ತುಮಕೂರು : ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಹಾಗೂ ಸಂಸದ ವಿ. ಸೋಮಣ್ಣ ಅವರು ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಉಂಡೆ ಕೊಬ್ಬರಿಗೆ ಸಂಬಂಧಪಟ್ಟಂತೆ ನಫೆಡ್ ಸಂಸ್ಥೆಯಿಂದ ಪಾವತಿಸಬೇಕಾದ 691 ಕೋಟಿ ರೂ. ಹಣವನ್ನು ರಾಜ್ಯದ ಸಂಬಂಧಪಟ್ಟ ಖರೀದಿ ಏಜೆನ್ಸಿಗಳಿಗೆ ಮರು ಪಾವತಿಸಬೇಕೆಂದು ಮನವಿ ಸಲ್ಲಿಸಿದರು.
ಇದರಿಂದ ಕರ್ನಾಟಕ ರಾಜ್ಯದಲ್ಲಿ ತುಮಕೂರು, ಮಂಡ್ಯ, ಹಾಸನ, ಮೈಸೂರು, ಚಾಮರಾಜ ನಗರ, ಚಿತ್ರದುರ್ಗ, ಚಿಕ್ಮಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆಂಗು ಬೆಳೆಯುವ ರೈತರ ಹಿತಾಸಕ್ತಿ ಕಾಪಾಡಲು ಅನುಕೂಲವಾಗುತ್ತದೆ ಎಂದು ಸಚಿವರಿಗೆ ಮನವರಿಕೆ ಮಾಡಿದರು.
ವಿಶೇ?ವಾಗಿ ತುಮಕೂರು ಜಿಲ್ಲೆ ಹೆಚ್ಚಿನ ಪ್ರಮಾಣದಲ್ಲಿ ಉಂಡೆ ಕೊಬ್ಬರಿ ಉತ್ಪಾದಕ ಜಿಲ್ಲೆಯಾಗಿದ್ದು, ಈ ಜಿಲ್ಲೆಯ ರೈತರಿಗೆ ಸಹಾಯ ಮಾಡುವಂತೆ ಮನವಿ ಮಾಡಿದರು. ಸಚಿವರ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು ಅತೀ ಶೀಘ್ರದಲ್ಲಿ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಈಗಾಗಲೇ 2599 ಮೆಟ್ರಿಕ್ ಟನ್‌ನಿಂದ 10500 ಮೆಟ್ರಿಕ್ ಟನ್ ಮಿಲ್ಲಿಂಗ್ ಕೊಬ್ಬರಿಯನ್ನು ಬೆಂಬಲ ಬೆಲೆ ಯೋಜನೆಯಡಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಗೆ ಅನುವು ಮಾಡಿಕೊಟ್ಟ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಿಗೆ ರಾಜ್ಯದ ರೈತರ ಪರವಾಗಿ ಸಚಿವ ಸೋಮಣ್ಣ ಅಭಿನಂದನೆ ಸಲ್ಲಿಸಿದರು.