ಗುಬ್ಬಿ ಪಟ್ಟಣದ ರಸ್ತೆಗಳಲ್ಲಿ ಸಂಚಾರಕ್ಕೆ ಸಾರ್ವಜನಿಕರ ಅತ್ಯಮೂಲ್ಯ ಸಲಹೆ

ಗುಬ್ಬಿ: ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಅವಶ್ಯ ಸಲಹೆ ಸೂಚನೆ ನೀಡುವಂತೆ ನಡೆದ ಸಾರ್ವಜನಿಕ ಸಭೆಯಲ್ಲಿ ಅತ್ಯಮೂಲ್ಯ ಸಲಹೆಗಳನ್ನು ನೀಡಿ ಒತ್ತುವರಿ ತೆರವು, ಏಕ ಮುಖ ಸಂಚಾರ, ಫುಟ್ ಪಾತ್ ಅಂಗಡಿ ತೆರವು ಹೀಗೆ ಅನೇಕ ವಿಚಾರ ಪ್ರಸ್ತಾಪ ಮಾಡಿದರು.

 

 

 

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪಪಂ ಅಧ್ಯಕ್ಷೆ ಆಯಿಷಾ ತಾಸೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಚುನಾಯಿತ ಸದಸ್ಯರು ಹಾಗೂ ನಾಮಿನಿ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

 

 

 

ಪಟ್ಟಣದ ಎಂಜಿ ರಸ್ತೆ ಹಾಗೂ ಹೆದ್ದಾರಿ ರಸ್ತೆಯಲ್ಲಿನ ಫುಟ್ ಪಾತ್ ಒತ್ತುವರಿ ಬಗ್ಗೆ ಗಂಭೀರ ಚರ್ಚೆ ನಡೆದು ವಾರಕ್ಕೊಮ್ಮೆ ನಡೆಯುವ ಸಂತೆ ದಿನ ಎಪಿಎಂಸಿ ರಸ್ತೆಯನ್ನು ಏಕ ಮುಖ ಸಂಚಾರ ವ್ಯವಸ್ಥೆಗೆ ಒತ್ತಾಯ ಮಾಡಿದರು. ಸಂತೆ ದಿನ ಸೇರಿದಂತೆ ಎಲ್ಲಾ ದಿನಗಳಲ್ಲಿ ರಸ್ತೆ ಬದಿ ತರಕಾರಿ, ಹಣ್ಣು ಹೂವು ಮಾರಾಟಗಾರರು ರಸ್ತೆಯನ್ನು ಆಕ್ರಮಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸುವ ಕೆಲಸ ಮಾಡಲಾಗುತ್ತಿಲ್ಲ. ಹೊಟ್ಟೆಪಾಡಿನ ಬದುಕು ಬೀದಿ ಬದಿ ವ್ಯಾಪಾರಕ್ಕೆ ಅಡ್ಡಿ ಮಾಡಲು ಮನಸ್ಸಿಲ್ಲದೆ ಈಗ ಸಂಚಾರಕ್ಕೆ ಕುತ್ತು ಬಂದಿದೆ ಎಂದರು.

 

 

 

 

ಪಟ್ಟಣದ ಶಾಲಾ ಕಾಲೇಜು ಆರಂಭ ಹಾಗೂ ಮುಕ್ತಾಯ ವೇಳೆ ಸುಮಾರು ಎರಡು ಸಾವಿರ ಮಕ್ಕಳು ಹೆದ್ದಾರಿ ಬದಿಯಲ್ಲಿ ನಡೆದು ಬಸ್ ಸ್ಟ್ಯಾಂಡ್ ಕಡೆ ತೆರಳುತ್ತಾರೆ. ಈ ವೇಳೆ ಕಿರಿದಾದ ರಸ್ತೆ ಪಾದಚಾರಿಗಳಿಗೆ ಅವಕಾಶ ಆಗುತ್ತಿಲ್ಲ. ಮಕ್ಕಳು ನಾಲ್ಕೈದು ಮಂದಿ ಮಾತನಾಡುತ್ತಾ ಪರಿಜ್ಞಾನವಿಲ್ಲದೆ ಹೊರಟಿರುತ್ತಾರೆ. ಈ ವೇಳೆ ಅಪಾಯಕಾರಿ ಸನ್ನಿವೇಶ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ಫುಟ್ ಪಾತ್ ತೆರವು ಮಾಡಿ ಪಾದಚಾರಿಗಳಿಗೆ ಅವಕಾಶ ಮಾಡಬೇಕು. ಜೊತೆಗೆ ಮಕ್ಕಳಿಗೆ ರಸ್ತೆ ನಿಯಮಗಳ ಜಾಗೃತಿ ಮೂಡಿಸಬೇಕಿದೆ ಎಂದು ಕ್ರೀಡಾ ಪ್ರೋತ್ಸಾಹಕ ಸಿ.ಆರ್.ಶಂಕರ್ ಕುಮಾರ್ ತಿಳಿಸಿ, ಕೋರ್ಟ್ ಮುಂಭಾಗ ಸಲಾಗರ್ ಟೀ ಅಂಗಡಿ, ಕಬಾಬ್ ಅಂಗಡಿ ಹಾಗೂ ಜೆರಾಕ್ಸ್ ಅಂಗಡಿ ಸಂಪೂರ್ಣ ಪುಟ್ ಪಾತ್ ಮೇಲೆಯೇ ನಡೆದಿದೆ. ಇದಕ್ಕೆ ಪರವಾನಗಿ ಕೊಟ್ಟಿದ್ದು ಪಟ್ಟಣ ಪಂಚಾಯಿತಿ ಕೂಡಲೇ ತೆರವು ಮಾಡಬೇಕು ಎಂದು ಒತ್ತಾಯಿಸಿದರು. ಇದೇ ವಿಚಾರವಾಗಿ ಪಪಂ ಸದಸ್ಯ ಸಿ.ಮೋಹನ್ ಮಾತನಾಡಿ ಈ ಒತ್ತುವರಿ ಬಗ್ಗೆ ಮುಖ್ಯಾಧಿಕಾರಿಗಳಿಗೆ ತಿಳಿಸಿದೆ. ಆದರೆ ಅಲ್ಲಿನ ಅಂಗಡಿ ಮಾಲೀಕರಿಗೆ ನಾನು ಹೇಳಿದ್ದು ಎಂದು ಹೇಳಿ ನಮ್ಮಲ್ಲೇ ಜಗಳ ತರುತ್ತಾರೆ. ಒತ್ತುವರಿ ತೆರವು ಮಾಡಬೇಕಾದ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಭ್ರಷ್ಟಾಚಾರಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.

 

 

ಎಂಜಿ ರಸ್ತೆ ವಾಹನ ದಟ್ಟಣೆ ಹೆಚ್ಚಿದೆ. ಎಲ್ಲಾ ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಇರುವ ಕಾರಣ ಕಾರ್ಯ ನಿಮಿತ್ತ ಬರುವ ಸಾರ್ವಜನಿಕರ ವಾಹನ ನಿಲುಗಡೆಗೆ ತೊಂದರೆಯಾಗಿದೆ. ಪಾರ್ಕಿಂಗ್ ಅವ್ಯವಸ್ಥೆಯಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಬಗ್ಗೆ ಹಿಂದೆ ಪಿಎಸ್ಐ ಮಂಜುನಾಥ್ ಅವರು ಅನುಸರಿಸಿದ್ದ ಪಾರ್ಕಿಂಗ್ ವ್ಯವಸ್ಥೆ ಮರಳಿ ಆರಂಭಿಸಬೇಕಿದೆ ಎಂದು ಸ್ಥಳೀಯ ಜಿ.ಆರ್.ರಮೇಶ್ ಹಾಗೂ ಜಿ.ಎಸ್.ಮಂಜುನಾಥ್ ಆಗ್ರಹಿಸಿದರು. ಈ ಸಮಸ್ಯೆಗೆ ಪಿಎಸ್ಐ ಸುನೀಲ್ ಕುಮಾರ್ ಉತ್ತರಿಸಿ ಪಾರ್ಕಿಂಗ್ ಸ್ಥಳಾವಕಾಶ ಒದಗಿಸಿದರೆ ವಾಹನ ನಿಲುಗಡೆ ಜೊತೆಗೆ ಸುಗಮ ಸಂಚಾರಕ್ಕೆ ಅವಕಾಶ ನಮ್ಮ ಇಲಾಖೆ ಮಾಡುತ್ತದೆ ಎಂದರು. ಕೂಡಲೇ ಸ್ಪಂದಿಸಿದ ತಹಶೀಲ್ದಾರ್ ಆರತಿ.ಬಿ ತಾಲ್ಲೂಕು ಕಚೇರಿ ಪಕ್ಕದ ಜಾಗವನ್ನು ಪಾರ್ಕಿಂಗ್ ವ್ಯವಸ್ಥೆಗೆ ಕೊಡುತ್ತೇವೆ. ಅಲ್ಲಿ ಗುತ್ತಿಗೆ ಆಧಾರದಲ್ಲಿ ವ್ಯವಸ್ಥಿತ ನಿಲುಗಡೆ ಮಾಡಬೇಕು ಎಂದು ಪಟ್ಟಣ ಪಂಚಾಯಿತಿಗೆ ಸೂಚಿಸಿದರು.

 

 

 

ಪಪಂ ಸದಸ್ಯರಾದ ಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ ಹಾಗೂ ಜಿ.ಆರ್.ಶಿವಕುಮಾರ್ ಮಾತನಾಡಿ ಸಂಸದ ವಿ.ಸೋಮಣ್ಣ ಅವರು ಪಟ್ಟಣದಲ್ಲಿ ಹಾದು ಹೋಗುವ ಹೆದ್ದಾರಿಗೆ 27 ಕೋಟಿ ರೂಗಳ ಸಿಸಿ ರಸ್ತೆಗೆ ಅವಕಾಶ ಮಾಡಿದ್ದಾರೆ. ಸಾರ್ವಜನಿಕರ ಅಭಿಪ್ರಾಯದಂತೆ ಹೆದ್ದಾರಿ ಎರಡೂ ಬದಿ ಚರಂಡಿ ವ್ಯವಸ್ಥೆಗೆ ಬೇಡಿಕೆ ಬಂದ ಹಿನ್ನಲೆ ಶಾಸಕ ಎಸ್.ಆರ್.ಶ್ರೀನಿವಾಸ್ ಮೂಲಕ ಹೆಚ್ಚುವರಿ 7 ಕೋಟಿ ಮಂಜೂರಾತಿಗೆ ಸಂಸದರ ಜೊತೆ ಚರ್ಚಿಸಿ ಬಿಡುಗಡೆಗೆ ವ್ಯವಸ್ಥೆ ಮಾಡಿದ್ದಾರೆ. ಈ ಹಿನ್ನಲೆ ಹೆದ್ದಾರಿ ಫುಟ್ ಪಾತ್ ವ್ಯವಸ್ಥೆ ಸರಿ ಹೋಗಲಿದೆ ಎಂದರು. ಬಿಜೆಪಿ ಮುಖಂಡ ಎಚ್.ಟಿ.ಭೈರಪ್ಪ ಮಾತನಾಡಿ ರಾಜಕಾಲುವೆಗಳ ಸುಗಮ ಮಾಡಿದರೆ ಮಳೆ ನೀರು ರಸ್ತೆಗೆ ಬರುವುದಿಲ್ಲ. ಚರಂಡಿಗಳು ಎಲ್ಲಡೆ ಸ್ಥಗಿತವಾಗಿದೆ. ಸರಿ ಪಡಿಸುವ ಕೆಲಸ ಅಧಿಕಾರಿಗಳು ಪ್ರತಿ ದಿನ ಪರಿಶೀಲಿಸಬೇಕಿದೆ. ಈ ಜೊತೆಗೆ ಬೃಹತ್ ಕಟ್ಟಡಗಳು, ಆಸ್ಪತ್ರೆಗಳು ತಲೆ ಎತ್ತಿವೆ. ಆದರೆ ಪಾರ್ಕಿಂಗ್ ಇಲ್ಲ, ಶೌಚಾಲಯ ವ್ಯವಸ್ಥೆ ಇಲ್ಲವಾಗಿದೆ. ಈ ಬಗ್ಗೆ ಮುಖ್ಯಾಧಿಕಾರಿಗಳು, ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ಪರವಾನಗಿ ನೀಡಬೇಕು ಎಂದು ಸಲಹೆ ನೀಡಿದರು.

 

 

 

 

ಫುಟ್ ಪಾತ್ ಅಂಗಡಿಗಳಿಗೆ ಸಂತೆ ಮೈದಾನದ ಬಳಿಯ ಜಾಗವನ್ನು ನಿಗದಿ ಮಾಡಿ ವ್ಯವಸ್ಥಿತವಾಗಿ ಅವಕಾಶ ಕೊಟ್ಟರೆ ಒಂದಡೆ ತರಕಾರಿ ಹಣ್ಣು ಹೂವು ಸಿಗಲಿದೆ. ನೆಲೆ ಬಾಡಿಗೆ ಪಟ್ಟಣ ಪಂಚಾಯಿತಿಯ ಆದಾಯ ಆಗಲಿದೆ ಎಂದು ಸಲಹೆ ನೀಡಿದ ಲೋಕೇಶ್, ಮಂಜುನಾಥ್ ಬೀದಿ ಬದಿ ವ್ಯಾಪಾರಿಗಳಿಗೆ ಬದುಕು ಕಟ್ಟಿಕೊಡುವ ಜೊತೆಗೆ ಎಲ್ಲರಿಗೂ ಒಂದೇ ಮಾನದಂಡ ಅನುಸರಿಸಬೇಕು. ಸದಸ್ಯರಿಗೆ ಬೇಕಾದವರು ಎಂದು ರಸ್ತೆಯಲ್ಲೇ ಅವಕಾಶ ಕೊಟ್ಟರೆ ಮರಳಿ ಅದೇ ದುಸ್ಥಿತಿ ಬರಲಿದೆ. ಯಾರಿಗೂ ರಸ್ತೆ ಬದಿ ಅವಕಾಶ ನೀಡದೆ ಎಲ್ಲರೂ ಒಂದೇ ಸೂರಿನಡಿ ವ್ಯಾಪಾರ ಮಾಡಿಕೊಳ್ಳಲು ಅವಕಾಶ ನೀಡಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ತಹಶೀಲ್ದಾರ್ ಬಿ.ಆರತಿ, ಪಪಂ ಅಧ್ಯಕ್ಷೆ ಆಯಿಷಾ ತಾಸೀನ್, ಉಪಾಧ್ಯಕ್ಷೆ ಶ್ವೇತಾ, ಸದಸ್ಯರಾದ ಮಹಮ್ಮದ್ ಸಾದಿಕ್, ಜಿ.ಸಿ.ಕೃಷ್ಣಮೂರ್ತಿ, ಸಿದ್ದರಾಮಯ್ಯ, ಮಹಾಲಕ್ಷ್ಮಿ, ಮಮತಾ, ಸುಮಾ ಮೋಹನ್, ಆನಂದ್, ಸ್ಥಳೀಯ ಮುಖಂಡರಾದ ಸಲೀಂ ಪಾಷ, ಯಲ್ಲಪ್ಪ, ಜಿ.ಆರ್.ಪ್ರಕಾಶ್, ಅನಿಲ್, ಲಯನ್ಸ್ ಕ್ಲಬ್ ರಮೇಶ್ ಬಾಬು, ವಿವೇಕಾನಂದ, ವಿನಯ್, ಕಸಾಪ ಅಧ್ಯಕ್ಷ ಯತೀಶ್, ಬಸವರಾಜ್, ದಲಿತ ಮುಖಂಡರಾದ ಕೃಷ್ಣಪ್ಪ, ನರೇಂದ್ರ ಇತರರು ಇದ್ದರು.

 

 

ವರದಿ ಗುಬ್ಬಿ ಭರತ್

Leave a Reply

Your email address will not be published. Required fields are marked *

error: Content is protected !!