ತುರುವೇಕೆರೆ : ಸವಿತಾ ಸಮಾಜ ಯುವಪಡೆ ತುರುವೇಕೆರೆ ತಾಲ್ಲೂಕು ನೂತನ ಘಟಕ ಉದ್ಘಾಟನೆ, ಪ್ರತಿಭಾ ಪುರಸ್ಕಾರ, ಕ್ಷೌರಿಕ ತರಬೇತಿ ಹಾಗೂ ಯುವ ಕ್ಷೌರಿಕರಿಗೆ ಆಧುನಿಕ ಟ್ರಿಮ್ಮರ್ ವಿತರಣೆ ಕಾರ್ಯಕ್ರಮವನ್ನು ತುರುವೇಕೆರೆ ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ತುಮಕೂರು ಜಿಲ್ಲಾ ಸವಿತಾ ಸಮಾಜ ಜಿಲ್ಲಾಧ್ಯಕ್ಷರಾದ ಕಟ್‌ವೆಲ್ ರಂಗನಾಥ್‌ರವರು ನೆರವೇರಿಸಿ ಇಂದು ತುರುವೇಕೆರೆ ಪಟ್ಟಣದಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷಕರ ವಿಷಯವಾಗಿದೆ, ನಮ್ಮ ಕ್ಷೌರಿಕ ವೃತ್ತಿಯನ್ನು ಆಧುನಿಕರಣಗೊಳಿಸಿಕೊಳ್ಳುವುದು ಪ್ರಮುಖವಾಗಿದೆ ಅದಕ್ಕಾಗಿ ನಮ್ಮ ಜಿಲ್ಲಾ ಘಟಕದಿಂದ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ, ಅದಕ್ಕೆ ಪೂರಕವಾಗಿ ಇಂದು ನನ್ನ ಕಡೆಯಿಂದ ಅತ್ಯಾಧುನಿಕ ಟ್ರಿಮ್ಮರ್‌ಗಳನ್ನು ನಿಮಗೆ ಉಚಿತವಾಗಿ ನೀಡುತ್ತಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು, ಮುಂದುವರೆದು ಮಾತನಾಡುತ್ತಾ ಪ್ರತಿಯೊಬ್ಬ ಸವಿತಾ ಸಮಾಜದ ಬಂಧು ಸಮಾಜದಲ್ಲಿ ಗುರುತಿಸಿಕೊಳ್ಳುವಂತಹ ವ್ಯಕ್ತಿಯಾಗಬೇಕು, ಇದರಿಂದ ನಿಮ್ಮ ವೃತ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ, ಜೊತೆಗೆ ಸರ್ಕಾರದಿಂದ ದೊರೆಯುವ ಸಾಲ ಸೌಲಭ್ಯ ಸೇರಿದಂತೆ ವೃತ್ತಿ ಕೌಶಲ್ಯ ತರಬೇತಿಯನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ವಿಶ್ವಕರ್ಮ ಯೋಜನೆಯ ಸದ್ಭಳಕೆಯನ್ನು ನಮ್ಮ ಸವಿತಾ ಸಮಾಜದ ಬಹುತೇಕರು ಇದುವರೆವಿಗೂ ಸದುಪಯೋಗ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದು, ಅದನ್ನು ಆದಷ್ಟು ಶೀಘ್ರವಾಗಿ ಸದುಪಯೋಗಪಡಿಸಿಕೊಳ್ಳಬೇಕು, ಪ್ರತಿಯೊಬ್ಬ ಸವಿತಾ ಸಮಾಜದ ಬಂಧುವು ಸಹ ಪ್ರಗತಿಯತ್ತ ಮುನ್ನಡೆಯಬೇಕಾಗಿದೆ ಅದಕ್ಕೆ ನಮ್ಮ ಜಿಲ್ಲಾ ಘಟಕದ ಸಹಕಾರ ಸದಾ ತಮ್ಮೊಂದಿಗೆ ಇರುತ್ತದೆ ಎಂದರು, ಇತ್ತೀಚೆಗೆ ನಮ್ಮ ತುಮಕೂರು ನಗರದ ಗಾರ್ಡನ್ ರಸ್ತೆಯಲ್ಲಿ ಸವಿತಾ ಸಮಾಜದ ಜಿಲ್ಲಾ ಸಂಪರ್ಕ ಕೇಂದ್ರವನ್ನು ತೆರೆಯಲಾಗಿದ್ದು ಈ ಕೇಂದ್ರವು ತಮ್ಮಗಳಿಗೆ ವೃತ್ತಿ ಕೌಶಲ್ಯ ಸಲಹೆ, ಸರ್ಕಾರದ ಸೌಲಭ್ಯಗಳ ಮಾಹಿತಿ ವಿನಿಮಿಯ, ಸವಿತಾ ಸಮಾಜದ ವಧು-ವರರ ಅನ್ವೇಷಣೆ ಮಾಹಿತಿ, ಕೌಶಲ್ಯ ತರಬೇತಿ, ಶೈಕ್ಷಣಿಕ ಮಾಹಿತಿ, ಹಾಸ್ಟಲ್ ಮಾಹಿತಿ ಸೇರಿದಂತೆ ನಮ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ತೆರೆಯಲಾಗಿದ್ದು ತಾವುಗಳು ಮುಕ್ತವಾಗಿ ಭೇಟಿ ನೀಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸವಿತಾ ಸಮಾಜದ ರಾಜ್ಯ ಕಾರ್ಯಧ್ಯಕ್ಷರಾದ ಕಿರಣ್ ಕುಮಾರ್‌ರವರು ತಮ್ಮ ಮುಖ್ಯ ಅತಿಥಿಗಳ ಭಾಷಣದಲ್ಲಿ ಸವಿತಾ ಸಮಾಜದ ಬಂಧುಗಳು ರಾಜಕೀಯವಾಗಿ ಹಾಗೂ ಸಂಘಟನೆಯಲ್ಲಿ ಅತ್ಯಂತ ಹಿಂದುಳಿದಿದ್ದು, ತಾವುಗಳು ಹಂತ ಹಂತವಾಗಿ ಬೆಳೆದು, ನಮ್ಮ ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಯನ್ನೂ ಸಹ ಸಮಾಜಮುಖಿಯನ್ನಾಗಿ ಮಾಡಬೇಕಾದ ಕರ್ತವ್ಯ ನಮ್ಮದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ವೃತ್ತಿ ಕೌಶಲ್ಯ ತರಬೇತಿಯ ಪ್ರಾತ್ಯಕ್ಷತೆಯನ್ನು ಕಟ್‌ವೆಲ್ ರಂಗನಾಥ್ ನೀಡಿದರು. ಈ ಸಂದರ್ಭದಲ್ಲಿ ತುರುವೇಕೆರೆ ಸವಿತಾ ಸಮಾಜ ಯುವ ಪಡೆ ಅಧ್ಯಕ್ಷರಾದ ಲೋಕೇಶ್, ಧನಂಜಯ್, ಬಾಲರಾಜ್, ಪ್ರಶಾಂತ್, ಮೈಸೂರು ನಾಗರಾಜು, ಹಾಸನ್ ರವಿಕುಮಾರ್, ರಾಘವೇಂದ್ರ ಇಟಗಿ, ಹೆಚ್.ಡಿ.ರಾಮು, ತಿಪಟೂರು ವರದರಾಜು, ಗುಬ್ಬಿ ರಮೇಶ್, ಉಮೇಶ್, ಪ್ರವೀಣ್, ಟಿ.ಡಿ.ಪುನೀತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.