ತುಮಕೂರು : ತುಮಕೂರು ತಾಲ್ಲೂಕು ಕೋರಾ ಹೋಬಳಿ, ಕೆಸ್ತೂರು ಗ್ರಾಮದಲ್ಲಿನ ಪರಿಶಿಷ್ಠರ ಕಾಲೋನಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ನಿವೇಶನ ಮೀಸಲಿಡಲಾಗಿದ್ದು, ಆದರೆ ಸ್ಥಳೀಯ ಅಧಿಕಾರಿಗಳು, ಸ್ಥಳೀಯ ಕೆಲ ಮುಖಂಡರುಗಳ ಪಿತೂರಿಯಿಂದ ಸದರಿ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಲು ಮುಂದಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ವತಿಯಿಂದ ಸ್ಥಳೀಯ ಪಂಚಾಯಿತಿಗೆ ಕೆಸ್ತೂರು ಗ್ರಾಮದಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಲು ನಿವೇಶನ ನೀಡಲಾಗಿದ್ದು, ಕೆಲವು ವರ್ಷಗಳಿಂದ ಸದರಿ ಜಾಗದಲ್ಲಿ ಶೀಟ್ ಗಳನ್ನು ಹಾಕಿ ತಾತ್ಕಾಲಿಕವಾಗಿ ಕೆಲ ದಲಿತರ ಕುಂದು-ಕೊರತೆ ಸಭೆಗಳು, ಸಮಾರಂಭಗಳು, ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ಜಯಂತಿ ಸೇರಿದಂತೆ ಇನ್ನಿತರೆ ಕಾರ್ಯಚಟುವಟಿಕೆಗಳನ್ನು ಮಾಡಿಕೊಂಡು ಬರಲಾಗುತ್ತಿತ್ತು.
ಆದರೆ ಈ ರೀತಿ ಮಾಡಿಕೊಂಡು ಬರುತ್ತಿರುವುದನ್ನು ಸಹಿಸಲಾಗದ ಕೆಲವು ಪ್ರಮುಖರು, ಸ್ಥಳೀಯ ಕೆಲ ಅಧಿಕಾರಿಗಳು ಕುಮ್ಮಕ್ಕು ನೀಡಿ ಸದರಿ ಜಾಗದಲ್ಲಿ ದೇವಾಲಯವೊಂದನ್ನು ರಾತ್ರೋ ರಾತ್ರಿ ನಿರ್ಮಾಣ ಮಾಡಲು ಮುಂದಾಗಿರುವುದಲ್ಲದೇ, ತಾತ್ಕಾಲಿಕವಾಗಿ ಹಾಕಲಾಗಿದ್ದ ಶೀಟ್ ಗಳ ನಡುವೆಯೇ ದೇವಸ್ಥಾನ ನಿರ್ಮಾಣ ಕಾರ್ಯವನ್ನು ಮುಂದಾಗಿದ್ದಾರೆ.
ಇನ್ನು ಈ ಜಾಗವು ಸರ್ಕಾರಿ ಜಾಗವಾಗಿದ್ದು, ಪ್ರಮುಖವಾಗಿ ಅಂಬೇಡ್ಕರ್ ಭವನದ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ದೇವಾಲಯ ನಿರ್ಮಾಣದ ಹೆಸರಿನಲ್ಲಿ ಕಬಳಿಸಲು ಮುಂದಾಗಿದ್ದು, ಈ ಕುರಿತು ಸ್ಥಳೀಯ ಕೆಲ ದಲಿತ ವ್ಯಕ್ತಿಗಳು ಸ್ಥಳೀಯ ಗ್ರಾಮ ಪಂಚಾಯಿತಿ ಅದಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನಲೆಯಲ್ಲಿ ಚಿಂತೆಗೀಡಾಗಿರುವ ಪ್ರಮೇಯ ಬಂದಿದೆ.
ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಜಿಲ್ಲೆಯ ಪ್ರಮುಖ ದಲಿತ ಸಂಘಟನೆಗಳು ಈ ಕುರಿತು ಎಚ್ಚೆತ್ತು ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟಿರುವ ಜಾಗವನ್ನು ಉಳಿಸಿಕೊಳ್ಳುವಲ್ಲಿ ಮುಂದಾಗುವರೇ?????? ಕಾದು ನೋಡಬೇಕಾಗಿದೆ.