ತುಮಕೂರು : ಪಾವಗಡ ತಾಲ್ಲೂಕಿನ ಶ್ರೀಮತಿ ಮತ್ತು ಶ್ರೀ ವೈ.ಇ.ಆರ್. ಪ್ರಥಮ ದರ್ಜೆ ಕಾಲೇಜಿನ 2006 ರಿಂದ 2009 ನೇ ಸಾಲಿನ ಬಿ.ಬಿ.ಎಂ. ವಿದ್ಯಾರ್ಥಿಗಳಿಂದ 16 ವರ್ಷಗಳ ನಂತರ ಗುರುವಂದನೆ ಹಾಗೂ ಸ್ನೇಹ ಸಮಾಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗುರುಗಳಿಗೆ ವಿಶೇಷ ಪುಷ್ಪನಮನ, ಪುಷ್ಪದಿಂದಲೇ ಅವರುಗಳನ್ನು ವೇದಿಕೆಯವರೆಗೆ ಭವ್ಯ ಸ್ವಾಗತವನ್ನು ನೀಡುವುದರ ಮೂಲಕ ವಿದ್ಯೆ ಕಲಿಸಿದ ಗುರುಗಳಿಗೆ ವಿಶೇಷ ಗೌರವವನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಹೆಚ್.ಓ.ಡಿ ಆದ ಮಹಾಲಕ್ಷ್ಮೀ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು, ತಮ್ಮ ಕಾಲೇಜಿನ ಹಳೆಯ ನೆನಪುಗಳನ್ನು ಮೆಲಕು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗನ್ನು ತಂದುಕೊಟ್ಟರು.
ಡೈನಾಮಿಕ್ ಪ್ರೋಫೆಸರ್ ಎಂದೇ ಖ್ಯಾತಿಗಳಿಸಿದ ನಾಗರಾಜ್ ರವರು ಮಾತನಾಡುತ್ತಾ ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮದೇ ಆದ ಸ್ಥಾನಮಾನಗಳು ಪಡೆದು, ಸಾರ್ಥಕ ಜೀವನ ಸಾಗಿಸುತ್ತಿರುವ ನನ್ನ ಅಸಂಖ್ಯಾತ ವಿದ್ಯಾರ್ಥಿಗಳು ಒಂದೊಂದು ಅಮೂಲ್ಯ ರತ್ನಗಳು ಅಂತಹವರನ್ನು ತಯಾರು ಮಾಡಿದ ಕೀರ್ತಿ ಶಿಕ್ಷಕರಿಗೆ ಲಭಿಸುತ್ತದೆ, ಈ ಒಂದು ಪ್ರಪಂಚದಲ್ಲಿ ಗುರುವಿಗೆ ಇರುವ ಸ್ಥಾನ ಅತ್ಯಂತ ಅಮೂಲ್ಯವಾದದ್ದು ದೇವರು, ತಾಯಿ ನಂತರದ ಸ್ಥಾನ ಇರುವುದೇ ಗುರುವಿಗೆ ಆ ಕಾಯಕವನ್ನು ಪ್ರತಿಯೊಬ್ಬ ಶಿಕ್ಷಕರು ತಮ್ಮದೇ ಆದ ರೀತಿಯಲ್ಲಿ ಈ ಸಮಾಜದಲ್ಲಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ ಎಂದರಲ್ಲದೇ, ತಾವುಗಳು ಇಂದು ನಮಗೆ ಸಲ್ಲಿಸುತ್ತಿರುವ ಗುರುವಂದನೆ ನನ್ನ ಜೀವಮಾನದಲ್ಲಿ ನೆನಪಿಟ್ಟುಕೊಳ್ಳುವಂತಹ ಸನ್ನಿವೇಶ ಎಂದು ತಮ್ಮದೇ ಆದ ಶೈಲಿಯಲ್ಲಿ ಹೇಳಿದರು.
ಗುರುವಂದನೆ ಸ್ವೀಕರಿಸಿದ ನಂತರ ಸ್ನೇಹಮಯಿ, ಸಹೃದಯಿ ಪ್ರೊಫೆಸರ್ ಎಂದೇ ಖ್ಯಾತಿಗಳಿಸಿರುವ ಪಿ.ರಂಗನಾಯಕಲು ಅವರು ಮಾತನಾಡುತ್ತಾ ಪಾವಗಡ ಪ್ರದೇಶವು ಬರಪೀಡಿತ ಪ್ರದೇಶವಾಗಿದ್ದು ಇಲ್ಲಿನ ಜನರು ಬಹುತೇಕರು ಬಡ ವರ್ಗದ ಜನರೇ ಆಗಿದ್ದಾರೆ ಇವರುಗಳು ಸಮಾಜದಲ್ಲಿ ಏಳ್ಗೆಯನ್ನು ಸಾಧಿಸಬೇಕು ಎಂದರೇ ವಿದ್ಯೆ ಒಂದೇ ಅವರನ್ನು ಕೈ ಹಿಡಿಯುತ್ತಾ ಬರುತ್ತಿರುವುದು, ನನ್ನ ಶಿಕ್ಷಕ ವೃತ್ತಿಯನ್ನು ಪಾವಗಡದಲ್ಲಿ ಆರಂಭಿಸಿದ ದಿನದಿಂದ ಇಲ್ಲಿಯವರೆವಿಗೂ ನಾನು ಕಂಡಂತೆ ಇಲ್ಲಿ ವಿದ್ಯಾರ್ಥಿಗಳು ಹಠವಾದಿಗಳು ವಿದ್ಯೆ ಕಲಿತು ತಾವು ಏನಾದರೂ ಸಾಧಿಸಲೇ ಬೇಕು ಎಂಬ ಛಲಹೊಂದಿರುವ ವ್ಯಕ್ತಿಗಳಾಗಿರುವ ಕಾರಣದಿಂದಲೇ ಪಾವಗಡದಂತಹ ಬರಪೀಡಿತ ಪ್ರದೇಶದಲ್ಲಿ ವ್ಯಾಸಂಗ ಮಾಡಿರುವ ಅದೇಷ್ಟೋ ಅನೇಕರು ಇಂದು ದೇಶದ ನಾನಾ ಭಾಗಗಳಲ್ಲಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿ ಸೇವೆ ಸಲ್ಲಿಸುತ್ತಿದ್ದಾರೆ ತಾವುಗಳು ಇದೀಗ ೧೬ ವರ್ಷಗಳ ನಂತರ ಎಲ್ಲರೂ ಒಟ್ಟಿಗೆ ಸೇರಬೇಕು ಗುರುಗಳಿಗೆ ವಂದನೆಗಳನ್ನು ಸಮರ್ಪಿಸಬೇಕು ಎಂಬ ಆಲೋಚನೆ ತುಂಬಾ ಅನುಸರಣೀಯ ಎಂದು ತಿಳಿಸಿದರು.
ಅಧ್ಯಕ್ಷತೆಯ ಭಾಷಣವನ್ನು ಪ್ರೊಫೆಸರ್ ಶ್ರೀಮತಿ ಮಹಾಲಕ್ಷ್ಮೀ ಅವರು ಮಾತನಾಡುತ್ತಾ ನೀವುಗಳು ಓದುವ ಸಂದರ್ಭದಲ್ಲಿ ಮಾಡುತ್ತಿದ್ದ ಚೇಷ್ಠೆಗಳು, ಕೀಟಲೆಗಳು, ಆಡುತ್ತಿದ್ದ ಆಟಗಳು ಅಷ್ಟೇ ಅಲ್ಲದೇ ವಿದ್ಯೆಗೂ ಸಹ ಮಹತ್ವವನ್ನು ನೀಡಿ ತಾವು ಪ್ರಸ್ತುತದ ಸಮಾಜದಲ್ಲಿ ಪಡೆದಿರುವ ಸ್ಥಾನಮಾನ ನಿರ್ವಹಿಸುತ್ತಿರುವ ಹುದ್ದೆಗಳ ಬಗ್ಗೆ ಪ್ರತಿಯೊಬ್ಬರೂ ಒಬ್ಬರಿಗಿಂತ ಒಬ್ಬರು ವಿಭಿನ್ನವಾದ ಶೈಲಿಯಲ್ಲಿ ಹೇಳುತ್ತಿರುವುದನ್ನು ನೋಡಿ ನನಗೆ ಸಂತಸವಾಯಿತು, ಏಕೆಂದರೆ ತಾವುಗಳೆಲ್ಲಾ ಒಂದೇ ಕಡೆ ಇದ್ದು ವ್ಯಾಸಂಗ ಮಾಡಿದ ವ್ಯಕ್ತಿಗಳು ಇಂದು ಒಬ್ಬೊಬ್ಬರು ಒಂದೊಂದು ಕಡೆ ವಿಭಿನ್ನವಾದ ಸಂಸ್ಥೆಗಳು, ವಿಭಿನ್ನ ಶೈಲಿಯ ವ್ಯವಹಾರಗಳು, ವಿಭಿನ್ನ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡು ಇಂದು ಸಕಾರಾತ್ಮಕ ಜೀವನ ನಡೆಸುತ್ತಿರುವ ಬಗ್ಗೆ ಹೇಳಿಕೊಂಡಿದ್ದಲ್ಲದೇ ತಮ್ಮ ಹಿಂದಿನ ದಿನಗಳ ನೆನಪುಗಳನ್ನು ಮೆಲಕು ಹಾಕಿಕೊಳ್ಳುವ ಒಂದು ಸನ್ನಿವೇಶಕ್ಕೆ ಸಾಕ್ಷಿಗಳಾಗಿ ಎಲ್ಲರೂ ಒಟ್ಟಿಗೆ ಸೇರುವ ಸದಾವಕಾಶವನ್ನು ಕಲ್ಪಿಸಿಕೊಂಡಿದ್ದಕ್ಕೆ ತುಂಬಾ ಸಂತಸವಾಗುತ್ತಿದೆ, ಇದೇ ರೀತಿಯಲ್ಲಿ ತಾವುಗಳು ಆಗಾಗೆ ಭೇಟಿಯಾಗಿ ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುವುದು, ತಮ್ಮ ವೃತ್ತಿ, ಪ್ರವೃತ್ತಿ ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಪರಸ್ಪರ ವಿನಿಮಯ ಮಾಡಿಕೊಂಡು ಸಮಾಜದಲ್ಲಿ ಸುಬುದ್ಧರಾಗಿ ಜೀವನ ನಡೆಸಿ ಎಂದು ತಮ್ಮ ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಶಿಕ್ಷಕರುಗಳಾದ ಶ್ರೀಮತಿ ರಾಧಿಕ, ಶ್ರೀಮತಿ ಭವ್ಯ, ಬಾಲವರ್ಧನ್, ಮಂಜುನಾಥ್, ನರಸಿಂಹಮೂರ್ತಿ, ಮುರಳಿ, ಸಿದ್ಧಪ್ಪ, ಸೇರಿದಂತೆ ಕಾಲೇಜಿನ ಗ್ರಂಥಪಾಲಕರು, 2006-2009ನೇ ಸಾಲಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.