ಸರ್ಕಾರದ ಹಟಮಾರಿ ಧೋರಣೆಗೆ ಬಿಜೆಪಿ ಶಾಸಕರ, ನಾಗರೀಕರ, ವ್ಯಾಪಾರಸ್ಥರ ಹಾಗೂ ಮುಖಂಡರ ಆಕ್ರೋಶ

 

 

 

 

 

ತುಮಕೂರು: ನಗರದ ಸಿದ್ಧಿವಿನಾಯಕ ಮಾರುಕಟ್ಟೆ ಪ್ರದೇಶದಲ್ಲಿ ಸರ್ಕಾರದ ವತಿಯಿಂದ ಕೈಗೊಳ್ಳುತ್ತಿರುವ ಮಲ್ಟಿ ಯುಟಿಲಿಟಿ ಮಾಲ್ ವಿತ್ ಕಾರ್ ಪಾಕಿಂಗ್ ಯೋಜನೆಯನ್ನು ಸ್ಥಳೀಯ ಸಾರ್ವಜನಿಕರು, ಸಂಘ ಸಂಸ್ಥೆಗಳ ಅಭಿಪ್ರಾಯದಂತೆ ಕೈ ಬಿಡುವಂತೆ ಒತ್ತಾಯಿಸಿ ಶನಿವಾರ ಬಿಜೆಪಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಹಾಗೂ ಗ್ರಾಮಾಂತರ ಶಾಸಕರಾದ ಬಿ.ಸುರೇಶಗೌಡ ರವರು, ಬಿಜೆಪಿ ನಾಯಕರು, ಸ್ಥಳೀಯ ಸಂಘ ಸಂಸ್ಥೆಗಳು, ನಾಗರೀಕರೊಂದಿಗೆ ಪ್ರತಿಭಟನೆ ನಡೆಸಿದರು.

 

 

 

 

ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಿದ್ಧಿ ವಿನಾಯಕ ಮರುಕಟ್ಟೆ ಪ್ರದೇಶದಲ್ಲಿ ಮಲ್ಟಿ ಯುಟಿಲಿಟಿ ಮಾಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಯೋಜನೆ ಕೈಬಿಡುವಂತೆ ಒತ್ತಾಯಿಸಿ, ಸಚಿವರಿಗೆ ಮನವಿಯನ್ನು ಮಾಡಲು ಮಾರುಕಟ್ಟೆ ಸ್ಥಳಕ್ಕೆ ಹೊರಟಾಗ ಪೊಲೀಸರು ಬಿಜಿಎಸ್ ವೃತ್ತದಲ್ಲಿ ತಡೆದರು.

 

 

 

 

 

ಈ ವೇಳೆ ಬಿಜೆಪಿ ಮುಖಂಡರು ಹಾಗೂ ಶ್ರೀ ಸಿದ್ಧಿವಿನಾಯಕ ಮಾರುಕಟ್ಟೆಯ ಸುತ್ತಮುತ್ತಲಿನ ವ್ಯಾಪಾರಸ್ಥರು, ಸಾರ್ವಜನಿಕರು ಪೊಲೀಸರು ನಡುವೆ ಮಾತಿನ ಜಟಾಪಟಿ ನಡೆಯಿತು. ನಾವು ಶಾಂತಿಯುತವಾಗಿ ಹೋಗಿ ಸಚಿವರಿಗೆ ಮನವಿ ಸಲ್ಲಿಸುವುದಾಗಿ ಹೇಳಿದರೂ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಮುಖಂಡರು ಪೊಲೀಸರನ್ನು ಭೇದಿಸಿ ಹೊರಟಾಗಿ ಪೊಲೀಸರು ಎಲ್ಲಾ ಮುಖಂಡರನ್ನು ಬಂಧಿಸಿ ವಶಕ್ಕೆ ಪಡೆದು ಚಿಲುಮೆ ಪೊಲೀಸ್ ಸಮುದಾಯ ಭವನಕ್ಕೆ ಕರೆದೊಯ್ದರು. ಈ ನಡುವೆ ಸಚಿವ ಡಾ.ಪರಮೇಶ್ವರ್ ಅವರು ಸಿದ್ಧಿ ವಿನಾಯಕ ಮಾರುಕಟ್ಟೆ ಪ್ರದೇಶದಲ್ಲಿ ಮಾಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

 

 

 

 

ಇದಾದ ನಂತರ ವಶದಲ್ಲಿದ್ದ ಬಿಜೆಪಿ ಮುಖಂಡರನ್ನು ಪೊಲೀಸರು ಬಿಡುಗಡೆ ಮಾಡಿದರು. ನಂತರ ಸಿದ್ಧಿ ವಿನಾಯಕ ಮಾರುಕಟ್ಟೆ ಪ್ರದೇಶಕ್ಕೆ ಆಗಮಿಸಿದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಹಾಗೂ ಮುಖಂಡರು ಸರ್ಕಾರದ ಕ್ರಮ ಖಂಡಿಸಿದರು. ಈ ಹಿಂದೆ ದಿನಾಂಕ:29.07.2021ರಲ್ಲಿ ಶ್ರೀ ಸಿದ್ಧಿ ವಿನಾಯಕ ಮಾರುಕಟ್ಟೆ ಪ್ರದೇಶದಲ್ಲಿ ಮಲ್ಟಿ ಯುಟಿಲಿಟಿ ಮಾಲ್ ವಿತ್‌ಕಾರ್ ಪಾರ್ಕಿಂಗ್ ಯೋಜನೆಯನ್ನು ಕೈಬಿಡುವಂತೆ ಕೋರಿ ಮನವಿ ಸಲ್ಲಿಸಿದ್ದ ಕಾರಣ, ಸದರಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಏಕಾಏಕಿ ಸದರಿ ಯೋಜನೆಯನ್ನು ಪುನರ್ ಪ್ರಾರಂಭಿಸುತ್ತಿರುವ ಹಿಂದಿನ ದುರುದ್ದೇಶವಾದರೂ ಏನು?

 

 

 

 

 

ಈ ವೇಳೆ ಸ್ಥಳೀಯ ವ್ಯಾಪಾರಿಗಳು ಬಿಜೆಪಿ ಮುಖಂಡರ ಹೋರಾಟಕ್ಕೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಶಾಸಕ ಬಿ.ಸುರೇಶ್‌ಗೌಡರು ಮಾತನಾಡಿ, ಈ ಜಾಗದಲ್ಲಿ ಹಣ್ಣು, ಹೂವು, ತರಕಾರಿ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬೇಕು. ಉದ್ದೇಶಿದ ಮಾಲ್ ನಿರ್ಮಾಣದ ಯೋಜನೆ ಕೈಬಿಡಬೇಕು, ಬಡವರಿಗೆ ಅನ್ಯಾಯ ಮಾಡಿ, ಶ್ರೀಮಂತರಿಗೆ ಅನುಕೂಲ ಮಾಡುವಮೂಲಕ ಸರ್ಕಾರ ಬಡವರ ವಿರೋಧಿ ಧೋರಣೆ ಕೈಬಿಡಬೇಕು ಎಂದು ಒತ್ತಾಯಿಸಿದರು.

 

 

 

 

 

ಇಲ್ಲಿನ ದೇವಸ್ಥಾನ ಒಂದು ಚೂರು ಅಲುಗಾಡಿದರೂ ಅದಕ್ಕೆ ಸರ್ಕಾರವೇ ಹೊಣೆ, ಜನರ ಭಾವನೆಗಳೊಂದಿಗೆ ಸರ್ಕಾರ ಆಟವಾಡುತ್ತಿದೆ. ಇಲ್ಲಿ ಮಾಲ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಸ್ಥಳೀಯ ವ್ಯಾಪಾರಿಗಳೊಂದಿಗೆ ಸೇರಿ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಶಾಸಕ ಬಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಸ್ಥಳಿಯ ನಾಗರೀಕರು, ಸಂಘಸಂಸ್ಥೆಗಳ ಅಭಿಪ್ರಾಯದಂತೆ ಇಲ್ಲಿ ಮಾಲ್ ನಿರ್ಮಾಣ ಯೋಜನೆ ಸ್ಥಗಿತಗೊಳಿಸಲಾಗಿತ್ತು. ಆದರೆ ಸಚಿವರು ಇಂದು ಏಕಾಏಕಿ ಪೊಲೀಸರ ಬಂದೋಬಸ್ತಿನಲ್ಲಿ ಮಾಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದರು.

 

 

 

 

 


ಇಲ್ಲಿ ಮಲ್ಟಿ ಯುಟಿಲಿಟಿ ಮಾಲ್ ವಿತ್ ಕಾರ್ ಪಾರ್ಕಿಂಗ್ ನಿರ್ಮಾಣದ ಯೋಜನೆಯನ್ನು ರದ್ದುಗೊಳಿಸಬೇಕು. ಈ ಜಾಗವನ್ನು ಸ್ಥಳೀಯ ತರಕಾರಿ, ಹಣ್ಣು, ಹೂವು ಮಾರಾಟ ಮಾಡುವ ಸಣ್ಣ ಪುಟ್ಟ ವ್ಯಾಪಾರಿಗಳ ವ್ಯಾಪಾರಕ್ಕಾಗಿ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಶ್ರೀ ಸಿದ್ಧಿವಿನಾಯಕ ಮಾರುಕಟ್ಟೆ ಸುತ್ತಮುತ್ತಲಿನ ವ್ಯಾಪಾರಸ್ಥರು, ಸಂಘ ಸಂಸ್ಥೆಗಳು, ಹಲವು ಬಿಜೆಪಿ ಮುಖಂಡರು, ನಾಗರೀಕರು ಈ ಹೋರಾಟದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!