ತುಮಕೂರು : ನಗರದ ಜೆ.ಸಿ.ರಸ್ತೆಯಲ್ಲಿದ್ದ ಶ್ರೀ ಸಿದ್ಧಿವಿನಾಯಕ ತರಕಾರಿ, ಹೂವು ಮತ್ತು ಹಣ್ಣು ಮಾರುಕಟ್ಟೆಯನ್ನು ಖಾಸಗಿ ಮೂಲದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ೩೦ ವರ್ಷಗಳ ಅವಧಿಗೆ ಮಾಲ್ ನಿರ್ಮಾಣ ಮತ್ತು ನಿರ್ವಹಣೆ ಮಾಡಲು ಗುತ್ತಿಗೆ ನೀಡಲಾಗಿದ್ದು ಇದಕ್ಕೆ ನಮ್ಮಗಳ ವಿರೋಧವಿದೆ ಎಂದು ಫ್ರೂಟ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ಖುದ್ದೂಸ್ ಅಹಮ್ಮದ್‌ರವರು ಹೇಳಿದ್ದಾರೆ.
ಇಂದು ಮಾರುಕಟ್ಟೆಯ ಪ್ರಾಂಗಣದಲ್ಲಿರುವ ಗಣೇಶ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ನೆಪದಿಂದ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ತರಕಾರಿ, ಹೂವು, ಹಣ್ಣು ವ್ಯಾಪಾರಿಗಳು ನಾವು ಇಲ್ಲಿ ಕೆಲ ದಶಕಗಳಿಂದ ಇಲ್ಲೇ ವ್ಯಾಪಾರ ವಹಿವಾಟು ಮಾಡಿಕೊಂಡು ಬರುತ್ತಿದ್ದೇವೆ, ಈ ಹಿಂದೆ ಮಾರುಕಟ್ಟೆಯಲ್ಲಿ ನಾವು ವ್ಯಾಪಾರ ಮಾಡುತ್ತಿದ್ದೆವು, ಆದರೆ ಈ ಮಾರುಕಟ್ಟೆಯನ್ನು ಮಧುಗಿರಿ ರಸ್ತೆಗೆ ಸ್ಥಳಾಂತರ ಮಾಡಿದ ಸಂದರ್ಭದಲ್ಲಿ ಕೆಲವರು ಬಂಡವಾಳ ಶಾಹಿಗಳು ಅಲ್ಲಿಗೆ ಹಣ ನೀಡಿ ಅಂಗಡಿ ಮಳಿಗೆಗಳು ಪಡೆದು ಅಲ್ಲಿ ಹೋಗಿ ವ್ಯಾಪಾರ ಮಾಡುತ್ತಿದ್ದಾರೆ.
ನಾವುಗಳು ತುಂಬಾ ಬಡವರು, ಅವರು ಕೇಳಿದಷ್ಟು ಹಣ ಕೊಡಲು ಶಕ್ತಿಯಿಲ್ಲವಾಗಿ ಈ ಜಾಗದಲ್ಲಿ ಸನ್ನಿಹದಲ್ಲೇ ನಾವು ಕೆಲ ದಶಕಗಳಿಂದ ಚರಂಡಿ ಮೇಲೆ, ರಸ್ತೆ ಬದಿಯಲ್ಲಿಯೇ ವ್ಯಾಪಾರ ಮಾಡಿಕೊಂಡು ನಮ್ಮಗಳ ಜೀವನ ಸಾಗಿಸುತ್ತಿದ್ದೇವೆ, ಜೊತೆಗೆ ನಮಗೆ ಇದೇ ಆಧಾರ ಇದೀಗ ಇದನ್ನೂ ಸಹ ಕಿತ್ತುಕೊಳ್ಳಲು ಈ ಸರ್ಕಾರ ಮುಂದಾಗಿದ್ದು, ಇದಕ್ಕೆ ನಮಗೆ ತೀವ್ರ ವಿರೋಧವಿದೆ ಎಂದರು.
ಈ ಜಾಗದಲ್ಲಿ ಹಲವಾರು ದಶಕಗಳಿಂದ ಗಣೇಶನ ದೇವಸ್ಥಾನವಿದ್ದು, ಇಲ್ಲಿ ಮಾಲ್ ನಿರ್ಮಾಣ ಮಾಡುವುದರಿಂದ ದೇವಾಲಯವನ್ನು ತೆಗೆದು ನಮ್ಮ ಭಾವನೆಗಳಿಗೆ ಧಕ್ಕೆಯನ್ನುಟ್ಟು ಮಾಡಲು ಹೊರಟಿದ್ದಾರೆ, ಇದಕ್ಕೂ ಸಹ ನಮ್ಮ ವಿರೋಧವಿದ್ದು, ನಮಗೆ ಇಲ್ಲೇ ಜಾಗ ನೀಡಿ, ನಾವುಗಳು ಸರ್ಕಾರಕ್ಕೆ ಬಾಡಿಗೆ ಪಾವತಿ ಮಾಡಿಕೊಂಡು ಹೋಗಲು ಬದ್ಧರಾಗಿದ್ದೇವೆ, ಇಲ್ಲಿ ಮಾಲ್ ನಿರ್ಮಾಣವಾದರೆ ನಮ್ಮ ಮತ್ತು ನಮ್ಮ ಅವಲಂಬಿತರು ಬೀದಿಗೆ ಬರುತ್ತಾರೆ ಎಂದು ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದರು.
ಮುಂದುವರೆದು ಸರ್ಕಾರ ನಮ್ಮ ಮನವಿಯನ್ನು ಸ್ವೀಕರಿಸದೇ ಹೋದರೇ, ನಾವು ಇದರ ವಿರುದ್ಧ ಉಗ್ರ ಪ್ರತಿಭಟನೆ ಮತ್ತು ಕಾಲ್ನಡಿಗೆಯಲ್ಲಿ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿಕೆಯನ್ನು ನೀಡಿದ್ದಾರೆ, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸರು ಪ್ರತಿಭಟನೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದರು.