ಎಲ್ಲರಿಗೂ ಕಾನೂನು ಒಂದೇ: ಗೃಹ ಸಚಿವ ಪರಮೇಶ್ವರ

ಬೆಂಗಳೂರು :- ‘ಎಲ್ಲರಿಗೂ ಕಾನೂನು ಒಂದೇ. ನಟ ದರ್ಶನ್‌ಗು ಕಾನೂನು ಒಂದೇ, ಪರಮೇಶ್ವರ್‌ಗು ಒಂದೇ ಕಾನೂನು. ಯಾರು ಸಹ ಕಾನೂನು ಕೈಗೆತ್ತಿಕೊಳ್ಳಬಾರದು’ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ದರ್ಶನ್ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ‌. ತನಿಖೆಯಲ್ಲಿ ಬರುವ ಅಂಶಗಳನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ‌. ಯಾರು ಸಹ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು.

ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಅವರ ಆಪ್ತೆ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ದರ್ಶನ್ ದೂರು ಕೊಡಬಹುದಾಗಿತ್ತು. ಪೊಲೀಸರು ಕೂಡಲೇ ಕ್ರಮ ತೆಗೆದುಕೊಳ್ಳುತ್ತಿದ್ದರು. ಅದನ್ನು ಬಿಟ್ಟು, ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದು ಹೊಡೆದು ಸಾಯಿಸಿದ್ದಾರೆ ಎಂಬ ಮಾಹಿತಿ ಇದೆ. ದೂರು ಕೊಟ್ಟಿದ್ದರೆ ಇದೆಲ್ಲವನ್ನು ತಡೆಯಲು ಅವಕಾಶವಿತ್ತು. ಆದರೆ, ಘಟನೆ ನಡೆದು ಹೋಗಿದೆ. ಯಾರು ಏನು ಮಾಡುವುದಕ್ಕೆ ಆಗುವುದಿಲ್ಲ. ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಇಲಾಖೆ ಕೈಗೊಳ್ಳುತ್ತದೆ ಎಂದು ತಿಳಿಸಿದರು.

 

 

ನಟ ದರ್ಶನ್ ಪ್ರಕರಣದಿಂದ ಬಚಾವ್ ಆಗಲು ಪ್ರಭಾವಿ ರಾಜಕಾರಣಿಯಿಂದ ಪ್ರಯತ್ನ ಮಾಡಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನನಗೆ ಗೊತ್ತಿರುವಂತೆ ಯಾರು ಸಹ ಪ್ರಯತ್ನ ಮಾಡಿಲ್ಲ. ಕಾನೂನಿನಲ್ಲಿ ಏನೆಲ್ಲ‌ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ ಅದನ್ನು ಪೊಲೀಸರು ಮಾಡುತ್ತಾರೆ. ಇದರಲ್ಲಿ ಸರ್ಕಾರದಿಂದ ನಾವ್ಯಾರು ಮಧ್ಯ ಪ್ರವೇಶಿಸುವುದಿಲ್ಲ. ಮುಕ್ತವಾಗಿ ತನಿಖೆ ನಡೆಸಲು ಪೊಲೀಸರಿಗೆ ಅವಕಾಶವಿದೆ ಎಂದು ಹೇಳಿದರು.

 

 

 

ಕೊಲೆಯಾದ ರೇಣುಕಾಸ್ವಾಮಿ ಕುಟುಂಬ ವರ್ಗದ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತೇನೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಪ್ರಕರಣದಲ್ಲಿ ಭಾಗಿಯಾಗಿದ್ದ 13 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಕರಣದ ತನಿಖೆಯನ್ನು ಬೇರೆ ಏಜೆನ್ಸಿಗೆ ಕೊಡುವ ಅಗತ್ಯವಿಲ್ಲ. ತನಿಖೆ ಪೂರ್ಣವಾದ ಬಳಿಕ ಎಲ್ಲ ಮಾಹಿತಿ ಗೊತ್ತಾಗುತ್ತದೆ. ಅಲ್ಲಿಯವರೆಗೆ ಈ ಬಗ್ಗೆ ಅಧಿಕಾರಿಗಳನ್ನು ನಾವು ಕೇಳುವುದಿಲ್ಲ, ಅವರೂ ನಮಗೆ ಹೇಳುವುದಿಲ್ಲ ಎಂದರು.

 

 

ನಟ ದರ್ಶನ್ ಅವರ ಘಟನೆಗಳು ಇದೇ ಮೊದಲಲ್ಲ. ಮಾಧ್ಯಮಗಳಲ್ಲಿ ಬಂದಿರುವುದನ್ನು ಗಮನಿಸಿದ್ದೇನೆ. ಪೊಲೀಸರು ತನಿಖೆ ಮಾಡುತ್ತಾರೆ. ತನಿಖೆ ನಂತರ ವರದಿಯಲ್ಲಿ ಏನು ಶಿಫಾರಸ್ಸು ಮಾಡುತ್ತಾರೆ ನೋಡಬೇಕು. ಪೊಲೀಸರಿಗೆ ಫ್ರೀ ಹ್ಯಾಂಡ್ ಇದೆ. ಸೆಕ್ಷನ್ ಹಾಕುವುದಕ್ಕೆ ಅವರು ಸಮರ್ಥರು. ನಮ್ಮನ್ನು ಕೇಳಿಕೊಂಡು ಸೆಕ್ಷನ್ ಹಾಕುವುದಿಲ್ಲ ಎಂದು ಹೇಳಿದರು.

 

 

 

ಅಂತರ ಜಿಲ್ಲಾ ವರ್ಗಾವಣೆ:-
ಪೊಲೀಸರ ಅಂತರ ಜಿಲ್ಲಾ ವರ್ಗಾವಣೆ ಪೋರ್ಟಲ್ ಅರ್ಜಿ ಪ್ರಕಾರ ಆಗುತ್ತಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಶಿಸ್ತು ಬದ್ಧವಾಗಿ ನಿಯಮದ ಚೌಕಟ್ಟಿನಲ್ಲಿ ನಡೆಯಬೇಕಾಗುತ್ತದೆ ಎಂದು ಹೇಳಿದರು.

ವರ್ಗಾವಣೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಮಾಡಿದ್ದಾರೆ. ಅದನ್ನು ಮೀರಿ ವರ್ಗಾವಣೆ ಮಾಡಲು ಬರುವುದಿಲ್ಲ. ಅಕಾಸ್ಮತ್ ಮಾಡಬೇಕಾದರೆ ನಿಯಮಗಳನ್ನು ಬದಲಾಯಿಸಬೇಕಾಗುತ್ತದೆ ಎಂದರು.

ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಒಂದು ವರ್ಷದ ನಿಯಮವಿತ್ತು. ಸದನದಲ್ಲಿ ಕಾನೂನು ಬದಕಾಯಿಸಿ ಎರಡು ವರ್ಷ ಮಾಡಲಾಗಿ್ಎ. ಈ ರೀತಿ ಕಾನೂನು ಬದಲಾವಣೆ ಮಾಡಬಹುದು. ಇರುವಂತಹ ನಿಯಮ ಉಲ್ಲಂಘನೆ ಮಾಡಿ, ವರ್ಗಾವಣೆ ಮಾಡುವುದಕ್ಕೆ ಅವಕಾಶವಿಲ್ಲ. ಡಿಜಿ ಅವರಾಗಲಿ, ನಾನು ಅಥವಾ ಮತ್ತೊಬ್ಬರು ಇರಬಹುದು. ಕಾನೂನು ನಿಯಮದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ವರ್ಗವಾಣೆಗೆ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿರುವುದಕ್ಕೆ ಏನಾದರು ಸಣ್ಣಪುಟ್ಟ ತೊಂದರೆಗಳು ಸಿಬ್ಬಂದಿಗಳಿಗೆ ಆಗಿದ್ದರೆ ಸರಿಪಡಿಸುವುದಕ್ಕೆ ಸೂಚನೆ ನೀಡುಡುತ್ತೇನೆ. ಅವರಿಗೆ ಕುಟುಂಬಗಳಿವೆ. ಇದನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.

545 ಪಿಎಸ್ಐ ಹುದ್ದೆಗಳ ನೇಮಕಾತಿ ಕುರಿತು, ಎಲ್ಲರು ಕೋರ್ಟ್‌ಗಳಿಗೆ ಹೋಗಿ ಆದೇಶಗಳನ್ನು ತಂದಾಗ, ನಮ್ಮ ಕೈ ಕಟ್ಟಿ ಹಾಕಿದಂತಾಗುತ್ತದೆ. 545 ಪಿಎಸ್ಐ ಹುದ್ದೆಗಳ ನೇಮಕಾತಿ ಆದೇಶಗಳನ್ನು ಕೊಡಬೇಕು ಎಂಬ ಉದ್ದೇಶದಿಂದ ಪರೀಕ್ಷೆಯನ್ನು‌ ಪೂರ್ಣಗೊಳಿಸಿದ್ದೇವೆ. ಈ ಹಂತದಲ್ಲಿಯೇ ಯಾರೋ ಕೋರ್ಟ್‌ಗೆ ಹೋಗುತ್ತಾರೆ. ಇದನ್ನು ಮುಗಿಸಿದರೆ ಮುಂದಿನ ನೇಮಕಾತಿಗಳಿಗೆ ಅನುಕೂಲವಾಗುತ್ತದೆ. 545 ಹುದ್ದೆಗಳ ನೇಮಕಾತಿಯನ್ನು ಆದಷ್ಟು ಬೇಗ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!