ಮಾನವ ಸಂಘ ಜೀವಿ. ಪ್ರಪಂಚದಲ್ಲಿ ಯಾರೊಬ್ಬರೂ ಯಾರ ಸಹಾಯವೂ ಇಲ್ಲದೆ ಜೀವಿಸಲು, ಇನ್ನೊಬ್ಬರಿಂದ ದೂರಾಗಿರುವುದೂ ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು, ಒಟ್ಟಿಗೇ ನಿಲ್ಲಬೇಕು. ಇದುವೇ ಸಹಕಾರಿ ಜೀವನದ ಸಂದೇಶ. ಮಹಾತ್ಮಗಾಂಧೀಜಿಯವರು ಹೇಳಿದಂತೆ, “ಎಲ್ಲರ ಹಿತಕ್ಕಾಗಿ ಎಲ್ಲರ ಸಮ್ಮತಿಯೊಂದಿಗೆ ಎಲ್ಲರೊಂದಿಗೆ ಕೂಡಿದ ಒಂದು ಸುವ್ಯವಸ್ಥೆಯೇ ಸಹಕಾರ”. ಅಷ್ಟೇ ಅಲ್ಲ, ಆರ್ಥಿಕ ಸ್ವಾತಂತ್ರ್ಯಕ್ಕೆ ಸಹಕಾರವೇ ಹೆಬ್ಬಾಗಿಲು ಎಂಬುದು ಕೂಡಾ ಗಾಂಧೀಜಿಯವರ ಬಲವಾದ ನಂಬಿಕೆಯಾಗಿತ್ತು. ಮಾನವ ಸಮಾಜ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಹಕಾರವೆನ್ನುವುದು ಹುಟ್ಟಿಕೊಂಡಿದೆ. ಇಬ್ಬರು ಅಥವಾ ಹೆಚ್ಚು ಜನರು ಒಂದುಗೂಡಿ ವೈಯಕ್ತಿಕವಾಗಿ ಸಾಧಿಸಲು ಅಸಾಧ್ಯವಾದ ಗುರಿಯನ್ನು ಸುಲಭವಾಗಿ ಸಾಧಿಸಲು ಮಾಡಿಕೊಂಡಿರುವ ವ್ಯವಸ್ಥೆಯೇ ಸಹಕಾರ.
ಇವೇ ತತ್ವಗಳ ಅಡಿಯಲ್ಲಿ, ವೈಶ್ಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ನೂರು ವರ್ಷಗಳ ಹಿಂದೆ ಸಮುದಾಯದ ಪೂರ್ವಜರ ಚಿಂತನೆಯ ಪ್ರತಿರೂಪವಾಗಿ ಹುಟ್ಟಿಕೊಂಡದ್ದೇ ವೈಶ್ಯ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್. ಸಮಾಜ ಸೇವೆ, ಸಹಕಾರಿ ತತ್ವಗಳಲ್ಲಿ ನಂಬಿಕೆ ಇದ್ದ ಸದಸ್ಯರ ಪ್ರಯತ್ನದ ಫಲವಾಗಿ ಶ್ರೀಯುತ ಎ.ವಿ. ನಂಜುಂಡ ಶೆಟ್ಟರ ನೇತೃತ್ವದಲ್ಲಿ 1925ರಲ್ಲಿ “ವೈಶ್ಯ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್” ಹೆಸರಿನಲ್ಲಿ ಕೋ-ಆಪರೇಟಿವ್ ಸೊಸೈಟಿ ಅಂದಿನ ಮೈಸೂರು ರಾಜ್ಯ ಸಹಕಾರಿ ಕಾಯಿದೆ ಅಡಿಯಲ್ಲಿ ನೋಂದಣಿಗೊಂಡು ಅಸ್ತಿತ್ವಕ್ಕೆ ಬಂದಿತು. ಆಗಿನ ಕಾಲಕ್ಕೆ ಮಹಾ ದಾನಿಗಳೆನಿಸಿದ್ದ, ಸಮಾಜದ ಬಗ್ಗೆ ಅಪಾರ ಕಾಳಜಿ, ಕಳಕಳಿ ಹೊಂದಿದ್ದ ಶ್ರೀಯುತ ಟಿ.ಎ.ಸಂಜೀವ ಶೆಟ್ಟರು ಸಂಸ್ಥಾಪಕ ಅಧ್ಯಕ್ಷರಾಗಿ ಆಯ್ಕೆಯಾದರು. ಖಾವಂದರ ಮುಂದಾಳತ್ವದಲ್ಲಿ ಜನಾಂಗದವರ ಸಹಕಾರದಿಂದ ಅಗತ್ಯವಾದ ಸಂಪನ್ಮೂಲ ಕ್ರೋಢೀಕರಿಸಿಕೊಂಡು ಯಶಸ್ವಿಯಾಗಿ ಮುನ್ನಡಿ ಇಟ್ಟಿತು. ಅಂದು ಕೇವಲ 49 ಸದಸ್ಯರು ಮತ್ತು 6025 ರೂಪಾಯಿಗಳ ಬಂಡವಾಳದಿಂದ ಆರಂಭಗೊಂಡ ಸಂಸ್ಥೆ ಚಾಲ್ತಿ ಖಾತೆಯಲ್ಲಿ 722 ರೂ. ಮತ್ತು 340 ರೂಪಾಯಿ ಖಾಯಂ ಠೇವಣಿ ಹೊಂದಿತ್ತು.
ಮೇಲ್ವಿಚಾರಕ ಆಡಳಿತ ಮಂಡಳಿಯ ಕಾರ್ಯದಕ್ಷತೆಯಿಂದ ಪ್ರತಿ ವರ್ಷವೂ ಪ್ರಗತಿಯತ್ತ ದಾಪುಗಾಲಿಟ್ಟುಕೊಂಡು ಸಾಗಿ ಬಂದಿದೆ. ವರ್ಷದಿಂದ ವರ್ಷಕ್ಕೆ ತನ್ನ ಸದಸ್ಯರನ್ನು ಮತ್ತು ಬಂಡವಾಳವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾ ಬಂದ ಸಂಸ್ಥೆ 1960ರಲ್ಲಿ “ಎ” ಶ್ರೇಣಿಯ ಕೋ-ಆಪರೇಟಿವ್ ಸೊಸೈಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಅಂದಿನಿಂದ ಇಂದಿನವರೆಗೂ ಅದೇ ಶ್ರೇಯಕ್ಕೆ ಪಾತ್ರವಾಗಿದೆ. ಗ್ರಾಹಕರ ಮತ್ತು ಸಮುದಾಯದವರ ನಿರಂತರ ವಿಶ್ವಾಸದ ಮೇಲೆ ಅಭಿವೃದ್ಧಿಯ ಪಥದಲ್ಲಿ ಸಾಗಿ ಬಂದ ವೈಶ್ಯ ಕೋ ಆಪರೇಟಿವ್ ಸೊಸೈಟಿ 18.8.1978 ರಲ್ಲಿ ವೈಶ್ಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಆಗಿ ಪರಿವರ್ತನೆಗೊಂಡಿತು. ಕೀರ್ತಿಶೇಷರಾದ ಶ್ರೀ ನಂಜುಂಡಶೆಟ್ಟರ ಮೊಮ್ಮಕ್ಕಳಾದ ಶ್ರೀಯುತ ಟಿ.ಎ. ಸಂಪಂಗಿರಾಮು ಪ್ರಥಮ ಅಧ್ಯಕ್ಷರಾಗಿ, ಶ್ರೀ ಟ.ಎಸ್.ಶಶಿಕುಮಾರ್ ಅವರು ಉಪಾಧ್ಯಕ್ಷರಾಗಿ ಹಾಗೂ ಶ್ರೀಯುತ ಎನ್. ಎಸ್. ನಾಗೇಂದ್ರ ಪ್ರಸಾದ್ ಅವರು ಗೌರವ ಕಾರ್ಯದರ್ಶಿಯಾಗಿ ಬ್ಯಾಂಕ್ ಆಡಳಿತ ಮಂಡಳಿಯ ಚುಕ್ಕಾಣಿಯನ್ನು ಹಿಡಿದು ಮುನ್ನಡೆಸಿದರು.
ಆರಂಭದಲ್ಲಿ ತುಮಕೂರು ನಗರ ವ್ಯಾಪ್ತಿಗಷ್ಟೇ ಸೀಮಿತವಾಗಿದ್ದ ಬ್ಯಾಂಕ್, 1988ರ ಸೆಪ್ಟೆಂಬರ್ನಲ್ಲಿ ತುಮಕೂರಿನ ಎಪಿಎಂಸಿ ಯಾರ್ಡ್ನಲ್ಲಿ ಬ್ಯಾಂಕಿನ ಪ್ರಥಮ ಶಾಖೆಯನ್ನು ಆರಂಭಿಸಿತು. ನಂತರದ ದಿನಗಳಲ್ಲಿ ವಿಜಯನಗರ (SIT) ಬಡಾವಣೆ, ತುಮಕೂರು ಜಿಲ್ಲೆಯ ಪಾವಗಡ ಮತ್ತು ಮಧುಗಿರಿಯಲ್ಲಿ ಶಾಖೆಗಳನ್ನು ಆರಂಭಿಸಿತು. ತುಮಕೂರು ಜಿಲ್ಲೆಯ ಹೊರತಾಗಿ ಬೆಂಗಳೂರಿಗೆ ತನ್ನ ಕಾರ್ಯ ವ್ಯಾಪ್ತಿ ವಿಸ್ತರಿಸಿದ ಬ್ಯಾಂಕ್ ಬೆಂಗಳೂರಿನ ಎಪಿಎಂಸಿ ಯಾರ್ಡ್ ಮತ್ತು ಬಿ.ವಿ.ಕೆ.ಅಯ್ಯಂಗಾರ್ ರಸ್ತೆ ಹಾಗೂ ಮೈಸೂರಿನಲ್ಲೂ ತನ್ನ ಶಾಖೆಗಳನ್ನು ತೆರೆದು ಗ್ರಾಹಕರಿಗೆ ಹೆಚ್ಚಿನ ಸೇವೆ ಸಲ್ಲಿಸಲು ಆರಂಭಿಸಿತು.
ಕಾಲ ಬದಲಾದಂತೆ, ಹೆಚ್ಚುತ್ತಿರುವ ತಾಂತ್ರಿಕ ಅನುಕೂಲಗಳನ್ನು ತನ್ನ ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟ ವೈಶ್ಯ ಕೋ-ಆಪರೇಟಿವ್ ಬ್ಯಾಂಕ್ ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆಯೇ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಸೇವಾ ಸೌಲಭ್ಯವಾದ ಟೆಲಿ ಬ್ಯಾಂಕಿಂಗ್ ಸೇವೆ ಆರಂಭಿಸಿತು. ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭಿಸಿದ್ದಲ್ಲದೆ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಎಬಿಬಿ, ಎನಿ ಬ್ರಾಂಚ್ ಬ್ಯಾಂಕಿಂಗ್ ಸೇವೆಯನ್ನು ಅನುಷ್ಠಾನಗೊಳಿಸಿತು. ಇದರಿಂದ ಬ್ಯಾಂಕಿನ ಗ್ರಾಹಕರು ಯಾವುದೇ ಶಾಖೆಯಿಂದ ಆದರೂ ಎಲ್ಲ ರೀತಿಯ ಹಣಕಾಸಿನ ವಹಿವಾಟು ನಡೆಸಬಹುದಾಗಿದೆ. ತುಮಕೂರು ನಗರದ ಪ್ರಧಾನಕಚೇರಿ ಹಾಗೂ ಬೆಂಗಳೂರಿನ ಬಿವಿಕೆ ಅಯ್ಯಂಗಾರ್ ರಸ್ತೆಯ ಶಾಖೆಯಲ್ಲಿ ಗ್ರಾಹಕರೇ ನಿರ್ವಹಿಸುವ ಕಿಯೋಸ್ಕ್ ಲಾಬಿ ಬ್ಯಾಂಕಿಂಗ್ ಎಂಬ ವಿನೂತನ ಯೋಜನೆಯನ್ನು ಅನುಷ್ಠಾನಗೊಳಿಸಿತು.
ಬ್ಯಾಂಕಿನಿಂದ ದೇಶದ ಯಾವುದೇ ಪ್ರದೇಶದ ಬ್ಯಾಂಕುಗಳಿಗೆ ಡಿಮ್ಯಾಂಡ್ ಡ್ರಾಫ್ಟ್ನ್ನು ನೀಡಲು ಇತರೆ ಬ್ಯಾಂಕುಗಳೊಂದಿಗೆ ಅಂತರ್ದೇಶೀಯ ಏರ್ಪಾಡು ಯೋಜನೆಯಡಿಯಲ್ಲಿ ಸಮರ್ಥ ಸೇವೆ ಒದಗಿಸಲಾಗುತ್ತಿದ್ದು, ಗ್ರಾಹಕರಿಗೆ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸಲು ಡಿಡಿ ಷಾಪಿಯನ್ನು ಕಳೆದ 25 ವರ್ಷಗಳ ಹಿಂದೆಯೇ ಅನುಷ್ಠಾನಕ್ಕೆ ತರಲಾಯಿತು. ಇದರಿಂದ ಬ್ಯಾಂಕ್ ವ್ಯವಹಾರದ ಸಮಯದ ನಂತರವೂ ವ್ಯಾಪಾರಸ್ಥರು ಬ್ಯಾಂಕಿನಲ್ಲಿ ಡಿಡಿ ತೆಗೆದು ವಹಿವಾಟಿಗೆ ಪೂರಕವಾಗಿ ವ್ಯವಹರಿಸಬಹುದಾಯಿತು. ಇದರೊಂದಿಗೆ ಕಾಲಾನುಕಾಲಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಆವಿಷ್ಕಾರಗಳನ್ನು ಅಳವಡಿಸಿಕೊಂಡಿರುವ ಬ್ಯಾಂಕ್ ತನ್ನ ಗ್ರಾಹಕರಿಗೆ ಕೋರ್ ಬ್ಯಾಂಕಿಂಗ್ ಸಲ್ಯೂಷನ್ಸ್ ವ್ಯವಸ್ಥೆ, ತ್ವರಿತ ಹಣಕಾಸು ನಿರ್ವಹಣೆಗೆ ಆರ್ಟಿಜಿಎಸ್, ನೆಫ್ಟ್, ಈ-ಪೇಮೆಂಟ್, ಟ್ಯಾಕ್ಸ್ ಪೇಮೆಂಟ್ ಸೌಲಭ್ಯ ನೀಡುತ್ತಿದೆ. ಠೇವಣಿ ವಿಮಾ ಯೋಜನೆಯನ್ವಯ ಐದು ಲಕ್ಷ ರೂಪಾಯಿಗಳವರೆಗಿನ ಎಲ್ಲ ಠೇವಣಿಗಳಿಗೂ ವಿಮೆಯ ಸಂರಕ್ಷಣೆ ಕಲ್ಪಿಸಲಾಗಿದೆ.
ಇತ್ತೀಚಿಗೆ ಅತ್ಯಂತ ಹೆಚ್ಚು ಪ್ರಚಲಿತದಲ್ಲಿರುವ QR Code ಮೂಲಕ ವಹಿವಾಟು ನಡೆಸಲು ಸೌಲಭ್ಯ ನೀಡಿದೆ. ಬ್ಯಾಂಕಿನ ಎಲ್ಲ ಶಾಖೆಗಳಲ್ಲೂ ಲಾಕರ್ ಸೌಲಭ್ಯ ನೀಡಿದ್ದು, ಗ್ರಾಹಕರಿಗೆ ತ್ವರಿತ ಹಾಗೂ ತೃಪ್ತಿದಾಯಕ ಸೇವೆ ಸಲ್ಲಿಸುತ್ತಿದೆ. ಬ್ಯಾಂಕಿನ ಸದಸ್ಯರಿಗೆ ಒಂದು ಲಕ್ಷ ರೂಪಾಯಿಗಳ ಅಪಘಾತ ವಿಮಾ ಸೌಲಭ್ಯ ನೀಡಲಾಗುತ್ತಿದ್ದು, ಮೃತ ಷೇರುದಾರರ ಕುಟುಂಬಕ್ಕೆ ಉತ್ತರಕ್ರಿಯಾದಿ ಕಾರ್ಯಗಳಿಗೆ ಹದಿನೈದು ಸಾವಿರ ರೂಪಾಯಿಗಳ ಮರಣೋತ್ತರ ಪರಿಹಾರ ನೀಡಲಾಗುತ್ತಿದೆ. ಕೇವಲ ಆರ್ಥಿಕ ವಹಿವಾಟಿಗಷ್ಟೇ ಸೀಮಿತಗೊಳ್ಳದ ಬ್ಯಾಂಕ್, ಸಾಮಾಜಿಕ ಕ್ಷೇತ್ರಕ್ಕೂ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿದೆ. ಮಾನವೀಯ ಮೌಲ್ಯಕ್ಕೆ ಒತ್ತು ಕೊಟ್ಟು ಇಡೀ ರಾಜ್ಯದಲ್ಲೇ ಮಾದರಿ ಎನಿಸುವ ರೀತಿಯಲ್ಲಿ ಸಾರ್ವಜನಿಕ ಸ್ಮಶಾನ ಅಭಿವೃದ್ಧಿ ಯೋಜನೆಯನ್ನು ತುಮಕೂರು ನಗರದ ಚಿಕ್ಕಪೇಟೆಯ ಗಾರ್ಡ್ನ್ರಸ್ತೆ ಸ್ಮಶಾನದಲ್ಲಿ ಅನುಷ್ಠಾನಗೊಳಿಸಿದ ಹಿರಿಮೆ ಬ್ಯಾಂಕಿನದ್ದಾಗಿದೆ. ಈ ಯೋಜನೆ ಅಡಿಯಲ್ಲಿ ಶವ ಸಂಸ್ಕಾರಕ್ಕೆ ಬರುವ ಸರ್ವಧರ್ಮಕ್ಕನುಗುಣವಾಗಿ ವಿಧಿವಿಧಾನಗಳನ್ನು ಕೈಗೊಳ್ಳಲು ಬೇಕಾದ ಮೂಲ ಸೌಕರ್ಯ ಒದಗಿಸಿತು.
ತುಮಕೂರು ಜನತೆಗೆ ಶುದ್ದ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ವಾಸವಿ ಗಂಗಾ ಎಂಬ ಯೋಜನೆಯನ್ನು ಜಾರಿಗೆ ತರಲಾಯಿತು. ತುಮಕೂರು ನಗರದಲ್ಲಿ ಹೈಟೆಕ್ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀ ಸಿದ್ಧಗಂಗಾ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರಿ ಸಂಸ್ಥೆಗಳ ಪೈಕಿ ಅತಿ ಹೆಚ್ಚಿನ ದೇಣಿಗೆ ನೀಡಿರುವುದು ಬ್ಯಾಂಕಿನ ಹೆಗ್ಗಳಿಕೆಯಾಗಿದೆ.
ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅಂಗ ಸಂಸ್ಥೆಗಳಾದ ಹಳಾದ ಆರ್ಯ ವೈಶ್ಯ ಮಂಡಳಿ, ಅವೋಪಾ, ವಾಸವಿ ವಿದ್ಯಾಪೀಠ, ಕನ್ನಿಕಾ ಅಕಾಡೆಮಿಕ್ ಅಸೋಸಿಯೇಷನ್, ವಾಸವಿ ವಿದ್ಯಾರ್ಥಿ ನಿಲಯ, ವಾಸವಿ ಮಹಿಳಾ ಹಾಸ್ಟೆಲ್ ಇವುಗಳ ಕಟ್ಟಡ ನಿರ್ಮಾಣ ಮತ್ತು ಕಟ್ಟಡ ಕೊಳ್ಳಲು ಅಗತ್ಯವಾದ ಆರ್ಥಿಕ ನೆರವು ನೀಡಿದ್ದು ಸಮುದಾಯದ ಬಗ್ಗೆ ಬ್ಯಾಂಕಿಗೆ ಇರುವ ಕಳಕಳಿ ಮತ್ತು ಕಾಳಜಿಗೆ ಸಾಕ್ಷಿಯಾಗಿದೆ. ಇದಷ್ಟೇ ಅಲ್ಲದೆ, ವಾಸವಿ ಭಜನಾ ಮಂಡಳಿ, ವಾಸವಿ ಮಹಿಳಾ ಮಂಡಳಿ, ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ವಾಸವಿ ಯುವಜನ ಸಂಘ, ಶ್ರೀ ಕನ್ನಿಕಾ ಪರಮೇಶ್ವರಿ ಮಹಿಳಾ ಮಂಡಳಿ, ವಾಸವಿ ಯುವಜನ ಸಂಘ ಇನ್ನಿತರ ಸಂಘಗಳ ಚಟುವಟಿಕೆಗಳಿಗೆ ಆರ್ಥಿಕ ಚೈತನ್ಯ ತುಂಬುತ್ತಿದೆ.
ಸಹಕಾರ ಸಂಘವಾಗಿ ಆರಂಭಗೊಂಡು 1978ರಲ್ಲಿ ಬ್ಯಾಂಕ್ ಆಗಿ ಪರಿವರ್ತನೆಗೊಂಡ ಪ್ರಥಮ ಅಧ್ಯಕ್ಷರಾಗಿ ಶ್ರೀ ಟಿ.ಎ. ಸಂಪಂಗಿರಾಮು ಮತ್ತು ಶ್ರೀ ಟಿ.ಎಸ್. ಶಶಿಕುಮಾರ್ರವರು ಉಪಾಧ್ಯಕ್ಷರಾಗಿ ಬ್ಯಾಂಕನ್ನು ಮುನ್ನಡೆಸಿದ್ದಾರೆ. ಪ್ರಸ್ತುತ ಆಡಳಿತದ ಚುಕ್ಕಾಣಿ ಹಿಡಿದು ಸತತ ಹತ್ತು ವರ್ಷಗಳಿಂದಲೂ ಅಧ್ಯಕ್ಷರಾಗಿರುವ ಶ್ರೀ ಕೆ.ಎನ್. ಗೋವಿಂದರಾಜು ಮತ್ತು ಬ್ಯಾಂಕಿನ ಆಡಳಿತ ಮಂಡಳಿ ನಿರ್ದೆಶಕರಾಗಿ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಕೆ.ಎಸ್.ರಾಮ ಮೂರ್ತಿ ಮತ್ತು ನಿರ್ದೇಶಕ ಮಂಡಳಿಯವರು ನಿಸ್ಪೃಹ, ನಿಸ್ವಾರ್ಥ, ಸಮುದಾಯ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಬ್ಯಾಂಕಿನಲ್ಲಿ ಸುಮಾರು ಮೂರೂವರೆ ದಶಕಗಳಿಗೂ ಹೆಚ್ಚಿನ ಕಾಲದಿಂದ ವಿವಿಧ ಹುದ್ದೆಗಳಲ್ಲಿ ಅತ್ಯಂತ ದಕ್ಷವಾಗಿ ಕಾರ್ಯ ನಿರ್ವಹಿಸಿದ ಪ್ರಸ್ತುತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಎಸ್.ಸುಮಾ ಮತ್ತು ದಕ್ಷ ಸಿಬ್ಬಂದಿಯ ಕಾರ್ಯ ನಿರ್ವಹಣೆಯೂ ಯಶಸ್ಸಿಗೆ ಕಾರಣವಾಗಿದೆ.
“ಬೆಳೆಯಲು ಸಹಕರಿಸುತ್ತಿದೆ, ಸಹಕರಿಸಲು ಬೆಳೆಯುತ್ತಿದೆ” ಎಂಬ ಉದಾತ್ತ ಧೈಯದೊಂದಿಗೆ ಬ್ಯಾಂಕ್ ನಿರಂತರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದಲ್ಲದೆ, ಸಮುದಾಯದ ಎಲ್ಲಾ ಅಂಗ ಸಂಸ್ಥೆಗಳನ್ನು ಬೆಳೆಸುತ್ತಾ ಸಾಗುತ್ತಿರುವುದು ಬ್ಯಾಂಕಿನ ಹೆಗ್ಗಳಿಕೆಯಾಗಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸಂತೃಪ್ತಗ್ರಾಹಕರ ನಂಬಿಕೆ, ಸಮುದಾಯದವರ ಬೆಂಬಲ ಹಾಗೂ ದಕ್ಷ ಆಡಳಿತ ಮಂಡಳಿ, ನಿಷ್ಠಾವಂತ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರಂತರ ಪರಿಶ್ರಮದ ಫಲವಾಗಿ ಬ್ಯಾಂಕು ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ದಾಪುಗಾಲು ಹಾಕುತ್ತಾ ಸಾಗಿದೆ.