ಮೊನ್ನೆ ದಿನ ನನ್ನ ‘ಅಪ್ತ ಸ್ನೇಹಿತ’ರಾದ ಗೌರಿಶಂಕರ್ ಅವರು, ಮುರಳೀಧರ ಹಾಲಪ್ಪ ಅವರು ಮತ್ತೆ ಒಂದಿಷ್ಟು ಜನ ಪತ್ರಿಕಾಗೋಷ್ಠಿ ಮಾಡಿದ್ದಾರೆ. ನಾನು ದೆಹಲಿಗೆ ಹೋಗಿದವರಾರದು ಆ ಕುರಿತು ನನ್ನ ಪ್ರತಿಕ್ರಿಯೆ ಕೊಡಲು ಆಗಲಿಲ್ಲ. ಇವತ್ತು ಉದ್ದೇಶಪೂರ್ವಕವಾಗಿ ಮತ್ತು ಅವರ ಎಲ್ಲ ಮಾತಿಗೆ ಉತ್ತರ ಕೊಡಬೇಕು ಎಂದು ಪತ್ರಿಕಾಗೋಷ್ಠಿ ಕರೆದಿರುವೆ ಎಂದ ಗ್ರಾಮಾಂತರ ಶಾಸಕ ಸುರೇಶ್ ಗೌಡರವರು
ನಾನು ರಾಜಣ್ಣ ಅವರ ಮೇಲೆ ಏಕೆ ದಾಳಿ ಮಾಡುತ್ತಿಲ್ಲ ಎಂದು ಕೇಳಿದ್ದಾರೆ. ಈ ಪ್ರಶ್ನೆಯೇ ವಿಚಿತ್ರವಾಗಿದೆ. ಕಾಂಗ್ರೆಸ್ ಪಕ್ಷದವರೇ ಕಾಂಗ್ರೆಸ್ ಸಚಿವರ ವಿರುದ್ಧ ನಾನು ಆರೋಪ ಮಾಡಬೇಕು. ಎಂದು ಕರೆ ಕೊಡುತ್ತಿರುವುದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ನಾನು ಯಾರ ವಿರುದ್ಧ ಯಾವಾಗ ಮಾತನಾಡಬೇಕು ಎಂದು ಕಾಂಗ್ರೆಸ್ನವರು ನನಗೆ ಹೇಳಿ ಕೊಡಬೇಕಿಲ್ಲ. ಅವರು ಯಾರ ಮಾತು ಕೇಳಿ ಈ ಪತ್ರಿಕಾಗೋಷ್ಠಿ ಮಾಡಿದ್ದಾರೆ ಎಂದು ತಿಳಿಯದಷ್ಟು ನಾನು ದಡ್ಡನೂ ಅಲ್ಲ, ಅಮಾಯಕನೂ ಅಲ್ಲ. ಬಹುಶಃ ನಿಮಗೂ ಅವರ ಪತ್ರಿಕಾಗೋಷ್ಠಿಯ ಹಿಂದೆ ಯಾರು ಇದ್ದಾರೆ ಎಂದು ತಿಳಿದಿರುತ್ತದೆ ಎಂದರು.
ಒಂದು ಮಾತನ್ನು ಮೊದಲೇ ಸ್ಪಷ್ಟಪಡಿಸುವೆ. ನಾನು ಈಗ ಒಬ್ಬ ವಿರೋಧ ಪಕ್ಷದ ಶಾಸಕ. ನಾನು ಸರ್ಕಾರದಲ್ಲಿ ಇಲ್ಲ. ಮೂರು ಸಾರಿ ವಿಧಾನಸಭೆಗೆ ಆರಿಸಿ ಬಂದಿರುವ ನನ್ನಿಂದ ಜನರು ಏನು ನಿರೀಕ್ಷೆ ಮಾಡುತ್ತಾರೆ ಎಂದು ನನಗೆ ಗೊತ್ತಿದೆ. ಅದು ಕಾಂಗ್ರೆಸ್ನ ನನ್ನ ಗೆಳೆಯರಿಗೆ ಗೊತ್ತಿರುವುದು ಸಾಧ್ಯವಿಲ್ಲ. ನಾನು ಜಿಲ್ಲಾ ಬಿಜೆಪಿ ಅಧ್ಯಕ್ಷನಾಗಿ ಎರಡು ಸಾರಿ ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ಎರಡು ಸಾರಿ ಕೆಲಸ ಮಾಡಿದ್ದೇನೆ. ಪಕ್ಷವು ನನಗೆ ಕೊಟ್ಟ ಸ್ಥಾನಮಾನಕ್ಕೆ ತಕ್ಕಂತೆ ನಾನು ಮಾತನಾಡಬೇಕಾಗುತ್ತದೆ.
ಪರಮೇಶ್ವರ್ ಅವರ ಜತೆಗಾಗಲೀ ಕಾಂಗ್ರೆಸ್ ಪಕ್ಷದ ಯಾರ ಜತೆಗಾಗಲೀ ನನಗೆ ವೈಯಕ್ತಿಕವಾಗಿ ಯಾವ ವೈರವೂ ಇಲ್ಲ. ರಾಜಕೀಯದಲ್ಲಿ ನಾವು ಒಮ್ಮೆ ಈ ಕಡೆ ಇರುತ್ತೇವೆ. ಒಮ್ಮೆ ಆ ಕಡೆ ಇರುತ್ತೇವೆ. ಅದು ಪ್ರಜಾಪ್ರಭುತ್ವದ ವೈಭವ. ಹೀಗಾಗಿ ವಿರೋಧ ಪಕ್ಷದಲ್ಲಿ ಇದ್ದಾಗ ನಾವು ಆಡಳಿತ ಪಕ್ಷದಲ್ಲಿ ಇದ್ದವರನ್ನು ಟೀಕೆ ಮಾಡಲೇಬೇಕಾಗುತ್ತದೆ. ಪರಮೇಶ್ವರ್ ಅವರು ಜಿಲ್ಲಾ ಉಸ್ತುವಾರಿ ಸಚಿವರು. ಜಿಲ್ಲೆಯ ಎಲ್ಲ ಆಗು ಹೋಗುಗಳಿಗೆ ಅವರು ಕಾರಣ. ಜಿಲ್ಲೆಯ ಕೊರಟಗೆರೆ, ಮಧುಗಿರಿಯೂ ಸೇರಿದಂತೆ ಜಿಲ್ಲೆಯ ಅನೇಕ ತಾಲ್ಲೂಕು, ಗ್ರಾಮಗಳಿಗೆಹೇಮಾವತಿ ಲಿಂಕ್ ಎಕ್ಸಪ್ರೆಸ್ ಕೆನಾಲ್ನಿಂದ ತೊಂದರೆಯಾಗುತ್ತದೆ ಎಂದು ನಾನು ಹೇಳಿರುವೆ. ಇದರಲ್ಲಿ ಏನು ತಪ್ಪಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ, ಶಿವಕುಮಾರ್ ಅವರಿಗೆ ಸದಾ ಸೆಡ್ಡು ಹೊಡೆಯುವ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರು ಇದನ್ನು ವಿರೋಧಿಸುವುದು ಬೇಡವೇ? ಇದರಲ್ಲಿ ನನ್ನ ತಪ್ಪು ಏನಿದೆ ಎಂದು ಮಾನ್ಯ ಗೌರಿಶಂಕರ್ ಅವರು ಮತ್ತು ಮಾನ್ಯ ಮುರಳೀಧರ್ ಹಾಲಪ್ಪ ಅವರು ನನಗೆ ತಿಳಿಸಬೇಕು ಎಂದರಲ್ಲದೇ……….
ರಾಜ್ಯ ಸರ್ಕಾರ ಶಾಸಕರ ಅನುದಾನದಲ್ಲಿ ತಾರತಮ್ಯ ಮಾಡಿದೆ. ಇದನ್ನು ಪ್ರತಿಭಟಿಸಿ ಈಚೆಗೆ ಮುಖ್ಯಮಂತ್ರಿಗಳು ತುಮಕೂರಿಗೆ ಭೇಟಿ ನೀಡಿದಾಗ ಕಪ್ಪು ಬಾವುಟ ಪ್ರದರ್ಶನ ಮಾಡಬೇಕು ಎಂದು ನಾವೆಲ್ಲ ಎನ್.ಡಿ.ಎ ಶಾಸಕರು ನಿರ್ಧರಿಸಿದ್ದೆವು. ಆಗ ನಾನು ನಮ್ಮ ಕ್ಷೇತ್ರಕ್ಕೆ ಆದ ತಾರತಮ್ಯವನ್ನು ಮಾತ್ರ ಪ್ರಸ್ತಾಪ ಮಾಡಿರಲಿಲ್ಲ. ಕೊರಟಗೆರೆ, ಮಧುಗಿರಿಗೆ ಆದ ಅನ್ಯಾಯವನ್ನೂ ಪ್ರಸ್ತಾಪ ಮಾಡಿದ್ದೆ. ಮುಖ್ಯಮಂತ್ರಿಯ ವಿರುದ್ಧವೇ ಪ್ರತಿಭಟನೆ ಮಾಡಲು ಮುಂದಾದ ನನಗೆ ನಾನು ಯಾರ ವಿರುದ್ಧ ಮಾತನಾಡಬೇಕು ಎಂದೆಲ್ಲ ಗೌರಿಶಂಕರ್ ಹೇಳಿಕೊಡಬೇಕಿಲ್ಲ.
ಗೌರಿಶಂಕರ್ ನನ್ನ ವಿರುದ್ಧ ವೈಯಕ್ತಿಕ ಆರೋಪ ಮಾಡಿದ್ದಾರೆ. ಅದನ್ನೆಲ್ಲ ನೀವು ಮಾಧ್ಯಮದವರು ಹೈಲೈಟ್ ಮಾಡಿದ್ದೀರಿ. ಅದು ನಿಮ್ಮ ಸ್ವಾತಂತ್ರ್ಯ. ನಾನೂ ಅವರ ವಿರುದ್ಧ ಅದೇ ಭಾಷೆಯಲ್ಲಿ ಮಾತನಾಡಬಹುದು. ಆಗ ನನಗೂ ಅವರಿಗೂ ಯಾವ ವ್ಯತ್ಯಾಸವೂ ಇರಲಿಲ್ಲ. ರಾಜಕೀಯದಲ್ಲಿ ಇರುವ ನಾವು ಸಮಾಜಕ್ಕೆ ಮಾದರಿ ಹಾಕಿಕೊಡಬೇಕು. ರೌಡಿಗಳ ಹಾಗೆ ಕಾಣಿಸಿಕೊಳ್ಳಬಾರದು, ಮಾತನಾಡಬಾರದು.
ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದಲ್ಲಿ ನನಗೆ ಲಂಚ ಸಿಕ್ಕಿಲ್ಲ ಎಂದು ಆ ಮಹಾನುಭಾವರು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಇದರ ವಿರುದ್ಧ ನಾನು ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬಹುದು. ಗೌರಿಶಂಕರ್ ಅವರಿಗೆ ಹತಾಶೆಯಾಗಿದೆ. ಏಕೆಂದರೆ ಅವರು 2018 ರ ಚುನಾವಣೆಯಲ್ಲಿ ಅಕ್ರಮ ಎಸಗಿ ಗೆದ್ದಿದ್ದರು. ಅದನ್ನು ಪ್ರಶ್ನಿಸಿ ನಾನು ಹೈಕೋರ್ಟ್ ಮೆಟ್ಟಿಲು ಏರಿ ಗೆದ್ದಿರುವೆ. ಈಗ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಇದೆ. ಅಲ್ಲಿಯೂ ನಾನು ಗೆಲ್ಲುತ್ತೇನೆ. ಇಂಥ ಗೌರಿಶಂಕರ್ರಿಂದ ನಾನು ಕಲಿಯಬೇಕಾದುದೇನೂ ಇಲ್ಲ.
ಗೌರಿಶಂಕರ್ ಚುನಾವಣಾ ಅಕ್ರಮ ಮಾಡಿರುವುದು ಹೈಕೋರ್ಟ್ನಲ್ಲಿ ಸಾಬೀತಾಗಿದೆ. ಅಂದರೆ ಅವರು ಚುನಾವಣಾ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಅರ್ಥ ಅಲ್ಲವೇ? ಅವರ ತಂದೆ ಸನ್ಮಾನ್ಯ ಚೆನ್ನಿಗಪ್ಪ ಅವರ ಬಗ್ಗೆ ನಾವು ಅನೇಕ ಕಥೆಗಳನ್ನು ಕೇಳಿದ್ದೇವೆ. ಅವರು ಕಾನ್ಸ್ಟೇಬಲ್ ಆಗಿದ್ದರು. ಆಗ ಹೆದ್ದಾರಿಯಲ್ಲಿ ನಿಂತು ಹೋಗುವ, ಬರುವಲಾರಿಗಳಿಂದ ಹಪ್ತಾ ವಸೂಲು ಮಾಡುತ್ತಿದ್ದರು ಎಂದು ನಾನು ಕೇಳಿದ್ದೇನೆ. ಬಹುಶಃ ಗೌರಿಶಂಕರ್ಗೆ ತಮ್ಮ ತಂದೆಯ ಈ ಕಥೆಗಳು ಮರೆತು ಹೋಗಿರಬಹುದು. ಅವರು ಗಾಜಿನ ಮನೆಯಲ್ಲಿ ಇದ್ದಾರೆ. ನನ್ನ ವಿರುದ್ಧ ಮಾತನಾಡಿದರೆ ನಾನೂ ಮಾತನಾಡುತ್ತೇನೆ. ಅವರು ನಾಲಿಗೆ ಬಿಗಿಹಿಡಿದು ಮಾತನಾಡಬೇಕು.
ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡುವುದರಲ್ಲಿ ಗೌರಿಶಂಕರ್ ನಿಸ್ಸಿಮರು. ಅವರು ಮೂರೂ ಪಕ್ಷಗಳನ್ನು ಕಂಡು ಬಂದಿದ್ದಾರೆ. ಇಂಥ ಹೊಂದಾಣಿಕೆ ರಾಜಕಾರಣಕ್ಕೆ ಡಾ.ಪರಮೇಶ್ವರ್ ಅವರು ಗೌರಿಶಂಕರ್ ಅವರ ಜಗದ್ಗುರುಗಳು. ನಿಜ ನಾನು ಪರಮೇಶ್ವರ್ ಅವರನ್ನು ಟೀಕೆ ಮಾಡಿದ್ದೇನೆ. ನನ್ನ ಟೀಕೆಗೆ ಅವರು ಉತ್ತರ ಕೊಡಬೇಕು. ಇಲ್ಲವಾದರೆ ತಪ್ಪುಗಳನ್ನು ಸರಿ ಮಾಡಬೇಕು. ಅವರಿಗೆ ಧೈರ್ಯವಿದ್ದರೆ ನೇರವಾಗಿ ಬಂದು ನನ್ನ ವಿರುದ್ಧ ಪತ್ರಿಕಾಗೋಷ್ಠಿ ನಡೆಸಬೇಕು. ಅದನ್ನು ಬಿಟ್ಟು ತಮ್ಮ ಚೇಲಾಗಳನ್ನು ಅದಕ್ಕೆ ಬಳಸಿಕೊಳ್ಳಬಾರದು. ಇದು ವೀರರ ಲಕ್ಷಣ ಅಲ್ಲ. ಇದು ಹೇಡಿಗಳ ಲಕ್ಷಣ ಎಂದು ನಾನು ಹೇಳುವುದಿಲ್ಲ. ನೀವೇ ತೀರ್ಮಾನಿಸಿ ಎಂದು ಜನರಿಗೇ ಪ್ರಶ್ನೆಯನ್ನಾಗಿ ಉಳಿಸಿದರು……
ನಾನು ಪ್ರಯಾಗ್ ರಾಜ್ಗೆ ಹೋಗಿ ಪುಣ್ಯ ಸ್ನಾನ ಮಾಡಿದ್ದನ್ನೂ ಈ ಮಹನೀಯರು ಟೀಕಿಸಿದ್ದಾರೆ. ಇವರು ಇಷ್ಟು ಲೋ ಲೆವೆಲ್ಗೆ ಇಳಿಯುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಹಿಂದೂಗಳ ಭಾವನೆಗಳನ್ನು ನೋಯಿಸುವುದರಲ್ಲಿ ಕಾಂಗ್ರೆಸ್ ಪಕ್ಷದವರು ವಿಕೃತ ಆನಂದ ಪಡೆಯುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಇದೇ ರೀತಿ ಜನರ ನಂಬಿಕೆಗಳ ವಿರುದ್ಧ ಮಾತನಾಡಿದ್ದರು. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀಗೆಲ್ಲ ಮಾತನಾಡಿ ಒಂದಲ್ಲ ಎರಡು ಸೊನ್ನೆ ಸುತ್ತಿದೆ. ಕಳೆದ ಮೂರು ವಿಧಾನಸಭೆ ಚುನಾವಣೆಗಳಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದೂ ಸ್ಥಾನ ಗೆಲ್ಲಲು ಆಗಿಲ್ಲ. ಈ ಸಾರಿಯ ಚುನಾವಣೆಯಲ್ಲಿ 70 ಸೀಟುಗಳ ಪೈಕಿ 67 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಗೌರಿ ಶಂಕರ್ ಇದನ್ನು ಮರೆಯಬಾರದು ಎಂದರು.
ನಾನು ಪ್ರಯಾಗ್ ರಾಜ್ಗೂ ಹೋಗುತ್ತೇನೆ. ತಿರಮಕೂಡಲಿಗೂ ಹೋಗುತ್ತೇನೆ. ಆದರೆ ಗೌರಿಶಂಕರ್ ಗಳಿಸಿದ ಪಾಪದ ಹಣದಲ್ಲಿ ಹೋಗುವುದಿಲ್ಲ. ದೇವರು ಅಲ್ಲಿಗೆ ಹೋಗಿ ಬರುವಷ್ಟು ಸಂಪತ್ತನ್ನು ನನಗೆ ಕೊಟ್ಟಿದ್ದಾನೆ. ಪ್ರಯಾಗ್ ರಾಜ್ನಲ್ಲಿ ನಾನು ಸ್ನಾನ ಮಾಡಿ ಪಾಪ ತೊಳೆದುಕೊಂಡೆ ಎಂದು ಅವರು ಹೇಳಿದ್ದಾರೆ. ಅವರು ಹಾಗೆ ಹೇಳಿ ಇನ್ನೂ ಎರಡು ದಿನ ಆಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪತ್ನಿ ಸಮೇತ ಅಲ್ಲಿಗೆ ಹೋಗಿಸ್ನಾನ ಮಾಡಿ ಬಂದರು. ಎಐಸಿಸಿ ಅಧ್ಯಕ್ಷರು ಮಹಾಕುಂಭ ಮೇಳದ ವಿರುದ್ಧ ಮಾತನಾಡಿದ ನಂತರವೂ ಅಲ್ಲಿಗೆ ಹೋಗಿ ಪುಣ್ಯ ಸ್ನಾನ ಮಾಡಿದ ಶಿವಕುಮಾರ್ ಅವರನ್ನು ನಾನು ಅಭಿನಂದಿಸುತ್ತೇನೆ. ಗೌರಿಶಂಕರ್ ಅವರೇ, ಶಿವಕುಮಾರ್ ಅವರೂ ತಮ್ಮ ಪಾಪ ತೊಳೆದುಕೊಳ್ಳಲು ಅಲ್ಲಿಗೆ ಹೋಗಿದ್ದರೇ ಎಂದು ನಾನು ಕೇಳಲು ಆಗುತ್ತದೆಯೇ? ಆಗ ನನಗೂ ನಿಮಗೂ ಯಾವ ವ್ಯತ್ಯಾಸವೂ ಇರುವುದಿಲ್ಲ. ನಾನು ನಿಮ್ಮ ಮಟ್ಟಕ್ಕೆ ಇಳಿಯುವುದಿಲ್ಲ ಎಂದರು.
ಮುರಳೀಧರ ಹಾಲಪ್ಪ ಅವರು ಪಾಪ ಇನ್ನೂ ಎಳಸು. ಅವರಿಗೆ ಪರಮೇಶ್ವರ್ ಅವರ ಹಿಂದೆ ಓಡಾಡುವುದರಲ್ಲಿಯೇ ರೋಮಾಂಚನ. ಅವರಿಗೆ ನಾನು ವಿಧಾನಸಭೆಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಸೌಲಭ್ಯಗಳ ಬಗ್ಗೆ ಪ್ರಶ್ನೆ ಕೇಳಿರುವುದು ಗೊತ್ತಿಲ್ಲ. ಎತ್ತಿನಹೊಳೆ ನೀರಾವರಿ ಯೋಜನೆ ಬಗ್ಗೆ ಚರ್ಚೆ ಮಾಡಿರುವುದು, ದಲಿತ ಮಹಿಳೆಗೆ ಶವ ಸಂಸ್ಕಾರಕ್ಕೆ ಜಾಗ ಇಲ್ಲದೇ ಇರುವುದನ್ನು ಪ್ರಸ್ತಾಪ ಮಾಡಿರುವುದು ಗೊತ್ತಿಲ್ಲ. ಇವು ಕೇವಲ ಮೂರು ಸ್ಯಾಂಪಲ್ ಕೊಟ್ಟಿರುವ, ಸದನದಲ್ಲಿ ನಾನು ಏನು ಕೇಳಿದೆ. ಏನು ಹೇಳಿದೆ ಎಂದೆಲ್ಲ ಬಂದು ಮುರಳೀಧರ ಹಾಲಪ್ಪ ಅವರಿಗೆ ಹೇಳಲು ಆಗುತ್ತದೆಯೇ? ಅವರು ಇನ್ನಾದರೂ ಪತ್ರಿಕೆಗಳನ್ನು ಓದಲು ಕಲಿಯಬೇಕು. ಅಥವಾ ವಿಧಾನಸಭೆಯ ಲೈಬ್ರರಿಗೆ ಹೋಗಿ ಅಲ್ಲಿ ಕಲಾಪಗಳನ್ನು ಓದಿದರೆ ಯಾರು ಏನು ಮಾತನಾಡಿದ್ದಾರೆ ಎಂದು ಅವರಿಗೆ ಗೊತ್ತಾಗುತ್ತದೆ. ಸುಮ್ಮನೆ ಯಾರೋ ಹೇಳಿಕೊಟ್ಟುದನ್ನು ಮಾಧ್ಯಮಗಳ ಮುಂದೆ ಗಿಣಿಪಾಠ ಮಾಡಿದರೆ ಅವರೇ ನಗೆಪಾಟಲಿಗೆ ಈಡಾಗುತ್ತಾರೆ. ಅವರ ಬಗ್ಗೆ ನನಗೆ ಅಯ್ಯೋ ಅನಿಸುತ್ತದೆ. ಅವರ ತಲೆ ಕೂದಲು ಬಿಳಿಯಾಗಿವೆ. ಆದರೆ, ಬುದ್ಧಿ ಬಲಿತಂತೆ ಕಾಣುವುದಿಲ್ಲ.
ನಮಗೆ ಎಲ್ಲ ಶಾಸಕರಿಗೂ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ಆಸೆ ಇದೆ. ಆದರೆ, ರಾಜ್ಯದಲ್ಲಿ ದರಿದ್ರ ಸರ್ಕಾರ ಇದೆ. ಶಾಸಕರ ಕ್ಷೇತ್ರಗಳಿಗೆ ಒಂದು ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದಾಗ ಈ ಕಾರಣಕ್ಕಾಗಿಯೇ ಪ್ರತಿಭಟನೆ ಮಾಡಲು ನಾನು ನಿರ್ಧರಿಸಿದ್ದೆ. ಆದರೆ, ಪರಮೇಶ್ವರ್ ಅವರೇ ನನ್ನ ಜತೆ ಮಾತುಕತೆ ನಡೆಸಿ ತಾವೇ ಅನುದಾನ ಬಿಡುಗಡೆ ಮಾಡುವ ಜವಾಬ್ದಾರಿ ವಹಿಸಿಕೊಂಡರು. ಆದರೆ, ಇದುವರೆಗೆ ಒಂದು ಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಅಭಿವೃದ್ಧಿ ಕೆಲಸ ಮಾಡಬೇಕು, ನಾನು ಕೊಟ್ಟ ಭರವಸೆ ಈಡೇರಿಸಬೇಕು ಎಂದರೆ ನಾನು ಏನು ಮಾಡಬೇಕು? ನಾನೇನು ನೋಟು ಪ್ರಿಂಟ್ ಮಾಡಲು ಆಗುತ್ತದೆಯೇ?ಜಿಲ್ಲೆಯಲ್ಲಿ ಮಾತ್ರಲವಲ್ಲ ಇಡೀ ಈ ವಿಚಾರವನ್ನು ನಾನು ಮೊದಲು ಪ್ರಸ್ತಾಪ ಮಾಡಿದೆ. ಕುಣಿಗಲ್ ಶಾಸಕರಿಗೆ * ಹೆಚ್ಚಿನ ಅನುದಾನ ಸಿಕ್ಕಿದೆ. ಪರಮೇಶ್ವರ್, ರಾಜಣ್ಣ ಜಯಚಂದ್ರ ಅವರಂಥ ಹಿರಿಯರಿಗೂ ಅಷ್ಟು ಹಣ ಸಿಕ್ಕಿಲ್ಲ ಎಂದು ಹೇಳಿದ್ದೆ. ಕೇವಲ ಗ್ಯಾರಂಟಿ ಯೋಜನೆಗಳ ಭ್ರಮಾಲೋಕದಲ್ಲಿ ಮುಳುಗಿರುವ ಈ ಸರ್ಕಾರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣವೇ ಇಲ್ಲ. ಇಡೀ ರಾಜ್ಯ ಅವನತಿಯತ್ತ ಹೊರಟಿದೆ. ಅದನ್ನೆಲ್ಲ ನಮ್ಮ ಕಾಂಗ್ರೆಸ್ ಮಿತ್ರರು ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪ ಮಾಡಿದ್ದರೆ ನಾನು ಅವರಿಗೆ ಶಹಬ್ಬಾಸ್ ಹೇಳಬಹುದಿತ್ತು ಎಂದರು.
ಸರ್ಕಾರ ಸರಿಯಾಗಿ ನಡೆಯುತ್ತಿಲ್ಲ ಎಂದು ನಾನು ಮಾತ್ರ ಹೇಳುತ್ತಿಲ್ಲ. ನಾನು ಹೇಳಿದರೂ ಅದು ರಾಜಕೀಯ ಕಾರಣಕ್ಕೆ ಎಂದು ನಿಮಗೆಲ್ಲ ಅನಿಸಬಹುದು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಆರ್.ಪಾಟೀಲರು ಈಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟರು. ಅವರು ಸರ್ಕಾರ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದೇ ಹೇಳಿದ್ದಾರೆ. ಇಲ್ಲಿ ಅಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಹೇಳಿದ್ದಾರೆ. ಸನ್ಮಾನ್ಯ ಗೌರಿಶಂಕರ್ ಅವರು, ಮುರಳೀಧರ ಹಾಲಪ್ಪ ಅವರು ತಮ್ಮ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿರುವುದನ್ನು ಮೊದಲು ನೋಡಲಿ. ನಂತರ ನಮ್ಮ ತಟ್ಟೆಯ ಬಗ್ಗೆ ಅವರು ಮಾತನಾಡಲಿ, ನನ್ನ ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಗೌರಿಶಂಕರ್ ಮತ್ತು ಅವರ ಗ್ಯಾಂಗ್ ಹೋಗಿ ನೋಡಿಕೊಂಡು ಬರಬೇಕು. ನನ್ನ ಕ್ಷೇತ್ರದಲ್ಲಿ 15 ವರ್ಷಗಳಿಂದ ಸಿಮೆಂಟ್ ರಸ್ತೆಗಳು ಇನ್ನೂ ಸುಸ್ಥಿತಿಯುಲ್ಲಿ ಇವೆ. ನಾನು ಕಮಿಷನ್ ಹೊಡೆದಿದ್ದರೆ ಅವು ಹಾಗೆ ಇರುತ್ತಿರಲಿಲ್ಲ. ಬೆಂಗಳೂರು ರಸ್ತೆಗಳ ಹಾಗೆ ಮೂರು ತಿಂಗಳಲ್ಲಿ ಎಕ್ಕುಟ್ಟಿ ಹೋಗುತ್ತಿದ್ದುವು. ಇಪ್ಪತ್ತಕ್ಕಿಂತ ಹೆಚ್ಚು ಮಾದರಿ ಶಾಲೆಗಳನ್ನು ಸಿದ್ಧಗೊಳಿಸಿ ಉದ್ಘಾಟನೆ ಮಾಡಿಸಿದ್ದೆ. ಎರಡು ಶಾಲೆಗಳ ಉದ್ಘಾಟನೆಗೆ ಆಗಿನ ರಾಜ್ಯಪಾಲ ವಜುಭಾಯಿ ವಾಲಾ ಅವರೇ ಬಂದಿದ್ದರು. ಕೆರೆಗೆ ನೀರು ತುಂಬಿಸುವುದು ಇರಬಹುದು, ಜನರಿಗೆ ಮೂಲ ಸೌಲಭ್ಯ ಒದಗಿಸುವುದು ಇರಬಹುದು. ಬೇಕಾದಷ್ಟು ಕೆಲಸ ಮಾಡಿಸಿದ್ದೇನೆ. ಇನ್ನೂ ಮಾಡುವುದು ಇದೆ. ನಾನು ಕೆಲಸ ಮಾಡಿರದೇ ಇದ್ದರೆ ಈ ಸಾರಿ ಜನರು ನನಗೆ ಏಕೆ ಮತ ಹಾಕುತ್ತಿದ್ದರು? ಅಷ್ಟೂ ತಿಳಿವಳಿಕೆ ಬೇಡವೇ? ಆದರೆ, ಏನು ಮಾಡುವುದು ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ. ಕಾಂಗ್ರೆಸ್ ಪಕ್ಷದವರು ನಮ್ಮ ಕ್ಷೇತ್ರದ ಬಗ್ಗೆ ತಾರತಮ್ಯ ಮಾಡುತ್ತಿದ್ದಾರೆ. ಅದರ ವಿರುದ್ದವೇ ನಾನು ಧ್ವನಿ ಎತ್ತಿದ್ದೆ. ನಮ್ಮ ಜನರು ಪ್ರಜಾಪ್ರಭುತ್ವದ ತತ್ವಗಳ ಅನುಸಾರ ಬಿಜೆಪಿಗೆ ಮತ ಹಾಕಿದ್ದಾರೆ. ಅದಕ್ಕಾಗಿ ಅವರಿಗೆ ಶಿಕ್ಷೆ ಕೊಡಬೇಡಿ ಎಂದು ಮುಂಚೆಯೇ ಹೇಳಿದ್ದೆ.ಕೊನೆಯದಾಗಿ ಒಂದು ಮಾತು. ವಿನಾಕಾರಣವಾಗಿ ವೈಯಕ್ತಿಕ ಟೀಕೆ ಮಾಡಿದರೆ ನಾನು ಸುಮ್ಮನೆ ಇರುವುದಿಲ್ಲ ಎಂದು ಸ್ಪಷ್ಟಪಡಿಸುವುದಕ್ಕಾಗಿ ಈ ಪತ್ರಿಕಾಗೋಷ್ಠಿ ಕರೆದಿರುವೆ. ಬಾಯಿಗೆ ಬಂದಂತೆ ನರಸತ್ತವರು ಎಂದೆಲ್ಲ ವೈಯಕ್ತಿಕ ಟೀಕೆ ಮಾಡುವವರು ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡುತ್ತಿರುವೆ. ಅದನ್ನೆಲ್ಲ ಸಾಬೀತು ಮಾಡುವುದು ಪತ್ರಿಕಾಗೋಷ್ಠಿಯಲ್ಲ ಎಂದು ಗೌರಿಶಂಕರ್ಗೆ ಹೇಳಲು ಬಯಸುತ್ತೇನೆ. ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ಟೀಕೆ ಮಾಡುವುದಿಲ್ಲ ಎಂದು ಇಲ್ಲಿ ನಿಮ್ಮ ಮುಂದೆ ವಚನ ಕೊಡುತ್ತೇನೆ. ನನ್ನ ವಿರುದ್ಧವೂ ವೈಯಕ್ತಿಕ ಟೀಕೆ ಮಾಡಬಾರದು ಎಂದು ಮನವಿ ಮಾಡಿಕೊಳ್ಳುವೆ. ಇದನ್ನು ಪರಮೇಶ್ವರ್ ಅವರು ತಮ್ಮ ಶಿಷ್ಯರಿಗೆ ಮೊದಲು ಕಲಿಸಬೇಕು ಎಂದು ಕೋರಿಕೊಳ್ಳುತ್ತೇನೆ.