ಬಿಜೆಪಿಯವರು ರಾಜ್ಯದ ಆರ್ಥಿಕ ಸ್ಥಿತಿಯನ್ನು ದಿವಾಳಿ ಎಬ್ಬಿಸಿ ಹೋಗಿದ್ದರು: ಗೃಹ ಸಚಿವ ಪರಮೇಶ್ವರ

ಬೆಂಗಳೂರು :- ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ರೀತಿಯ ಪತ್ರ ಬಂದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಸ್ಪಷ್ಟಪಡಿಸಿದರು.

 

 

 

 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪವರ್ ಟಿವಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿರುವುದನ್ನು ಗಮನಿಸಿದ್ದೇನೆ. ಈವರೆಗೆ ಯಾವುದೇ ರೀತಿಯ ಅಧಿಕೃತ ದೂರು ದಾಖಲಾಗಿಲ್ಲ. ನನಗೆ ಯಾವುದೇ ಪತ್ರ ಬಂದಿಲ್ಲ. ಶಿವಕುಮಾರ್ ಎನ್ನುವರು ದೂರು ಕೊಟ್ಟಿದ್ದಾರೆ ಎಂದರು.

 

 

 

ಪತ್ರ ಬರೆಯುವುದಕ್ಕು, ದೂರು ಕೊಡುವುದಕ್ಕು ಸಾಕಷ್ಟು ವ್ಯತ್ಯಾಸವಿದೆ. ನೈಜತೆಯನ್ನು ಪರಿಶೀಲಿಸಬೇಕಾಗುತ್ತದೆ. ಪೊಲೀಸ್ ಠಾಣೆಗೆ ದೂರು ಕೊಟ್ಟರೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬಹುದು. ಪವರ್ ಟಿವಿಯರನ್ನು ಕರೆಸಿ, ಎಲ್ಲಿ‌ ಮಾಹಿತಿ ಸಿಕ್ಕಿದೆ ಎಂಬುದುನ್ನು ಪಡೆಯಲಾಗುವುದು ಎಂದು ಹೇಳಿದರು.

 

 

 

ರಾಜ್ಯ ಸರ್ಕಾರಕ್ಕೆ ಹಣಕಾಸು ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ. ಏಜೆನ್ಸಿಗೆ ಕೊಟ್ಟಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ತಮ್ಮ ಅಧಿಕಾರವಧಿಯಲ್ಲಿ ರಾಜ್ಯದ ಹಣಕಾಸಿನ ಸ್ಥಿತಿ ಯಾವ ರೀತಿ ಇಟ್ಟಿದ್ದರು‌ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಸಾಲ ಎಷ್ಟು ಮಾಡಿದ್ದರು, ಏನೆಲ್ಲ ದಿವಾಳಿ ಎಬ್ಬಿಸಿ ಹೋಗಿದ್ದರು ಅಂತ ಗೊತ್ತಿದೆ‌ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

 

 

 

ರಾಜ್ಯದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ನಾವು ಬದ್ಧವಾಗಿದ್ದೇವೆ. ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಚುನಾವಣಾ ಪೂರ್ವದಲ್ಲಿ ಜನರಿಗೆ ಭರವಸೆ ನೀಡಿದ್ದೇವೆ. ಗ್ಯಾರಂಟಿ ಕಾರ್ಯಕ್ರಮ ಕೊಟ್ಟಿರುವುದೇ ಇವರಿಗೆ ಹೊಟ್ಟೆಹುರಿಯಾಗಿದೆ. ಬಿಜೆಪಿಯವರು ಯಾರು ಗ್ಯಾರಂಟಿ ಹಣ ತೆಗೆದುಕೊಳ್ಳುತ್ತಿಲ್ಲವೇ? ನಾವು ಪಕ್ಷ ಇಟ್ಟುಕೊಂಡು ಕೆಲಸ ಮಾಡಿದ್ದೇವೆಯೇ? ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಯೋಜನೆ ಕೊಟ್ಟಿದ್ದೇವೆಯೇ? ಎಂದು ಪ್ರಶ್ನಿಸಿದರು.

 

 

 

ರಾಜ್ಯದ ಆರ್ಥಿಕ ಸ್ಥಿತಿಯನ್ನು ಯಾವ ರೀತಿಯಾಗಿ ಸದೃಢ ಮಾಡಿಕೊಳ್ಳಬೇಕು. ಹೇಗೆ ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ತೆಗೆದುಕೊಳ್ಳುವುದು ಇವರಿಗೆ ಹೊಟ್ಟೆಹುರಿಯಾದರೆ ಉತ್ತರ ಕೊಡಲು ಆಗುವುದಿಲ್ಲ. ಇದಕ್ಕೆ ಎಲ್ಲಿಂದ ಔಷಧಿ ತರಲು ಸಾಧ್ಯ. ಹೆಚ್ಚು ಹಣ ಹೊಂದಿಸಿಕೊಂಡು, ಇದರ ಮೂಲಕ ರಾಜ್ಯದಲ್ಲಿ ನೀರಾವರಿ ಯೋಜನೆ, ರಸ್ತೆ ಅಭಿವೃದ್ಧಿ ಮುಂತಾದ ಕೆಲಸಗಳಾಗಬೇಕಿದೆ ಎಂದರು ಹೇಳಿದರು.

Leave a Reply

Your email address will not be published. Required fields are marked *

error: Content is protected !!