‌ಭೀಮನ ಅಮಾವಾಸ್ಯೆ ವ್ರತ ಕಥೆ

 

 

 

 

 

 

“ಆಷಾಢ ಬಹುಳ ಅಮಾವಾಸ್ಯೆ” ದಿನದಂದು ಆಚರಿಸುವ ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಪತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದೂ ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ.

 

 

 

 

ಈ ವ್ರತವನ್ನು ಮಾಡುವುದರಿಂದ ಕನ್ಯೆಯರು ಉತ್ತಮ ಗುಣವುಳ್ಳ ಪತಿಯನ್ನೂ, ಮತ್ತು ಸಹೋದರರು ಕ್ಷೇಮವನ್ನೂ ಮತ್ತು ವಿವಾಹಿತ ಸ್ತ್ರೀಯರು ಸೌಭಾಗ್ಯವನ್ನು ಪಡೆಯುತ್ತಾರೆ. ಈ ವ್ರತವನ್ನು ಮನೋ ನಿಯಾಮಕರಾದ ಪಾರ್ವತಿ ಮತ್ತು ರುದ್ರದೇವರ ಅನುಗ್ರಹ ಪ್ರಾಪ್ತಿಗಾಗಿ ಆಚರಿಸುತ್ತಾರೆ. ಮದುವೆಯಾದ ಮೊದಲ ಒಂಭತ್ತು ವರ್ಷ ಈ ವ್ರತವನ್ನು ಹೆಣ್ಣುಮಕ್ಕಳು ಮತ್ತು ಕನ್ಯೆಯರು ಮಾಡುತ್ತಾರೆ.

 

 

 

 

ಮಣ್ಣಿನಿಂದ ಲಿಂಗಾಕಾರದಲ್ಲಿ ವಿಗ್ರಹ ಮಾಡಿ, ಅದರಲ್ಲಿ ಪಾರ್ವತೀ ಪರಮೇಶ್ವರನನ್ನು ಆಹ್ವಾನಿಸಿ ಪೂಜಿಸುತ್ತಾರೆ. ನೈವೇದ್ಯಕ್ಕೆ ಕಡುಬು ಸಿದ್ಧಪಡಿಸುತ್ತಾರೆ. ಈ ಕಡುಬಿನಲ್ಲಿ ಚಿಲ್ಲರೆಯನ್ನು ಇಟ್ಟು ಅದನ್ನು ಹೊಸ್ತಿಲ ಎರಡೂ ಬದಿಯಲ್ಲಿ ವೀಳ್ಯದೆಲೆ ಮೇಲಿಟ್ಟು ಹರಿದ್ರಾ ಕುಂಕುಮದಿಂದ ಪೂಜಿಸಿ ಮನೆಯ ಗಂಡುಮಕ್ಕಳು ಕೈಲಿ ಅ ಕಡುಬನ್ನು ಅವರ ಮಂಡಿಯೂರಿ ಮೊಣಕೈನಿಂದ ಒಡೆಯಬೇಕು. ಆ ಸಮಯದಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳ ಬೆನ್ನಿಗೆ ಹೊಡೆಯುತ್ತಾರೆ. ಇದನ್ನು “ಭಂಡಾರ ಒಡೆಯುವುದು” ಎನ್ನುತ್ತಾರೆ. ಈ ದಿನ ಕರಿದ ಪದಾರ್ಥಗಳನ್ನು ಮಾಡುವುದಿಲ್ಲ.

 

 

 

 

“ಭೀಮ” ಕೂಡ ರುದ್ರದೇವರ ಹಲವಾರು ಹೆಸರುಗಳಲ್ಲಿ ಒಂದು. ಈ ಹಬ್ಬಕ್ಕೆ ಭೀಮನೆಂಬ ರುದ್ರದೇವರ ಹೆಸರಿನಿಂದ ಪೂಜಿಸುತ್ತಾರೆ. ಈ ವ್ರತದ ಮಹಿಮೆಯನ್ನು ಸಾಕ್ಷಾತ್ ಮಹರುದ್ರದೇವರೇ ಹೇಳಿದ್ದಾರೆ. ವ್ರತಕಥೆಯ ಸಂಕ್ಷಿಪ್ತ ಕಥೆ ಹೀಗಿದೆ. :

ಹಿಂದೆ ಸೌರಾಷ್ಟ್ರ ದೇಶದಲ್ಲಿ “ವಜ್ರಬಾಹು” ಎಂಬ ಉತ್ತಮ ಆಡಳಿತಗಾರ ರಾಜನಿದ್ದನು. ಅವನಿಗೆ ಸುಂದರನೂ, ಗುಣವಂತನೂ ಆದ ಜಯಶೀಲನೆಂಬ ಮಗನಿದ್ದನು. ಆದರೆ ಇನ್ನೂ ವಿವಾಹವೂ ಆಗದ ಪುತ್ರನು ಮೃತನಾಗಲು, ರಾಜನು ತನ್ನ ಪಿತೃಗಳಿಗೆ ಯಾರು ತಿಲೋದಕವನ್ನು ಕೊಡುತ್ತಾರೆ ಎಂದು ಆಘಾತದಿಂದ , ತನ್ನ ಮಗನಿಗೆ ವಿವಾಹ ಮಾಡಿದರೆ ಆ ಹೆಣ್ಣಿನ ಮೂಲಕ ಪಿತೃಗಳಿಗೆ ಸದ್ಗತಿ ನೀಡಬಹುದೆಂದು ಯೋಚಿಸಿದನು. ಯಾರು ತನ್ನ ಮೃತ ಪುತ್ರನ ವಿವಾಹಕ್ಕೆ ಹೆಣ್ಣು ಕೊಡುತ್ತಾರೋ ಅವರಿಗೆ ಯಥೇಶ್ಚ ದಾನ ಕೊಡುವುದಾಗಿ ಘೋಷಿಸುತ್ತಾನೆ. ಅದೇ ಊರಿನಲ್ಲಿದ್ದ ಒಬ್ಬ ಬಡ ಸುಸಂಸ್ಕೃತ ಬ್ರಾಹ್ಮಣನು ತನ್ನ ಬಡತನದಿಂದ ದೂರಬರಲು ನಿರ್ಧರಿಸಿ, ತನ್ನ ಮಗಳನ್ನು ಆ ಮೃತ ರಾಜಕುಮಾರನಿಗೆ ಕೊಟ್ಟು ವಿವಾಹ ಮಾಡಿದನು. ತನಗೆ ಬರಬೇಕಾದ ಧನಧಾನ್ಯಾದಿಗಳನ್ನು ಆ ಬ್ರಾಹ್ಮಣ ಪಡೆದುಕೊಳ್ಳುತ್ತಾನೆ.

 

 

 

 

ವಿವಾಹದ ನಂತರ ರಾಜ, ವಧು ಮತ್ತು ಸೈನಿಕರು ರಾಜಕುಮಾರನ ಹೆಣವನ್ನು ಸುಡಲು ಸ್ಮಶಾನಕ್ಕೆ ಕರೆದುಕೊಂಡು ಬರುತ್ತಾರೆ. ಕನ್ಯೆಯಾದರೋ ಸಕಲಾಭರಣಗಳಿಂದ ಅಲಂಕೃತಳಾಗಿ ಹರಿದ್ರಾ ಕುಂಕುಮ ಶೋಭಿತಳಾಗಿ ಪಾರ್ವತೀ ಪರಮೇಶ್ವರನನ್ನು ಧ್ಯಾನಿಸುತ್ತಾ ಚಿತೆಗೆ ಅಗ್ನಿ ಸ್ಪರ್ಶ ಮಾಡಿದಳು. ಆದರೆ ದೈವಲೀಲೆಯಿಂದ ಆ ಸಂದರ್ಭದಲ್ಲಿ ಭಾರೀ ಮಳೆಯಾಗಿ, ಅಗ್ನಿ ಆರಿಹೋಯಿತು. ಸೂರ್ಯಾಸ್ತವಾಗಿ ಗಾಢ ಕತ್ತಲೆ ಆವರಿಸಿತು. ಮಳೆ ಮಾತ್ರ ನಿಲ್ಲಲಿಲ್ಲ.

 

 

 

 

ಹುಡುಗಿಯು ಈಗ ರಾಜಕುಮಾರಿಯಾಗಿದ್ದರಿಂದ ರಾಜಕುಮಾರನ ತಂದೆಯು ಆಕೆಗೆ ಹೆಣವನ್ನು ಬಿಟ್ಟು ಬರುವಂತೆ ತಿಳಿಸುತ್ತಾನೆ. ಆದರೆ ಪತಿಯ ಹೆಣವನ್ನು ಬಿಟ್ಟು ತಾನು ಬರುವುದಿಲ್ಲವೆಂದು ಹುಡುಗಿ ಹೇಳುತ್ತಾಳೆ. ರಾಜ ಮತ್ತವನ ಪರಿವಾರದವರು ಮಳೆಯಿಂದ ತಪ್ಪಿಸಿಕೊಳ್ಳಲು ಹುಡುಗಿಯನ್ನು ಬಿಟ್ಟು ಓಡುತ್ತಾರೆ. ರಾಜಕುಮಾರನ ಶವವನ್ನು ನೋಡುತ್ತಾ ಆಕೆ ಮನಸ್ಸಿನಲ್ಲಿಯೇ ನೊಂದು, ಗಾಢ ಕತ್ತಲೆಗೆ ಹೆದರಿ, ಪಾರ್ವತಿ ಪರಮೇಶ್ವರನನ್ನು ಪ್ರಾರ್ಥಿಸುತ್ತಾಳೆ. ” ಪರಮೇಶ್ವರ ಹಿಂದೆ ಮಾರ್ಕಂಡೇಯನಿಗೆ ಚಿರಂಜೀವಿತ್ವ,, ಅಗ್ನಿ ಮನ್ಮಥರಿಗೂ ಮರುಜನ್ಮ, ಶ್ವೇತವಾಹನನಿಗೂ ಚ್ಯವನ ಋಷಿಗಳಿಗೂ ದೀರ್ಘಾಯುಷ್ಯ ನೀಡಿರುವೆ. ನಾನು ಏನು ತಪ್ಪು ಮಾಡಿದ್ದೇನೆ? ನನಗ್ಯಾಕೆ ಈ ಘೋರ ಶಿಕ್ಷೆ ? ಕಾಪಾಡು” ಎಂದು ಪ್ರಾರ್ಥಿಸಿದಳು. ಭಕ್ತವತ್ಸಲನಾದ ಶಿವನು ಪಾರ್ವತಿಯೊಂದಿಗೆ ಅಲ್ಲಿ ಪ್ರತ್ಯಕ್ಷರಾದಾಗ “ನನಗೆ ಸೌಭಾಗ್ಯ ಸಂಪತ್ತು ನೀಡು” ಎಂದು ಪ್ರಾರ್ಥಿಸುತ್ತಾಳೆ.

 

 

 

 

 

ಆಗ ಶಿವನು “ನಿನಗೆ ಸೌಭಾಗ್ಯ ಸಂಪತ್ತು ನೀಡಬಲ್ಲ ಅತ್ಯಂತ ಶುಭಪ್ರದವಾದ ವ್ರತವೊಂದಿದೆ. ಆಷಾಢ ಮಾಸದ ಅಮಾವಾಸ್ಯೆಯ ದಿನ ಮಂಗಳಸ್ನಾನ ಮಾಡಿ ಪೂಜಾಸ್ಥಳವನ್ನು ಶುದ್ಧ ಮಾಡಿ, ಭಕ್ತಿಯಿಂದ ಉಮಾಮಹೇಶ್ವರರನ್ನು ಅರ್ಚಿಸಬೇಕು. ಶುದ್ಧವಾದ ಅಕ್ಕಿಯ ರಾಶಿಯನ್ನು ಹಾಕಿ, ಅದರ ಮೇಲೆ ತುಪ್ಪದ ದೀಪವನ್ನು ಹಚ್ಚಿಟ್ಟು ನನ್ನನ್ನು ಆರಾಧಿಸಬೇಕು. ಅಂತಹ ದೀಪಸ್ತಂಭದಲ್ಲಿ ಅಷ್ಟಮೂರ್ತಿಗಳ ಭೇದದಿಂದ ಭವಾಧಿಗಳ ಭೇದದಿಂದ ನಾನು ಇರುತ್ತೇನೆ. ಈ ಅಷ್ಟಮೂರ್ತಿಗಳಲ್ಲಿ ನನಗೆ ಅತ್ಯಂತ ಪ್ರಿಯವಾದ ಚಂದ್ರನೂ ಇರುತ್ತಾನೆ. ಜ್ಯೋತಿರ್ಮಯ ನಾದ ನನಗೆ “ಭೀಮೇಶ್ವರ“ ಎನ್ನುತ್ತಾರೆ. ಈ ದೀಪಸ್ತಂಭವು ನಾನೆಂದೂ, ನನ್ನನ್ನು ಮಹಾಲಿಂಗ ಸ್ವರೂಪನೆಂದು ತಿಳಿದು ಪೂಜಿಸು ಎಂದು ಪೂಜಾ ವಿಧಾನವನ್ನೂ ಹೇಳಿದನು. “ಈ ವ್ರತವನ್ನು ಮಾಡುವವರು ಒಂಭತ್ತು ವರ್ಷ ಆಚರಿಸಬೇಕು. ಕಡುಬು ನೈವೇದ್ಯವನ್ನು ಮಾಡಬೇಕು. ಗಂಧ ಪುಷ್ಪಾದಿಗಳಿಂದ ಅರ್ಚಿಸಿ ಬ್ರಾಹ್ಮಣರಿಗೆ ದಾನ ಕೊಡಬೇಕು. ಹೀಗೆ ಒಂಭತ್ತು ವರ್ಷ ಮಾಡಿದ ನಂತರ ನಿನ್ನ ಪತಿಯು ಸಜೀವಿಯಾಗಿ ಬರುವನು. ಇದಕ್ಕೆ ಸಂಶಯವಿಲ್ಲ” ಎಂದನು.

 

 

 

 

 

ಆ ಕನ್ಯೆಯು ಕಡುಬಿನ ಬದಲು ಆಕೆ ಮಣ್ಣಿನ ಮುದ್ದೆಗಳನ್ನು ತಯಾರಿಸುತ್ತಾಳೆ. ಅದರಂತೆ ಆ ಹೆಣ್ಣು ಮಗಳು ಅಲ್ಲಿ ಲಭ್ಯವಿದ್ದ ಮಣ್ಣಿನ ದೀಪಸ್ತಂಭ ಮಾಡಿ, ಸಮೀಪದಲ್ಲಿದ್ದ ಆಲದೆಲೆಗಳನ್ನು ವೀಳ್ಯದೆಲೆಯಾಗಿಯೂ, ಅದರ ಕಾಯಿಗಳನ್ನೇ ಅಡಕೆಯಾಗಿಯೂ ಮಾಡಿಕೊಂಡು ಅಲ್ಲಿದ್ದ ಗರಿಕೆಯ ಹುಲ್ಲನ್ನೇ ಹೂಗಳಂತೆ ಭಾವಿಸಿ, ಮಣ್ಣಿನಿಂದಲೇ ಕಡುಬು ಮಾಡಿ ದೀಪಗಳನ್ನು ಮನಸ್ಸಿನಲ್ಲಿ ಸ್ಮರಿಸಿ, ಪೂಜಿಸಿದಳು. ಹೀಗೆ ಪೂಜೆ ಮಾಡುತ್ತಿರುವಾಗ ಯುವ ದಂಪತಿಗಳು ಅಲ್ಲಿಗೆ ಬರುತ್ತಾರೆ ಮತ್ತು ಆಕೆ ಏನು ಮಾಡುತ್ತಿದ್ದಾಳೆ ಎಂದು ಕೇಳುತ್ತಾರೆ. ತನ್ನ ವಿಧಿಯನ್ನು ಆ ದಂಪತಿಗಳಿಗೆ ಆಕೆ ವಿವರಿಸುತ್ತಾಳೆ ಮತ್ತು ತಾನೀಗ ಒಂಟಿಯಾಗಿದ್ದು ಮಣ್ಣಿನ ಮುದ್ದೆಗಳನ್ನು ಒಡೆಯುವವರು ಯಾರೂ ಇಲ್ಲ ಎಂದು ಹೇಳುತ್ತಾಳೆ. ಒಬ್ಬ ಯುವಕನು ಅದನ್ನು ತಾನು ಒಡೆಯುವುದಾಗಿ ಹೇಳುತ್ತಾನೆ. ಆ ಮುದ್ದೆಯನ್ನು ಒಡೆದು ಆತ ದೀರ್ಘ “ಸುಮಂಗಲೀಭವ” ಎಂದು ಹರಸುತ್ತಾನೆ.

 

 

 

 

 

ಆಗ ಹುಡುಗಿಯು ನಗುತ್ತಾ ತನ್ನ ಪತಿ ಮರಣ ಹೊಂದಿದ್ದು ಇದು ಹೇಗೆ ನಡೆಯಲು ಸಾಧ್ಯ ಎಂದು ಕೇಳುತ್ತಾಳೆ. ಮರಣ ಹೊಂದಿದ ರಾಜಕುಮಾರನತ್ತ ಅವರು ನೋಡಿ ಆತ ನಿದ್ದೆ ಮಾಡಿದ್ದು ನೀನು ಏಕೆ ಅವನನ್ನು ಎಚ್ಚರಗೊಳಿಸಬಾರದು ಎಂದು ಕೇಳುತ್ತಾರೆ. ಹೋಗಿ ಅವನನ್ನು ಎಬ್ಬಿಸು ಎಂದು ಹೇಳುತ್ತಾರೆ. ಆಶ್ಚರ್ಯದಿಂದ ಆಕೆ ರಾಜಕುಮಾರನನ್ನು ನೋಡುತ್ತಾಳೆ ಮತ್ತು ಆತ ಕಣ್ಣುಗಳನ್ನು ತೆರೆಯುತ್ತಿರುತ್ತಾನೆ. ಆಕೆಗೆ ತನ್ನ ಕಣ್ಣುಗಳನ್ನೇ ನಂಬಲು ಆಗುವುದಿಲ್ಲ. ಕೂಡಲೇ ಅಲ್ಲಿಗೆ ಬಂದಿದ್ದ ಯುವ ದಂಪತಿಗಳು ಯಾರು ಎಂದು ಅವರಿಗೆ ಗೊತ್ತಾಗುತ್ತದೆ ಆದರೆ ಅಷ್ಟೊತ್ತಿಗೆ ಅವರು ಹೋಗಿರುತ್ತಾರೆ. ಆ ಪೂಜಾ ಫಲವಾಗಿ ರಾಜಕುಮಾರನು ಜೀವವನ್ನು ಪಡೆದು, ನಿದ್ರೆಯಿಂದೆದ್ದವನಂತೆ ಎದ್ದು ಕುಳಿತನು. ದಿವ್ಯ ದಂಪತಿಗಳಾದ ಶಿವ ಪಾರ್ವತಿಯರಿಗೆ ಆಕೆ ಮನಸ್ಸಿನಲ್ಲಿಯೇ ವಂದಿಸುತ್ತಾಳೆ ಮತ್ತು ನಡೆದ ಸಂಗತಿಯನ್ನು ರಾಜಕುಮಾರನಿಗೆ ತಿಳಿಸುತ್ತಾಳೆ.

 

 

 

 

 

ಮಾರನೇ ದಿನ ರಾಜಭಟರು ಬಂದು ನೋಡಿ ರಾಜನಿಗೆ ಈ ವಿಷಯ ತಿಳಿಸಲು ರಾಜನು ಸಂತಸಗೊಂಡು ದಾನ ಧರ್ಮಗಳನ್ನು ಮಾಡಿ ಎಲ್ಲರೂ ಸುಖದಿಂದಿದ್ದರು. ಈ ಸುದ್ದಿ ಕೂಡಲೇ ಊರಿನಲ್ಲಿ ಹರಡುತ್ತದೆ ಮತ್ತು ಆಷಾಢ ಮಾಸದಲ್ಲಿ ಭೀಮನ ಅಮಾವಾಸ್ಯೆಯನ್ನು ಮಾಡಲು ಜನರು ಆರಂಭಿಸುತ್ತಾರೆ. . ಈ ದಿನದಂದು ಮದುವೆಯಾಗಿರುವ ಮತ್ತು ಮದುವೆಯಾಗದ ಮಹಿಳೆಯರು ಶಿವ ಹಾಗೂ ಪಾರ್ವತಿಯಲ್ಲಿ ತಮ್ಮ ಕುಟುಂಬದ ಪುರುಷರಿಗೆ ಸುಖ, ಸಮೃದ್ಧಿ ಮತ್ತು ಆರೋಗ್ಯ ನೀಡಲೆಂದು ಪ್ರಾರ್ಥಿಸುತ್ತಾರೆ. ಮದುವೆಯಾಗಿರುವ ಮಹಿಳೆಯರು ತಮ್ಮ ಸಂಬಂಧವು ಶಿವ-ಪಾರ್ವತಿಯಷ್ಟೇ ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸುತ್ತಾರೆ.

 

 

 

 

 

ಈ ದಿನದಂದು ಕನ್ಯೆಯರು ಕಡುಬು ಮಾಡಿಕೊಂಡು ಅದರಲ್ಲಿ ನಾಣ್ಯವನ್ನು ಅಡಗಿಸಿಡುತ್ತಾರೆ. ಪೂಜೆ ಕೊನೆಗೊಂಡ ಬಳಿಕ ಆಕೆಯ ಸಹೋದರರು ಕಡುಬನ್ನು ಒಡೆದು ಅದರಲ್ಲಿನ ನಾಣ್ಯವನ್ನು ತೆಗೆಯುತ್ತಾರೆ. ಇದನ್ನು “ಭಂಡಾರ ಒಡೆಯುವುದು” ಎನ್ನುತ್ತಾರೆ.

Leave a Reply

Your email address will not be published. Required fields are marked *

error: Content is protected !!