ಕುಂಭಮೇಳಕ್ಕೆ ಮಹಾಕುಂಭ ಎಂದೂ ಕರೆಯುತ್ತಾರೆ. ಇದು ಭಾರತೀಯ ಸಂಸ್ಕೃತಿ ಮತ್ತು ಧರ್ಮದ ಶ್ರೇಷ್ಠತೆಯ ಪ್ರತೀಕವಾಗಿದೆ. ಇದು ಕೇವಲ ಒಂದು ಧಾರ್ಮಿಕ ಆಯೋಜನೆಯಲ್ಲ, ಬದಲಾಗಿ ಆಧ್ಯಾತ್ಮಿಕ ಸಮ್ಮೇಳನ, ಮಹಾಸತ್ಸಂಗ ಮತ್ತು ಸಾಂಸ್ಕೃತಿಕ ಪರಂಪರೆಯ ಭವ್ಯ ಆಯೋಜನೆಯಾಗಿದೆ. ಪ್ರಯಾಗರಾಜನ ತ್ರಿವೇಣಿ ಸಂಗಮದಲ್ಲಿ ಆಯೋಜಿಸಲಾಗಿರುವ ಈ ಮೇಳ ಹಿಂದೂ ಧರ್ಮದಲ್ಲಿ ವಿಶಿಷ್ಟ ಪ್ರಾಮುಖ್ಯತೆಯನ್ನು ಹೊಂದಿದೆ. ಕೋಟ್ಯಂತರ ಭಕ್ತರ ಉಪಸ್ಥಿತಿ ಮತ್ತು ವ್ಯಾಪಕ ಜನಸಮೂಹದ ಕಾರಣದಿಂದ ಈ ಮೇಳ ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವೆಂದು ಪರಿಗಣಿಸಲಾಗಿದೆ.
ಹಿಂದೂಗಳ ಕಾರ್ಯಕ್ರಮಗಳ ಬಗ್ಗೆ ಮಾತ್ರ ಸವಾಲುಗಳು !
ಕುಂಭಮೇಳಕ್ಕಾಗಿ ಖರ್ಚು ಮಾಡುವ ಹಣದ ಬಗ್ಗೆ ಹೆಚ್ಚಿನ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಕಾರ್ಯಕ್ರಮಕ್ಕಾಗಿ ಸರಕಾರವು ಅತ್ಯಧಿಕ ಹಣವನ್ನು ಖರ್ಚು ಮಾಡುತ್ತದೆ ಎಂದು ಹೇಳಲಾಗುತ್ತದೆ, ಇದನ್ನು ಆರೋಗ್ಯ, ಶಿಕ್ಷಣ ಮತ್ತು ಬಡತನ ನಿರ್ಮೂಲನೆಯಂತಹ ಇತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬಹುದು. ವಿಶೇಷವಾಗಿ ನಾಗಾ ಸಾಧುಗಳು ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳ ವೆಚ್ಚದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಆದಾಗ್ಯೂ, ಇತರ ಧರ್ಮಗಳ ಧಾರ್ಮಿಕ ಕಾರ್ಯಕ್ರಮಗಳಿಗೂ ಸರಕಾರ ವೆಚ್ಚ ಮಾಡುತ್ತದೆ ಎಂಬುದನ್ನು ಗಮನಿಸುವುದು ಆವಶ್ಯಕವಾಗಿದೆ. ಉದಾ. ಮುಸ್ಲಿಂ ಸಮುದಾಯದ ಹಜ್ ಯಾತ್ರೆಯ ಆಯೋಜನೆಯಲ್ಲಿಯೂ, ಸರಕಾರ ಹೆಚ್ಚಿನ ಪ್ರಮಾಣದ ವೆಚ್ಚ ಮಾಡುತ್ತದೆ. ಆದರೆ ಆಗ ಯಾರೂ ಪ್ರಶ್ನಿಸುವುದಿಲ್ಲ. ಇಂತಹದರಲ್ಲಿ ಕೇವಲ ಹಿಂದೂ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗಳ ಮೇಲೆ ಮಾತ್ರ ಪ್ರಶ್ನಿಸುವುದು ಸೂಕ್ತವಲ್ಲ ಎಂದು ತೋರುತ್ತದೆ.
ಆರ್ಥಿಕ ದೃಷ್ಟಿಕೋನದಿಂದ ಕುಂಭಮೇಳದ ಮಹತ್ವ !
2019 ರಲ್ಲಿ ಪ್ರಯಾಗರಾಜನಲ್ಲಿ ನಡೆದ ಕುಂಭಮೇಳಕ್ಕೆ ಉತ್ತರ ಪ್ರದೇಶ ಸರಕಾರ ಸುಮಾರು 4 ಸಾವಿರ 200 ಕೋಟಿ ಖರ್ಚು ಮಾಡಿತು. ಈ ಮೊತ್ತವನ್ನು ಮೂಲಭೂತ ಸೌಲಭ್ಯಗಳು, ಅಭಿವೃದ್ಧಿ, ಭದ್ರತೆ, ನೈರ್ಮಲ್ಯ ಮತ್ತು ಇತರ ಅಗತ್ಯ ಸೇವೆಗಳಿಗೆ ಖರ್ಚು ಮಾಡಲಾಗಿದೆ. ಈ ಆಯೋಜನೆಯಿಂದ ರಾಜ್ಯಕ್ಕೆ ರೂ. 1.2 ಲಕ್ಷ ಕೋಟಿ ಆರ್ಥಿಕ ಲಾಭವಾಯಿತು. ಈ ಲಾಭವು ಪ್ರವಾಸೋದ್ಯಮ, ವ್ಯಾಪಾರ ಮತ್ತು ಇತರ ಮಾಧ್ಯಮಗಳ ಮೂಲಕ ಹರಿದು ಬಂದಿತು.
ಕುಂಭಮೇಳದ ಸಮಯದಲ್ಲಿ ತಾತ್ಕಾಲಿಕ ನಗರವನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ ರಸ್ತೆಗಳು, ಸೇತುವೆಗಳು, ಸಂಚಾರ ವ್ಯವಸ್ಥೆಗಳು, ನೀರು ಸರಬರಾಜು, ವಿದ್ಯುತ್ ಮತ್ತು ವ್ಯಾಪಕವಾದ ನೈರ್ಮಲ್ಯ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಇದು ಕೇವಲ ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸುವುದಲ್ಲದೆ, ಲಕ್ಷಾಂತರ ಜನರಿಗೆ ಉದ್ಯೋಗವನ್ನೂ ಒದಗಿಸುತ್ತದೆ.
ಕುಂಭಮೇಳದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವ !
ಕುಂಭಮೇಳವು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಬದಲಾಗಿ ಭಾರತೀಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನವಾಗಿದೆ. ಈ ಆಯೋಜನೆಯು ಸಾಂಪ್ರದಾಯಿಕ ವೃತ್ತಿಗಳಾದ ಕರಕುಶಲ ವಸ್ತುಗಳು, ಜವಳಿ ಉತ್ಪಾದನೆ ಮತ್ತು ಸ್ಥಳೀಯ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸುತ್ತದೆ. ಕುಂಭಮೇಳದ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಕಲೆಯನ್ನು ಜಾಗತಿಕವಾಗಿ ಪ್ರಚಾರ-ಪ್ರಸಾರ ಆಗುತ್ತದೆ.
ಭಾರತೀಯ ಸಮಾಜದ ಒಂದು ಅವಿಭಾಜ್ಯ ಅಂಗ : ಕುಂಭಮೇಳ
ಕುಂಭಮೇಳವು ಭಾರತೀಯ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಧಾರ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ದೃಷ್ಟಿಕೋನದಿಂದ ಅತ್ಯಂತ ಮಹತ್ವಪೂರ್ಣವಾಗಿದೆ. ಅದನ್ನು ಅಪವ್ಯಯವೆಂದು ಕರೆಯುವುದು ಸೂಕ್ತವಲ್ಲ. ಈ ಮೇಳ ಕೇವಲ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದರೊಂದಿಗೆ, ಸಮಾಜದಲ್ಲಿ ಏಕತೆ, ಸಾಮರಸ್ಯ ಮತ್ತು ಸಹೋದರತ್ವದ ಮನೋಭಾವವನ್ನು ಉತ್ತೇಜಿಸುತ್ತದೆ.
ಟೀಕೆಗಳ ಹೊರತಾಗಿಯೂ, ಕುಂಭಮೇಳವು ಭಾರತೀಯ ಸಂಸ್ಕೃತಿಯ ಆಳ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸುವ ಒಂದು ಕಾರ್ಯಕ್ರಮ ಎಂಬುದನ್ನು ಒಪ್ಪಿಕೊಳ್ಳುವುದು ಆವಶ್ಯಕವಾಗಿದೆ. ಅದನ್ನು ಅಪವ್ಯಯವೆಂದು ತಿಳಿಯದೇ ಭಾರತೀಯ ಸಮಾಜದ ಉನ್ನತಿ ಮತ್ತು ಅಭಿವೃದ್ಧಿಯ ಒಂದು ಮಾಧ್ಯಮವೆಂದು ಪರಿಗಣಿಸಬೇಕು.
ಭಕ್ತರಿಗೆ ಸುವರ್ಣ ಅವಕಾಶ !
ಸನಾತನ ಸಂಸ್ಥೆಯು ಹಲವು ವರ್ಷಗಳಿಂದ, ಕುಂಭಮೇಳದಲ್ಲಿ ವಿವಿಧ ಮಾಧ್ಯಮಗಳ ಮೂಲಕ ಸಾಧನೆಯನ್ನು ಉತ್ತಮಗೊಳಿಸಲು ಮಾರ್ಗದರ್ಶನ ಮಾಡುತ್ತಿದೆ. ಈ ವರ್ಷ ಪ್ರಯಾಗರಾಜನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಾಧನಾ ಸತ್ಸಂಗ, ನಾಮಸ್ಮರಣೆ, ಫ್ಲೆಕ್ಸ್ ಪ್ರದರ್ಶನ ಇತ್ಯಾದಿಗಳ ಮೂಲಕ ವ್ಯಾಪಕ ಪ್ರಚಾರ-ಪ್ರಸಾರವನ್ನು ಆಯೋಜಿಸಲಾಗಿದೆ. ಭಕ್ತರು ಸಾಧನೆಯ ಆನಂದವನ್ನು ಪಡೆಯಲು ಮತ್ತು ಅದನ್ನು ಇತರರಿಗೆ ತಲುಪಿಸಲು ಈ ಸುವರ್ಣ ಅವಕಾಶದ ಲಾಭವನ್ನು ತಪ್ಪದೇ ಬಳಸಿಕೊಳ್ಳಬೇಕು.