ರೈತ ಬಂಧುಗಳೇ ದುಡಿಕಿ ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗಬೇಡಿ ನಾವಿದ್ದೇವೆ ನಿಮ್ಮೊಟ್ಟಿಗೆ ; ಕೇಂದ್ರ ಸಚಿವ ಕುಮಾರಸ್ವಾಮಿ

ತುಮಕೂರು: ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ದಾರಿ ಹಿಡಿಯುವ ನಿರ್ಧಾರ ಮಾಡಬಾರದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

 

 

ಅವರು ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಎನ್.ಡಿ.ಎ. ಮೈತ್ರಿಕೂಟದ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿ ನಂತರ ಮಾತನಾಡಿ, ದೇಶದಾದ್ಯಂತ ರೈತರು ಸಂಕಷ್ಟದಲ್ಲಿದ್ದು, ಅವರನ್ನು ರಕ್ಷಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿದ್ದು, ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಯ ಹಾದಿ ಹಿಡಿಯಬಾರದೆಂದು ಮನವಿ ಮಾಡಿದರು.

 

 

 

ರಾಜ್ಯದ ಜನತೆ ನನ್ನ ಮೇಲೆ ಅತ್ಯಂತ ಪ್ರೀತಿಯನ್ನಿಟ್ಟು ಗುರುತರವಾದ ಜವಾಬ್ದಾರಿಯನ್ನು ನೀಡಿದ್ದಾರೆ. ಎಲ್ಲರ ನಿರೀಕ್ಷೆ ನಾನು ಕೃಷಿ ಸಚಿವನಾಗಬೇಕಿತ್ತು ಎಂಬುದು, ಆದರೆ ಪ್ರಧಾನಂಮತ್ರಿಗಳ ದೂರದೃಷ್ಟಿಯಿಂದ ಕೈಗಾರಿಕಾ ಖಾತೆ ನೀಡಿದ್ದು, ಅದರ ಜೊತೆಗೆ ಸಂಪುಟ ಸಭೆಯಲ್ಲಿ ರಾಜ್ಯಕ್ಕೆ ಬೇಕಿರುವ ಕೃಷಿ ಯೋಜನೆಗಳ ಬಗ್ಗೆ ಚರ್ಚೆ ಮಾಡುವ ಅವಕಾಶವಿದೆ. ಪ್ರಧಾನಮಂತ್ರಿಗಳು ಹಾಗೂ ಕೃಷಿ ಸಚಿವರ ಮನವೊಲಿಸಿ ರಾಜ್ಯದ ರೈತರಿಗಾಗಬೇಕಿರುವ ಅನುಕೂಲತೆಗಳನ್ನು ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು‌.

 

 

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ತೆಂಗುಬೆಳೆಗಾರರ ಸಮಸ್ಯೆ ಗಂಭೀರವಾಗಿದ್ದು, ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ತೆಂಗುಬೆಳೆಗಾರರಿಗೆ ಸಿಗಬೇಕಾದ ನ್ಯಾಯ ಒದಗಿಸಿಕೊಡುವಲ್ಲಿ ಶ್ರಮಿಸುತ್ತೇನೆ ಎಂದರು.

 

 

ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಒದಗಿಸಲು ಪೆಟ್ರೋಲ್ ಡೀಸಲ್ ಬೆಲೆ ಹೆಚ್ಚಿಸಿರುವುದು ರಾಜ್ಯದ ಜನತೆಗೆ ಮಾಡಿರುವ ಅನ್ಯಾಯವಾಗಿದ್ದು, ನಾನು ಮುಖ್ಯಮಂತ್ರಿಯಾಗಿದ್ದಾಗ ನಾಡಿನ ಜನರ ಒಳಿತಿಗಾಗಿ ಯಾವ ಯೋಚನೆ ಮಾಡದೆ ಸರ್ಕಾರಕ್ಕೆ ಅಧಿಕ ಆದಾಯ ತರುತ್ತಿದ್ದ ಲಾಟರಿ ಹಾಗೂ ಸಾರಾಯಿ ನಿಷೇಧ ಮಾಡಿದೆ. ಸಂಪನ್ಮೂಲ ಸಂಗ್ರಹಣೆಯ ಹೆಸರಿನಲ್ಲಿ ಜನರ ಮೇಲೆ ತೆರಿಗೆ ಹೇರುವುದನ್ನು ಬಿಟ್ಟು, ಕಾಂಗ್ರೆಸ್ ಪಕ್ಷದ ಮುಖಂಡರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಅವರಿಗೆ ನೀಡಿರುವ ಸೌಲಭ್ಯವನ್ನು ತಡೆಹಿಡಿದಿದ್ದರೆ ವರ್ಷಕ್ಕೆ ಸುಮಾರು ಐನೂರು ಕೋಟಿ ಹಣ ಉಳಿಯುತ್ತಿತ್ತು ಎಂದು ಕಿಡಿಕಾರಿದರು.

 

 

ಈ ಸಂದರ್ಭದಲ್ಲಿ ಜಿಲ್ಲೆಯ ಬಿಜೆಪಿ ಜೆಡಿಎಸ್ ಶಾಸಕರು, ಮಾಜಿ ಶಾಸಕರು ಉಭಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!