ತುಮಕೂರು : ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹೆಬ್ಬಾಕ ಕೆರೆಯಲ್ಲಿ ಅಕ್ರಮ ಮಣ್ಣು ಲೂಟಿ ಅವ್ಯಾಹತವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಸ್ತಳೀಯರು ಹಾಗೂ ರೈತ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.
ರೈಲ್ವೆ ಕಾಮಗಾರಿ ನಡೆಸುವ ಗುತ್ತಿಗೆದಾರರು ರಾಜಾರೋಷವಾಗಿ ಮಣ್ಣು ಸಾಗಣೆ ಮಾಡುತ್ತಿದ್ದರೂ ಸಹ ಇದಕ್ಕೆ ಕಡಿವಾಣ ಹಾಕಬೇಕಾದ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪ್ರಶ್ನಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸರ್ಕಾರದ ನಿಯಮಾವಳಿ ಮೀರಿ 10 ಅಡಿ ಆಳದವರೆಗೂ ಮಣ್ಣು ಎತ್ತುತ್ತಿದ್ದಾರೆ,ರೈತರು ತೋಟಗಳಿಗೆ ಮಣ್ಣು ಸಾಗಿಸಲು ಮುಂದಾದರೆ ಕಂದಾಯ ಇಲಾಖೆ,ಪೊಲೀಸ್ ಇಲಾಖೆ ಅಧಿಕಾರಿಗಳು ರೈತರ ಟ್ರಾಕ್ಟರ್ ಜಪ್ತಿ ಮಾಡಿ ದಂಡ ಹಾಕಿ ದೌರ್ಜನ್ಯ ಮಾಡುತ್ತಾರೆ,ಅದೇ ರೈಲ್ವೆ ಗುತ್ತಿಗೆದಾರರು,ಖಾಸಗಿಯವರು ಮಣ್ಣು ಸಾಗಿಸಿದರೆ ಯಾವೊಬ್ಬ ಇಲಾಖೆ ಅಧಿಕಾರಿಗಳೂ ತಿರುಗಿಯೂ ನೋಡುವುದಿಲ್ಲ ಎಂದು ರೈತ ಸಂಘಟನೆಯ ಮುಖಂಡರೊಬ್ಬರು ವ್ಯವಸ್ತೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.