ತುಮಕೂರು -ನಗರದ ಕುಣಿಗಲ್ ರಸ್ತೆಯಲ್ಲಿರುವ ಸಾಹುಕಾರ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಅಳತೆಯಲ್ಲಿ ಗ್ರಾಹಕರೊಬ್ಬರಿಗೆ ಅನ್ಯಾಯ ಮಾಡಲಾಗಿದೆಂದು ಆರೋಪ ಕೇಳಿ ಬಂದಿರುವುದಲ್ಲದೇ ಬುಧವಾರ ರಾತ್ರಿ ಗ್ರಾಹಕರೊಬ್ಬರು ಗಲಾಟೆ ಮಾಡಿ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಅಳತೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ಪೆಟ್ರೋಲ್ ಬಂಕ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರದ ಕುಣಿಗಲ್ ರಸ್ತೆಯಲ್ಲಿರುವ ಸಾಹುಕಾರ್ ಪೆಟ್ರೋಲ್ ಬಂಕ್ ನಲ್ಲಿ ಬುದುವಾರ ರಾತ್ರಿ ಗ್ರಾಹಕರೊಬ್ಬರು ಬೈಕಿಗೆ ರೂ. 110 ಮೌಲ್ಯಕ್ಕೆ ಪೆಟ್ರೋಲ್ ಹಾಕಿಸಿಕೊಂಡಿರುತ್ತಾರೆ ಆದರೆ ನಿಗಧಿತ ಪ್ರಮಾಣಿಕ್ಕಿಂತ ತೀವ್ರ ಕಡಿಮೆ ಬಂದಿದೆ ಎಂದು ತಗಾದೆ ತೆಗೆದ ಪರಿಣಾಮ ಅಳತೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ಪೆಟ್ರೋಲ್ ಬಂಕ್ ತಪಾಸಣೆಗೆ ಎಡೆ ಮಾಡಿಕೊಟ್ಟಂತಾಯಿತು.
ಅಳತೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ಗ್ರಾಹಕರೊಬ್ಬರ ಆರೋಪದಂತೆ ಗುರುವಾರ ಸಂಜೆ ಪೆಟ್ರೋಲ್ ಬಂಕ್ ಗೆ ಆಗಮಿಸಿ ಖುದ್ದು ಮಹಜರ್ ಮಾಡಿರುವುದಲ್ಲದೇ ಅಲ್ಲಿನ ಯಂತ್ರೋಪಕರಣಗಳನ್ನು ಸಾರ್ವಜನಿಕರು ಹಾಗೂ ಆರೋಪಿತರ ಸಮ್ಮುಖದಲ್ಲಿಯೇ ತೆರೆದು ಅದರ ಕಾರ್ಯನಿರ್ವಹಣೆ ಹಾಗೂ ಅದಕ್ಕೆ ಅಳವಡಿಸಲಾಗಿದ್ದ ಸರ್ಕಾರಿ ಮುದ್ರೆ ಮತ್ತು ಅದರ ಕಾರ್ಯನಿರ್ವಹಣೆ ಕುರಿತು ವಿವರಿಸಿದರಲ್ಲದೇ ಅದನ್ನು ಟ್ಯಾಪಿಂಗ್ ಮಾಡಲು ಅಥವಾ ದುರ್ಬಳಕೆ ಮಾಡಲು ಮುಂದಾದರೆ ತಕ್ಷಣವೇ ಅದು ಬಂಕ್ ಮಾಲೀಕರು, ಇಲಾಖೆಗೆ ಸೇರಿದಂತೆ ಸಂಬಂಧಿಸಿದ ಇಂಧನ ಕಂಪನಿಗೆ ಸಂದೇಶ ರವಾನೆಯಾಗುವ ತಂತ್ರಜ್ಞಾನ ಹೊಂದಿರುವ ಯಂತ್ರೋಪಕರಣ ಇದಾಗಿದ್ದು ಸಂಪೂರ್ಣ ಆಧುನಿಕ ತಂತ್ರಾಂಶವನ್ನು ಹೊಂದಿದೆ, ಈ ಯಂತ್ರದಿಂದ ಯಾವುದೇ ರೀತಿಯಲ್ಲಿ ಗ್ರಾಹಕರಿಗೆ ಮೋಸ ಮತ್ತು ವಂಚನೆ ಆಗುವುದಕ್ಕೇ ಸಾಧ್ಯವೇ ಇಲ್ಲ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು, ಆರೋಪಿತರು ಹಾಗೂ ಪೊಲೀಸ್ ಅಧಿಕಾರಿಗಳಿಗೂ ಸಹ ಯಂತ್ರೋಪಕರಣದ ಕಾರ್ಯನಿರ್ವಹಣೆ ಕುರಿತು ಪ್ರಾತ್ಯಕ್ಷಿತೆ ಮೂಲಕ ಸ್ಪಷ್ಠ ಪಡಿಸಿದ್ದರು.
ಪ್ರಾತ್ಯಕ್ಷಿತೆಯ ನಂತರ ಎಲ್ಲರ ಸಮ್ಮುಖದಲ್ಲಿಯೇ ಇಲಾಖೆಯಿಂದ ತರಲಾಗಿದ್ದ ಅಳತೆ ಮಾಪಕದಲ್ಲಿ ವಿವಿಧ ಅಳತೆಯ ಪೆಟ್ರೋಲ್ ಇಂಧನವನ್ನು ಸಾರ್ವಜನಿಕರ ಮುಂದೆಯೇ ಅದಕ್ಕೆ ಹಾಕಿ ಅಳತೆ ಮಾಡಿದಾಗ ಯಾವುದೇ ರೀತಿಯಲ್ಲಿ ಕಡಿಮೆ ಅಳತೆಯ ಇಂಧನ ಬರುತ್ತಿಲ್ಲ ಎಂದು ಆರೋಪಿತರು ಸೇರಿದಂತೆ ಸಾರ್ವಜನಿಕರ ಸಮ್ಮುಖದಲ್ಲಿಯೇ ಸ್ಪಷ್ಠವಾಗಿ ತೋರಿಸಿದರಲ್ಲದೇ ಈ ಬಂಕ್ ನಲ್ಲಿ ಮೋಸ ವಂಚನೆ ಹಾಗೂ ಕಡಿಮೆ ಅಳತೆಯ ಇಂಧನ ಬರಲು ಸಾಧ್ಯವಿಲ್ಲವೆಂದು ಸ್ಪಷ್ಠವಾಗಿ ತಿಳಿಸಿದರು. ಇದರಿಂದ ಸಾರ್ವಜನಿಕರಲ್ಲಿ ಉಂಟಾಗಿದ್ದ ಗೊಂದಲ ಮತ್ತು ಆರೋಪಕ್ಕೆ ಇತಿಶ್ರೀ ಹಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಮಾಲೀಕರಾದ ಸಿ.ಆರ್.ಉಮೇಶ್ ರವರು ಸಹ ಸ್ಪಷ್ಟನೆ ನೀಡಿದ್ದು ಇತ್ತೀಚಿಗೆ ತೆರೆಯಲಾಗಿದ್ದ ಸಾಹುಕಾರ್ ಪೆಟ್ರೋಲ್ ಬಂಕ್ ನಲ್ಲಿ ಯಾವುದೇ ರೀತಿಯ ಅವ್ಯವಹಾರ ಹಾಗೂ ಅಳತೆಯಲ್ಲಿ ಮೋಸ ಇದುವರೆವಿಗೂ ಕಂಡು ಬಂದಿಲ್ಲ ಆದರೂ ಸಹ ಯಾರೋ ಒಬ್ಬ ಗ್ರಾಹಕರು ತಪ್ಪಾಗಿ ಗ್ರಹಿಸಿ ಅಥವಾ ಅವರಿಗೆ ಗೊಂದಲವಿದ್ದ ಕಾರಣ ಇಷ್ಟೊಂದು ಆವಂತರಕ್ಕೆ ಕಾರಣವಾಗಿ ಅದನ್ನು ಅಧಿಕಾರಿಗಳು ಎಲ್ಲರ ಸಮ್ಮುಖದಲ್ಲಿಯೇ ಸ್ಪಷ್ಟಪಡಿಸಿರುವುದು ನಮಗೆ ನೆಮ್ಮದಿ ಮತ್ತು ಗ್ರಾಹಕರಲ್ಲಿದ್ದ ಅಪ ನಂಬಿಕೆಯನ್ನು ದೂರ ಮಾಡಿದ್ದಾರೆ ಇದರಿಂದ ನಮಗೆ ಮತ್ತಷ್ಟು ಉತ್ಸಾಹ ಬಂದಿದೆ ಎಂದಿದ್ದಾರೆ, ಆದರೂ ಸಹ ಕೆಲ ಗ್ರಾಹಕರು ನಮ್ಮ ಬಂಕಿನ ಕೆಲ ಸಿಬ್ಬಂದಿಗಳ ಮೇಲೆ ಕೆಲವು ಆರೋಪ ಮಾಡುತ್ತಿದ್ದಾರೆ, ಆ ಕುರಿತು ಶೀಘ್ರದಲ್ಲಿಯೇ ಕ್ರಮ ವಹಿಸುವುದಾಗಿ ಭರವಸೆಯನ್ನು ಸಹ ನೀಡಿದರು.
ಇನ್ನು ಸ್ಥಳದಲ್ಲಿದ್ದ ಕೆಲ ಗ್ರಾಹಕರು ಅಧಿಕಾರಿಗಳು ನಡೆಸಿದ ಪ್ರಾತ್ಯಕ್ಷಿತೆ ಮತ್ತು ಪರೀಕ್ಷೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಜಯನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಗ್ರಾಹಕರಿಗೆ ಮತ್ತೇನಾದರೂ ಅನುಮಾನವಿದ್ದಲ್ಲಿ ಠಾಣೆಗೆ ಬಂದು ದೂರು ನೀಡಬಹುದು ಎಂದು ತಿಳಿಸಿದರು.