ತುಮಕೂರು : ನಗರದ ಗಾರ್ಡನ್ ರಸ್ತೆಯಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದ ಹತ್ತಿರ ಸವಿತಾ ಸಮಾಜದ ಜಿಲ್ಲಾ ಸಂಪರ್ಕ ಕೇಂದ್ರವನ್ನು ಕೇಂದ್ರ ರೈಲ್ವೇ ಮತ್ತು ಜಲ ಶಕ್ತಿ ಖಾತೆಯ ರಾಜ್ಯ ಸಚಿವರು ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಸಂಸದರಾದ ವಿ.ಸೋಮಣ್ಣನವರು ಶುಕ್ರವಾರ ಸಂಜೆ ಉದ್ಘಾಟನೆಯನ್ನು ನೆರವೇರಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೇಂದ್ರ ಸಚಿವರು ಜಿಲ್ಲಾಧ್ಯಕ್ಷರಾದ ಕಟ್‌ವೆಲ್ ರಂಗನಾಥ್‌ಅವರ ನೇತೃತ್ವದಲ್ಲಿ ಅತ್ಯಂತ ಹಿಂದುಳಿದ ಸಮಾಜವಾಗಿರುವ ಸವಿತಾ ಸಮಾಜದವರ ವಿವಿಧ ಉಪಯೋಗಗಳಿಗಾಗಿ ಅಂದರೆ ವೃತ್ತಿ ಕೌಶಲ್ಯ, ಸರ್ಕಾರದಿಂದ ಸಾಲ ಸೌಲಭ್ಯ, ವಧು-ವರರ ಅನ್ವೇಷಣೆ ಮತ್ತು ಮಾಹಿತಿ ವಿನಿಮಯ, ವಿದ್ಯಾರ್ಥಿ ನಿಲಯ & ಉನ್ನತ ಶಿಕ್ಷಣ ಕುರಿತು ಮಾಹಿತಿ, ಸೇರಿದಂತೆ ಕ್ಷೌರಿಕ ವೃತ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಹಾಗೂ ಸ್ವಾಲಂಭಿಗಳಾಗಿ ಜೀವನ ನಡೆಸಲು ಸವಿತಾ ಸಮಾಜದವರಿಗೆ ಅನುಕೂಲಕರವಾಗಲು ಮಾಹಿತಿ ಕೇಂದ್ರವನ್ನು ಇಂದು ನಾನು ಉದ್ಘಾಟಿಸಿರುವುದು ತುಂಬಾ ಸಂತೋಷಕರ ವಿಷಯವಾಗಿದೆ ಎಂದು ತಿಳಿಸಿದರು.
ಕ್ವೌರಿಕ ಸಮಾಜ ಅಥವಾ ಸವಿತಾ ಸಮಾಜದವರು ಬಹುತೇಕ ಸಮಾಜಮುಖಿ ಜೀವನದಿಂದ ದೂರವಿದ್ದು, ಇಂತಹ ಸಮಾಜವನ್ನು ಮುನ್ನಲೆಗೆ ತರುವ ಉದ್ದೇಶ ಹೊಂದಿರುವ ಕಟ್‌ವೆಲ್ ರಂಗನಾಥ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಹಾಗೂ ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಈ ಸಮಾಜಕ್ಕೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಿ ಅಭಿವೃದ್ದಿಗೊಳಿಸಲು ನಾನು ಸಹ ಸಹಕಾರಿಯಾಗುತ್ತೇನೆ, ಇಂದು ದಿಶಾ ಸಭೆ, ವಂದೇಭಾರತ್ ರೈಲಿನ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳ ಒತ್ತಡದಲ್ಲಿಯೂ ಇವರು ಸವಿತಾ ಸಮಾಜದ ಏಳ್ಗೆಗಾಗಿ ಹಮ್ಮಿಕೊಂಡಿರುವ ವಿನೂತನ ಕಛೇರಿ ಉದ್ಘಾಟನೆಗೆ ಅಗಮಿಸಿದ್ದು ನನ್ನ ಸುದೈವ ಎಂದು ಹೇಳಿ, ಸವಿತಾ ಸಮಾಜದ ಜಿಲ್ಲಾ ಸಂಪರ್ಕ ಕೇಂದ್ರವು ಉನ್ನತ ಸ್ಥಾನಕ್ಕೇರಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವರಾದ ಸೊಗಡು ಶಿವಣ್ಣ, ಬಿಜೆಪಿ ಮುಖಂಡರಾದ ನೆ.ಲ.ನರೇಂದ್ರ ಬಾಬು, ಕನ್ನಡ ಸೇನೆ ಜಿಲ್ಲಾಧ್ಯಕ್ಷರಾದ ಧನೀಯ ಕುಮಾರ್, ತುಮಕೂರು ಜಿಲ್ಲಾ ಸವಿತಾ ಸಮಾಜ ಯುವ ಪಡೆ ಜಿಲ್ಲಾಧ್ಯಕ್ಷರಾದ ಕಟ್‌ವೆಲ್ ರಂಗನಾಥ್ ಸೇರಿದಂತೆ ಸವಿತಾ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.