ಗುಬ್ಬಿ : ಭಕ್ತ ಕನಕದಾಸರು ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲ ಜಾತಿ ಸಮುದಾಯಗಳ ಕೇಂದ್ರವಾಗಿದ್ದಾರೆ. ಅವರ ಕೀರ್ತನೆಗಳನ್ನು ಇಂದಿನ ಪೀಳಿಗೆಯ ಜನತೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಪ್ರಭುವನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ ಭಕ್ತ ಕನಕದಾಸರ ಪುತ್ತಳಿ ಅನಾವರಣ ಹಾಗೂ 538ನೇ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತವಾಗಿ ಈಗಿನ ಸಾಮಾಜಿಕ ವ್ಯವಸ್ಥೆಯನ್ನು ನೋಡಿದರೆ ಅಭಿವೃದ್ಧಿಯತ್ತ ಸಾಗುತ್ತಿದ್ದರೂ ಜನರು ಸಂಕುಚಿತ ಮನೋಭಾವನೆಯಿಂದ ಹೊರಬರಬೇಕಿದೆ. ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಲು ಕನಕದಾಸರು ಭಕ್ತಿ ಮಾರ್ಗದ ಮೂಲಕ ಜಾಸ್ತಿ ವ್ಯವಸ್ಥೆಯ ವೈಪರೀತ್ಯಗಳನ್ನ ಖಂಡಿಸಿದರು. ಸಮಾಜಕ್ಕೆ ನವ ಚೇತನವನ್ನು ನೀಡುವಂತಹ ಕೀರ್ತನೆಗಳನ್ನು ರಚಿಸಿ ಹಾಡುಗಳ ಮೂಲಕ ಹೇಳಿಕೊಂಡು ಜಾಗೃತಿ ಮೂಡಿಸಿದರು. ಆ ನಿಟ್ಟಿನಲ್ಲಿ ಕನಕದಾಸರನ್ನ ಪ್ರತಿಯೊಬ್ಬರು ನೆನಪು ಮಾಡಿಕೊಳ್ಳಬೇಕಿದೆ ಎಂದರು.

ಶ್ರೀ ಬಿಂದು ಶೇಖರ ಒಡೆಯರ್ ಸ್ವಾಮೀಜಿ ಮಾತನಾಡಿ, ಕನಕ ಸಂಘ ಎಂದರೆ ಜನ ಸಂಘ. ಮೇಲುಕೀಲೆಂಬ ಭೇದವಿಲ್ಲದೆ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ದಾಸರ ಚಿಂತನೆಗಳು ಸಮಾಜದಲಿನ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಿದೆ. ಶಿಕ್ಷಣ ಆರೋಗ್ಯ ರಸ್ತೆ ಕುಡಿಯುವ ನೀರು ಮೊದಲಾದ ಮೂಲಭೂತ ಹಕ್ಕುಗಳು ಸಮಾಜದಲ್ಲಿ ಎಲ್ಲರಿಗೂ ಸಿಗುವಂತಾಗಬೇಕು ಆಗ ಮಾತ್ರ ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕನಕ ಕುರುಬರ ಸಂಘದ ಗೌರವ ಅಧ್ಯಕ್ಷ ಚಂದ್ರಪ್ಪ ಅಧ್ಯಕ್ಷ ಬಸವರಾಜು, ಪದಾಧಿಕಾರಿಗಳಾದ ರಮೇಶ್, ಕೃಷ್ಣಮೂರ್ತಿ, ರಮೇಶ್, ರಾಮಣ್ಣ, ಗೋವಿಂದರಾಜು, ತೋಪಣ್ಣ, ರಂಗನಾಥ್, ಪಾಂಡುರಂಗಯ್ಯ, ಶಾಂತಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.