ರೇಬಿಸ್ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಿದ ಪಶು ಸಂಗೋಪನಾ ಇಲಾಖೆ.

 

ಗುಬ್ಬಿ:- ರೇಬಿಸ್ ವೈರಾಣು ಬಗ್ಗೆ ಜನಜಾಗೃತಿ ಹಾಗೂ ಉಚಿತ ಲಸಿಕೆ ಅಭಿಯಾನ ಕಾರ್ಯಕ್ರಮವನ್ನು ಸೋಮವಾರ ಪಶು ಸಂಗೋಪನಾ ಇಲಾಖೆ ಆಯೋಜಿಸಿ ಸಾಕು ನಾಯಿ, ಬೆಕ್ಕುಗಳು ಹಾಗೂ ಬೀದಿ ನಾಯಿಗಳಿಗೆ ಉಚಿತ ಲಸಿಕೆ ನೀಡಿದರು.

 

 

ಪಟ್ಟಣ ಪಂಚಾಯತಿ ಅಧ್ಯಕ್ಷೆ ಆಯಿಷಾ ತಾಸೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗುಬ್ಬಿ ನ್ಯಾಯಾಲಯದಲ್ಲಿ ಓರ್ವ ಮಹಿಳೆ ಮೇಲೆ ನಾಯಿ ದಾಳಿ ನಡೆಸಿ ತೀವ್ರ ಗಾಯಗೊಳಿಸಿತ್ತು. ಈ ಹಿನ್ನಲೆ ವ್ಯಾಪಕ ಚರ್ಚೆ ನಡೆದು ಬೀದಿ ನಾಯಿಗಳಿಗೆ ವ್ಯಾಕ್ಸಿನ್ ಹಾಗೂ ಎಬಿಸಿ ಶಸ್ತ್ರ ಚಿಕಿತ್ಸೆಗೆ ಹಣ ಮೀಸಲಿಟ್ಟು ಈಗಾಗಲೇ ನಾಯಿಗಳಿಗೆ ಲಸಿಕೆ ಹಾಕಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪಶು ಇಲಾಖೆ ಸಾಕಷ್ಟು ಸಹಕಾರ ನೀಡಿದೆ ಎಂದರು.

 

 

 

ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಬೀದಿ ನಾಯಿಗಳ ಹಾವಳಿಗೆ ನಾಗರೀಕರ ತಾಳ್ಮೆ ಕೆಟ್ಟಿತ್ತು. ನಾಯಿಗಳ ಸಂಖ್ಯೆ ಗಣತಿ ನಡೆಸಿ ಪಟ್ಟಣದಲ್ಲಿನ ಎಲ್ಲಾ ಬಡಾವಣೆಗಳಲ್ಲಿ ನಾಯಿಗಳ ಹಿಡಿದು ಅದಕ್ಕೆ ಶೆಲ್ಟರ್ ಒದಗಿಸಿ ನೀರು ಆಹಾರ ಹಾಕಲಾಗಿದೆ. ರೇಬಿಸ್ ರೋಗದ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕಿದೆ. ಸಾಕು ನಾಯಿ ಅಥವಾ ಬೆಕ್ಕು ಸಾಕಾಣಿಕೆ ಖುಷಿ ಕೊಡುತ್ತದೆ. ಆದರೆ ಸ್ವಲ್ಪ ಎಚ್ಚರಿಕೆ ವಹಿಸಿ ಪ್ರತಿ ವರ್ಷ ವ್ಯಾಕ್ಸಿನ್ ಕೊಡಿಸಬೇಕು ಎಂದ ಅವರು ಲಯನ್ಸ್ ಸಂಸ್ಥೆ ಈ ಅಭಿಯಾನಕ್ಕೆ ಕೈ ಜೋಡಿಸಿದೆ ಎಂದರು.

 

 

 

ಶ್ವಾನ ಪ್ರಿಯ ಜಿ.ಆರ್.ರಮೇಶಗೌಡ ಮಾತನಾಡಿ ನಾಯಿಗಳು ಮನುಷ್ಯನ ಸಹಪಾಠಿ. ನಿಯತ್ತಿನ ಪ್ರಾಣಿ ನಾಯಿ ಮನುಷ್ಯನಿಗೆ ತೋರುವ ಪ್ರೀತಿ ಅಪಾರ. ಒಂದು ದಿನ ಆಹಾರ ನೀಡಿದರೆ ಪ್ರಾಣ ನೀಡುವವರೆಗೆ ನಿಯತ್ತು ತೋರುತ್ತದೆ. ರೇಬಿಸ್ ವೈರಾಣು ನಾಯಿಗಳಲ್ಲಿ ಕಾಣುವ ಮುನ್ನ ವ್ಯಾಕ್ಸಿನ್ ಪ್ರತಿ ವರ್ಷ ಹಾಕಿಸುವುದು ಸೂಕ್ತ. ಇದರ ಜೊತೆಗೆ ಮನೆಯ ಸದಸ್ಯರು ವ್ಯಾಕ್ಸಿನ್ ಪಡೆದುಕೊಳ್ಳುವುದು ಇನ್ನೂ ಉತ್ತಮ ಎಂದರು.

 

 

 

ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಸುರೇಶ್ ಮಾತನಾಡಿ ರೇಬಿಸ್ ವೈರಾಣು ಮನುಷ್ಯನ ಮೆದುಳಿಗೆ ತಲುಪಿದರೆ ಹುಚ್ಚು ಹಿಡಿದು ಸಾವು ಖಚಿತವಾಗುತ್ತದೆ. ಈ ಹಿನ್ನಲೆ ನಾಯಿಗಳು ಕಡಿದರೆ ಆ ಜಾಗವನ್ನು ಇಪ್ಪತ್ತು ನಿಮಿಷಗಳ ಕಾಲ ಸೋಪಿನಿಂದ ತೊಳೆಯಬೇಕು. ನಂತರ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಬೇಕು. ಈ ಜತೆಗೆ ಬೀದಿ ನಾಯಿಗಳಿಗೆ ವ್ಯಾಕ್ಸಿನ್ ಕೊಡುವ ಆಲೋಚನೆ ಮಾಡಿದ ಸ್ಥಳೀಯ ಪಟ್ಟಣ ಪಂಚಾಯಿತಿ ನಾಯಿಗಳನ್ನು ಹಿಡಿದು ಅದಕ್ಕೆ ಉತ್ತಮ ಸೌಲಭ್ಯ ನೀಡಿರುವುದು ರಾಜ್ಯದಲ್ಲೇ ಉತ್ತಮ ಎನಿಸಿದೆ ಎಂದರು.

 

 

 

ಕಾರ್ಯಕ್ರಮದಲ್ಲಿ ನಾಯಿಗಳಿಗೆ ವ್ಯಾಕ್ಸಿನ್ ನೀಡಿ ಅತ್ಯುತ್ತಮವಾಗಿ ಆರೋಗ್ಯವಾಗಿ ಸಾಕಿರುವ ನಾಯಿಗಳಿಗೆ ಬಹುಮಾನ ನೀಡಿದರು. ಗುಬ್ಬಿಯ ಚನ್ನಬಸವಣ್ಣ ಸಾಕಿರುವ ಸೋನು ಎಂಬ ನಾಯಿ ಪ್ರಥಮ ಸ್ಥಾನ ಪಡೆಯಿತು. ನಂತರ ಪಟ್ಟಣ ಪಂಚಾಯಿತಿ ಹಿಡಿದ ನಾಯಿಗಳಿಗೆ ವ್ಯಾಕ್ಸಿನ್ ಹಾಕಲಾಯಿತು.

 

 

 

ಕಾರ್ಯಕ್ರಮದಲ್ಲಿ ಪಪಂ ಸದಸ್ಯ ಮಹಮ್ಮದ್ ಸಾದಿಕ್, ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರಸ್ವಾಮಿ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಸೇರಿದಂತೆ ಪಶು ಇಲಾಖೆಯ ಎಲ್ಲಾ ಸಿಬ್ಬಂದಿಗಳು ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!