ಜಿಲ್ಲೆಯ ವಿವಿಧೆಡೆ ಮಕ್ಕಳ ರಕ್ಷಣಾ ಆಯೋಗ ದಿಢೀರ್ ಬೇಟಿ

ತುಮಕೂರು ಜಿಲ್ಲೆಯ ಶಾಲೆಗಳು, ಗ್ರಾಮ ಪಂಚಾಯ್ತಿ, ವಸತಿ ನಿಲಯ ಹಾಗೂ ಪೊಲೀಸ್ ಠಾಣೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ ದಿಢೀರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗೆ ತರಾಟೆ 
ಗ್ರಾಮಸ್ಥರು ಹಾಗೂ ಪೋಷಕರ ದೂರಿನ ಹಿನ್ನೆಲೆಯಲ್ಲಿ ಸಿರಾ ತಾಲೂಕಿನ ಕಠಾವೀರನಹಳ್ಳಿಯಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಬೇಟಿ ನೀಡಿದ ಅವರು ಕಟ್ಟಡ ಶಿಥಿಲಾವಸ್ಥೆ ತಲುಪಿರುವುದು, ವಸತಿ ನಿಲಯಕ್ಕೆ ರಕ್ಷಣಾ ಗೋಡೆ ನಿರ್ಮಾಣವಾಗಿಲ್ಲದಿರುವುದು, ಮಕ್ಕಳಿಗೆ ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಇಲ್ಲದಿರುವುದು, ಎಲ್ಲಕ್ಕೂ ಮಿಗಿಲಾಗಿ ಮಕ್ಕಳಿಗೆ ಸ್ನಾನದ ಕೊಠಡಿಗಳೇ ಇಲ್ಲದಿರುವ ಹಾಗೂ ಸ್ನಾನದ ಕೊಠಡಿ ಕಾಮಗಾರಿಯ ಬಿಲ್ ಬಾಕಿ ಇರುವುದರಿಂದ ಕಾಮಗಾರಿ ಪೂರ್ಣವಾಗದೆ ಮಕ್ಕಳು ಚಳಿಯಲ್ಲೂ ತಣ್ಣೀರಿನಲ್ಲಿ ಸ್ನಾನ ಮಾಡಬೇಕಾದ ದುಸ್ಥಿತಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಒಂದು ವಾರದಲ್ಲಿ ಸರಿಪಡಿಸಿ ವರದಿ ಮಾಡುವಂತೆ ಸೂಚಿಸಿದರು.
ಪಿಡಿಓ ಕೆಲಸಕ್ಕೆ ಆಯೋಗ ಮೆಚ್ಚುಗೆ  
ನಂತರ ಶೀಬಿ ಅಗ್ರಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗ್ರಾಮ ಪಂಚಾಯ್ತಿಗೆ ಬೇಟಿನೀಡಿದ ಸದಸ್ಯರು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅಂಗನವಾಡಿ ಹಾಗೂ ಶಾಲೆಗಳಿಗೆ ಶೌಚಾಲಯ ಹಾಗೂ ತಡೆಗೋಡೆ  ನಿರ್ಮಾಣ ಮಾಡಿರುವುದು, ಪಂಚಾಯ್ತಿ ವ್ಯಾಪ್ತಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ರಚಿಸಿರುವುದು ಸೇರಿದಂತೆ ಮಕ್ಕಳ ಪರವಾಗಿ ಕೆಲಸ ಮಾಡುತ್ತಿರುವ ಶೀಬಿಅಗ್ರಹಾರ ಗ್ರಾಮ ಪಂಚಾಯ್ತಿಯನ್ನು ಅಭಿನಂಧಿಸಿದರು.
ಓವರ್ ಟ್ಯಾಂಕ್ ತೆರವಿಗೆ ಸೂಚನೆ 
ತುಮಕೂರು ತಾಲ್ಲೂಕು ಊರುಕೆರೆಯ ಸರ್ಕಾರಿ ಪ್ರೌಢಶಾಲೆಗೆ ಬೇಟಿ ನೀಡಿ ಗ್ರಂಥಾಲಯ, ಪ್ರಯೋಗಾಲಯಗಳನ್ನು ವೀಕ್ಷಿಸಿದರು. ಎಸ್.ಡಿ.ಎಂ.ಸಿ ಸಭಾ ನಡಾವಳಿಗಳು, ಶಾಲಾ ಆಭಿವೃದ್ಧಿ ಯೋಜನೆ, ಮಕ್ಕಳ ರಕ್ಷಣಾ ನೀತಿಯ ದಾಖಲೆಗಳನ್ನು ಪರಿಶೀಲಿಸಿದರು. ಮಕ್ಕಳ ಜೊತೆಗೆ ಸಂವಾದ ನಡೆಸಿ ಮಕ್ಕಳ ಸಹಾಯವಾಣಿ ಸಂಖ್ಯೆಯ ಮಹತ್ವವನ್ನು ತಿಳಿಸಿದರು. ಮಕ್ಕಳೊಟ್ಟಿಗೆ ಮದ್ಯಾನದ ಬಿಸಿಯೂಟ ಸೇವಿಸಿ ಪರಿಶೀಲನೆ ನಡೆಸಿದರು. ಶಾಲೆಯ ಮುಂಬಾಗವೇ ಶಿಥಿಲಾವಸ್ಥೆ ತಲುಪಿ ಬೀಳುವ ಹಂತದಲ್ಲಿರುವ ನೀರಿವ ಓವರ್ ಟ್ಯಾಂಕ್ ಅನ್ನು ತೆರವು ಗೊಳಿಸುವಂತೆ ಊರುಕೆರೆ ಗ್ರಾಮ ಪಂಚಾಯ್ತಿ ಪಿಡಿಓ ರವರಿಗೆ ಸೂಚಿಸಿದರು.
ಮಕ್ಕಳ ವಿಶೇಷ ಪೊಲೀಸ್ ಘಟಕದ ಪರಿಶೀಲನೆ   
ಸಂಜೆ ತುಮಕೂರು ನಗರದ ಹೊಸ ಬಡಾವಣೆ ಪೊಲೀಸ್ ಠಾಣೆಗೆ ಬೇಟಿನೀಡಿ ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಮಕ್ಕಳ ಪ್ರಕರಣಗಳ ರಿಜಿಸ್ಟಾರ್, ತೆರೆದ ಮನೆ ಕಾರ್ಯಕ್ರಮದ ಅನುಷ್ಟಾನ, ಮಕ್ಕಳ ಸಂಬAಧಿತ ಇಲಾಖೆಗಳ ಮಾಹಿತಿ ಪ್ರದರ್ಶನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇಲ್ಲಿ ಗಮನಿಸಿದ ಅಂಶಗಳನ್ನು ತುಮಕೂರು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಅನುಷ್ಠಾನ ಮಾಡುವಂತೆ ಸೂಚಿಸಿದರು.
ಬೇಟಿಯ ಸಮಯದಲ್ಲಿ ತುಮಕೂರು ಪೊಲೀಸ್ ಉಪಾಧೀಕ್ಷಕರಾದ ಶ್ರೀ ಚಂದ್ರಶೇಖರ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ಚೇತನ್ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗೌತಮ್, ಕೆಂಪರಾಜು, ಶ್ವೇತಾ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!