’ಗೋ ಬ್ಯಾಕ್ ಸಿದ್ದರಾಮಯ್ಯ’ ಹೋರಾಟ ನಡೆಸುವ ಎಚ್ಚರಿಕೆ ನೀಡಿದ ತುಮಕೂರು ಭಾಜಾಪ

 

 

 

 

 

ತುಮಕೂರು: ಕಾಂಗ್ರೆಸ್ ಶಾಸಕರಿಗೆ ವಿಶೇಷ ಅನುದಾನ ನೀಡಿ ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡದೆ ತಾರತಮ್ಯ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ, ಡಿಸೆಂಬರ್ 2ರಂದು ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ’ಗೋ ಬ್ಯಾಕ್ ಸಿದ್ದರಾಮಯ್ಯ’ ಹೋರಾಟ ನಡೆಸುವುದಾಗಿ ಜಿಲ್ಲೆಯ ಎನ್‌ಡಿಎ ಶಾಸಕರು ಎಚ್ಚರಿಕೆ ನೀಡಿದ್ದಾರೆ.

 

 

 

 

 

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಎಂಟು ತಿಂಗಳು ಕಳೆದರೂ ಒಂದು ರೂಪಾಯಿಯ ಅಭಿವೃದ್ಧಿ ಕೆಲಸಗಳಾಗಿಲ್ಲ. ಶಾಸಕರ ಕ್ಷೇತ್ರಗಳಿಗೆ 25 ಕೋಟಿ ರೂ.ಗಳ ವಿಶೇಷ ಅನುದಾನ ನೀಡುವುದಾಗಿ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಇದೂವರೆಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

 

 

 

 


ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಗೆಂದು ಡಿಸೆಂಬರ್ 2ರಂದು ತುಮಕೂರಿಗೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜಿಲ್ಲೆಯ ಬಿಜೆಪಿ, ಜೆಡಿಎಸ್ ಕ್ಷೇತ್ರದ ಸಾವಿರಾರು ಜನ ಬಂದು ಪ್ರತಿಭಟನೆ ನಡೆಸಿ ’ಗೋ ಬ್ಯಾಕ್ ಸಿದ್ದರಾಮಯ್ಯ’ ಹೋರಾಟ ಮಾಡಲಾಗುವುದು. ಮುಖ್ಯಮಂತ್ರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡುವಲ್ಲೂ ತಾರತಮ್ಯ ಮಾಡಿದ್ದಾರೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಪ್ರತಿನಿಧಿಸುವ ಶಿರಾಕ್ಕೆ 8 ಕೋಟಿ ರೂ., ಸಚಿವ ಡಾ.ಪರಮೇಶ್ವರ್ ಅವರ ಕೊರಟಗೆರೆಗೆ 10 ಕೋಟಿ ರೂ., ಸಚಿವ ಕೆ.ಎನ್.ರಾಜಣ್ಣ ಅವರ ಮಧುಗಿರಿ ಕ್ಷೇತ್ರಕ್ಕೆ ವಿವಿಧ ಇಲಾಖೆಗಳ ಅನುದಾನ, ಎಸ್.ಆರ್.ಶ್ರೀನಿವಾಸ್ ಅವರ ಗುಬ್ಬಿ ಕ್ಷೇತ್ರಕ್ಕೆ 5 ಕೋಟಿ ರೂ., ಷಡಕ್ಷರಿ ಅವರ ತಿಪಟೂರು ಕ್ಷೇತ್ರಕ್ಕೆ 10 ಕೋಟಿ ರೂ., ಡಿಸಿಎಂ ಡಿ.ಕೆ.ಶಿವಕುಮಾರ್ ಸಬಂಧಿಯಾದ ಕುಣಿಗಲ್ ಶಾಸಕ ಡಾ.ರಂಗನಾಥ್ ಕ್ಷೇತ್ರಕ್ಕೆ 43 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಬಿಜೆಪಿ, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನಯಾ ಪೈಸೆ ಅನುದಾನ ನೀಡದಿರುವುದನ್ನು ಖಂಡಿಸುತ್ತೇವೆ ಎಂದರು.

 

 

 

 

 


ಶಾಸಕರಿಗೆ ಕೊಡಬೇಕಾದ ಅನುದಾನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮನೆಯಿಂದ ತಂದ ಹಣವಲ್ಲ, ಜನರ ತೆರಿಗೆ ಹಣ. ವಿಪಕ್ಷದ ಶಾಸಕರಿಗೆ ಅನುದಾನ ನೀಡದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಮೂರು ಕ್ಷೇತ್ರ ಗೆದ್ದ ಮಾತ್ರಕ್ಕೆ ಭೂಮಂಡಲವನ್ನೇ ಗೆದ್ದಂತೆ ಬೀಗುತ್ತಿರುವ ಕಾಂಗ್ರೆಸ್ ನಾಯಕರು ಅಧಿಕಾರ ಶಾಶ್ವತವಲ್ಲ ಎಂದು ತಿಳಿಯಬೇಕು ಎಂದು ಸುರೇಶ್‌ಗೌಡ ಹೇಳಿದರು.

 

 

 

 

 

ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಜನರ ತೆರಿಗೆ ಹಣವನ್ನು ಎಲ್ಲಾ ಕ್ಷೇತ್ರಗಳಿಗೆ ಸಮಾನವಾಗಿ ಹಂಚಬೇಕು. ಕೇಂದ್ರ ಸರ್ಕಾರ ತೆರಿಗೆ ಹಣ ಬಿಡುಗಡೆ ಮಾಡಲಿಲ್ಲ ಎಂದು ಪ್ರಧಾನ ಮಂತ್ರಿ, ಹಣಕಾಸು ಮಂತ್ರಿ ವಿರುದ್ಧ ಪ್ರತಿಭಟನೆ ಮಾಡಿದ ಕಾಂಗ್ರೆಸ್ ನಾಯಕರು ಯಾವ ನೈತಿಕತೆ ಉಳಿಸಿಕೊಂಡಿದ್ದೀರಿ? ಬಿಜೆಪಿ, ಜೆಡಿಎಸ್ ಕ್ಷೇತ್ರದ ಜನ ತೆರಿಗೆ ಕಟ್ಟುವುದಿಲ್ಲವೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಜಿನಿಯರ್‌ಗಳ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳು ಶಾಸಕರ ಮಾತು ಕೇಳಬೇಡಿ ಎಂದು ಹೇಳಿದ್ದಾರೆ. ಇನ್ಯಾರ ಮಾತು ಕೇಳಬೇಕು? ಇದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ, ಶಿವಕುಮಾರ್ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ರಾಜ್ಯದ ಶಾಸಕರ ಕ್ಷಮೆ ಯಾಚಿಸಬೇಕು ಎಂದು ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದರು.

 

 

 

 

 

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ವಿರೋಧ ಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡದೆ ತಾರತಮ್ಯ ಮಾಡಿದ ಕಾಂಗ್ರೆಸ್ ಸರ್ಕಾರದ ನಡವಳಿಕೆ ಖಂಡಿಸಿ, ಮುಖ್ಯಮಂತ್ರಿಗಳ ಕಾರ್ಯಕ್ರಮದ ಒಳಗಾಗಿ ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಗುಬ್ಬಿಯ ಜೆಡಿಎಸ್ ಮುಖಂಡ ನಾಗರಾಜು, ಬಿಜೆಪಿ ಮುಖಂಡ ದಿಲೀಪ್‌ಕುಮಾರ್, ಜಗದೀಶ್, ಪ್ರಭಾಕರ್, ಮಾಧ್ಯಮ ಪ್ರಮುಖ್ ಜೆ.ಜಗದೀಶ್ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!