ತುಮಕೂರು: ಹೇಮಾವತಿ ಜಲಾಶಯದಿಂದ ತುಮಕೂರು ಶಾಖಾ ನಾಲೆಗೆ ಪೂರ್ಣ ಪ್ರಮಾಣದ ನೀರು ಹರಿಸಿ ಜಿಲ್ಲೆಯ ಕೆರೆಗಳನ್ನು ತುಂಬಿಸಬೇಕು ಎಂದು ಸರ್ಕಾರ ಹಾಗೂ ಹೇಮಾವತಿ ನಾಲಾವಲಯದ ಅಧಿಕಾರಿಗಳನ್ನು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ. ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಹೇಮಾವತಿ ನಾಲೆಯ ವಿನ್ಯಾಸಿತ ಸಾಮರ್ಥ್ಯ ೧೦೫೦ ಕ್ಯೂಸೆಕ್ಸ್ ಇದ್ದರೂ ಸುಮಾರು ೩೫೦ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಜಲಾಶಯ ತುಂಬಿರುವ ಸಂದರ್ಭದಲ್ಲಿ ಜಿಲ್ಲೆಯ ಪಾಲಿನ ಪೂರ್ಣ ಪ್ರಮಾಣದ ನೀರು ಹರಿಸಲು ಅಧಿಕಾರಿಗಳಿಗೆ ಇಚ್ಛಾಶಕ್ತಿ ಕೊರತೆ ಇದೆ. ಜಿಲ್ಲೆಯ ಜನಪ್ರತಿನಿಧಿಗಳು ಅಧಿಕಾರಿಗಳ ಕಿವಿ ಹಿಂಡಿ ಹೆಚ್ಚಿನ ನೀರು ಹರಿಸಲು ಆಸಕ್ತಿ ತೋರಬೇಕು ಎಂದು ಜಿಲ್ಲೆಯ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ, ಹೇಮಾವತಿ ನಾಲಾವಲಯದ ಮುಖ್ಯ ಇಂಜಿನಿಯರ್ ಅವರಿಗೆ ಮನವಿ ಮಾಡಿರುವುದಾಗಿ ಹೇಳಿದರು.
ಗೋರೂರು ಹೇಮಾವತಿ ಜಲಾಶಯ ಭರ್ತಿಯಾಗಿದ್ದರೂ ಜಿಲ್ಲೆಗೆ ಸಮರ್ಪಕ ಪ್ರಮಾಣದಲ್ಲಿ ನೀರನ್ನು ಪಡೆಯುತ್ತಿಲ್ಲ. ಕಳೆದ ೧೫ ದಿನಗಳಿಂದ ತುಮಕೂರು ನಾಲೆಯಲ್ಲಿ ಹೇಮಾವತಿ ನೀರು ಹರಿಯುತ್ತಿದೆ. ಕಳೆದ ತಿಂಗಳು ೨೭ರಂದು ತಾವು ಬುಗಡುನಹಳ್ಳಿ ರೆಗ್ಯೂಲೇಟರ್ ಬಳಿ ಭೇಟಿ ಮಾಡಿ ನೋಡಿದಾಗ ಅಲ್ಲಿರುವ ಮಾಪನದಲ್ಲಿ ೧.೭ ಮೀಟರ್ ಎತ್ತರದಲ್ಲಿ ನೀರು ಹರಿಯುತ್ತಿದೆ, ಅಂದರೆ ಸುಮಾರು ೩೫೦ ಕ್ಯೂಸೆಕ್ಸ್ ಆಗಿದೆ. ಈ ಪ್ರಮಾಣದಲ್ಲಿ ಹರಿದರೆ ನಾಲೆಯ ಕೊನೆ ಭಾಗಕ್ಕೆ ನೀರು ಹರಿಯುವುದಿಲ್ಲ ಎಂದು ಹೇಳಿದರು.
ಪ್ರತಿ ವರ್ಷ ನಮ್ಮ ಪಾಲಿನ ನೀರು ಪಡೆಯುವಲ್ಲಿ ವಿಫಲರಾಗುತ್ತಿದ್ದೇವೆ. ನಾಲೆಯ ಹರಿಯುವ ಸಾಮರ್ಥ್ಯ ಹೆಚ್ಚಾಗಿದ್ದರೂ ಹೇಮಾವತಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದಲೋ ಇಚ್ಛಾಶಕ್ತಿ ಕೊರತೆಯಿಂದಲೋ ಪೂರ್ಣ ನೀರು ಪಡೆಯಲಾಗುತ್ತಿಲ್ಲ. ಈ ಬಾರಿ ಜಲಾಶಯ ತುಂಬಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದರೆ ನಾಲೆಯ ಕೊನೆಯ ಭಾಗಗಳಿಗೂ ನೀರು ಹರಿಸಲು ಸಾಧ್ಯವಿದೆ. ಆದರೆ ಜಿಲ್ಲೆಯ ಇಬ್ಬರು ಸಚಿವರು, ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ, ಅಧಿಕಾರಿಗಳ ಮೇಲೆ ಒತ್ತಡ ತಂದು ನೀರು ಹರಿಸಿಕೊಳ್ಳುತ್ತಿಲ್ಲ ಎಂದು ಆಪಾದಿಸಿದರು.
ಇಷ್ಟು ದಿನಗಳಾದರೂ ಜಿಲ್ಲೆಯ ರೈತರ ಒಂದು ಎಕರೆ ಜಮೀನಿಗೆ ನೀರು ಕೊಡಲು ಸಾಧ್ಯವಾಗಿಲ್ಲ. ಈ ವೇಳೆಗೆ ನೀರು ಹರಿಸಿ ಎಲ್ಲಾ ಕೆರೆಗಳಿಗೆ ತುಂಬಿಸಿದ್ದರೆ ಅಂತರ್ಜಲಮಟ್ಟ ಹೆಚ್ಚಾಗಿ ರೈತರಿಗೆ ಸಹಾಯವಾಗುತ್ತಿತ್ತು. ಎಕ್ಸ್‌ಪ್ರೆಸ್ ಕೆನಾಲ್ ನಿರ್ಮಾಣಕ್ಕೆ ಮುಂದಾಗಿರುವವರು ಜಿಲ್ಲೆಯ ಹೇಮಾವತಿ ನಾಲೆಯ ಉಳಿದ ಭಾಗದ ಆಧುನೀಕರಣ, ಮುಚ್ಚಿಹೋಗುತ್ತಿರುವ ಉಪನಾಲೆಗಳನ್ನು ತೆರವುಗೊಳಿಸಿ ನೀರು ಹರಿಸಲು ಕಾಳಜಿ ವಹಿಸಲಿ ಎಂದು ಹೇಳಿದ ಸೊಗಡು ಶಿವಣ್ಣ, ನಾಲೆಯಲ್ಲಿ ಪೂರ್ಣ ಪ್ರಮಾಣದ ನೀರು ಹರಿಯದೆ ಕೊನೆಯ ಭಾಗಕ್ಕೆ ನೀರು ಹರಿಯುತ್ತಿಲ್ಲ ಎಂದು ಅಧಿಕಾರಿಗಳು ಹೊಣಗೇಡಿತನದ ಹೇಳಿಕೆ ನೀಡುವುದನ್ನು ಬಿಟ್ಟು ಪೂರ್ಣ ಪ್ರಮಾಣದ ನೀರು ಹರಿಸಲು ಆಗ್ರಹಿಸಿದರು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ನಗರದ ಹೇಮಾವತಿ ನಾಲಾವಲಯದ ಮುಖ್ಯ ಇಂಜಿನಿಯರ್ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಕೆ.ಪಿ.ಮಹೇಶ್, ಪ್ರಭಾಕರ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.