ಯುಗಾದಿ ಹಬ್ಬಕ್ಕೆ ಬೆಲ್ಲದ ಬದಲು ಬೇವಿನ ಉಡುಗೊರೆ ಕೊಟ್ಟ ರಾಜ್ಯ ಸರ್ಕಾರ ಬಿಜೆಪಿ ಶಾಸಕ ಬಿ.ಸುರೇಶಗೌಡ ಆಕ್ರೋಶ - Vidyaranjaka

ಯುಗಾದಿ ಹಬ್ಬಕ್ಕೆ ಬೆಲ್ಲದ ಬದಲು ಬೇವಿನ ಉಡುಗೊರೆ ಕೊಟ್ಟ ರಾಜ್ಯ ಸರ್ಕಾರ ಬಿಜೆಪಿ ಶಾಸಕ ಬಿ.ಸುರೇಶಗೌಡ ಆಕ್ರೋಶ

ತುಮಕೂರು : ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆಯ ಬರೆಯನ್ನು ಹಾಕಿರುವ ಸರ್ಕಾರಕ್ಕೆ ಬಡವರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಪಂಚ ಗ್ಯಾರಂಟಿ ಯೋಜನೆಗಳ ಹೊರೆಯನ್ನು ರಾಜ್ಯದ ಜನರು ನೇರವಾಗಿ ಈಗ ಎದುರಿಸುತ್ತಿರುವುದರ ಸಂಕೇತವೇ ಬೆಲೆ ಏರಿಕೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ ಗೌಡರು ಟೀಕಿಸಿದ್ದಾರೆ.
 ಯುಗಾದಿ ಬೇವು ಬೆಲ್ಲದ ಹಬ್ಬ. ಆದರೆ, ಈ ಸರ್ಕಾರ ರಾಜ್ಯದ ಜನರಿಗೆ ಕೇವಲ ಬೇವು ಕೊಟ್ಟು ಕಹಿ ತಿಂದು ಹಬ್ಬ ಆಚರಿಸಿ ಎಂದು ಹೇಳಿದೆ ಎಂದು ಅವರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.
 ಯುಗಾದಿಯ ಮರುದಿನವಾದ ಏಪ್ರಿಲ್‌ 1 ರಿಂದ ಹಾಲಿನ ಬೆಲೆ ಏರಿಕೆ ಜಾರಿಗೆ ಬರಲಿದೆ. ಜನರನ್ನು ಹೇಗೆ ಸಿದ್ದರಾಮಯ್ಯ ಸರ್ಕಾರ ಏಪ್ರಿಲ್‌ 1 ರ ಮೂರ್ಖರ ದಿನವೇ ಮೂರ್ಖರನ್ನಾಗಿ ಮಾಡುತ್ತಿದೆ ಎನ್ನುವುದಕ್ಕೆ ಇದು ನಿದರ್ಶನ.
  ಈ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ವರ್ಷ ಆಗಿಲ್ಲ. ಇದರೊಳಗೆ ಪೆಟ್ರೋಲ್‌ ಮತ್ತು ಡೀಸಲ್‌ ದರ ಏರಿಸಿದರು, ವಿದ್ಯುತ್‌ ದರ ಎರಡು ಸಾರಿ ಏರಿಸಿದರು. ಈಗ ಒಂದು ಯೂನಿಟ್‌ ವಿದ್ಯುತ್‌ಗೆ 36 ಪೈಸೆ ಹೆಚ್ಚಿಗೆ ಕೊಡಬೇಕಾಗಿದೆ. ಹಾಲಿನ ದರ ಮೂರು ಸಾರಿ ಏರಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
 ಕಾಕಾಸಾಹೇಬನಿಗೆ ಉಚಿತ ವಿದ್ಯುತ್‌ ಕೊಟ್ಟ ಫಲವನ್ನು ನಮ್ಮ ಊರಿನ ಹಳ್ಳಿಯ ಬಡ ಜನರು, ಮಧ್ಯಮ ವರ್ಗದ ಜನರು ಅನುಭವಿಸುತ್ತಿದ್ದಾರೆ. ಇನ್ನೂ ಜನರು ಕಷ್ಟದ ಕಾಲವನ್ನು ಎದುರಿಸಬೇಕಾಗಿ ಬರುತ್ತದೆ. ಇದು ಅತ್ಯಂತ senseless ಸರ್ಕಾರ.
 ಇಡೀ ದೇಶಕ್ಕೆ ಸಿದ್ದರಾಮಯ್ಯನವರು ಚುನಾವಣೆ ಗೆಲ್ಲುವ ಒಂದು ತಪ್ಪು ಮಾದರಿ ಹಾಕಿಕೊಟ್ಟರು. ಅವರು ಇತಿಹಾಸದಲ್ಲಿ ಉಳಿಯುವುದು ಒಂದು ಸಮೃದ್ಧ ರಾಜ್ಯವನ್ನು ಹೇಗೆ ದಿವಾಳಿ ಮಾಡಬೇಕು ಎಂಬ ʻಸಿದ್ದರಾಮಯ್ಯ ಎಕನಾಮಿಕ್ಸ್‌ʼಗಾಗಿ. ಅವರ ಸುತ್ತಮುತ್ತ ಇರುವ ಹೊಗಳುಭಟರು ಸಿದ್ದರಾಮಯ್ಯನವರದೇ ಒಂದು ದೊಡ್ಡ ಆರ್ಥಿಕ ಸಿದ್ದಾಂತ ಎಂದೆಲ್ಲ ಹೊಗಳಿದರು. ಯಾವನೋ ತಲೆಮಾಸದ ಆಕ್ಸ್‌ಫರ್ಡ್‌ನಲ್ಲಿ ಇರುವ ಒಬ್ಬ ಜೋಕರ್‌ ಕೂಡ ಇದನ್ನು ಹೊಗಳಿದ. ಈಗ ಅವರು ಏನು ಹೇಳುತ್ತಾರೆ?
 ಸಿದ್ದರಾಮಯ್ಯ ಯಾವ ಬೆಲೆ ಏರಿಕೆಯನ್ನೂ ಬಜೆಟ್‌ನಲ್ಲಿ ಪ್ರಸ್ತಾಪಿಸದೇ ಇನ್ನೂ ಬಜೆಟ್‌ ಅಂಗೀಕಾರವಾಗಿ ಒಂದು ವಾರ ಕಳೆಯುವುದರ ಒಳಗೆ ಹಾಲಿನ ದರ ಏರಿಸಿದ್ದಾರೆ.
 ಮೆಟ್ರೊ ಪ್ರಯಾಣ ದರ ಶೇಕಡ 45 ರಷ್ಟು ಏರಿಕೆಯಾಗಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಒಂದು ಲೀಟರ್‌ ಹಾಲಿಗೆ 4 ರೂಪಾಯಿ ದರ ಏರಿಕೆ ದೊಡ್ಡ ಹೊರೆ. ಅವರ ವರಮಾನದಲ್ಲಿ ಇದೇ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದಿಲ್ಲ. ಹೀಗೆ ಸತತವಾಗಿ ಬೆಲೆ ಏರಿಕೆ ಮಾಡುವುದನ್ನು ನೋಡಿದರೆ ಇದಕ್ಕಿಂತ ಜನವಿರೋಧಿ ಸರ್ಕಾರ ಇನ್ನೊಂದು ಇರಲಾರದು ಎಂದು ಅನಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 ಇಂಧನ ಮತ್ತು ವಿದ್ಯುತ್‌ ಬೆಲೆಯ ಮೇಲೆಯೇ ಇಡೀ ಆರ್ಥಿಕತೆ ಅವಲಂಬಿಸಿರುತ್ತದೆ. ಬಜೆಟ್‌ನಲ್ಲಿ ಬೆಲೆ ಏರಿಕೆ ಪ್ರಸ್ತಾಪ ಮಾಡಿದ್ದರೆ ನಾವು ಬಜೆಟ್‌ ಮೇಲೆ ಭಾಷಣ ಮಾಡುವಾಗ ಸರ್ಕಾರವನ್ಮು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದೆವು. ಮಾಧ್ಯಮಗಳಿಂದಲೂ ಮುಖ್ಯಮಂತ್ರಿಗಳು ಟೀಕೆ ಎದುರಿಸಬೇಕಾಗುತ್ತಿತ್ತು. ಅದನ್ನು ತಪ್ಪಿಸಿಕೊಳ್ಳುವ ಸಲುವಾಗಿಯೇ ಅಂಕಿ ಅಂಶಗಳ ಮಾಯಾಜಾಲದಲ್ಲಿ ಜನರನ್ನು ಮುಖ್ಯಮಂತ್ರಿಗಳು ಮರುಳು ಮಾಡಿದರು. ಅಭಿವೃದ್ಧಿಯ ಒಂದು ಕೇಂದ್ರ ಬಿಂದುವೇ ಇಲ್ಲದಂಥ ಬಜೆಟ್‌ ಮಂಡಿಸಿ ಈಗ ಜನರ ಜೀವನದ ಜತೆ ಚಲ್ಲಾಟ ಆಡುತ್ತಿದ್ದಾರೆ.
 4 ಲಕ್ಷ ಕೋಟಿ ರೂಪಾಯಿಗಳ ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿಗಳಿಗೆ 50,000 ಕೋಟಿ ರೂಪಾಯಿಗಳ ಗ್ಯಾರಂಟಿಗಳ ವೆಚ್ಚವನ್ನು ನಿಭಾಯಿಸಲು ಆಗುತ್ತಿಲ್ಲ. ಈ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸದ ಮೇಲೆ ಹೊರೆ ಆಗಿಲ್ಲ ಎನ್ನುವುದಾದರೆ ಆ ಮೊತ್ತವನ್ನು ಅವರು ಸಕಾಲದಲ್ಲಿ ಬಿಡುಗಡೆ ಮಾಡಬೇಕಿತ್ತು. ಗೃಹಲಕ್ಷ್ಮೀ ಯೋಜನೆಯ ಹಣ ಈ ತಿಂಗಳ 31 ರ ನಂತರ ಪಾವತಿ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದ್ದಾರೆ. ಇದು ಬೊಕ್ಕಸದಲ್ಲಿ ಹಣ ಇಲ್ಲ ಎನ್ನುವುದನ್ನೇ ತೋರಿಸುತ್ತದೆ.
 ಹಾಲಿನ ದರ ಏರಿಕೆ ಕುರಿತು ಪ್ರಶ್ನೆ ಮಾಡಿದರೆ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ನಮ್ಮ ಬಳಿ ನೊಟು ಮುದ್ರಿಸುವ ಯಂತ್ರ ಇದೆಯೇ ಎಂದು ಕೇಳುತ್ತಾರೆ. ಗ್ಯಾರಂಟಿ ಯೋಜನೆ ಘೋಷಣೆ ಮಾಡುವಾಗ ನಿಮಗೆ ಈ ವಿಚಾರ ಗೊತ್ತಿರಲಿಲ್ಲವೇ? ಆಗ ನೀವು ಕೇವಲ ಅಧಿಕಾರಕ್ಕೆ ಬರಬೇಕು ಎಂಬ ಒಂದು ಕಾರಣಕ್ಕಾಗಿ ಮಾತ್ರ ನಾವು ಬೆಲೆ ಏರಿಸುವುದಿಲ್ಲ ಎಂದು ಹೇಳಿದಿರಿ. ಈಗ ನೋಡಿದರೆ ಅತ್ತ ಗ್ಯಾರಂಟಿ ಯೋಜನೆಗಳೂ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಇತ್ತ ರಾಜ್ಯದ ಭೌತಿಕ ಅಭಿವೃದ್ಧಿಯೂ ಆಗುತ್ತಿಲ್ಲ. ಕೇವಲ ಬೆಲೆ ಏರಿಕೆ ಮಾತ್ರ ಆಗುತ್ತಿದೆ.
 ಈ ಸರ್ಕಾರದ ದೊಡ್ಡ ಸಾಧನೆ ಎಂದರೆ ತಾನು ಮರುಪಾವತಿ ಮಾಡಲು ಆಗದ ಸಾಲದ ಹೊರೆಯನ್ನು ಜನರ ಮೇಲೆ ಹೇರಿರುವುದು ಬಿಟ್ಟರೆ ಮತ್ತೆ ಯಾವ ಸಾಧನೆಯೂ ಇಲ್ಲ. ಯಾವುದಾದರೂ ಒಂದು ಸಾಧನೆಯನ್ನು ಮಾಧ್ಯಮದ ಗೆಳೆಯರು ಕಂಡಿದ್ದರೆ ನಾವೆಲ್ಲರೂ ಕೂಡಿ ಹೋಗಿ ನೋಡಿ ಬರೋಣ ಎಂದು ಸುರೇಶಗೌಡರು ಕಿಡಿ ಕಾರಿದ್ದಾರೆ.  ಜನರಿಗೆ ಅತ್ಯಂತ ಅಗತ್ಯವಾದ ಮತ್ತು ಕನಿಷ್ಠವಾದ ಆರೋಗ್ಯ ಸೇವೆ ಕೊಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ಬಾಣಂತಿಯರು ಆಸ್ಪತ್ರೆಗಳಲ್ಲಿ ಸಾಯುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ, ಆಡಳಿತ ಯಂತ್ರ ಶಿಥಿಲವಾಗಿದೆ. ಆಂತರಿಕ ಬಿಕ್ಕಟ್ಟು ಮೇರೆ ಮೀರಿದೆ. ಕಾಂಗ್ರೆಸ್‌ ಪಕ್ಷ ಮಾತು ಎತ್ತಿದರೆ ಹೈಕಮಾಂಡ್‌ ಎನ್ನುತ್ತದೆ. ಈಗ ಆ ಹೈಕಮಾಂಡ್‌ ಎಲ್ಲಿದೆ ಎಂದು ನಾವು ಕಂದೀಲು ಹಿಡಿದುಕೊಂಡು ನೋಡಬೇಕಾಗಿದೆ.
 ಜನರ ಬಡತನವನ್ನು ಟಕಾ ಟಕ್‌ ನಿವಾರಿಸುವುದಾಗಿ ಹೇಳುತ್ತಿದ್ದ ರಾಹುಲ್‌ ಗಾಂಧಿ, ಅವರ ಸೋದರಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನಿಜವಾಗಿಯೂ ಬಡವರ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಈ ಎಲ್ಲ ಬೆಲೆ ಏರಿಕೆ ಕೈ ಬಿಡಬೇಕು ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಬೇಕು. ಏಕೆಂದರೆ ಈ ಮೂವರು ಮಹಾನುಭಾವರು ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದರು. ಬೆಲೆ ಏರಿಕೆ ಕೈ ಬಿಡದೇ ಇದ್ದರೆ ರಾಜ್ಯ ಬಿಜೆಪಿ ಮತ್ತು ಮಿತ್ರ ಪಕ್ಷ ಜೆ.ಡಿ. ಎಸ್‌ ವತಿಯಿಂದ ಯುಗಾದಿ ಹಬ್ಬ ಮುಗಿದ ಕೂಡಲೇ ಬೀದಿಗೆ ಇಳಿದು ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!