ಮಧುಗಿರಿ : ಮುಕ್ಕೋಟಿ ದ್ವಾದಶಿ ದಿನದಂದು ವೈಕುಂಠದ ಉತ್ತರ ದ್ವಾರ ತೆರೆಯುತ್ತದೆ. ದೇವತೆಗಳೆಲ್ಲ ಮಹಾವಿಷ್ಣುವಿನ ದರ್ಶನ ಪಡೆಯುವ ಸಲುವಾಗಿ ಆ ದ್ವಾರದ ಮೂಲಕ ತೆರಳುತ್ತಾರೆ. ಆದ್ದರಿಂದ ದೇವಾಲಯಗಳ ಉತ್ತರ ದಿಕ್ಕಿನ ದ್ವಾರಗಳನ್ನು ತೆರೆದು ದರ್ಶನ ಪಡೆದರೆ ಪುಣ್ಯಪ್ರಾಪ್ತಿಯಾಗುತ್ತದೆ. ವೈಕುಂಠ ಏಕಾದಶಿಯ ಮರು ದಿನ ಮುಕ್ಕೋಟಿ ದ್ವಾದಶಿ. ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹೇಳಿದರು.
ಶನಿವಾರ ಪಟ್ಟಣದ ದೊಡ್ಡಪೇಟೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವರಿಗೆ ಮುಕ್ಕೋಟಿ ದ್ವಾದಶಿ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಅಭಿಷೇಕ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದ ರಾಜೇಂದ್ರ ರಾಜಣ್ಣ ಮಾತನಾಡಿದರು. ನಂತರ ಆರ್ಯವೈಶ್ಯ ಮಂಡಳಿ ಕಾರ್ಯಕಾರಿ ಸಮಿತಿ ವತಿಯಿಂದ ಅವರನ್ನು ಗೌರವಿಸಲಾಯಿತು.
ಮತ್ತೊಬ್ಬ ಪರಿಷತ್ ಸದಸ್ಯ, ಟಿ.ಎ. ಶರವಣ ಹಾಗೂ ಪುರಸಭೆ ಅಧ್ಯಕ್ಷರಾದ ಲಾಲಪೇಟೆ ಮಂಜುನಾಥ್ ಮಾಜಿ ಅಧ್ಯಕ್ಷರಾದ ನಂಜುಂಡರಾಜು ಪುರಸಭೆ ನಾಮಿನಿ ಸದಸ್ಯರಾದ ಸುಧಾಕರ್, ಮುಖಂಡರಾದ ಆನಂದ್ ಕೃಷ್ಣ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ದೇವರ ದರ್ಶನವನ್ನು ಪಡೆದರು.
ಸಾವಿರಾರು ಭಕ್ತರು ಸರದಿಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ವಿವಿಧ ಮಹಿಳಾ ಸಂಘಗಳಿಂದ ಭಜನೆ, ಭಕ್ತಿ ಗೀತೆಗಳು ಗಾಯನ ಕಾರ್ಯಕ್ರಮ ನಡೆಯಿತು.
ಸಂಜೆ ವಾಸವಿ ಯುವಜನ ಸಂಘದ ವತಿಯಿಂದ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ದೇವರನ್ನು ದೇವಸ್ಥಾನದ ಆವರಣದಲ್ಲಿ ಪ್ರಾಕಾರೋತ್ಸವ ನಡೆಸಿ ದೇವರನ್ನು ಗುಡಿದುಂಬಿದರು. ಈ ಸಂದರ್ಭದಲ್ಲಿ ಆರ್ಯವೈಶ್ಯ ಮಂಡಳಿ ಮತ್ತು ಅಂಗ ಸಮಸ್ತೆಗಳ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳು ಹಾಜರಿದ್ದರು.