ಆರ್.ಡಿ.ಪಿ.ಆರ್.ಕಚೇರಿ ಮುಂದೆ ಗುತ್ತಿಗೆದಾರರಿಂದ ಧಿಡೀರ್ ಪ್ರತಿಭಟನೆ - Vidyaranjaka

ಆರ್.ಡಿ.ಪಿ.ಆರ್.ಕಚೇರಿ ಮುಂದೆ ಗುತ್ತಿಗೆದಾರರಿಂದ ಧಿಡೀರ್ ಪ್ರತಿಭಟನೆ

 

ತುಮಕೂರು: ಗ್ರಾಮೀಣ ಭಾಗದ ಜನವಸತಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಸುರಕ್ಷಿತ ಕುಡಿಯವ ನೀರನ್ನು ಒದಗಿಸುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರ ಹೆಚ್ಚಿನ ಮಹತ್ವವನ್ನು ನೀಡಿದೆ ಅನೇಕ ಯೋಜನೆ ರೂಪಿಸಿ ಗ್ರಾಮೀಣ ಪ್ರದೇಶಗಳಿಗೆ ಕೊಳವೆ ನೀರು ಸರಬರಾಜು ಯೋಜನೆ, ಕಿರು ನೀರು ಸರಬರಾಜು ಯೋಜನೆ, ಕೈ ಪಂಪು ಕೊಳವೆ ಬಾವಿ ಯೋಜನೆ, ಜೆಜೆಎಂ, ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳು ಅನುಷ್ಠಾನಗೊಳಿಸಿ ಕುಡಿಯುವ ನೀರು ಒದಗಿಸಲು ಚೆಕ್ ಡ್ಯಾಂ, ಓಒರ್ ಟ್ಯಾಂಕ್ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಗುತ್ತಿಗೆದಾರರ ಮೂಲಕ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ (ಎಲ್ ಓ‌ಸಿ) ನೀಡಿದ್ದರು, ಜೊತೆಗೆ ಸರ್ಕಾರದಿಂದ ಪೂರಕವಾದ ಅನುದಾನ ಬಿಡುಗಡೆಗೊಂಡರು ಗುತ್ತಿಗೆದಾರರಿಗೆ ಸಂಬಂಧಪಟ್ಟ ಅನುದಾನವನ್ನ ಪಾವತಿ ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತ ತಮ್ಮ ಇಷ್ಟ ಬಂದವರಿಗೆ ಅನುದಾನ ಬಿಡುಗಡೆಗೊಳಿಸುತ್ತಿದ್ದಾರೆ ಎಂದು ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

ನಗರದ ಕುಣಿಗಲ್ ರಸ್ತೆಯ ಲೋಕೋಪಯೋಗಿ ಇಲಾಖೆಯ ಪಕ್ಕದಲ್ಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಚೇರಿ ಮುಂದೆ ಆರ್ಥಿಕ ವರ್ಷ ಮಾರ್ಚ್ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಪೂರ್ಣಗೊಂಡ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿದ್ದು ಈ ಅನುದಾನವನ್ನು ಅಧಿಕಾರಿಗಳು ಮನಸ್ಸು ಇಚ್ಛೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನೂರಾರು ಗುತ್ತಿಗೆದಾರರು ಪ್ರತಿಭಟನೆ ಕೈಗೊಂಡು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

 

 

ಕಳೆದೆರಡು ದಿನಗಳ ಹಿಂದೆ ತುಮಕೂರು ಜಿ.ಪಂ. ಆವರಣದಲ್ಲಿ ಕೆಲ ಗುತ್ತಿಗೆದಾರರು ಪ್ರತಿಭಟನೆ ನಡೆಸಿದ ಬೆನ್ನೆಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಂದೆ ತಮ್ಮ ಅಳಲು ತೋಡಿಕೊಂಡರು.

 

 

ಗುತ್ತಿಗೆದಾರ ದೊಡ್ಡಗುಣಿ ರೇಣುಕ ಪ್ರಸಾದ್ ಮಾತನಾಡಿ ಸರ್ಕಾರದಿಂದ ಅನುಮೋದನೆಗೊಂಡ ಯೋಜನೆಗಳು ಕ್ರಮಬದ್ದವಾಗಿ ಪಾರದರ್ಶಕವಾಗಿದ್ದರು ಸರ್ಕಾರದ ನಡಾವಳಿಯಂತೆ ಕಾಮಗಾರಿ ಕೈಗೊಂಡಿದ್ದರು ಇಲಾಖೆಯ ಕೆಲ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಎಸಗುತ್ತಿದ್ದು ಪ್ರತಿ ಬಾರಿಯೂ ಇವರ ಮುಂದೆ ಭಿಕ್ಷೆ ಬೇಡುವಂತಹ ಪರಿಸ್ಥಿತಿಯೇ ನಿರ್ಮಾಣವಾಗಿದೆ, ಸರ್ಕಾರದ ಟೆಂಡರ್ ಆದೇಶದಂತೆ ಗುತ್ತಿಗೆದಾರರು ಕಾಮಗಾರಿಯನ್ನು ಕ್ರಮಬದ್ಧವಾಗಿ ಪೂರ್ಣಗೊಳಿಸಿದ್ದರು ಅಧಿಕಾರಿಗಳು ಅನುದಾನದ ಬಿಡುಗಡೆಗೆ ಪಿತೂರಿ ನಡೆಸುತ್ತಿದ್ದಾರೆ.

 

ಗುತ್ತಿಗೆದಾರರು ಆರ್ಥಿಕವಾಗಿ ಸಂಕಷ್ಟಗಳನ್ನು ಅನುಭವಿಸುತ್ತಿದ್ದು ತಮ್ಮ ಕುಟುಂಬದ ಸದಸ್ಯರ ಒಡವೆ ಅಡವಿಟ್ಟು ಸಾಲ ಸೋಲ ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿದರು ಎಮ್ಮೆ ಚರ್ಮದ ಅಧಿಕಾರಿಗಳು ಎರಡು ಕಾಸಿನ ಆಸೆಗಾಗಿ ರಾಜಕಾರಣಿಗಳ ಒತ್ತಡ ಮತ್ತು ಅತಿ ಹೆಚ್ಚು ಕಮಿಷನ್ ಹಣ ನೀಡುವ ಗುತ್ತಿಗೆದಾರರ ಮಾತಿಗೆ ಬಲಿಯಾಗಿ ಕ್ರಮಬದ್ಧವಾಗಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಮೋಸ ಮತ್ತು ಅನ್ಯಾಯವನ್ನ ಮಾಡುತ್ತಿದ್ದಾರೆ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.

 

 

 

ಅಧಿಕಾರಿಗಳು ಆರ್ಥಿಕ ವರ್ಷದ ಅಂತ್ಯದ ಸಮಯದಲ್ಲಿ ಕಚೇರಿಯಲ್ಲಿ ಕುಳಿತು ಬಿಲ್ ಗಳನ್ನು ಪರಿಶೀಲನೆ ನಡೆಸದೆ ಹೋಟೆಲ್ ಮತ್ತು ಇತರೆ ಕಚೇರಿಗಳ ಬಳಿ ಕುಳಿತು ತಮ್ಮ ಕಚೇರಿಯ ಕಡತಗಳನ್ನು ತರಿಸಿಕೊಂಡು ಸಹಿ ಹಾಕುವುದು ಸೇರಿದಂತೆ ಸರ್ಕಾರದಿಂದ ಅನುಮೋದನೆಗೊಂಡು ಬಿಡುಗಡೆಗೊಂಡಿರುವ ಸುಮಾರು 40 ಕೋಟಿ ರೂಗಳನ್ನ ಹೆಚ್ಚೆಚ್ಚು ಕಮಿಷನ್ ನೀಡುವ ಗುತ್ತಿಗೆದಾರರಿಗೆ ನೀಡುತ್ತಿರುವುದು ಖಂಡನೀಯವಾಗಿದ್ದು ಕಚೇರಿ ಸಮಯದಲ್ಲಿ ಕದ್ದು ಓಡಾಡುತ್ತಿರುವುದು ಸುಳ್ಳು ಹೇಳಿಕೊಂಡು ತಿರುಗುತ್ತಿರುವುದು ಇವರ ಕೆಲಸವಾಗಿದೆ ಅಧಿಕಾರಿಗಳ ನಂಬರಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಮಾಡಿಕೊಂಡು ಓಡಾಡುತ್ತಿರುವುದು ಕಂಡುಬರುತ್ತಿದೆ.

 

 

 

 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ಎಲ್ ಓ ಸಿ ವಿಚಾರವನ್ನು ಮುಂದಿಟ್ಟುಕೊಂಡು ಗುತ್ತಿಗೆದಾರರಿಗೆ ಅನ್ಯಾಯ ಮಾಡುತ್ತಿದ್ದಾರೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬಿಡುಗಡೆಗೊಂಡ ಶೇಕಡವಾರು ಅನುದಾನದ ಮಾಹಿತಿಯನ್ನು ನೀಡದೆ ಅಧಿಕಾರಿಗಳು ಸುಖ‌ಸುಮ್ಮನೆ ಗುತ್ತಿಗೆದಾರರನ್ನು ಅಲೆಯುವಂತೆ ಮಾಡಿ ಸಾವಿನ ಮನೆಯ ಕದ ತಟ್ಟುವಂತೆ ಪ್ರೆರೆಪಣೆ ಮಾಡುತ್ತಿದ್ದಾರೆ,

 

 

 

ಈಗಾಗಲೇ ಅನೇಕ ಗುತ್ತಿಗೆದಾರರು ಆತ್ಮಹತ್ಯೆಯ ದಾರಿಗಳನ್ನ ಯೋಚನೆ ಮಾಡುತ್ತಿದ್ದಾರೆ ಹೀಗಾಗಿ ಕೂಡಲೇ ಅಧಿಕಾರಿಗಳು ಮಾರ್ಚ್ 28 ರ ಮಧ್ಯಾಹ್ನದ ಒಳಗೆ ಕ್ರಮಬದ್ಧವಾಗಿ, ಪಾರದರ್ಶಕವಾಗಿ ಪೂರ್ಣಗೊಂಡ ಕಾಮಗಾರಿಗಳ ಅನುದಾನವನ್ನು ಗುತ್ತಿಗೆದಾರರಿಗೆ ಬಿಡುಗಡೆ ಗೊಳಿಸಬೇಕು ಇಲ್ಲವಾದರೆ ಅಧಿಕಾರಿಗಳು ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 

 

 

 

ಇದೇ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಯೊಬ್ಬರು ಕದ್ದು ಮುಚ್ಚಿ ಕಂಪ್ಯೂಟರ್ ಕಡತದಲ್ಲಿ ಗುತ್ತಿಗೆದಾರರ ಹೆಸರನ್ನ ಸೇರಿಸಲು ಮುಂದಾಗುತ್ತಿರುವಾಗ ಇತರೆ ಗುತ್ತಿಗೆದಾರರು ಕಂಪ್ಯೂಟರ್ ಕೊಠಡಿಯ ಬಾಗಿಲನ್ನು ಬಂದು ಮಾಡಿಸಿ ಕಾಮಗಾರಿಗಳನ್ನು ಕ್ರಮಬದ್ಧವಾಗಿ ಪೂರ್ಣಗೊಂಡಿರುವ ಗುತ್ತಿಗೆದಾರರಿಗೆ ಹಣವನ್ನು ಮೊದಲು ಬಿಡುಗಡೆಗೊಳಿಸಬೇಕು, ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬ ನಾಣ್ಣುಡಿಯಂತೆ ಹೆಚ್ಚಿನ ಹಣದಾಸೆಗೆ ಅಧಿಕಾರಿಗಳು ಬಲಿಯಾಗಬಾರದು ನಿಮ್ಮಂತಹ ಅವರಿಂದಲೇ ಭ್ರಷ್ಟಾಚಾರದ ಕೂಗು ಹೆಚ್ಚು ಹೆಚ್ಚು ಕೇಳುತ್ತಿದೆ ಹಾಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದು ಚರ್ಚಿಸಿ ಅನುದಾನವನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

 

 

ಸ್ಥಳದಲ್ಲಿ ಗುತ್ತಿಗೆದಾರರಾದ ಸತೀಶ್. ಬಸವರಾಜ್.ರಕ್ಷಿತ್. ಜುಂಜೇಗೌಡ. ರವಿಕುಮಾರ್. ಇನ್ನು ಅನೇಕ ಗುತ್ತಿಗೆದಾರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!