ಮನುಷ್ಯನು ಯಾವುದೇ ಕೆಲಸವನ್ನು ಮಾಡಬೇಕಾದರೂ ಯೋಚಿಸಿ ಮಾಡಿದರೆ ಒಳಿತು, ಆತುರವಾಗಿ ಯಾವ ಕೆಲಸವನ್ನೂ ಮಾಡಬಾರದು.
ಸಂಸ್ಕೃತ ಸುಭಾಷಿತವು ಈ ರೀತಿ ಹೇಳಲ್ಪಟ್ಟಿದೆ. ಮನುಷ್ಯನು ಈ ಐದು ಕೆಲಸಗಳನ್ನು ನಿಧಾನವಾಗಿ ಮಾಡಬೇಕು. ಅವುಗಳೆಂದರೆ:
ಶನೈಃ ಪಂಥಾಃ ಶನೈಃ ಕಂಥಾಃ ಶನೈಃ ಪರ್ವತಲಂಘನಮ್ |
ಶನೈರ್ವಿದ್ಯಾ ಶನೈರ್ವಿತ್ತಂ ಪಂಚೈತಾನಿ ಶನೈಃ ಶನೈಃ ||
ನಿಧಾನವಾಗಿ ದಾರಿ ಸಾಗಬೇಕು, ನಿಧಾನವಾಗಿ ಭಾರವನ್ನು ಎತ್ತಬೇಕು, ನಿಧಾನವಾಗಿ ಪರ್ವತಗಳನ್ನು ಏರಬೇಕು. ನಿಧಾನವಾಗಿ ಸರಿಯಾದ ರೀತಿಯಲ್ಲಿ ವಿದ್ಯೆಯನ್ನು ಕಲಿಯಬೇಕು, ನಿಧಾನವಾಗಿ ಸನ್ಮಾರ್ಗದಿಂದ ಹಣವನ್ನು ಸಂಪಾದಿಸಬೇಕು.
ಶನೈಃ ಪಂಥಾಃ – ಕಾಲ್ನಡಿಗೆಯಿಂದ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವಾಗ, ವೇಗವಾಗಿ ಓಡಿ ಹೋಗಬಾರದು. ನಿಧಾನವಾಗಿ ನಡೆಯುವಾಗ ಆಯಾಸವಾಗುವುದಿಲ್ಲ, ಉತ್ಸಾಹವೂ ಕುಗ್ಗುವುದಿಲ್ಲ.
ಶನೈಃ ಕಂಥಾಃ – ಭಾರವಾದ ವಸ್ತುಗಳನ್ನು ಉದಾಹರಣೆ: ಅಕ್ಕಿಮೂಟೆ,ಸಿಮೆಂಟ್ ಮೂಟೆ, ಕಬ್ಬಿಣದ ವಸ್ತುಗಳು, ಕಲ್ಲು ಚಪ್ಪಡಿಗಳನ್ನು ನಿಧಾನವಾಗಿ ಎತ್ತಬೇಕು.
ಶನೈಃ ಪರ್ವತಲಂಘನಮ್ – ಬೆಟ್ಟ, ಗುಡ್ಡ, ಪರ್ವತಗಳನ್ನು ತುಂಬಾ ಜೋಪಾನವಾಗಿ ಹಾಗೂ ನಿಧಾನವಾಗಿ ಹತ್ತಬೇಕು.
ಶನೈರ್ವಿದ್ಯಾ – ವೇದ, ಸಂಸ್ಕೃತ, ಗಣಿತ, ಸಂಗೀತ, ವಿಜ್ಞಾನ, ವೈದ್ಯ – ಮುಂತಾದ ವಿದ್ಯೆಗಳನ್ನು ಸಾವಕಾಶವಾಗಿ ನಿಧಾನವಾಗಿ ಗುರುಗಳ ಮಾರ್ಗದರ್ಶನ ಪಡೆದು ಸಂಪಾದಿಸಬೇಕು. ಆತುರ ಪಟ್ಟರೆ ಯಾವ ವಿದ್ಯೆಯೂ ಮಾನವನಿಗೆ ದಕ್ಕುವುದಿಲ್ಲ.
ಶನೈರ್ವಿತ್ತಮ್ – ಹಣವನ್ನಂತೂ ಒಂದೇ ಏಟಿಗೆ ಸಂಪಾದನೆ ಮಾಡಲೇಬಾರದು. ಲಾಟರಿ ಹಣ ಒಳ್ಳೆಯದಲ್ಲ. ತನ್ನ ಶ್ರಮದಿಂದ ಹಣವನ್ನು ವಿವೇಕಿಯು ನಿಧಾನವಾಗಿ ಸಂಪಾದಿಸಬೇಕು. ದಿಢೀರ್ ಶ್ರೀಮಂತನಾಗುವುದು ಅಪಾಯ !
ವೇ.ಬ್ರ.ಶ್ರೀ.ಡಾ. ಜಿ.ಎಸ್ ಸುಧಾಕರ ಶರ್ಮ
ಮುಖ್ಯೋಪಾಧ್ಯಾಯರು
ಶ್ರೀನಿವಾಸ ಪದ್ಮಾವತಿ ಸಂಸ್ಕೃತ ವೇದ ಪಾಠಶಾಲಾ, ಕ್ಯಾತ್ಸಂದ್ರ.