ಆರ್‌ಎಂಆರ್ ಟ್ರಸ್ಟ್‌ನಿಂದ ಹಳ್ಳಿಕಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ತುಮಕೂರು: ಉತ್ತಮ ವ್ಯಕ್ತಿತ್ವ, ಬದುಕು ರೂಪಿಸಿಕೊಳ್ಳಲು ಶಿಕ್ಷಣ ಬಹಳ ಮುಖ್ಯ. ಪ್ರಸ್ತುತ ಸಂದರ್ಭದಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚನ ಮಹತ್ವ ಕೊಡುವುದು ಅಗತ್ಯವಾಗಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಹೇಳಿದರು. ನಗರದಲ್ಲಿ ಶನಿವಾರ ನಡೆದ ಆರ್‌ಎಂಆರ್ ಹಳ್ಳಿಕಾರ ಫೌಂಡೇಷನ್ ಟ್ರಸ್ಟ್‌ನಿಂದ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಹಳ್ಳಿಕಾರ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಚಿವರು, ಆರ್‌ಎಂಆರ್ ಹಳ್ಳಿಕಾರ ಫೌಂಡೇಷನ್ ಟ್ರಸ್ಟ್ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.

 

 

ಹಳ್ಳಿಕಾರ ಸಮುದಾಯದವರು ಸ್ವಾಭಿಮಾನಿಗಳು, ಶ್ರಮಜೀವಿಗಳು. ಯಾರ ಮುಂದೆಯೂ ಕೈ ಚಾಚುವುದಿಲ್ಲ, ತಮ್ಮಲ್ಲಿರುವುದನ್ನು ಕಷ್ಟದಲ್ಲಿರುವವರಿಗೆ ಕೊಟ್ಟು ಸಹಾಯ ಮಾಡುವಂತಹ ಗುಣ ಉಳ್ಳವರು. ಟ್ರಸ್ಟ್‌ನ ಅಧ್ಯಕ್ಷರಾದ ಕೆ.ಎಂ.ನಾಗರಾಜು ಅವರು ಸಮಾಜ ಸೇವಾಕಾರ್ಯಗಳಲ್ಲಿ ತೊಡಗಿಕೊಂಡು ಅಶಕ್ತರಿಗೆ ನೆರವಾಗುತ್ತಾ ಬಂದಿದ್ದಾರೆ. ಈಗ ಸಮುದಾಯದ ವಿದ್ಯಾರ್ಥಿಗಳಿಗೆ ಕೋಟ್ಯಾಂತರ ರೂ.ಗಳ ವಿದ್ಯಾರ್ಥಿವೇತನ ನೀಡುತ್ತಾ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಸಹಾಯ ಮಾಡುತ್ತಾ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಮಕ್ಕಳು ಈ ಅವಕಾಶವನ್ನು ಸಬ್ಬಳಕೆ ಮಾಡಿಕೊಂಡು ಉನ್ನತ ಶಿಕ್ಷಣ ಪಡೆದು, ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದರೆ ಇವರಿಗೂ ಸಂತಸವಾಗುತ್ತದೆ ಎಂದರು.

 

 

 

 

ಹಳ್ಳಿಕಾರ ಸಮಾಜದಿಂದ ಶಿಕ್ಷಣ ಸಂಸ್ಥೆ, ವಿದ್ಯಾರ್ಥಿನಿಲಯ, ಸಮುದಾಯ ಭವನ ನಿರ್ಮಾಣಕ್ಕೆ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಹಿರಿಯೂರು, ಚಳ್ಳಕೆರೆಯಲ್ಲಿ ಮೂರು ಎಕರೆ ಜಮೀನು ನೀಡಬೇಕು ಎಂದು ಕೋರಿದ್ದಾರೆ. ಖಂಡಿತಾ ಜಮೀನು ಕೊಟ್ಟು ಕಟ್ಟಡಗಳ ನಿರ್ಮಾಣಕ್ಕೆ ಅನುದಾನವನ್ನೂ ನೀಡುವುದಾಗಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು. ಚಳ್ಳಕೆರೆ ಕ್ಷೇತ್ರದ ಶಾಸಕ ರಘುಮೂರ್ತಿ ಅವರು, ಸಮಾಜ ಸುಧಾರಣೆಗೆ ಶಿಕ್ಷಣವೇ ಅಸ್ತ್ರ. ಹಿಂದುಳಿದಿರುವ ಹಳ್ಳಿಕಾರ ಸಮುದಾಯದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಟ್ರಸ್ಟ್ ಅಧ್ಯಕ್ಷ ನಾಗರಾಜು ಅವರ ಕುಟುಂಬ ಸಹಾಯಾಸ್ತ ಚಾಚಿದೆ. ಯಾವುದೇ ಸಮಾಜದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಇಷ್ಟೊಂದು ನೆರವು ದೊರಕಿಲ್ಲ ಎಂದು ಅಭಿನಂದಿಸಿದರು.

 


ಮಾಜಿ ಸಚಿವ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಮಾತನಾಡಿ, ರಾಜಕೀಯ ಅಧಿಕಾರ ಪಡೆಯುವ ಅವಕಾಶ ಬಂದರೂ ಕೆ.ಎಂ.ನಾಗರಾಜು ಅವರು ತಿರಸ್ಕಾರ ಮಾಡಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅನೇಕ ನಾಯಕರನ್ನು ತಯಾರು ಮಾಡಿರುವ ಇವರು ರಾಜಕೀಯ ಅಧಿಕಾರದಿಂದ ಹೊರಗುಳಿದಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುವುದನ್ನು ತಮ್ಮ ಸೇವೆಯ ಆದ್ಯತೆ ಮಾಡಿಕೊಂಡಿರುವುದು ಅಭಿನಂದನೀಯ ಎಂದರು. ದೇವರು ಹಲವರಿಗೆ ಸಂಪತ್ತು ಕೊಡುತ್ತಾನೆ, ಆದರೆ ಅವರು ದಾನಧರ್ಮ ಮಾಡುವ ಮನಸ್ಸು ಮಾಡುವುದಿಲ್ಲ. ನಾಗರಾಜು ಅವರಿಗೆ ಎರಡೂ ಭಾಗ್ಯ ಇವೆ. ಅದನ್ನು ಅವರು ಸಮಾಜದ ಬೆಳವಣಿಗೆಗಾಗಿ ವಿನಿಯೋಗಿಸುತ್ತಿದ್ದಾರೆ. ವಿದ್ಯಾರ್ಥಿ ವೇತನ ಪಡೆದ ಮಕ್ಕಳು ಅದು ಸಾರ್ಥಕವಾಗುವ ರೀತಿ ಉನ್ನತ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು.

 

 

 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಕೆ.ಎಂ.ನಾಗರಾಜು ಮಾತನಾಡಿ, ವಿದ್ಯೆಯನ್ನು ಶ್ರದ್ಧೆ, ಆಸಕ್ತಿಯಿಂದ ಕಲಿತು ತಮ್ಮ ಕುಟುಂಬ, ಮನೆತನದ ಗೌರವವನ್ನು ಎತ್ತಿಹಿಡಿಯಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಅಗತ್ಯವಿದ್ದವರಿಗೆ ಟ್ರಸ್ಟ್‌ನಿಂದ ವ್ಯವಸ್ಥೆ ಮಾಡುತ್ತೇವೆ. ಹಿಂದುಳಿದ ವರ್ಗದವರಿಗೆ ಅವಕಾಶಗಳು ಕಮ್ಮಿ ಇದ್ದಾಗ ದೇವರಾಜ ಅರಸು, ನಂತರ ವೀರಪ್ಪ ಮೋಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ವರ್ಗದವರಿಗೆ ಶಕ್ತಿ ತುಂಬುವ ಪ್ರಯತ್ನ ಮಾಡಿದರು ಎಂದು ಹೇಳಿದರು.

 

 

ಈ ವೇಳೆ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ೨೩೯ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂ. ನಂತೆ ಒಟ್ಟು ೧೧.೯೦ ಲಕ್ಷ ರೂ.ಗಳ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಾಂಗ್ರೆಸ್ ಮುಖಂಡ ಸಂಜಯ್ ಜಯಚಂದ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಚಿಕ್ಕನಾಯಕನಹಳ್ಳಿ ಪುರಸಭೆ ಮಾಜಿ ಅಧ್ಯಕ್ಷ ನಾರಾಯಣಮೂರ್ತಿ, ಟ್ರಸ್ಟ್ ಕಾರ್ಯದರ್ಶಿ ಮಹಾಲಿಂಗಯ್ಯ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!