ತುಮಕೂರು : ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿಯಿಂದ ಕ್ಯಾತ್ಸಂದ್ರದ ಶ್ರೀ ಸಿದ್ಧಗಂಗಾ ಮಠಕ್ಕೆ ಸಂಪರ್ಕಿಸುವ ಮೇಲ್ಸುತೇವೆ (ಫ್ಲೈ ಓವರ್)ನ್ನು ಲೋಕಾರ್ಪಣೆಗೊಳಿಸಿರುವ ಸಂಬಂಧಪಟ್ಟ ಇಲಾಖೆಯವರ ವಿರುದ್ಧ ಸ್ಥಳೀಯ ಜನರ ಆಕ್ರೋಷಕ್ಕೆ ಮತ್ತೊಮ್ಮೆ ಗುರಿಯಾಗಿದ್ದಾರೆ.
ಮೇಲ್ಸುತೇವೆ ರಸ್ತೆ ಕಾಮಗಾರಿ ಪ್ರಾರಂಭ ಮಾಡುವ ಸಮಯದಲ್ಲಿ ಇಲ್ಲಿನ ನಿವಾಸಿಗಳಿಗೆ ಮೇಲ್ಸುತೇವೆ ಕೆಳಗಡೆ ಅಂದರೆ ಎರಡೂ ಬದಿಯಲ್ಲಿ 8 ಅಡಿಯ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಿಕೊಡುವುದಾಗಿ ಭರವಸೆಯನ್ನು ನೀಡಿದ್ದರು, ಆದರೆ ಆ ಭರವಸೆ ಇದುವರೆವಿಗೂ ಈಡೇರದೇ ಜನರು ಸಂಕಷ್ಠದಿಂದ ಈ ಜಾಗದಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ಸ್ಥಳೀಯ ನಿವಾಸಿಗಳು ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಚರಂಡಿ ಮಾಡುವುದಾಗಿ ಹೇಳಿ ಕಾಮಗಾರಿ ಪ್ರಾರಂಭ ಮಾಡಿ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ, ಯಾರಿಗೆ ಕೇಳಿದರೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂಬುದು ಸ್ಥಳೀಯ ನಾಗರೀಕರ ಆಕ್ರೋಷವಾಗಿದೆ.
ಈ ಕಾಮಗಾರಿ ಪ್ರಾರಂಭ ಮಾಡಿದ ಮೊದಲ ದಿನದಿಂದಲೂ ನಾವುಗಳು ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಮಾಡಿಕೊಂಡು ಬರುತ್ತಿದ್ದರೂ ಸಹ ಮೇಲ್ಸುತೇವೆಯ ಒಂದು ಕಡೆ ಮಾತ್ರ ೮ ಅಡಿ ಸರ್ವೀಸ್ ರಸ್ತೆ ಮಾಡಿದ್ದು, ಇನ್ನೊಂದು ಕಡೆ ಮಾಡದೇ ಹಾಗೇ ಬಿಟ್ಟಿದ್ದಾರೆ, ನಾವು ಕೇಳಲು ಹೋದರೆ ಒಬ್ಬರ ಮೇಲೆ ಒಬ್ಬರು ಹೇಳಿ ಏನೋ ಒಂದು ಸಬೂಬು ಹೇಳುತ್ತಿದ್ದಾರೆ, ನಾವು ಪ್ರತಿನಿತ್ಯ ರಸ್ತೆಯಿಲ್ಲದೇ ಕಲ್ಲು ಬಂಡೆಗಳ ಹಾಸುಗಳ ಮೇಲೆ ಓಡಾಡುವ ಸ್ಥಿತಿ ಬಂದಿದೆ, ನಮ್ಮ ಮನೆಗಳಲ್ಲಿರುವ ವೃದ್ಧರು, ಮಕ್ಕಳು ಓಡಾಡಲು ಬಹಳ ಕಷ್ಟಕರವಾಗಿದೆ ಜೊತೆಗೆ ಮಳೆ ಬಂದರೆ ಇಲ್ಲಿ ಓಡಾಡಲು ಭಯವುಂಟಾಗುತ್ತದೆ, ಏಕೆಂದರೆ ಎರಡೂ ಪಕ್ಕಗಳ ನೀರು ಈ ಭಾಗದಲ್ಲಿ ಹರಿದು ಹೋಗುವುದರ ಪರಿಣಾಮ ಜೀವವನ್ನು ಕೈಯಲ್ಲಿಟ್ಟುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು, ಈ ಭಾಗದಲ್ಲಿರುವ ಮನೆಗಳಿಗೆ ನೀರಿನ ಸಂಪರ್ಕವನ್ನು ಸಹ ಕಡಿತಗೊಳಿಸಿದ್ದಾರೆ, ಟ್ಯಾಂಕರ್ ಮೂಲಕ ನೀರನ್ನು ಹಾಕಿಸಿಕೊಳ್ಳುತ್ತಿದ್ದು, ಇದೀಗ ಈ ಭಾಗದ ರಸ್ತೆ ಸಂಪೂರ್ಣ ಶಿಥಿಲವಾಗಿರವ ಕಾರಣ ಟ್ಯಾಂಕರ ಸಹ ಬರಲು ಆಗುತ್ತಿಲ್ಲ ಎಂದರು.
ಇನ್ನೂ ಈ ಮಳೆ ನೀರು, ಕೊಳಚೆ ನೀರು ಎಲ್ಲಾ ರಸ್ತೆ ಮಗ್ಗುಲಲ್ಲಿ ನಿಂತಿದ್ದು, ಇದರಿಂದ ಸೊಳ್ಳೆಗಳು ಹಾಗೂ ಇನ್ನಿತರೆ ಕ್ರಿಮಿ ಕೀಟಿಗಳ ಉತ್ಪತ್ತಿಗೆ ಕಾರಣವಾಗಿದೆ, ಈಗಾಗಲೇ ಡೆಂಗ್ಯೂ ಜ್ವರ ಎಲ್ಲಾ ಕಡೆ ಕಾಣಿಸುತ್ತಿದ್ದು, ಇಲ್ಲಿನ ನಿವಾಸಿಗಳಿಗೆ ಭಯವುಂಟಾಗಿದೆ, ಇವರು ಇಲ್ಲಿ ರಸ್ತೆ ನಿರ್ಮಾಣ ಮಾಡದ ಕಾರಣ ಸ್ವಚ್ಛತೆ ಮತ್ತು ನೈರ್ಮಲ್ಯ ಇಲ್ಲದಂತೆ ಆಗಿದ್ದು, ನಮ್ಮ ಅಳಲನ್ನು ಕೇಳುವವರು ಯಾರು? ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಇನ್ನೊಂದು 15ದಿನಗಳೊಳಗಾಗಿ ಸಂಬಂಧಪಟ್ಟ ಇಲಾಖೆಯವರು ಮತ್ತು ಅಧಿಕಾರಿಗಳು ನಮಗೆ ಸರ್ವೀಸ್ ರಸ್ತೆಯನ್ನು ಮಾಡಿಕೊಡದೇ ಇದ್ದಲ್ಲಿ ಬೆಂಗಳೂರು – ತುಮಕೂರು ಮತ್ತು ಕ್ಯಾತ್ಸಂದ್ರದೊಳಗೆ ಸಂಪರ್ಕಿಸುವ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ ಪ್ರತಿಭಟನೆ ಮಾಡುವುದಲ್ಲದೇ, ನಮ್ಮ ಮನೆಯಲ್ಲಿರುವ ಎಲ್ಲಾ ಸಾಮಾಗ್ರಿಗಳನ್ನು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿಟ್ಟು ಪ್ರತಿಭಟನೆ ಮಾಡಬೇಕಾಗುತ್ತದೆಂದು ಒತ್ತಾಯಿಸಿದ್ದಾರೆ.