ತುಮಕೂರು : ಭಾರತದಲ್ಲಿ ಅನಾದಿಕಾಲದಿಂದಲೂ ಗುರುಶಿಷ್ಯ ಪರಂಪರೆ ನಡೆದು ಬಂದಿದೆ; ಈ ಪರಂಪರೆಯಿಂದಲೇ ನಮ್ಮ ರಾಷ್ಟ್ರವು ಇಂದಿಗೂ ವೈಭವಸಂಪನ್ನವಾಗಿದೆ. ಈ ಪರಂಪರೆಯು ಸಮಾಜಕ್ಕೆ ಅಧ್ಯಾತ್ಮದ ಜ್ಞಾನವನ್ನು ನೀಡುವುದರೊಂದಿಗೆ ಸುಸಂಸ್ಕೃತ ಆಚರಣೆಗಳನ್ನೂ ಕಲಿಸಿದೆ. ನಮ್ಮ ಆಚಾರ, ವಿಚಾರ, ಉಡುಪು, ವರ್ತನೆ ಇವೆಲ್ಲವೂ ಸುಸಂಸ್ಕೃತವಾಗಿರಲು ನಾವು ಪ್ರಯತ್ನಿಸಬೇಕಿದೆ. ಪ್ರಭು ಶ್ರೀರಾಮರು ಸಹ ತಮ್ಮ ಗುರುಗಳ ಆಶೀರ್ವಾದ ಪಡೆದು ಆದರ್ಶ ರಾಮರಾಜ್ಯದ ಸ್ಥಾಪನೆಯನ್ನು ಮಾಡಿದ್ದರು. ಈಗ ನಾವೂ ಇಂತಹ ಆದರ್ಶ ರಾಜ್ಯದ ಸ್ಥಾಪನೆಗಾಗಿ ಸುಸಂಸ್ಕೃತ ಆಚರಣೆಗಳೊಂದಿಗೆ ಪ್ರತಿದಿನ ಪ್ರಭು ಶ್ರೀರಾಮನಿಗೆ ಪ್ರಾರ್ಥನೆಯನ್ನು ಮಾಡೋಣ ಎಂದು ಸನಾತನ ಸಂಸ್ಥೆಯ ಸೌ. ಅಶ್ವಿನಿ ನಾಗರಾಜ್ ಈ ಸಮಯದಲ್ಲಿ ಕರೆ ನೀಡಿದರು.
ಮಹಾವೀರ್ ಭವನ್, ರೈಲ್ವೆ ಸ್ಟೇಷನ್ ರಸ್ತೆ, ತುಮಕೂರು ಇಲ್ಲಿ ಗುರುಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಇದರೊಂದಿಗೆ ಜಿಲ್ಲೆಯ ತುಮಕೂರಿನಲ್ಲಿ ಮತ್ತು ದೇಶಾದ್ಯಂತ 71 ಸ್ಥಳಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಿತ್ತು. ಈ ಮಹೋತ್ಸವದಲ್ಲಿ ಹಿಂದೂ ನಿಷ್ಠ ಶ್ರೀ ಗುರುಪ್ರಸಾದ್ ಇವರೂ ಭಾಗಿಯಾಗಿದ್ದರು. 185 ಕ್ಕೂ ಅಧಿಕ ಜನರು ಈ ಕಾರ್ಯಕ್ರಮದ ಲಾಭ ಪಡೆದರು. ಈ ದಿನ ಬೆಳಿಗ್ಗೆ ಶ್ರೀ ವ್ಯಾಸ ಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ ನೆರವೇರಿಸಲಾಯಿತು.
ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಡಾ. ಆರ್. ಎಲ್. ರಮೇಶ್ ಬಾಬು ಇವರು ಮಾತನಾಡಿ 84 ಲಕ್ಷ ಜೀವರಾಶಿಗಳಲ್ಲಿ ಉನ್ನತವಾದ ಜೀವಿ ಮಾನವ. ಮನುಷ್ಯನಿಗೆ ವಿಶೇಷವಾದಂತಹ ಯಾವುದು ಸರಿ, ಯಾವುದು ತಪ್ಪು, ಯಾವುದು ಧರ್ಮ ಯಾವುದು ಅಧರ್ಮ ಎಂದು ವಿಶ್ಲೇಷಣೆ ಮಾಡುವಂತಹ ಶಕ್ತಿ ಮಾನವನಿಗೆ ದೊರೆತಿದೆ. ಈ ಶಕ್ತಿಯನ್ನು ಉಪಯೋಗಿಸಿಕೊಂಡು ಸಾಧನೆ ಮಾಡಿ ನಮ್ಮ ರಾಷ್ಟ್ರವನ್ನು ಅತ್ಯಂತ ಉನ್ನತ ರಾಷ್ಟ್ರವನ್ನಾಗಿ ವಿಶ್ವ ಗುರುವನ್ನಾಗಿ ಪುನರ್ ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.