ತುಮಕೂರು: ನಗರದ ಸಿದ್ಧಿವಿನಾಯಕ ತರಕಾರಿ ಮತ್ತು ಹೂವು ಮಾರುಕಟ್ಟೆ ಹಾಗೂ ಇದರ ಆವರಣದಲ್ಲಿರುವ ಗಣಪತಿ ದೇವಸ್ಥಾನವನ್ನು ಯಥಾಸ್ಥಿತಿ ಕಾಪಾಡಬೇಕು ಎಂದು ಒತ್ತಾಯಿಸಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹಾಗೂ ಸ್ಥಳೀಯ ವ್ಯಾಪಾರಿಗಳು ಎಸ್ಪಿಗೆ ಮನವಿ ಸಲ್ಲಿಸಿದರು.
ಸೋಮವಾರ ಸಂಜೆ ಎಸ್ಪಿ ಕಚೇರಿಗೆ ನಿಯೋಗ ತೆರಳಿ, ಸಿದ್ಧಿವಿನಾಯಕ ಮಾರುಕಟ್ಟೆ ಪ್ರದೇಶದಲ್ಲಿ ಸ್ಥಳೀಯರು ಹಾಗೂ ಸಾರ್ವಜನಿಕರ ವಿರೋಧದ ನಡುವೆ ಮಲ್ಟಿ ಯುಟಿಲಿಟಿ ಮಾಲ್ ವಿತ್ ಕಾರ್ ಪಾಕಿಂಗ್ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಹಲವಾರು ವರ್ಷಗಳಿಂದ ಇಲ್ಲಿ ತರಕಾರಿ, ಹೂವು, ಹಣ್ಣಿನ ವ್ಯಾಪಾರ ಮಾಡುತ್ತಿರುವ ಬಡ ವ್ಯಾಪಾರಿಗಳನ್ನು ಸ್ಥಳಾಂತರಿಸುವ ಪ್ರಯತ್ನ ನಡೆದಿದೆ, ಸರ್ಕಾರದ ಈ ಕ್ರಂ ಖಂಡನೀಯ ಎಂದು ಶಾಸಕರಿಬ್ಬರು ಹೇಳಿದರು.
ಜೊತೆಗೆ ಮಾರುಕಟ್ಟೆ ಆವರಣದಲ್ಲಿರುವ ಪುರಾತನ ಗಣಪತಿ ದೇವಸ್ಥಾನವನ್ನು ಕೆಡವಲು ಹೊರಟಿರುವುದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತದೆ. ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಸರ್ಕಾರದ ಈ ಧೋರಣೆ ವಿರುದ್ಧ ಸ್ಥಳೀಯ ವ್ಯಾಪಾರಿಗಳು, ಕನ್ನಡಪರ ಸಂಘಟನೆಗಳೊಂದಿಗೆ ಧರಣಿ ಮಾಡುವುದಾಗಿ ಶಾಸಕರಾದ ಜ್ಯೋತಿಗಣೇಶ್, ಸುರೇಶ್‌ಗೌಡ ಹೇಳಿದರು.
ಮಾರುಕಟ್ಟೆ ಆವರಣದ ಗಣಪತಿ ದೇವಸ್ಥಾನವನ್ನು ಯಥಾಸ್ಥಿತಿ ಕಾಪಾಡಬೇಕು ಹಾಗೂ ಸ್ಥಳೀಯ ವ್ಯಾಪಾರಿಗಳನ್ನು ಸ್ಥಳಾಂತರ ಮಾಡಕೂಡದು ಎಂದು ಒತ್ತಾಯಿಸಿ, ಎಸ್ಪಿ ಕೆ.ವಿ.ಅಶೋಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.