಮಹೋತ್ಸವದ ಅಂಗವಾಗಿ ನೀಡಲಾಗುವ ಅತ್ಯುನ್ನತ ಗೌರವವಾದ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ಅನ್ನು ವಿಶ್ವ ಗ್ರಾಮೋದಯ ಟ್ರಸ್ಟ್ ಪಾವಗಡದ ಸಂಸ್ಥಾಪಕ ಹಾಗೂ ಕಾರ್ಯದರ್ಶಿಗಳಾದ ವಿ. ದಾಸಣ್ಣ ರವರಿಗೆ ಪ್ರಧಾನ ಮಾಡಲಾಗಿರುವುದು ಪಾವಗಡ ತಾಲ್ಲೂಕಿನ ಮಣ್ಣಿಗೆ ಒಂದು ಐತಿಹಾಸಿಕ ಕ್ಷಣವಾಗಿದೆ. ಕಳೆದ 18 ವರ್ಷಗಳಿಂದ ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ, ಅರಣ್ಯ ಅಭಿವೃದ್ಧಿ, ಹಸಿರು ಚಳವಳಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಸಮರ್ಪಣಾ ಭಾವದಿಂದ ನಿರಂತರವಾಗಿ ದುಡಿಯುತ್ತಿರುವ ಸೇವೆಗೆ ದೊರೆತಿರುವ ಈ ಗೌರವ ಪಾವಗಡದ ಜನತೆಗೆ ಹೆಮ್ಮೆ ಮತ್ತು ಸಂತಸವನ್ನುಂಟುಮಾಡಿದೆ.

ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ವಿಶೇಷವಾಗಿ ಭಾಗವಹಿಸಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಆರೋಗ್ಯ ಸಚಿವ ದಿನೇಶ್ ಗೂಂಡೂರಾವ್, ಕೇಪಿಸಿಬಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ, ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ದಾಸಣ್ಣರ ಸಾಧನೆಯನ್ನು ಸ್ಮರಿಸಿದರು.
ಈ ಗೌರವಕ್ಕಾಗಿ ಶಾಸಕ ಎಚ್.ವಿ. ವೆಂಕಟೇಶ್, ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ, ರಾಜ್ಯ ಕಿಸಾನ್ ಸಂಘದ ಅಧ್ಯಕ್ಷ ಡಾ. ನಾಗಭೂಷಣ ರೆಡ್ಡಿ, ಆರ್ ಪಿ ಸಾಂಬಸದಾಸಿವರೆಡ್ಡಿ ಟ್ರಸ್ಟ್ ಅಧ್ಯಕ್ಷ ಹೆಚ್. ಮಹೇಶ್, ಟ್ರಸ್ಟಿಗಳು ಪರಮೇಶಪ್ಪ, ಮಣೆಮ್ಮ, ಸರ್ವೇಶ್, ಹಿರಿಯ ವಿಜ್ಞಾನಿ ಡಾ. ಎಂ.ಎ. ವೆಂಕಟಸ್ವಾಮಿ, ಅರಣ್ಯಾಧಿಕಾರಿಗಳು, ಶಿಕ್ಷಕರು, ಪತ್ರಿಕಾ ಮಿತ್ರರು ಹಾಗೂ ನಾವು ಪಾವಗಡದವರು ಫೇಸ್‌ಬುಕ್ ತಂಡದವರು ಹೃತ್ಪೂರ್ವಕ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.
ವಿ. ದಾಸಣ್ಣರ ಈ ಸಾಧನೆ ಪಾವಗಡದ ಪರಿಸರ ಚೇತನವನ್ನು ರಾಜ್ಯ ಮಟ್ಟದಲ್ಲಷ್ಟೇ ಅಲ್ಲದೆ ದೇಶದ ಮಟ್ಟದಲ್ಲಿಯೂ ಹೊಸ ಮಟ್ಟಕ್ಕೆ ಕೊಂಡೊಯ್ದ ಮಹತ್ವದ ಘಳಿಗೆಯಾಗಿದೆ.