ಉಪಾಕರ್ಮ

ಉಪಾಕರ್ಮವನ್ನು ಶ್ರಾವಣಮಾಸದಲ್ಲಿ ಬರುವ ಶ್ರವಣಾ ನಕ್ಷತ್ರದ ದಿನದಂದು ಋಗ್ವೇದಿಗಳು, ಶ್ರಾವಣ ಶುಕ್ಲದ ಪೂರ್ಣಿಮಾದಂದು ಯಜುರ್ವೇದಿಗಳು ಉಪಾಕರ್ಮವನ್ನು ಮಾಡಿಕೊಳ್ಳಬೇಕು (19-08-2024).
ಅಂದು ನಾವು ಕಲಿತ ವೇದಮಂತ್ರಗಳನ್ನು ಭಗವಂತನಿಗೆ ಅರ್ಪಿಸುತ್ತಾ ಮತ್ತಷ್ಟು ಅಧ್ಯಯನವನ್ನು ಮಾಡುತ್ತೇವೆ ಎಂದು ಸಂಕಲ್ಪಿಸುವ ದಿನ.
ಯಜ್ಞೋಪವೀತವು ದೇವರು ನಮ್ಮ ಹೆಗಲಿಗೇರಿಸಿದ ಕರ್ತವ್ಯದ ಸಂಕೇತವೂ ಆಗಿದೆ.
ಕಾಲಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆಗಳ ಸಮಷ್ಟಿಯಾಗಿ ನಿಂತಿರುವ ಯಜ್ಞೋಪವೀತವು ಯಜ್ಞನಿಯಾಮಕ ಪರಮಾತ್ಮನು ನಮಗೆ ವಹಿಸಿರುವ ಕರ್ತವ್ಯವನ್ನು ಸೂಚಿಸುತ್ತದೆ.
ನಮ್ಮ ದೇಹದ ಮೇಲಿರುವ ಮೂರು ಎಳೆಗಳ  ಯಜ್ಞೋಪವೀತವು ದೇವ ಋಣ, ಋಷಿ ಋಣ ಮತ್ತು ಪಿತೃ ಋಣವನ್ನು ಸೂಚಿಸುತ್ತದೆ. ಹಾಗೆಯೇ ಮೂರು ಎಳೆಗಳ ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳೆಂಬ ಮೂರು ವೇದಗಳ ಆವಾಹನೆಯಾಗಿದ್ದು ಬ್ರಹ್ಮಗಂಟು ಅಥರ್ವವೇದವನ್ನು ಪ್ರತಿನಿಧಿಸುತ್ತದೆ. ಸೊಂಟದ ತನಕ ಇಳಿ ಬಿದ್ದಿರುವ   ಯಜ್ಞೋಪವೀತವು ಆಧ್ಯಾತ್ಮ ಸಾಧನೆಗಾಗಿ ನಾವು ಟೊಂಕ ಕಟ್ಟಿ ನಿಂತಿರಬೇಕೆಂದು ತಿಳಿ ಹೇಳುತ್ತದೆ.
ಅದರ ಮೂರು ಎಳೆಗಳು ತ್ರಿಕಾಲ ಸಂಧ್ಯಾವಂದನೆಯ ಬಗ್ಗೆ ಜಾಗೃತವಾಗಿರಬೇಕೆಂದು ತಿವಿದು ಹೇಳುವ ಹಾಗೆ ಕುತ್ತಿಗೆಯ ಮೇಲೆ ಬಂದಿದೆ. ನಮ್ಮ ಕೆಲಸವಾಗ ಬೇಕಾದಾಗ  ಕುತ್ತಿಗೆಯ ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳುವಂತೆ ಏನೇ ಕೆಲಸವಿದ್ದರೂ ಬಿಡದೇ  ತ್ರಿಕಾಲ ಸಂಧ್ಯಾವಂದನೆಯನ್ನು ಮಾಡಿ ಮುಗಿಸು ಎನ್ನುತ್ತಿದೆ. ಯಜ್ಞೋಪವೀತವು ಎಡಗಡೆಯಿಂದ ಬಲಗಡೆಗೆ ಬಂದಿರುವುದರಿಂದ ವಾಮಮಾರ್ಗವನ್ನು ಬಿಟ್ಟು ಸಂಪೂರ್ಣ ಬಲನೆನಿಸಿದ ಭಗವಂತನಿಗೆ ಪ್ರಿಯವಾದ ಮಾರ್ಗದಲ್ಲಿ ಚಲಿಸು ಎಂದು ಋಜುಮಾರ್ಗವನ್ನು ತೋರಿಸುತ್ತಿರುವುದರ ಸಂಕೇತ.
ಹೀಗೆ ಅತ್ಯಂತ ಮಹತ್ವ ಮತ್ತು ಪರಮ ಪಾವಿತ್ರ್ಯವನ್ನು ಹೊಂದಿರುವ ಯಜ್ಞನಿಯಾಮಕ ಪರಮಾತ್ಮನ ಸೇವೆಗಾಗಿಯೇ ಪಣ ತೊಟ್ಟು ನಿಂತಿರುವ ಯಜ್ಞೋಪವೀತಕ್ಕೆ ಬಲ ಬೇಡವೇ? ಅದಕ್ಕಾಗಿ ಅಂದು ಕಶ್ಯಪಾದಿ ಸಪ್ತ ಋಷಿಗಳನ್ನು ಪೂಜಿಸಿ , ಹೋಮವನ್ನು ಮಾಡಿ ಪಂಚಗವ್ಯ ಹಾಗೂ ಸಕ್ತು (ಹಿಟ್ಟು) ಪ್ರಾಶನದಿಂದ ಸತ್ವಭರಿತರಾಗಿ ವೇದವ್ಯಾಸರ ಪೂಜೆಯನ್ನು ಮಾಡಿ ಯಜ್ಞೋಪವೀತ ದಾನ ಮತ್ತು ಧಾರಣೆಯನ್ನು ಮಾಡಬೇಕು. ಹೀಗೆ ಋಷಿಗಳ ಸನ್ನಿಧಾನದಿಂದ ಬಲಿಷ್ಠವಾದ ಯಜ್ಞೋಪವೀತವು ನಮ್ಮ ಸಂಕಲ್ಪ ಶಕ್ತಿಯನ್ನು, ಕ್ರಿಯಾ ಶಕ್ತಿಯನ್ನು ಬಲಿಷ್ಟಗೊಳಿಸುವುದರಲ್ಲಿ ಸಂದೇಹವಿಲ್ಲ. ಈ ಉಪಾಕರ್ಮವನ್ನು ಮುಗಿಸಿ ಬಂದ ಯಜಮಾನ ಮತ್ತು ಮಕ್ಕಳಿಗೆ ಆರತಿ ಮಾಡಿ ಮನೆಯೊಳಗೆ ಕರೆತರುವ ಪದ್ಧತಿ ಇದೆ.
ಸನಾತನ ಸಂಸ್ಕೃತಿಯ ನೆಲೆವೀಡಾದ ಗುಬ್ಬಿಯ ಚಿದಂಬರಾಶ್ರಮದಲ್ಲಿ ಉಪಾಕರ್ಮವು ಅನೂಚಾನವಾಗಿ ನಡೆಯುತ್ತಾ ಬರುತ್ತಿದೆ.
– ವೇ.ಬ್ರ.ಶ್ರೀ.ಡಾ.ಸುಧಾಕರ ಶರ್ಮ ಜಿ.ಎಸ್
ಮುಖ್ಯೋಪಾಧ್ಯಾಯರು
ಶ್ರೀನಿವಾಸ ಪದ್ಮಾವತಿ ಸಂಸ್ಕೃತ ವೇದ ಪಾಠಶಾಲಾ, ಕ್ಯಾತ್ಸಂದ್ರ.

Leave a Reply

Your email address will not be published. Required fields are marked *

error: Content is protected !!